
(ಅಮ್ಮನ ನೆನಪಿನಲಿ ಕಾಲ ಕಳೆವ ಅಪ್ಪನ ಭಾವನೆಗಳಿಗೆ ಪದಗಳಲಿ ಜೀವ ಸೆಳೆವ ಪ್ರಯತ್ನದಲಿ ಬರೆದ ಕವಿತೆ.)
ನನ್ನ ಮನಸ ಅರ್ಥ ಮಾಡಿಕೊಂಡಾಕೆ,ಎಲ್ಲಾ ಕನಸಲೂ ಸದಾ ಜೊತೆಯಿದ್ದಾಕೆ.ಬದುಕಿನುದ್ದಕೂ ಬರೀ ನೋವನುಂಡಾಕೆ,ಇಳಿಸಂಜೆಯಲಿ ನನ್ನ ಒಂಟಿಯಾಗಿಸಿದಾಕೆ.ಅಲ್ಲೆಲ್ಲೋ ಕಾಣದಷ್ಟು ದೂರದಲಿರುವಾಕೆ,ಎಲ್ಲ ಬಂಧವ ತೊರೆದು ಸ್ವರ್ಗವ ಸೇರಿದಾಕೆ.ಅವಳೇ ನನ್ನಾಕೆ, ನನ್ನ ಸಕಲವೂ ನನ್ನಾಕೆ.
ದಿನೆದಿನೇ ಸೊರಗುತ್ತಿದ್ದಳು ಕ್ಯಾನ್ಸರ್ ಕಾಟಕೆ,ಬದುಕುಳಿವ ಆಸೆ ಕಳೆದಿತ್ತು ನೊಂದಾ ಜೀವಕೆ,ಆರೋಗ್ಯದಲಿ ಕೊನೆಗೂ ಕಾಣಲಿಲ್ಲ ಚೇತರಿಕೆ.ದೇವರೂ ಕರುಬಿದನೋ ನಮ್ಮ ಅನುರಾಗಕೆ,ಸತ್ತು ನಕ್ಷತ್ರವಾಗಿ ಆಕಾಶವ ಸೇರಿದಳು ಆಕೆ.ಅವಳಿಲ್ಲವೆಂಬ ನೋವು ಉಳಿಯಿತು ಮನಕೆ,ಜೀವದ ಜೀವ ನನ್ನಾಕೆ, ನನಗೆಲ್ಲವೂ ನನ್ನಾಕೆ.
ಅವಳೆಂದೂ ಕೇಳಲಿಲ್ಲ ಯಾವ ಪುಟ್ಟ ಕೋರಿಕೆ,ಇರುವುದರಲ್ಲಿ ಕಳೆದೆಳು ಸ್ವಾಭಿಮಾನದ ಬದುಕೆ.ಒಂದು ನಿಮಿಷವೂ ಸುಮ್ಮನೇ ಕೂರದ ಆಕೆ,ವರುಷಗಳವರೆಗೆ ಹಾಸಿಗೆಯಲ್ಲೇ ನರಳಿದಳಾಕೆ.ಇದ್ದವರು ದೂರಾದರು ಸಣ್ಣ ಸಣ್ಣ ಕಾರಣಕೆ,ಎಲ್ಲರೂ ಥೂ, ಹೋಗಲಿ ಬಿಡು ಅವರ ಪಾಪಕೆ,ನೊಂದುಕೊಂಡಾಕೆ ನನ್ನಾಕೆ, ಪಾಪ ನನ್ನಾಕೆ.
'ಅಂಜೂ' ಎಂದು ಚೆನ್ನಾಗಿದ್ದಷ್ಟು ದಿನ, ಒಣಪ್ರೀತಿತೋರಿದ್ದ ತವರಿನವರೂ ಬರಲಿಲ್ಲ ಕೊನೆಗಾಲಕೆ.ತನ್ನದೇ ಮಕ್ಕಳಂತೆ ನೋಡಿಕೊಂಡರೂ ಸರಿ,ಎದುರಿಗೇ ಬಂದರೂ ಕಂಡು ಕಾಣದಷ್ಟು ಚಂದಮರೆತೆಬಿಟ್ಟರು ಅನುಜರು ಅದ್ಯಾವ ರಾಗದ್ವೇಷಕೆ.ದೂರ ಸರಿದವರೆಲ್ಲಾ ಚೆನ್ನಾಗಿಯೇ ಇರಲಿ ಬಿಡಿ,ಕಾಲ ಹೀಗೆ ಇರುವುದಿಲ್ಲವೆಂಬುದು ನನ್ನ ನಂಬಿಕೆ.
