"ರಾಜೂ.." ಅಂತಾ ಅಮ್ಮ ಕೂಗಿದ್ ಕೇಳಿ ಎಚ್ಚರವಾಯ್ತು. ಆದರೆ ಇನ್ನೂ ಕಣ್ ಬಿಡೋಕ್ ಆಗ್ತಾ ಇಲ್ಲ. ಏಳೋ ಮನಸೂ ಇಲ್ಲ. ಆದರೆ ಅಮ್ಮ ಬಿಡಬೇಕಲ್ಲಾ. ಹೊದ್ದುಕೊಂಡ ಬೆಡ್ ಷೀಟನ್ನು ಸ್ವಲ್ಪವೇ ಸರಿಸಿ, ತಲೆದಿಂಬಿನ ಹತ್ತಿರದಲ್ಲೇ ರಾತ್ರಿ ಒಂದ್ ಹೊತ್ತಲ್ಲಿ ಬಿಸಾಡಿದ ಮೊಬೈಲ್ ಗಾಗಿ ತಡಕಾಡಿದೆ. ಹಾಗೂ ಹೀಗೂ ತಡಕಾಡಿದ ಮೇಲೆ ಮೊಬೈಲ್ ಸಿಕ್ತು. ಎದ್ದ ತಕ್ಷಣ ದೇವರ ಫೋಟೋ ನೋಡೋದ್ ಹಳೇ ಕಾಲ. ಹೀಗೇನಿದ್ರೂ ಇದೇ ಕಾಲ. ಆಲ್ ಮೋಸ್ಟ್ ಎಲ್ರೂ ಅಷ್ಟೇ ಅಲ್ವಾ? ವಾಟ್ಸಾಪ್ ತೆರೆದು ನೋಡಿದೆ. ನನ್ ಡಾರ್ಲಿಂಗ್ ಮೆಸೇಜ್. "ಹಾಯ್ ಹನಿ, ಗುಡ್ ಮಾರ್ನಿಂಗ್" ಅಂತಾ ಕಳಿಸಿದ್ಲು. ಈ ಗುಡ್ ಮಾರ್ನಿಂಗ್ ಗಿಂತಾ "ಹಾಯ್ ಹನಿ.." ಅಂತಾ ಅವಳ್ ಹೇಳೋದೆ ನಂಗೆ ಸಖತ್ ಇಷ್ಟ. ಅವಳು ನನ್ ಕಾಲೇಜ್ ಫ್ರೆಂಡು. ಅವಳ ಮೇಲೆ ನಂಗೆ ಭಾರಿ ಕ್ರಶ್ಶೂ.. ಕಾಲೇಜ್ ಡೇಸ್ ಇಂದಾ ಇಲ್ಲಿವರೆಗೂ "ಐ ಲವ್ ಯೂ" ಅಂತಾ ಸಾವಿರ ಸಲ ಹೇಳಿದ್ರೂ, "ಹೇ ಹೋಗೋ ಗೂಬೆ" ಅಂತಾ ಸ್ಮೈಲ್ ಕೊಟ್ಟ್ ಕೊಂಡೇ ರಿಜೆಕ್ಟ್ ಮಾಡ್ತಾಳೆ. ಅವಳಿಗೆ "ಐ ಲವ್ ಯ ಟೂ" ಅಂತಾ ಹೇಳೋಕೆ ಬರಲ್ಲ ಬಿಡು ಅಂತಾ ನಾನೇ ಡಿಸೈಡ್ ಮಾಡಿ, ನಾನ್ ಮಾತ್ರ ಬಿಡದಂಗ್ ಲವ್ ಮಾಡ್ತಾ ಇದೀನಿ. ಅವಳು ಮಾತ್ರ ಅದೇ ಡವ್ ಮಾಡ್ತಾನೇ ಇದಾಳೆ.

ಈ ಬೆಳಿಗ್ಗೆ ಏಳೋದು, ಹಾಲು ತರೋದು ವಯಸ್ಸಲ್ ಇರೋ ಹುಡುಗ್ರಿಗೆ ತುಂಬಾ ಕಷ್ಟ. ಆದ್ರೂ ನಮ್ ಅಮ್ಮಂಗೆ ಇದೆಲ್ಲಾ ಅರ್ಥ ಆಗಲ್ಲ ಕಣ್ರೀ. ಎದ್ದು, ಮೊಬೈಲ್ ತಗೊಂಡು, ಅದಕ್ಕೊಂದ್ ಇಯರ್ ಪೋನ್ ಚುಚ್ಚಿ, ಕಿವಿಗೆ ಸಿಕ್ಕಿಸಿಕೊಂಡ್ ಬಿಟ್ಟೆ. ಲೈಟ್ ಮ್ಯೂಸಿಕ್ ಹಾಕ್ಕೊಂಡ್, ಚಿಕ್ಕ ಬ್ಯಾಗ್ ತಗೊಂಡ್ ಹೊರಗೆ ಹೊರಟೆ. ಹಾಗೇ ಹೋಗ್ತಾ ಹೋಗ್ತಾ ಅದೇ ನನ್ ಲವ್ ಮಾಡೋ ಡವ್ಗೇ ರಿಪ್ಲೇ ಮಾಡಿದೆ. ಅವಳು ಕೂಡ ಇನ್ನೂ ಎದ್ದಿರಲಿಲ್ಲ. ದಾರಿ ಕಡೆ ಗಮನ ಬಿಟ್ಟು, ಏನೇನೋ ಮೆಸೇಜ್ ಮಾಡ್ಕೊಂಡ್ ಬರೀ ಮೊಬೈಲ್ ನೋಡ್ಕೊಂಡ್ ಹೋಗ್ತಾ ಇದ್ದೆ. ನಂದೇ ದುನಿಯಾ ಕಣ್ರೀ, ಅವಳ್ ಒಬ್ಳು ಇದ್ರೆ. ಅಷ್ಟು Involved.

