ಇವತ್ತ್ಯಾಕೋ ತುಂಬಾ ಬೇಗನೇ ಎಚ್ಚರವಾಯ್ತು. ಕಣ್ಣು ಹೊರಳಿಸಿ ನೋಡಿದೆ. ಲಲಿತಾ ಕಾಣಿಸಲಿಲ್ಲ. ಲಲಿತಾ ನನ್ನ ಪ್ರಾಣ. ಅವಳಿಂದಲೇ ನಾನು. ಅವಳು ಕಾಣದೇ ಹೋದರೆ ಮನಸಿಗೆ ತುಂಬಾ ಕಸಿವಿಸಿ. ಮದುವೆಯಾಗಿ ಅದೆಷ್ಟು ವರುಷಗಳು ಕಳೆದಿವೆಯೋ ನೆನಪಿಲ್ಲ. ಈಗಲೂ ಹೊಸದಾಗಿ ಮದುವೆಯಾಗಿದೆ ಎಂಬಂತೆ ನನಗೆ ಭಾಸವಾಗುತ್ತದೆ. ಅದೋ ಬಂದ್ಲು ನನ್ನ ಲಲಿತಾ. ಅವಳ ಚಂದ ಕಂಡಾಗ, ಅವಳ ನಗುವ ಕಂಡಾಗ ನಂಗೇ ಏನೇನೋ ಪೋಲಿ ಆಸೆಗಳು ಒಂದರ ಹಿಂದೆ ಒಂದರಂತೆ ಕಾಡುತ್ತದೆ. ಅವೆಲ್ಲವನ್ನೂ ಅವಳಿಗೆ ನಾ ಹೇಳದಿದ್ದರೂ ನನ್ನ ಕಣ್ಣನ್ನು ನೋಡಿಯೇ ತಿಳಿದುಕೊಳ್ಳುವಷ್ಟು ಚತುರೆ ನನ್ನ ಲಲಿತಾ. ಯಾವುದೋ ಜನ್ಮದಲ್ಲಿ ನಾ ಪುಣ್ಯ ಮಾಡಿರಬೇಕು ಎನಿಸುತ್ತಿದೆ. ಇಂಥಾ ಅಪ್ರತಿಮ ಚೆಲುವೆಯು ನನಗೆ ಸಿಕ್ಕಿದ್ದು. ಮನೆಯ ಪ್ರತಿ ಕೆಲಸವನ್ನು ಲಲಿತಳೇ ಮಾಡಬೇಕಾಗಿರುವುದರಿಂದ ಲಲಿತೆ ಬೆಳಗಿನಿಂದಲೂ ಸ್ವಲ್ಪ ಬಿಜಿ ಇರುತ್ತಾಳೆ. ಬೆಳಿಗ್ಗೆ ಎದ್ದಾಗಿನಿಂದ ಮನೆಯ ಕಸ ಗುಡಿಸಿ, ರಂಗೋಲಿ ಹಾಕಿ, ಹಾಲು ತಂದು, ಸ್ನಾನ ಮುಗಿಸಿ, ಪೂಜೆ ಮುಗಿಸಿ, ತಿಂಡಿ ರೆಡಿ ಮಾಡುವುದು ಅವಳ ನಿತ್ಯದ ಮೊದಲ ಕಾಯಕ. ಅದೆಷ್ಟು ದಿನಗಳಿಂದ ನೋಡಿದ್ದೇನೆ. ಸ್ವಲ್ಪವೂ ಬೇಸರಿಸದೆ, ಒಂದು ದಿನವೂ ತಪ್ಪದೇ ಈ ಎಲ್ಲವನೂ ಮಾಡುತ್ತಾಳೆ ನನ್ನ ಲಲಿತಾ. ಈಗ ಹಾಲು ತಗೊಂಡು ಬರ್ತಾ ಇದಾಳೆ. ಅವಳು ಇನ್ನು ಒಂದು ಗಂಟೆಯ ನಂತರವೇ ಫ್ರೀಯಾಗೋದು. ಹಾಗೇ ಅವಳು ನಡೆದು ಬರೋದನ್ನೇ ನೋಡ್ತಾ ಇದ್ದೆ. ಛೀ.. ಕಳ್ಳಿ ಅವಳು. ಹಾಗೇ ವಾರೆಗಣ್ಣಿನಲ್ಲೆ ನನ್ನ ನೋಡಿ, ನಾಚುತಾ, ಮಳ್ಳಿಯಂತೆ ತುಸು ನಗುತಾ ಹಾಗೇ ಅಡುಗೆಮನೆ ಕಡೆ ಹೋದಳು. ಈಗಷ್ಟೇ ಮದುವೆಯಾದ ಮಧುಮಗಳು ಅಷ್ಟು ನಾಚಲಿಕ್ಕಿಲ್ಲ ಬಿಡಿ ಹಾಗೇ.