ಅವಳು ಚೆನ್ನಾಗಿ ಸುಖವಾಗಿ ಇರಬೇಕಾದ ಕಾಲಕೆ,ಅಷ್ಟೊಂದು ಕಷ್ಟ, ನೋವು ಅನುಭವಿಸಿದಳಲ್ಲ.ಹಗಲಿರುಳೆನ್ನದೇ ಮಾಡಿದೆನಾದರೂ ಅವಳ ಆರೈಕೆ,ಮಕ್ಕಳೊಂದಿಗೆ ನನ್ನ ಬಿಟ್ಟು ಹೋಗೆಬಿಟ್ಟಳಲ್ಲಾ.ಇನ್ನು ಬದುಕೇ ಭಾರವೆನಿಸುತಿದೆ ನನ್ನ ಈ ನೊಗಕೆ,'ಆದದ್ದಾಗಲೀ, ಎಲ್ಲ ಚಿಂತೆಯ ಬಿಟ್ಟುಬಿಡು' ಎಂದುನನ್ನೆದೆಯೊಳಗೆ ನಗುವ 'ಅಂಜು' ಹೇಳುತಿಹಳಲ್ಲ.
ನನ್ನ ಮೊಮ್ಮಕ್ಕಳ ನಗುವಿನಲಿ,ಮಕ್ಕಳು - ಸೊಸೆಯಂದಿರ ಖುಷಿಯಲ್ಲಿ,ಎಲ್ಲವನು ಮರೆತು, ಎಲ್ಲರನೂ ಪೂರ್ತಿ ಮರೆತು,ಆನಂದವಾಗಿಯೇ ದಿನ ಕಳೆಯುವೆ, ಬಾಳುವೆ.ನಾ ಏನೂ ಒಂಟಿಯಾಗಿಲ್ಲ ಬಿಡು ದೇವ್ರೇ,ಎಲ್ಲರೂ ಇರುವಾಗ ಅವರೊಟ್ಟಿಗೆ ನಗುವೆ,ಯಾರೂ ಇಲ್ಲದಿರುವಾಗ ನನ್ನ ಎದೆಯೊಳಗಿನ'ಅಂಜು' ಜೊತೆ ಮನದ ಖುಷಿ ಹಂಚಿಕೊಳ್ಳುವೆ.ನನಗಾಗಿಯೇ ಅವಳು,ಅವಳಿಗಾಗಿಯೇ ನಾನು ಇರುವಾಗ,ದೂರ ಮಾಡುವನ್ಯಾರೋ ಇಲ್ಲಿ.ನಿತ್ಯ ಕಂಡರೂ, ಕಾಣದಿದ್ದರೂ ಸರಿ,ನೆನೆದಾಗಲೆಲ್ಲಾ ಕಣ್ ಮುಂದೆ ಬರುವಳಿಲ್ಲಿ.ಅವಳೀಗ ಜೊತೆಯಲಿಲ್ಲ... ಆದರೆಈ ಮನಸು ತೊರೆದು ಎಲ್ಲೂ ಹೋಗಿಲ್ಲ. 'ಅವಳ ಬಿಟ್ಟಿರಲಾರೆ' ಎಂಬ ಸತ್ಯಅವಳಿಗೆ ಬಲು ಚೆನ್ನಾಗಿಯೇ ಗೊತ್ತು.
ಪ್ರಕಟಣೆ: 2 ಏಪ್ರಿಲ್ 2021 · © ರಾಘವೇಂದ್ರ ಪದ್ಮಶಾಲಿPublished: 2 April 2021 · © Raghavendra Padmashali