ಸಡನ್ ಆಗಿ ಏನೋ ತುಳಿದುಬಿಟ್ಟೆ. ಆ ರಭಸಕ್ಕೆ ಬಾಡಿ ಬ್ಯಾಲೆನ್ಸ್ ತಪ್ಪಿ, ಬೀಳುವಂತನಾದೆ. ನನ್ ಕಾಸ್ಟ್ಲೀ ಮೊಬೈಲ್ ಕೂಡ ಕೈ ಜಾರುತ್ತಾ ಇತ್ತು. ಇಯರ್ ಪೋನ್ ಇಂದ, ಅದು ಬೀಳೋದ್ ತಪ್ತು. ಮೊಬೈಲ್ ಬೀಳಲಿಲ್ಲ ಅಲ್ವಾ, ಅಷ್ಟೇ ಸಮಾಧಾನ ಅಂತಾ ಅಂದುಕೊಳ್ತಾ ಇದ್ದೆ, ಅಷ್ಟರಲ್ಲಿ ಯಾರೋ "ಅಮ್ಮಾ" ಅಂತಾ ಕಿರುಚಿದ್ರು. ಅದೇನ್ ಅಂಥಾ ನೋಡಿದ್ರೆ, ಅದ್ಯಾರೋ ಮುದುಕ, ಅನಾಥ, ಭಿಕ್ಷುಕ ಅನ್ಸು್್ತೆ. ನಾನು ಓಡಾಡೋ ಕಾಲುದಾರಿಯಲ್ಲಿ ಮಲಗಿದ್ದ. ಒಂದು ಕಾಲು ಕೂಡ ಇರಲಿಲ್ಲ. ತಪ್ಪು ನಂದೇ. ಆದ್ರೂ ನಾನ್ ಒಪ್ಕೋಬೇಕಲ್ಲ. "ಹೇಯ್ ಮುದುಕ, ದಾರೀಲಿ ಬಿದ್ಕೊಂಡಿದಿಯಾ? ಇನ್ನೆಲ್ಲೂ ಜಾಗ ಇಲ್ವಾ. ನಾನು ಎಡವಿಕೊಂಡು ಬೀಳಲಿ ಅಂತಾ ಕಾಲಿಗೆ ಅಡ್ಡ ಹಾಕಿದ್ಯಾ? ನನ್ ಮೊಬೈಲ್ ಕೂಡ ಬಿದ್ದೋಗ್ತಾ ಇತ್ತು. ಸದ್ಯ ಏನೂ ಆಗಿಲ್ಲ. ಸೈಡಿಗ್ ಹೋಗು" ಅಂತಾ ಒಂದೇ ದನಿಯಲ್ಲಿ ಆವಾಜ್ ಹಾಕಿದೆ. ಪಾಪ ಮುದುಕ, ಹಾಗೇ ಸರಿದುಕೊಂಡ. "ನಾನು ಮುದುಕ, ನನ್ ಕೈಯಲ್ ಏನಾಗುತ್ತೆ ಅಂತಾ ಇಷ್ಟು ಜೋರು ಮಾಡಿದ್ದ್ಯಲ್ಲಾ. ಇರಲಿ ದೇವರೇ ನೋಡ್ಕೊತಾನೆ' ಅಂತಾ ಮುದುಕ ಹೇಳಿದ. "ನೋಡ್ತಾನೇ, ನೋಡ್ತಾನೆ" ಅಂತಾ ನಾನ್ ಹಾಗೇ ಮುಂದೆ ಹೋದೆ. ಮತ್ತ್ಯಾರಾದ್ರೂ ನಂಗೇನೆ ಉಗೀತಾರೇ ಅನ್ನೋ ಭಯಕ್ಕೆ.

