
ಜಗದ ಋಣ ತೀರಿತೆಂದುಅಂದು ಅಮ್ಮ ಬಿಟ್ಟುಹೋದ ದಿನಸಾಕೆನಿಸದಷ್ಟು ಹೊತ್ತು ಅತ್ತಿದ್ದೇನೆ,ಬಹಳವಾಗಿ ನೊಂದಿದ್ದೇನೆ,ತಾಸುಗಟ್ಟಲೆ ಮೌನದಿಂದಿದ್ದೇನೆ.ಅಮ್ಮನ ಕಳೆಬರವ ನೋಡುತ್ತಾ,ನನ್ನ ಹಣೆಬರಹವ ಶಪಿಸಿದ್ದೇನೆ.
ನಿದಿರೆಯ ಕಳೆದು ಕಣ್ ಅರಳಿಸಿನನ್ನ ಕಡೆ ಇನ್ನೇನು ನೋಡುವಳೆಂದು,ನೋಡಿ ಖುಷಿಯಲಿ ಮಾತಾಡುವಳೆಂದು,ಚಿರನಿದಿರೆಯಲ್ಲಿದ್ದ ಅವಳ ಮುಖವನ್ನೇದಿಟ್ಟಿಸುತ್ತಾ ಮೌನದಲೇ ಕಾಯುತಲಿದ್ದೆ.ಅಂತಿಮ ದರುಶನಕೆ ಬಂದವರು ಅದೆಷ್ಟೇಸಂತೈಸಿದರೂ ಕೇಳಿಸದ ಕಿವುಡನಾಗಿದ್ದೆ.ದುಃಖದಿಂದಲಿ ಬಿಗಿದ ಗಂಟಲಿನಲಿಮಾತು ಬರದೇ ಬರೀ ಮೌನವಾಗಿದ್ದೆ.
ಬಂದು ಸೇರಿದ ನನ್ನವರೆನಿಸಿಕೊಂಡವರುಸಮಯ ಸರಿದಂತೆ ಮುಂದೆ ಬಂದರು.ಅಂತಿಮ ವಿಧಿ ವಿಧಾನಕೆ ನೆರವಾದರು.ಅಮ್ಮನಿಗೆ ಕೊನೆಯ ಜಳಕ ಮಾಡಿಸಿ,ಹೊಸದಾದ ಸೀರೆಯನು ತೊಡಿಸಿ,ಹೂವ ಮುಡಿಸಿ, ಬಳೆಯ ತೊಡಿಸಿ,ಕುಂಕುಮವಿರಿಸಿ ಚಂದ ಅಲಂಕರಿಸಿದರು.ಅಮ್ಮ ಕ್ಯಾನ್ಸರ್ ಖಾಯಿಲೆಯಿಂದವರುಷಗಳಿಂದ ನಿತ್ಯ ನರಳುತ್ತಲಿದ್ದರೂ,ಅಮ್ಮನಿಗೆ ಪ್ರತಿಯೊಂದು ಹಂತದಲೂ,ಜೊತೆಯಾಗಿ ಆಸರೆಯಾಗಿ ನಿಂತ ನನ್ನಪ್ಪ,ಅಮ್ಮನಿಗೆ ಕೊನೆಯದಾಗಿ ಅವಳ ಹಣೆಗೆಕುಂಕುಮವಿಟ್ಟಾಗ ದುಃಖ ತಡೆಯಾಗಲಿಲ್ಲ,ಹೃದಯ ಭಾರವಾಗಿ ನನಗಂತೂ ನೋಡಲಾಗಲಿಲ್ಲ.