ಅವಳು ನಾನು ಮೊದಲು ನೋಡಿದ ಸಿನಿಮಾ, ನಾಗರಹಾವು. ಆ ಸಿನಿಮಾದಲ್ಲಿ ವಿಷ್ಣುವರ್ಧನ್ ಆರತಿಯವರ ಒಂದು ಹಾಡು ಇದೆ. "ಬಾರೇ... ಬಾರೇ... ಅಂದದ ಚೆಲುವಿನ ತಾರೇ.." ಎಂಬ ಗೀತೆ. ನಿಜ ಹೇಳ್ಬೇಕು ಅಂದ್ರೇ, ನನ್ನ ಲಲಿತೆಯನ್ನು ನಾನು ನೋಡಿದಾಗಲೆಲ್ಲಾ ಹೀಗೆ ಹಾಡುತ್ತಿದ್ದೆ. ಅವಳೋ, ಆರತಿಯಂತೆ ಸ್ಲೋ ಮೋಷನ್ ನಲ್ಲಿ ಬರುತ್ತಿರಲಿಲ್ಲ. ಸುಮ್ಮನೇ ನಾಚೀ... "ಹೋಗ್ರಿ" ಅಂತಂದು ತನ್ನ ಕೆಲಸದಲ್ಲೇ ತನ್ನ ತೊಡಗಿಸಿಕೊಳ್ಳುತ್ತಿದ್ದಳು. ನನ್ನಿಷ್ಟದ ಮಲ್ಲಿಗೆಯ ಮುಡಿದು, ಹಣೆಗೆ ಕುಂಕುಮವಿರಿಸಿ, ಮೈತುಂಬ ಸೆರಗು ಹೊದ್ದು, ಒಂದು ಕೈಯಲ್ಲಿ ಎದೆಯ ಬಳಿ ಸೆರಗನು ಹಿಡಿದು ನನ್ನ ಮುಂದೆ ನಿಂತಾಗ, ಬಂಗಾರದ ಮನುಷ್ಯ ಸಿನಿಮಾದಲ್ಲಿನ ಭಾರತಿಯವರನ್ನೇ ನೋಡಿದಂತಾಗುತ್ತದೆ. ಅಷ್ಟು ಚೆಂದ, ಅಷ್ಟು ಮುದ್ದು ನನ್ನ ಲಲಿತಾ. ಇಷ್ಟೆಲ್ಲಾ ನೆನೆದು ನನ್ನೊಳಗೆ ನಾನು ಖುಷಿ ಪಡುತಲಿರುವಾಗಲೇ, ಆಗಷ್ಟೇ ಸ್ನಾನ ಮುಗಿಸಿ, ತಲೆಯನು ಒರೆಸಿಕೊಳ್ಳುತ್ತಾ ಬಂದಳು ಲಲಿತಾ. ಕನ್ನಡಿಯ ಮುಂದೆ ಕುಳಿತು, ಕಾಡಿಗೆಯ ತಿದ್ದಿಕೊಳ್ಳುವಾಗ ನನ್ನೊಳಗಿನ ಪ್ರಣಯ ರಾಜಕುಮಾರ ಜಾಗೃತನಾಗಿ, ಅವಳನ್ನು ತಬ್ಬಿ ಮುತ್ತನೊತ್ತಿಬಿಡು ಎಂದು ಕೆಣಕುತ್ತಿದ್ದ. ನನ್ನ ತೊಳಲಾಟ ಕಂಡು, ನನ್ನ ಕಣ್ಣಂಚಲ್ಲಿ ಮಿಂಚಿ ಮಿನುಗುತ್ತಿದ್ದ ಕಾಮದಾಸೆಗೆ ಅವಳು ನಾಚಿ, ನನ್ನ ಬಳಿಗೆ ಬರಲು ಅಣಿಯಾದಳು. ಅಷ್ಟರಲ್ಲೇ "ಲಲಿತಮ್ಮನೋರೇ" ಎಂದು ಆಚೆಮನೆ ಸುಬ್ಬಮ್ಮನ ಕೂಗು ಮನೆಯಾಚೆಯಿಂದ. ಯಾವ ಗಂಡ ತಾನೇ, ಇಂಥಾ ಸುಬ್ಬಮ್ಮನ ಬೈದುಕೊಳ್ಳದೇ ಇರ್ತಾನೆ. ನಾನೂ ಕೂಡ ಮನಃಪೂರ್ವಕವಾಗಿ ಬೈದುಕೊಂಡೆ ಶಿವಪೂಜೆಯಲ್ಲಿ ಬಂದ ಆ ಕರಡಿಯನ್ನು.