ಹಾಲು ತೆಗೊಂಡ್ ವಾಪಾಸ್ ಬರ್ತಾ ಇದ್ದ. ಆ ಮುದುಕನೂ ಮತ್ತೆ ಕಂಡ. ಇನ್ನೂ ಅಲ್ಲೇ ಇದ್ದ. ಅವ ಇನ್ನೂ ನನ್ನ ಕಡೆ ನೋಡ್ತಾ ಇದ್ದ. ನಾನು ತಕ್ಷಣ ತಲೆ ತಗ್ಗಿಸಿ, ಮೊಬೈಲ್ ಕಡೆ ನೋಡುತ್ತಾ, ಮತ್ತೆ ನನ್ ಡಾರ್ಲಿಂಗ್ ಜೊತೆ ಚಾಟ್ ಮಾಡ್ಕೊಂಡ್ ಹೋಗ್ತಾ ಇದ್ದೆ. ಅವಳ ಅದ್ಯಾವುದೋ ಮೆಸೇಜ್ ನೋಡಿ, ಫುಲ್ ಖುಷಿಯಲ್ಲಿ ತೇಲ್ತಾ ಇದ್ದೆ. ಸಡನ್ ಆಗಿ ಮತ್ತೇ ಏನೋ ಎಡವಿ ದೊಪ್ಪನೇ ಬಿದ್ದೆ. ಕೈ ಸ್ವಲ್ಪ ತರಚಿಕೊಳ್ತು. ನನ್ ಮಗಂದ್ ಹಾಲಿನ ಪಾಕೇಟ್ ಕೂಡ ಒಡೆದು ಹೋಯ್ತು. ಯಾರಪ್ಪಾ ಅದು, ಈಗ ಕಾಲಿಗ್ ಅಡ್ಡ ಹಾಕಿದ್ದು, ಆ ಮುದುಕನಾ? ಅಂತಾ ನಾನೇ ಪ್ರಶ್ನೆ ಹಾಕ್ಕೊಂಡೆ. ಅವನ ಆ ಕಡೆ ರೋಡ್ ಸೈಡಲ್ಲಿ ಇದಾನೆ. ನಾನು ಬಿದ್ದದ್ದು ಈ ಕಡೆ. ಅವನಲ್ಲ ಬಿಡು ಅಂತಾ ನಾನೇ ಉತ್ತರಿಸಿಕೊಂಡೆ‌. ಸರಿ ಅದೇನ್ ಎಡವಿದ್ನಪಾ ಅಂತಾ ತಿರುಗಿ ನೋಡಿದೆ. ಒಂದು ಕಪ್ಪು ನಾಯಿ. ನಾ ಬಿದ್ದ ರಭಸಕ್ಕೆ ಅದಕ್ಕೂ ಸ್ವಲ್ಪ ಏಟಾಗಿತ್ತು, ಆದರೂ ಮೈಕೊಡವಿ ಎದ್ದು ನಿಂತು ನನ್ನನೇ ದುರುಗುಟ್ಟಿ ನೋಡ್ತಾ ಇದೆ. ಆ ಮುದುಕ ನಗ್ತಾ ಇದಾನೆ. ಒಂಥರಾ ನಾಚಿಕೆ ಆಯ್ತು. ಅವಮಾನ ಆಯ್ತು ಅಂತಾ ಫೀಲ್ ಆಯ್ತು. "ಮಗಾ ನಿಂಗೆ ಇದೆ ಕಣೋ, ನರಕ ಅನುಭವಿಸ್ತೀಯಾ" ಅಂತಾ ಆ ಮುದುಕ ಹೇಳಿದ ಹಾಗೇ ಭಾಸವಾಯ್ತು. ಸ್ವಲ್ಪ ಧೈರ್ಯ ಮಾಡಿ ನಾಯಿಯನ್ನು ಓಡಿಸಿ ಪ್ರಯತ್ನ ಮಾಡಿದೆ. ಆದರೆ, ಅಲ್ಲಿವರೆಗೂ ಸುಮ್ಮನಿದ್ದ ನಾಯಿ, ಜೋರಾದ ದನಿಯಲ್ಲಿ ಬೊಗಳುತ್ತಾ, ನನ್ನ ಎದುರಿಸಿ ನಿಂತು, ನನ್ ಕಡೆನೇ ಬಂತು‌. ಹೃದಯ ಕೈಗೆ ಬಂದಂತಾಗಿ, ತಕ್ಷಣವೇ ಅಲ್ಲಿಂದ ಕಾಲು‌ ಕಿತ್ತು ಓಡಿದೆ. ಸ್ವಲ್ಪ ಜೋರಾಗಿ ಓಡಿದೆ. ಅಂತಾ ಟೈಮಲ್ಲಿ ಸ್ವಾಮಿ‌ ವಿವೇಕಾನಂದರ ಮಾತೊಂದು ನೆನಪಾಯಿತು. "ಅಧೈರ್ಯದಿಂದ ಓಡಬೇಡ. ಧೈರ್ಯದಿಂದ ‌ಎದುರಿಸು. ಅದೇನೆ ಆಗಲಿ. ಹೋರಾಡಿ ಸೋತರೂ ಸರಿ, ಹೀನಾಯವಾಗಿ ಸೋಲಬೇಡ" ಎಂಬ ವಿವೇಕವಾಣಿ ನೆನಪಾಗಿ ನಿಂತೆ. ನನ್ನಷ್ಟೇ ವೇಗವಾಗಿ ಬಂದ ನಾಯಿ, ನಾ ನಿಂತ ತಕ್ಷಣ ಅದೂ ನಿಂತಿತು. ಪಾಪ ನಾಯಿ, ಅದಕೂ ಭಯ ಇರುತ್ತೇ ಅಲ್ವಾ? ಏನೂ ತೋಚದೇ, ಬೊಗಳಲು ಶುರು ಮಾಡಿತು. ನಾಯಿಯನ್ನು ಎದುರುಸಿ ಅಟ್ಟಲು ಕಲ್ಲೊಂದಕ್ಕಾಗಿ ಹುಡುಕಾಡಿದೆ. ಅದನು ಕಂಡ ನಾಯಿ, ಬುದ್ಧಿವಂತಿಕೆ ಇಂದ ತಕ್ಷಣವೇ ಹಿಂದೇ ಓಡಿತು. ಬೆಳ್ಳಂಬೆಳಿಗ್ಗೆ ಏನೋ ಮಹಾಸಾಧನೆ ಮಾಡಿದಂತಾಯ್ತು ಮೈ ಮನಸಿಗೆ.