ಸಿದ್ದವಾದ ಚಟ್ಟದ ಮೇಲೆ ಮಲಗಿಸಿ,ಪೂಜಿಸಿ, ನಾಲ್ಕು ಜನ ಹೊತ್ತು ಬರುವಾಗ,ಗೊತ್ತು-ಗುರಿಯಿಲ್ಲದೇ, ಶೂನ್ಯ ಮನಸಿನಲಿಕೆಂಡ ಹಿಡಿದು ಮುಂದೆ ಸಾಗುತ್ತಿದ್ದೇನಷ್ಟೇ.ಕೈಲಾಸವೋ, ವೈಕುಂಠವೋ ತಿಳಿಯದು,ನಿಗದಿತ ಜಾಗದಲ್ಲಿ ತೋಡಿದ ಗುಂಡಿಯ ಬಳಿಬಂದು ಅವಳ ಇಳಿಸಿದರು, ಮತ್ತೆ ಪೂಜಿಸಿದರು.ನೆನಪುಗಳೇ ತುಂಬಿದ ಎದೆಯಲ್ಲಿನ ನೋವನ್ನು,ಅಡಿಯಷ್ಟು ಮಣ್ಣ ಮೇಲೆ ಲವಣವಾಗಿಸಿ,ಅವಳ ಮಲಗಿಸಿ, ಪೂಜಿಸಿ, ಶಾಂತವಾದಮುಖವನ್ನು ಮತ್ತೆ ಮತ್ತೆ ನೋಡಿಸಿ,ಅಲ್ಲೇ ಮಣ್ಣಲ್ಲೇ ಹೂತಿಹರು,ಇಲ್ಲ ಎಲ್ಲ ಸೇರಿ ಅಲ್ಲೇ ಬಿತ್ತಿಹರು.ಆ ಮಣ್ಣಲ್ಲೇ ಅವಳ ಬಿತ್ತಿಹರು..!!!ಆ ಮಣ್ಣಲ್ಲೇ ಅವಳ ಬಿತ್ತಿಹರು..!!!ಆ ಮಣ್ಣಲ್ಲೇ ಅವಳ ಬಿತ್ತಿಹರು..!!!
ಅಲ್ಲೆಲ್ಲೋ ಊರ ಹೊರಗಿನಮಸಣದಲಿ ನಾ ಹಾಗೇ ಬಿಟ್ಟುಬಂದ ನನ್ನ ಅಮ್ಮ,ನಾ ಮನೆಗೆ ಮರಳುವಷ್ಟರಲ್ಲಿಜ್ಯೋತಿಯಾಗಿ ನಗುತ್ತಾಜೀವ ತಳೆದು ನಗುತ್ತಿದ್ದಾಳೆ.. ಕತ್ತಲಾದ ನನ್ನ ಬಾಳಿಗೆಅಮ್ಮ ಈ ದೀಪದ ರೂಪದಲ್ಲಿಮತ್ತೆ ಮನೆ ಮನಸು ತುಂಬಿದ್ದಾಳೆ.ಉರಿವ ಜ್ಯೋತಿಯ ನೋಡುತ್ತಾ,ಕೈಯಲ್ಲಿ ಒಂದಷ್ಟು ಹೂವ ಹಿಡಿದುನಮಿಸಿದೆ, ಬೇಡಿದೆ, ಕಾಡಿದೆ ನೀಮತ್ತೆ ಬಿಟ್ಟು ಹೋಗಬೇಡ ಎಂದು.ಅಮ್ಮ ನನ್ನ ಬಿಟ್ಟು ಹೋಗಬೇಡ ಎಂದು.
ಕಣ್ಣೆದುರು ಕಾಣದೆ ಇದ್ದರೂಅವಳ ದನಿ ಕೇಳದೆ ಇದ್ದರೂಅಮ್ಮ ಇದ್ದಾಳೆ ಇನ್ನೂ ಜೀವಂತವಾಗಿ,ಅಂದು ಬಿತ್ತಿದ ಹಸಿರು ನೆನಪಾಗಿ.ಅದೋ ಅಮ್ಮ ನಗುತ್ತಿದ್ದಾಳೆ..ಅದೋ ಅಮ್ಮ ಖುಷಿಯಾಗಿದ್ದಾಳೆ..ಅದೋ ಅಮ್ಮ ಬೆಳಕಾಗಿದ್ದಾಳೆ.. ❤️❤️
ಪ್ರಕಟಣೆ: 20 ಸೆಪ್ಟೆಂಬರ್ 2024 · © ರಾಘವೇಂದ್ರ ಪದ್ಮಶಾಲಿ