ನಿದ್ದೆಯ ಜೋಂಪು ಅದ್ಯಾವಾಗ ಹತ್ತಿತೋ ಗೊತ್ತಿಲ್ಲ. ಹಾಗೇ ಮಲಗಿಕೊಂಡಿದ್ದೆ. ಆ ಸುಬ್ಬಮ್ಮ ಹೋಗಿದ್ದು ಗೊತ್ತಾಗಲಿಲ್ಲ. ಲಲಿತೆ ಬಂದು ಮಾತನಾಡಿಸಿದಾಗಲೇ ನನಗೆ ಎಚ್ಚರವಾಗಿದ್ದು. ಒಂದು ಚೊಂಬು ಬಿಸಿನೀರು, ತಟ್ಟೆಯಲ್ಲಿ ಉಪ್ಪಿಟ್ಟು ಹಾಗೂ ಒಂದು ಲೋಟದಲ್ಲಿಪ ಮೋಸಂಬಿ ಹಣ್ಣಿನ ರಸವನ್ನು ತಂದು, ಹತ್ತಿರದಲ್ಲೇ ಇದ್ದ ಟೀಪಾಯಿ ಮೇಲಿಟ್ಟಳು. ನನ್ನ ಎಬ್ಬಿಸಿ, ಮೆಲ್ಲಗೆ ಕೂರಿಸಿ, ನಿತ್ಯದಂತೆ ಬಿಸಿನೀರಿನ ಬಟ್ಟೆಯೊಂದನ್ನು ನನೆಸಿ, ನನ್ನ ಮುಖವೊರೆಸಿ, ಬಾಯಿ ಸ್ವಚ್ಚಗೊಳಿಸಿ, ಕೊನೆಗೆ ಟವೆಲ್ ನಿಂದ ಒರೆಸಿ, ಮನ್ಮಥನಂತೆ ಕಾಣುವ ಹಾಗೇ ನನ್ನ ಸಿಂಗರಿಸಿಬಿಟ್ಟಳು. ಮೊದಲಿಗೆ ಹಣ್ಣಿನ ರಸ ಕುಡಿಸಿ, ಸ್ವಲ್ಪ ಸಮಯ ಬಿಟ್ಟು, ಉಪ್ಪಿಟ್ಟನ್ನು ತಿನಿಸಿದಳು. ತಿಂಡಿ ತಿಂದ ಬಳಿಕ, ಟಿ.ವಿ. ಆನ್ ಮಾಡಿ ಉದಯ ಮ್ಯೂಸಿಕ್ ಚಾನಲ್ ಹಾಕಿದಳು. ಹಳೆಯ ಮಧುರ ಗೀತೆಗಳು ಬರುತ್ತಿತ್ತು. ಬೇಸಿಗೆ ಕಾಲ ಬೇರೆ, ಸೆಕೆ ಇತ್ತು. ಫ್ಯಾನ್ ಬೇರೆ ಕೆಟ್ಟು ಹೋಗಿತ್ತು. ಇನ್ನೂ ಅವಳೆ ಹತ್ತಿರ ಕುಳಿತು, ಗಾಳಿ ಬೀಸುತ್ತಿದ್ದಳು. ಇದಲ್ಲವೇ ಭಾಗ್ಯವಂತರ ಲಕ್ಷಣ. ಇಷ್ಟೊಂದು ಆರೈಕೆ ಮಾಡುವ ಅವಳು ಹೆಂಡತಿಯಾದರೂ, ನನ್ನ ತಾಯಿಯ ಮಮತೆಯ ಅಂಶವೇ ನಿಜ. ನಾನೆಂದರೆ ಅಷ್ಟೊಂದು ಪ್ರೀತಿ ಅವಳಿಗೆ. ಅವಳ ಪ್ರೀತಿಯ, ಅವಳ ವಿಶ್ವಾಸದ ಋಣ ನಾ ಅದ್ಯಾವ ಜನ್ಮಕೂ ತೀರಿಸಲಾಗದು ಬಿಡಿ. ಮಾತನಾಡೋದು ಅವಳು ಮಾತ್ರ. ಅವಳು ಹೇಳಿದಕ್ಕೇ ನಾ ಹೂಂ ಅನ್ನಬೇಕು. ಇಲ್ಲವಾದರೆ ಮುನಿಸಿಕೊಳ್ಳುತ್ತಾಳೆ. ಎಲ್ಲ ಗಂಡಂದಿರು ಅಷ್ಟೇ ತಾನೇ, ಹೆಂಡತಿಯ ತಾಳಕೆ ತಕಥೈ ಅನ್ನಬೇಕು.