ನಿಟ್ಟುಸಿರು ಬಿಟ್ಟು ಮೊಬೈಲ್ ಕಡೆ ನೋಡಿದೆ. ಸ್ಕ್ರೀನ್ ಗಾರ್ಡ್ ಕಿತ್ತೋಗ್ ಬಿಟ್ಟಿದೆ. ಕರುಳು ಚುರುಕ್ ಅಂತು. ನಾನಾದ್ರೆ ಬರೀ ನಾಯಿಯನ್ನು ಎಡವಿ ಬಿದ್ದು ಮೊಬೈಲ್ ಹಾಳು ಮಾಡಿಕೊಂಡೆ. ಅದೆಷ್ಟೋ ಜನ ಮೊಬೈಲ್ ಕಡೆ ಗಮನ ಕೊಟ್ಟು, ರಸ್ತೆಯಲ್ಲಿ ಆಕ್ಸಿಡೆಂಟ್ ಆಗಿ ತಮ್ಮ ಪ್ರಾಣಿವನ್ನೇ ಕಳ್ಕೊಂಡಿದ್ದಾರಲ್ಲ. ಅದೆಲ್ಲಾ ನೆನೆದು ಆ ಕ್ಷಣಕೆ ಮಾತ್ರ ಮೊಬೈಲ್ ಮೇಲೆ ವಿರಕ್ತಿ ಉಂಟಾಯಿತು. ಆಮೇಲೆ ಮತ್ತದೇ ಮೋಹ. ಬಿಟ್ಟರೂ ಬಿಡದೀ ಮಾಯೆ.ಇವತ್ತ್ ಸಂಡೇ ಬೇರೆ. ಆಫೀಸ್ ಬೇರೆ ಇಲ್ಲ. ಮತ್ತೆ ಬೇರೆ ಕಡೆಯಿಂದ ಹಾಲು ತಂದು ಅಮ್ಮನಿಗೆ ಕೊಟ್ಟು, ನನಗೇನೂ ಆಗಿಯೇ ಇಲ್ಲವೆಂಬಂತೆ, ಬಾತ್ ರೂಮಿಗೆ ಬಂದು ತರಚಿದ ಗಾಯಕೆ ಸ್ವಲ್ಪ ಡೆಟಾಲ್ ಹಾಕಿ, ನಂತರ ಸ್ನಾನ ಕೂಡ ಮಾಡ್ಕೊಂಡ್ ಫ್ರೆಷ್ ಆಗಿ ಬಂದೆ. ಅಮ್ಮ ಕೊಟ್ಟ ತಿಂಡಿ ತಿಂದು, ಮನೆ ಹತ್ತಿರ ಇರೋ ಕಾಫಿಷಾಪಲ್ಲ್ ಕೂತೆ. ಅದೇ ನನ್ ಡವ್ ಬರ್ತೀನಿ ಅಂದ್ಲೂ... ಸೋ. ಈ ಹುಡ್ಗೀರ್ ಹೇಳಿದ್ ಟೈಮ್ಗೇ ಬರಲ್ಲ, ನಾವ್ ಐದು ನಿಮಿಷ ಮುಂಚೆ ಬಂದ್ ಕೂತ್ರೆ ಈ ವೈಟರ್ ಗಳು ಸುಮ್ನಿರಲ್ಲ. ಎರಡೆರಡು ನಿಮಿಷ ಬಿಟ್ಟು, "ಸರ್ ಆರ್ಡರ್ ಪ್ಲೀಸ್" ಅಂತ ರೋಧನೆ ಕೊಡ್ತಾರೆ. ಸರಿ ಈ ಗೋಳೇ ಬೇಡಾ ಅಂತಾ ವೈಟಿಂಗ್ ಲಾಂಜ್ ಲ್ಲಿ ಕೂತೆ. "ಒಂದು ಮಳೆಬಿಲ್ಲು, ಒಂದು ಮಳೆಮೋಡ" ಅಂತಾ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದ ಅರ್ಮಾನ್ ಮಲ್ಲಿಕ್ ಹಾಡಿರೋ ಹಾಡು ಲೈಟ್ ಆಗಿ ಸೌಂಡ್‌ ಮಾಡ್ತಾ ಇತ್ತು‌. ಮೈಂಡ್ ಆಟೋಮ್ಯಾಟಿಕಲೀ ರೊಮ್ಯಾಂಟಿಕ್ ಮೂಡಲ್ಲಿ ತೇಲಿಕೊಂಡು ಹೋಯ್ತು. ಕಣ್ ಮುಚ್ಚಿ, ಅವಳನ್ನೇ ನೆನೆಸ್ಕೊಂಡ್ ಆ ಹಾಡಿಗೆ ನಾವಿಬ್ಬರೂ ಡ್ಯಾನ್ಸ್ ಮಾಡ್ತಾ ಇರೋ ಹಾಗೇ ಫೀಲ್ ಮಾಡ್ತಾ ಇದ್ದೆ.