ಆ ಸುಬ್ಬಮ್ಮನ ಮಗಳು, ಮದುವೆಯಾಗಿ ಮೂರ್ನಾಲ್ಕು ವರ್ಷವಾಯ್ತು. ಅತ್ತೆ ಮನೆಯಲ್ಲಿ ಕೆಲಸ ಜಾಸ್ತಿ ಅಂತಾ ಗಂಡನ್ನ, ಮಕ್ಕಳನ್ನು ಬಿಟ್ಟು ತವರು ಮನೆಗೆ ಬೆಳಿಗ್ಗೆ ಬಂದಿದ್ದಳಂತೆ. ಅವಳ ಮಗಳ ಕಥೆ ಕೇಳಿ, ನನ್ನ ಲಲಿತೆ ಬುದ್ದಿಮಾತು ಹೇಳಿ, ಮತ್ತೆ ಗಂಡನ ಮನೆಗೆ ಹೋಗುವಂತೆ ಮನಸು ತಿಳಿಯಾಗಿಸಿದ್ದಾಳೆ. ಆ ನಂತರ ಲಲಿತಾಳೇ ನಂಗೇ ಹೇಳಿದ್ಲು. ಈಗಿನ ಕಾಲದಲ್ಲಿ ಉರಿಯೋ ಬೆಂಕಿಗೆ ತುಪ್ಪ ಹಾಕೋರೆ ಜಾಸ್ತಿ. ಈ ತರಹ ಏನಾದ್ರೂ ಗಂಡನ ಬಿಟ್ರೆ, ಇಲ್ಲಸಲ್ಲದ್ದನ್ನೆಲ್ಲಾ ತಲೆಗೆ ತುಂಬಿ, ಬೇರೆ ಮಾಡಿ, ಇವರ ನರಳಾಟ ನೋಡಿ ಖುಷಿ ಪಡೋ ಮಂದಿ ಹೆಚ್ಚಾಗಿರೋ ಕಾಲ ಇದು. ಅದಕೆ ಹೇಳೋದು ನನ್ನ ಲಲಿತಾ ತುಂಬಾ ಒಳ್ಳೆಯವಳು, ಎಲ್ಲರಿಗೂ ಒಳ್ಳೆಯದನ್ನೇ ಬಯಸುವವಳು.