ಇದ್ದಕ್ಕಿದ್ದಂತೆ ಅದೇನೋ ಗೊತ್ತಿಲ್ಲ, ಯಾರೋ ಜೋರಾಗಿ ನಕ್ಕ ಹಾಗೇ, ಶಬ್ದ ಕೇಳಿಸ್ತು. "ಮಗಾ ನಿಂಗೆ ಇದೆ ಕಣೋ, ನರಕ ಅನುಭವಿಸ್ತೀಯಾ" ಅಂತಾ ಯಾರೋ ನಗ್ತಾ ನಗ್ತಾ ಜೋರಾಗಿ ಹೇಳಿದಂಗಾಯ್ತು. ನಂಗೆ ಗಾಬರಿ ಆಯ್ತು. ಯಾರೂ ಕಾಣಿಸ್ತಾ ಇಲ್ಲ. ನನ್ ಡವ್ ಕೂಡ ಕಾಣಿಸ್ತಾ ಇಲ್ಲ. ನಾನೊಬ್ನೇ‌. ಆ ಗಡಸಾಗಿರೋ ವಾಯ್ಸ್ ಮಾತ್ರ ಕೇಳಿಸ್ತಾ ಇದೆ. ಮತ್ತೆ ಏನೋ ಕತ್ತಲೆ ಆವರಿಸಿತು, ಯಾರೋ ತಳ್ಳಿದಂತಾಯ್ತು. ನಾನೂ ಬೀಳ್ತಾ ಇರೋ ಹಾಗೇ ಫೀಲ್ ಆಗ್ತಾ ಇತ್ತು‌. ಜೊತೆಗೆ ಆ ನಗು ಕೂಡ ಕೇಳಿಸ್ತಾ ಇತ್ತು. ಅಲ್ಲಿಯವರೆಗೂ ಒಂಥರಾ ಷಾಕಿಂಗಲ್ಲಿ ಇದ್ದ ನಂಗೆ ಈಗ ಭಯ ಶುರುವಾಯಿತು. ಏನಾಗ್ತಿದೆ. ಯಾರಿದು, ಆ ಮುದುಕನಾ? ಇಲ್ಲ ಬೇರೆಯವರಾ? ಯಾರು ಅದು? ಎಲ್ಲ್ ಹೋಗ್ತಾ ಇದೀನಿ. ಏನ್ ಆಗ್ತಿದೆ ಅಂತಾ ಭಯದಲ್ಲಿ ಕಿರುಚ್ತಾ ಇದ್ದೆ. ಅದೇನೊ ಧಪ್ ಅಂತಾ ಬಡಿದಂತಾಯ್ತು. "ಓ... ನಾನೆಲ್ಲೋ ಬಿದ್ದೆ, ಯಾವುದೋ ಪ್ರಪಾತ ಇರಬೇಕು. ಜೋರಾಗಿ ಏಟು ಬಿದ್ದಿದೆ, ತುಂಬಾ ಎತ್ತರದಿಂದ ಬಿದ್ದಿದೀನಿ. ಇನ್ನೇನ್ ನಾನು ಸತ್ತು ಹೋಗ್ತೀನಿ. ಇದೇ ಇರಬೋದು ಆ ನರಕ" ಅಂತಾ ಅಂದ್ಕೊಂಡ್ ಮೆಲ್ಲಗೆ ಕಣ್ ಮುಚ್ಚಿದೆ. "ಹೌದು ಕಣೋ, ಇದೇ ನರಕ.. ವೆಲ್ ಕಮ್, ವೆಲ್ ಕಮ್" ಅಂತಾ ಅವನು ಮಾತ್ರ ಕೂಗ್ತಾ ಇದ್ದ. ಅದ್ಯಾರೋ ಪಾಪಿ ನನ್ಮಗ. ಏನೂ ಕಾಣಿಸ್ತಾ ಇಲ್ಲ ಬೇರೆ. ಇನ್ನೇನ್ ಸತ್ತುಹೋದೆ ಅಲ್ವಾ ಅಂತಾ ಪೂರ್ತಿಯಾಗಿ ಕಣ್ ಮುಚ್ಚಿದೆ.

ಹೀಗೆ ಅದೆಷ್ಟು ಹೊತ್ತು ಇದ್ದೆ ಅನ್ನೋದ್ ಪರಿವಿಲ್ಲ.. ಎಚ್ಚರವಾದಂಗಾಯ್ತು. ಕೈಕಾಲು ಸಡಿಲಿಸಿ ನಿಧಾನವಾಗಿ ಕಣ್ತೆರೆದು ನೋಡಿದೆ. ಯಾವುದೋ ಮನೆಯಲ್ಲಿ, ಬೆಳ್ಳಗಿರೋ ಬೆಡ್ ಮೇಲೆ ಮಲಗಿದೀನಿ. ಬೆಡ್ ಕೂಡ ಮೆತ್ತಗೆ ಇದೆ. ಆಶ್ಚರ್ಯಕರವಾಗಿ ಎದ್ದೆ. ಯಾರೂ ಕಾಣಿಸ್ತಾ ಇಲ್ಲ. ಮನೆ ಕೂಡ ಸ್ವಲ್ಪ ರಾಯಲ್ ಆಗೀನೆ ಇದೆ. ಎದುರಲ್ಲಿ ದೊಡ್ಡ ಕನ್ನಡಿ ಇತ್ತು. ಅದರೊಳಗೆ ನನ್ನ ಕಂಡು, "ಓ ಗಾಡ್‌. ನಾನೂ ಇನ್ನೂ ಸತ್ತಿಲ್ಲ. ಇಷ್ಟೊತ್ತು ಕಂಡಿದ್ದು ಕನಸಾ" ಅಂತಾ ಹೋದ ಜೀವ ಮತ್ತೆ ಬಂದಂತಾ ಖುಷಿಯಲ್ಲಿ ಮನಸು ನಿಟ್ಟುಸಿರು ‌ಬಿಡ್ತು. ಬೆಡ್ ಇಂದ ಇಳಿದು ಕಿಟಕಿಯಾಚೆ ನೋಡಿದೆ. ವಾವ್... ಅಮೇಜಿಂಗ್‌. ಸುತ್ತಾ ಹಸಿರು ಹಸಿರು ಕಾನನ. ಟೀ ಎಸ್ಟೇಟ್. ಮಳೆ ಕೂಡ ಬರ್ತಿದೆ. ಸೂಪರ್ ವೆದರ್. ಸಖತ್ ಖುಷಿಯಾಯ್ತು. ಕನಸಲ್ಲಿ‌ ಬಂದ ಆ ಧ್ವನಿ ನೆನಪಾಗಿ... "ಓ ಇದೇನಾ ಆ ನರಕ.." ಅಂತ ನನ್ನಷ್ಟಕ್ಕೇ ನಾನೇ ನಕ್ಕೆ.ಅಟ್ಯಾಚ್ಡ್ ಬಾತ್ ರೂಮ್ ಕಡೆ ಬಂದೆ. ಅದೂ ಕೂಡ ವಿಶಾಲವಾಗಿದೆ. ಅಷ್ಟೇ ರಾಯಲ್. ಮುಖಕ್ಕೆ ಸ್ವಲ್ಪ ತಣ್ಣೀರೆರಚಿ ಇನ್ನೂ ಎಚ್ಚರವಾದೆ. ಬಾತ್ ಟಬ್ ನೋಡಿ ಖುಷಿಯಾಯ್ತು. ನಾನ್ಯಾವತ್ತೂ ಬಾತ್ ಟಬ್ಬಲ್ಲಿ ಸ್ನಾನ ಮಾಡಿಲ್ಲ. ಮನೆಯಲ್ಲಿ ಯಾರಿದ್ದಾರೆ, ಯಾರಿಲ್ಲ ಅನ್ನೋದರ ಬಗ್ಗೆ ತಲೆ ಕೆಡಿಸ್ಕೊಳ್ಳದೇ ಸರಸರನೆ ಬಟ್ಟೆ ಕಳಚಿ ಸ್ನಾನಕ್ಕಾಗಿ ಟಬ್ ನೊಳಗೆ ಇಳಿದೆ. ತುಂಬಾ ಹೊತ್ತು, ತೃಪ್ತಿಕರವಾಗಿ ಸ್ನಾನ ಮಾಡಿ, ಫ್ರೆಷ್ ಆಗಿ ಹೊರಬಂದೆ. ಒಂಥರಾ ಉಲ್ಲಾಸ, ಉತ್ಸಾಹ ಇತ್ತು. ಸ್ವಲ್ಪ ಹೊಟ್ಟೆ ಹಸಿವಾದಂತಾಯ್ತು, ಡೈನಿಂಗ್ ಹಾಲ್ ಕಡೆ ಹೋದೆ. ಅದು ಕೂಡ ಸೂಪರ್. ಆದರೆ ಹಾಲು, ಮೊಸರು ಹಾಗೂ ಫ್ರೂಟ್ಸ್ ಮಾತ್ರ ಇತ್ತು. ಒಂದು ಲೋಟ ಹಾಲು ಕುಡಿದು, ಒಂದು ಸೇಬು ತೆಗೆದುಕೊಂಡು ತಿನ್ನುತ್ತಿದ್ದೆ. ಇದೆ ಕಣೋ ಸ್ವರ್ಗ ಅಂತಾ ಅವನಿಗೆ ಕೂಗಿ ಹೇಳೋಣ ಅಂತಾ ಅನ್ನಿಸ್ತು.ಅಷ್ಟರಲ್ಲಿ ನನ್ನ ಮೊಬೈಲ್ ನೆನಪಾಗಿ, ಮೊಬೈಲ್ ಹುಡುಕಾಡಿದೆ. ಸಿಕ್ತು. ಈಗಿನ ಕಾಲದಲ್ಲಿ ನಮ್ಮ ಜೊತೆ ಯಾರೂ ಇರದಿದ್ದರೂ ಪರವಾಗಿಲ್ಲ, ಮೊಬೈಲ್ ಇರಬೇಕು. ಹಾಗೇ ಮೊಬೈಲ್ ನಲ್ಲಿ ಇಂಟರ್ ನೆಟ್ ಕೂಡ ಇರಬೇಕು. ವಾಟ್ಸಾಪಿನ, ಫೇಸ್ ಬುಕ್ಕಿನ, ಟ್ವಿಟರ್, ಇನಸ್ಟಾಗ್ರಾಮಿನ ಯಾವುದೇ ನೋಟಿಫಿಕೇಷನ್ ಗಳ ಸುಳಿವೇ ಇರಲಿಲ್ಲ. ಅದು