ನಮ್ಮದು ಒಂದಿನ್ನೂರು ಮನೆ ಇರಬಹುದಾದ ಚಿಕ್ಕ ಹಳ್ಳಿ. ಜನಸಂಚಾರ ಕಡಿಮೆ ಇರುವ ಕಡೆ ನಮ್ಮ ಮನೆಯಿತ್ತು. ಮನೆಯ ಎಡಗಡೆ ಮೂರು ಎಕರೆ ಹೊಲ. ಪಕ್ಕದಲ್ಲಿ ತೆಂಗಿನ ತೋಪು. ಊರ ರಸ್ತೆಯ ಕಡೆ ಬರಬೇಕಾದರೆ ಮನೆಯಿಂದ ಒಂದೈದು ಫರ್ಲಾಂಗು ದೂರದ ಕಾಲುದಾರಿಯಲ್ಲೇ ಬರಬೇಕಾಗಿತ್ತು. ಈಗ ಮನೆಯಲ್ಲಿರೋದು ನಾನು ನನ್ನ ಹೆಂಡತಿ ಮಾತ್ರ. ಮದುವೆಯಾಗಿ ತುಂಬಾ ದಿನಗಳಾದರೂ ಮಕ್ಕಳಾಗಲಿಲ್ಲ. ಆದರೂ ನಮ್ಮ ಪ್ರೀತಿ ಯಾವತ್ತೂ ಎಳ್ಳು ಕಾಳಿನಷ್ಟು ಕಡಿಮೆ ಎನಿಸಲಿಲ್ಲ. ಊರಿನ ದೇವರಿಗೆ ಹರಕೆ ಹೊತ್ತು ಅದೆಷ್ಟೋ ವರುಷಗಳವರೆಗೆ ಪೂಜೆ ಸಲ್ಲಿಸಿದ ನಂತರ ಒಂದರ ಹಿಂದೆ ಒಂದರಂತೆ ಮೂರು ಮಕ್ಕಳು ಹುಟ್ಟಿದರು. ಬೆಳೆದು ದೊಡ್ಡವರಾದ ಅವರು ದೂರದ ಪಟ್ಟಣ ಸೇರಿದರು. ನಮಗೂ ತಿಳಿಸದಂತೆ ಮದುವೆಯಾದರು. ಯಾವಗಲೋ ವರುಷಕ್ಕೋ, ಎರಡು ವರುಷಕ್ಕೋ ಬಂದು ಹೋಗುವ ಪರಿಪಾಠ ಬೆಳೆಸಿಕೊಂಡರು. ಈ ಸುಖಕ್ಕಾಗಿ ಮಕ್ಕಳು ಬೇಕೆ ಎಂದು ಲಲಿತೆ ನನ್ನೆದೆ ಮೇಲೆ ಮುಖವಿಟ್ಟು ಅತ್ತದ್ದೂ ಉಂಟು. ದೇವರು ಕೊಟ್ಟದ್ದು ಇಷ್ಟೇ ಫಲ ನಮಗೆ ಅಂತಾ ಅವಳಿಗೆ ಸಮಾಧಾನ ಮಾಡುತ್ತಿದ್ದೆ. ಆ ನನ್ನ ಮಕ್ಕಳು ದೂರ ಹೋಗಿದ್ದಕ್ಕಿಂತಾ ಹೆಚ್ಚಾಗಿ, ನನ್ನ ಲಲಿತೆಯ ಕಣ್ಣೀರಿಗೆ ಕಾರಣರಾದರಲ್ಲ ಎಂಬುದೇ ನನ್ನ ನೋವು. ವಯಸ್ಸು ಅರವತ್ತಾದರೂ ಗಟ್ಟಿಯಾಗಿಯೇ ಇದ್ದ ನನಗೆ ಅದೊಂದು ದಿನ ಇದ್ದಕ್ಕಿದ್ದಂತೆ ಮೈಕೈ ಮೂತಿ ಎಲ್ಲ ಸೆಟಗೊಂಡು ಹಾಸಿಗೆ ಸೇರಿದೆ. ಲಕ್ವಾ ಹೊಡೆಯಿತು. ವಿಷಯ ತಿಳಿದ ಮಕ್ಕಳು ಬಂದು ಚಿಕಿತ್ಸೆ ಕೊಡಿಸುವ ವಿಷಯ ಮಾತನಾಡುವ ಬದಲು, ಆಸ್ತಿಯ ಪಾಲು ಕೇಳಿ ನನ್ನವಳ ಕೋಪಕ್ಕೂ ಗುರಿಯಾಗಿ ಅಲ್ಲಿಂದ ಹೊರಟೇ ಹೋದರು. ಅದೆಷ್ಟು ದಿನ ನೀವ್ ಜೀವಂತವಾಗಿ ಇರ್ತೀರಿ, ನಾವೂ ನೋಡ್ತೀವಿ ಅಂತಾ ಸೊಕ್ಕಿನ ಮಾತನಾಡಿ, ನಮ್ಮಿಬ್ಬರ ಕಣ್ಣಲ್ಲೂ ನೀರು ಜಿನುಗುವಂತೆ ಮಾಡಿದ್ದರು. ಆದದ್ದಾಗಲೀ, ನಾನು ಬದುಕಿರುವರೆಗೂ ನಿಮ್ಮ ಸೇವೆ ಮಾಡುತ್ತೇನೆ, ಕೊಟ್ಟ ಮಾತಿನಂತೆ, ಅಂದಿನಿಂದಲೂ ಲಲಿತೆಯೇ ನನ್ನ ಆರೈಕೆ ಮಾಡುತ್ತಿದ್ದಾಳೆ. ಮೂರು ಎಕರೆ ಹೊಲ ಹಾಳಾಯಿತು. ತೆಂಗಿನ ಮರಗಳಿಗೆ ಸರಿಯಾದ ಆರೈಕೆ ಇರದೆ ಒಣಗಿ ಹೋಗುತ್ತಿದ್ದವು.