ಹೋಗಲಿ, ಬ್ಯಾಂಕ್ SMS ಕೂಡ ಇರಲಿಲ್ಲ. ಅದೇಕೆ ಎಂದು ಪರಿಶೀಲಿಸಲು, ಮೊಬೈಲ್ ನೆಟ್ ವರ್ಕ್ ಸಂಪೂರ್ಣವಾಗಿ ಇರಲಿಲ್ಲ."Oh my God" ಈಗ ಮನಸಿಗೆ ಒಂಥರಾ ಬೇಜಾರಾಯ್ತು. ಯಾವತ್ತೂ ಬಂದಿರದ ಹೊಸ ಜಾಗ ಬೇರೆ. ಅಲ್ಲದೇ ಯಾರೂ ಇಲ್ಲ ಕೂಡ. ಮೊಬೈಲ್ ನೆಟ್ ವರ್ಕ್ ಕೂಡ ಕೈಕೊಟ್ಟಿದೆ. ಚಾರ್ಜರ್ ಕೂಡ ತರಲಿಲ್ಲ. ಈಗ ಒಂಚೂರು ಚಿಂತೆ ಶುರು ಹಚ್ಚಿಕೊಂಡಿತು. ಏನಾಗಿದೆ, ಎಲ್ಲಿ‌ ಇದೀನಿ ಅಂತಾ ತಿಳ್ಕೋಳೋಕೆ ತುಂಬಾ ಟ್ರೈ ಮಾಡಿದೆ. GPS ಆನ್ ಮಾಡಿದ್ರೂ, ಇನ್ನೂ ಬೆಂಗಳೂರಿನ ಕಾಫಿ ಷಾಪ್ ಲೊಕೇಷನ್ನೇ ತೋರಿಸ್ತಾ ಇದೆ. ಓಲಾ, ಊಬರ್, ಐಸಿಐಸಿಐ ಬ್ಯಾಂಕ್ ಆ್ಯಪ್, ಕ್ವಿಕರ್, ಫುಡ್ ಪಾಂಡಾ, ಫ್ಲಿಪ್ ಕಾರ್ಟ್, ತೇಜ್ ಆ್ಯಪ್ ಸೇರಿದಂತೆ ಬಹುತೇಕ ಎಲ್ಲಾ ಆ್ಯಪ್ ಗಳನ್ನು ನೋಡಿದೆ‌. ಅವೆಲ್ಲವೂ ಈಗ ಉಪಯೋಗಕ್ಕೆ ಬರುತ್ತಿಲ್ಲ. ಟೆಂಪಲ್ ರನ್ ಗೇಮ್ ಮಾತ್ರ ಸದ್ಯಕ್ಕೆ ಉಪಯೋಗಕ್ಕೆ ಬರ್ತಾ ಇತ್ತು. ಒಂದ್ ಸ್ವಲ್ಪ ಹೊತ್ತು ಆಡಿದೆ ಕೂಡ. ಆಮೇಲೆ ಸಾಕೆನಿಸಿತು.ಮತ್ತೆ ಕಿಟಕಿಯ ಬಳಿ ಹೊರಗಿನ ಸೌಂದರ್ಯ ಆಸ್ವಾದಿಸಿದೆ. ನಂತರ ಕೋಣೆಯ ಮತ್ತೊಂದು ಭಾಗದಲ್ಲಿ ದೊಡ್ಡ ಕಪಾಟು ಇತ್ತು. ಅದರಲ್ಲಿ ಸಾವಿರಾರು ಕನ್ನಡ ಪುಸ್ತಕಗಳಿದ್ದವು‌. ಆಗ ಅಂದ್ಕೊಂಡೆ ಈ ಮನೆ ಯಜಮಾನ ಇಲ್ಲಿ ಒಂಟಿಯಾಗಿಲ್ಲ. ಪುಸ್ತಕಗಳೆಂಬ ಇಷ್ಟೊಂದು ಜನ ಸ್ನೇಹಿತರು ಇರುವಾಗ ಆತ ಒಂಟಿ ಹೇಗಾಗಲು ಸಾಧ್ಯ? ಆ ಪುಸ್ತಕಗಳಲ್ಲಿ ಚಿಕ್ಕದೊಂದು ಪುಸ್ತಕ ತೆಗೆದುಕೊಂಡು ಓದಿದೆ. ಒಂದೊಳ್ಳೆ ಕಾದಂಬರಿ ಅದಾಗಿತ್ತು. ಬೇಗಬೇಗನೆ ಓದಿಸಿಕೊಂಡಿತು. ನನಗೆ ತಿಳಿದಂತೆ ಹಲವು ದಶಕಗಳ ನಂತರ ಪುಸ್ತಕ ಓದಿದ್ದು. ಈ ಮೊಬೈಲ್, ಇಂಟರ್ ನೆಟ್ ಇದೆಲ್ಲಾ ಬಂದಮೇಲೆ ಪುಸ್ತಕ ಮರೆತಿದ್ದೇವೆ. ಅಷ್ಟೇ ಏಕೆ, ಸಂಬಂಧಗಳೂ ಗಟ್ಟಿಯಾಗಿರುವುದಿಲ್ಲ. ಬೆರಳ ತುದಿಯಲ್ಲಿ ಎಲ್ಲವೂ ಇದ್ದರೂ ಒಂಟಿತನ. ನಿದ್ರಾಹೀನತೆ. Unsatisfied life.

ಅರೆರೆ ಏನಿದು ನಾನು ವೇದಾಂತಿಯಾದೇನಾ? ಏನಿಲ್ಲಾ, ವಾಸ್ತವಿಕವಾಗಿ ಇರೋದನ್ನೇ ಚರ್ಚಿಸುತ್ತಿದ್ದೇನೆ ನನ್ನೊಂದಿಗೆ ನಾನು. ಮಲಗಲು ಮೆತ್ತನೆಯ ಹಾಸಿಗೆ, ಹೊರಗೆ ಹಚ್ಚಹಸಿರಿನ ಪರಿಸರ, ಪರಿಶುದ್ಧ ಗಾಳಿ, ಕೆಮಿಕಲ್ ಫ್ರೀ ಇರುವ ಹಣ್ಣು ತರಕಾರಿ. ಧ್ಯಾನಕ್ಕೆ ಅವಶ್ಯವಾದ ನೀರವತೆ, ಇಷ್ಟೆಲ್ಲಾ ಇದ್ದರೂ, ಕಳೆದು ಹೋದ ನೆಟ್ ವರ್ಕ್ ಸಿಗ್ನಲ್ ಗಾಗಿ ಮನಸು ನೊಂದಿತ್ತಲ್ಲ. ಈ ಮೊಬೈಲ್ ಹಾಗೂ ಇಂಟರ್ ನೆಟ್ ಗೆ ನಾವು ಯಾಕಿಷ್ಟು ದಾಸರಾಗಿದ್ದೇವೆ.ಇದು ಉಪಯುಕ್ತ ಸಾಧನ ಸರಿ, ಆದರೆ ಉಪಯೋಗಿಸುಕೊಳ್ಳುವುದಕ್ಕಿಂತಾ ಹೆಚ್ಚು ದುರುಪಯೋಗ ಮಾಡಿಕೊಳ್ಳುತ್ತಿರುವುದೇ ಹೆಚ್ಚು. ಇಲ್ಲಿಯವರೆಗೂ ಮೊಬೈಲ್ ಹಾಗೂ ಇಂಟರ್ ನೆಟ್ ಗೆ ಅಡಿಕ್ಟ್ ಆಗಿ ಮಾಡಿದ ತಪ್ಪುಗಳು ನೆನಪಾದವು. ಇನ್ನೂ ಮುಂದಾದರೂ ಮೊಬೈಲ್ ಹಾಗೂ ಇಂಟರ್ನೆಟ್ ಅತಿಯಾಗಿ ಬಳಸುವುದೇ ಬೇಡ ಎಂದು ನನ್ನಷ್ಟಕೆ ನಾನೇ ಅಗ್ರಿಮೆಂಟ್ ಮಾಡಿಕೊಂಡೆ. ಸರಿ, ಅನಿಸಿದನ್ನು ತಡಮಾಡದೇ ಮಾಡಬೇಕು. ಒಂದಷ್ಟು ಹೊತ್ತು ಸಣ್ಣ ನಿದಿರೆ ಮಾಡೋಣ ಎಂದು ಮಲಗಿದೆ. ಇನ್ನೇನು ನಿದಿರೆ ಹತ್ತಬೇಕು ಎನ್ನುವಷ್ಟರಲ್ಲಿ "ರಾಜೂ.. ರಾಜೂ.." ಅಂತಾ ಯಾರೋ ಹೆಣ್ಣಿನ ದನಿಯಲ್ಲಿ ಮಾತನಾಡಿಸಿದಂತಾಯ್ತು.

ಎಚ್ಚರವಾದಂತಾಗಿ ಕಣ್ ಬಿಟ್ಟು ನೋಡಿದರೆ, ಅದೇ ಕಾಫಿ ಷಾಪ್ ಮತ್ತು ನನ್ ಡವ್. ಓ ನೀನ್ಯಾವಾಗ ಬಂದೆ ಅಂತಾ ಕೇಳಿದೆ. "ಲೋ, ಏನಾಯ್ತೋ ನಿಂಗೆ. ಅದೆಷ್ಟು ಸಾರಿ ಫೋನ್ ಮಾಡಿದ್ರೂ ನೀನ್ ಎತ್ತಲಿಲ್ಲ" ಅಂತಾ ಕೇಳಿದ್ಲು. "ನಾಟ್ ರೀಚೇಬಲ್ ಜಾಗದಲ್ಲಿ ಇದ್ದೆ‌ ಅದ್ಕೆ ನೋ ನೆಟ್ ವರ್ಕ್" ಅಂತಾ ನಾನ್ ಹೇಳ್ದೆ. ಅದಕ್ಕವಳು " ನಾಟ್ ರೀಚೇಬಲ್ ಇರೋದು ನಿನ್ ಮೊಬೈಲ್ ಅಲ್ಲ.. ನಿನ್ನ ತಲೆ" ಎಂದು ಹೇಳಿ, ನನ್ನ ಮೊಬೈಲ್ ನಲ್ಲಿರುವ ಮಿಸ್ಡ್ ಕಾಲ್ ಲಿಸ್ಟ್ ತೋರಿಸಿದಳು. ಓ ಹಾಗಾದರೆ ನಿಜವಾಗಿಯೂ ಇಷ್ಟೊತ್ತು ನಾ ಕಂಡಿದ್ದು ಕನಸು. ನಾ ನಕ್ಕು ಸುಮ್ಮನಾದೆ. ಅವಳ ಬಂದಾಯ್ರಲ್ಲ., ಸೋ ಈಗ ಒಂದ್ ಕಾಫಿ ಆರ್ಡರ್ ಮಾಡಿದೆ. ಅದನ್ನು ಕುಡಿಯುತಾ, ನನ್ನವಳ ನೋಡುತಾ, ಒಂದು ವಿಷ್ಯ ಡಿಸೈಡ್ ಮಾಡಿದೆ‌.

"ಅಗತ್ಯಕ್ಕಿಂತ ಹೆಚ್ಚಾಗಿ ಇಂಟರ್ನೆಟ್ ಹಾಗೂ ಮೊಬೈಲ್ ಉಪಯೋಗಿಸುವುದಿಲ್ಲ" ಎಂದು.