ಯಾವುದೋ ಕಾಲದಲ್ಲಿ ಪಕ್ಕದ ಊರಿನ ಬಸಣ್ಣನಿಗೆ ಸಹಾಯ ಮಾಡಿದ್ದೆ. ನಮ್ಮ ಈ ಪರಿಸ್ಥಿತಿಯ ತಿಳಿದು, ಆತನೇ ಬಂದು ಕಣ್ಣೀರಿಟ್ಟು ಕೊರಗಿ, ನಿಮಗಿಂತಾ ಪರಿಸ್ಥಿತಿ ಬರಬಾರದಿತ್ತು. ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಈ ಕರುಣೆಯಿಲ್ಲ. ಆದರೆ ಯಾರೋ ಪುಣ್ಯಾತ್ಮ ನಮಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡಿದ. ನಿಸ್ವಾರ್ಥದಿಂದ ನಾವು ಯಾರಿಗಾದರೂ ಸಹಾಯ ಮಾಡಿದರೆ ಒಂದಲ್ಲ ಒಂದು ದಿನ ಆ ದೇವರು ಕಾಪಾಡ್ತಾನೆ ಅಂತಾ ಹೇಳ್ತಾರಲ್ಲ. ಅದು ಸತ್ಯ ಅಂತಾ ನಂಗೆ ಈಗ ಅರ್ಥ ಆಯ್ತು. ಮಲಗಿದ್ದಲ್ಲಿಂದ ಒಂದಿಂಚೂ ಕದಲಲಾಗುವುದಿಲ್ಲ. ಮಾತು ಬರುವುದಿಲ್ಲ. ನನ್ನ ಮೆದುಳೊಂದೇ ಸ್ವಾಧೀನ. ಲಲಿತೆಯೊಬ್ಬಳೇ ನನಗಾಧಾರ. ಅವಳು ನನ್ಬ ದೇವತೆ. ಅವಳೂ ಇಲ್ಲದೇ ಹೋಗಿದ್ದರೆ ನನ್ನ ಪರಿಸ್ಥಿತಿ. ಊಹಿಸಿಕೊಳ್ಳಲು ಕಷ್ಟ. ನನ್ನ ಮಲ ಮೂತ್ರ ಬಳಿದು, ಸ್ವಚ್ಛ ಮಾಡಿ, ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಕೊಡುತ್ತಾ ನನ್ನ ಸೇವೆಯನ್ನು ಮಾಡುವ ಅವಳು, ನನ್ನ ಪಾಲಿನ ದೇವರು. ನನ್ನಿಂದ ಅವಳಿಗೆ ಎಷ್ಟು ಕಷ್ಟವಾಯ್ತಲ್ಲ ಎಂದು ಮನಸು ಕೊರಗಿ ಕೊರಗಿ ಅವಳ ಕೈಹಿಡಿದು, ಅದೆಷ್ಟೋ ಬಾರಿ ರೋಧಿಸಿದ್ದೇನೆ.
ಹೀಗೆ ಹಾಸಿಗೆ ಸೇರಿ ನಾಲ್ಕೈದು ವರುಷಗಳಾಗಿರಬಹುದು. ಅಷ್ಟೂ ವರುಷಗಳಲ್ಲಿ ಒಂದೂ ದಿನವೂ ಕಿರಿಕಿರಿ ಎನ್ನದೇ ಅಷ್ಟೇ ಪ್ರೀತಿಯಿಂದ ನನ್ನ ಲಲಿತೆ ನನ್ನ ಸೇವೆ ಮಾಡಿದ್ದಾಳೆ. ಹೀಗೆ ಇದೆಲ್ಲವನೂ ನೆನೆಸಿ, ಬೇಜಾರಿನಲ್ಲಿಯೇ ಕಣ್ ಮುಚ್ಚಿ ಮಲಗಿದೆ. ಎಚ್ಚರವಾದಾಗ ಲಲಿತೆಯೂ ಹಾಸಿಗೆ ಮುಂದೆಯೇ ಇದ್ದ ಖುರ್ಚಿಯಲ್ಲೂ ಕುಳಿತಿದ್ದಳು. ನಿದಿರೆಗೆ ಜಾರಿದ್ದಳು. ಖುರ್ಚಿಯ ಮೇಲೆ ಕುಳಿತು, ಕತ್ತು ಹಿಂದಕ್ಕೆ ಸರಿಸಿ, ಬಾಯಿ ತೆರೆದುಕೊಂಡೇ ಮಲಗಿದ್ದಳು. ತುಂಬಾ ಸುಸ್ತಾಗಿರಬೇಕು ಅನಿಸುತ್ತೆ. ಮನೆಯ ಪ್ರತಿಯೊಂದು ಕೆಲಸವನ್ನು ಅವಳೇ ಮಾಡುವಾಗ, ಜೊತೆಗೆ ನನ್ನ ಕೆಲಸವೂ ಸಾಕಷ್ಟಿರುವಾಗ ಸುಸ್ತಾಗದೇ ಇರುತ್ತದೆಯೇ? ಹೀಗೆ ಹಲವು ನಿಮಿಷಗಳು ಕಳೆದವು. ಆದರೂ ಲಲಿತಾ ಎಚ್ಚರವಾಗಿರಲಿಲ್ಲ. ಅಲ್ಲದೇ ಒಂಚೂರು ಕದಲದೇ ಮಲಗಿದ್ದಳು. ಅರೇ ಇದೇಕೆ ಹೀಗೆ, ಲಲಿತಾ ಎಂದೂ ಹೀಗೆ ಮಲಗಿದವಳಲ್ಲ. ನಾನೇ ಎದ್ದು ಹೋಗಿ ಎಚ್ಚರಿಸೋಣವೆಂದರೆ, ಆಗುವುದಿಲ್ಲ. ಅವಳನ್ನೇ ನೋಡುತ್ತಿದ್ದೆ. ಹಲವು ಗಂಟೆಗಳೇ ಕಳೆಯಿತು. ಅವಳು ಮಿಸುಕಾಡಲೇ ಇಲ್ಲ. ಹೃದಯ ಬಡಿತ ಹೆಚ್ಚಾಯಿತು. ಅವಳು ನನ್ನ ಕಡೆ ನೋಡಿಯೇ ನೋಡುತ್ತಾಳೆ ಎಂಬ ಬಯಕೆ ಒಂದು ಕಡೆ ಹೆಚ್ಚಾಯಿತು. ಅವಳು ನೋಡಲಿಲ್ಲ. ಹಾಗೇ ಒಂಚೂರು ಕದಲಲೂ ಇಲ್ಲ. ಏನಾಯ್ತು ಲಲಿತೆಗೆ. ಯಾರೂ ಒಳಗೆ ಬಂದಿಲ್ಲ. ಅವಳ ಮೈಮೇಲಿನ ಒಡವೆಗಳೂ ಹಾಗೆ ಇವೆ. ಬೇರೆ ಯಾರಿಂದಲೂ ಯಾವ ರೀತಿಯಲ್ಲೂ ತೊಂದರೆ ಆಗಿಲ್ಲ. ಅಂದ ಮೇಲೆ ಏನಾಯ್ತು. ನನ್ನ ಪ್ರಾಣಕ್ಕೆ ಪ್ರಾಣವಾದ ನನ್ನ ಲಲಿತೆಯನ್ನು ಆ ದೇವರು ಅವಳ ಪ್ರಾಣವನ್ನು ಕದ್ದುಬಿಟ್ಟಿದ್ದಾನೆ. ಅವಳಿಗೆ ಹೃದಯಾಘಾತವಾಗಿರುವುದು ಪಕ್ಕಾ ಆಯ್ತು. ಅವಳು ನನ್ನನು ಬಿಟ್ಟು ಹೋಗಿದ್ದಾಳೆ. ನನ್ನನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಜೋರಾಗಿ ರೋಧಿಸಲು ಸಾಧ್ಯವಾಗುತ್ತಿಲ್ಲ.ಕಣ್ಣಲ್ಲಿ ನೀರು ಮಾತ್ರ ಸರಸರನೆ ಹರಿದು ಬರುತ್ತಿದೆ. ಆ ನೋವು ಸಾಮಾನ್ಯವಲ್ಲವಲ್ಲ. ನನ್ನ ತಾಯಿ ಸತ್ತಾಗಲೂ ನಾನೂ ಅತ್ತಿರಲಿಲ್ಲ. ಇವತ್ತು ನನ್ನ ಕಣ್ಣೀರು ಜಲಪಾತದಂತೆ ಸುರಿಯುತ್ತಿದೆ. ನಿಜವಾಗಿ ಇವತ್ತು ನಾನು ಅನಾಥನಾದೆ. ಅವಳಿಗೆ ದೇವರು ಒಳ್ಳೆಯ ಸಾವನ್ನೇ ಕೊಟ್ಟಿದ್ದಾನೆ. ಮುತ್ತೈದೆಯಾಗಿ ಹೋದಳು. ಯಾರಿಗೂ ನೋವು ಕೊಡದೆ ಹೋದಳು. ಅಷ್ಟು ಒಳ್ಳೆಯವಳು ನನ್ನ ಲಲಿತೆ. ಸಾಯುವ ಕೆಲ ಗಂಟೆಗಳ ಹಿಂದೆಯೂ ಒಳ್ಳೆಯ ಕೆಲಸವನ್ನು ಮಾಡಿದ್ದು ನೆನಪಿಸಿಕೊಳ್ಳಬಹುದು. ಆ ದೇವರು ನಿನಗೆ ಸ್ವರ್ಗವನ್ನು ಪ್ರಾಪ್ತಿ ಮಾಡಿ ಲಲಿತಾ.
ಮನೆಯ ಸುತ್ತಲೂ ಜನಸಂಚಾರ ತುಂಬಾ ಕಡಿಮೆ ಇದ್ದುದರಿಂದ ಯಾರಿಗೂ ನಮ್ಮನೆ ವಿಷಯವೂ ಗೊತ್ತಾಗಲಿಲ್ಲ. ಹಗಲು ರಾತ್ರಿಗಳು ಕಳೆದವು. ಯಾರ ಸುಳಿವೂ ಇಲ್ಲ. ನೊಣಗಳು ದೇಹವನ್ನು ಮುತ್ತುತ್ತಿವೆ. ಛೇ... ಎಂಥಾ ಹೀನಾಯ ಸ್ಥಿತಿ ನನ್ನದು. ಹೆಂಡತಿಯ ಶವ ಕೊಳೆಯುತ್ತಿದ್ದರೂ, ಏನೂ ಮಾಡಲಾಗದ ಸ್ಥಿತಿ. ದೇವರು ನನಗೆ ಯಾಕಿಂಥಾ ಶಿಕ್ಷೆ ಕೊಟ್ಟ. ಕೈಕಾಲು ಮೈಯೆಲ್ಲಾ ಬಿದ್ದುಹೋಗಿ ಇಷ್ಟು ವರುಷಗಳ ಕಾಲ ಅವಳಿಂದ ಸೇವೆ ಮಾಡಿಸಿಕೊಂಡ ನಾನು ಆಗಲೇ ಪ್ರಾಣ ಬಿಡಬೇಕಾಗಿತ್ತು. ಹಗಲು ರಾತ್ರಿಗಳು ಕಳೆದದ್ದು ಒಂದಲ್ಲ ಎರಡಲ್ಲ. ಐದು ದಿನಗಳು..!! ಆ ಐದು ಕರಾಳ ದಿನಗಳು..!!! ಐದು ದಿನಗಳ ನಂತರ, ಫ್ಯಾನ್ ರಿಪೇರಿ ಮಾಡುವವ ಬಂದ. ಅವನನ್ನು ಲಲಿತಾ ಕರೆದು ಬಂದಿದ್ದಳು. ಆದರೆ ಅವನು ಇವತ್ತು ಬಂದ. ಅವನು ಬಂದ ಮೇಲೆಯೇ ವಿಷಯ ಬಹಿರಂಗವಾಗಿ, ಸಾವಿಗಾಗಿ ಕಾಯುತ್ತಿದ್ದ ಆಸ್ಪತ್ರೆಗೆ ಸೇರಿಸಿದರು. ಇಷ್ಟೆಲ್ಲವನ್ನು ಅನುಭವಿಸಿದ ನಾನು, ನನಗೆ ಸಾವು ಬರಬಾರದೇ ಎಂದೇ ಪ್ರತಿಕ್ಷಣ ಬೇಡಿಕೊಳ್ಳುತ್ತಿದ್ದೇನೆ.
ಈ ಸುದ್ದಿ ಎಲ್ಲಾ ಟಿ.ವಿ.ಯಲ್ಲೂ ಬ್ರೇಕಿಂಗ್ ನ್ಯೂಸ್ ಆಗಿ ಬಂತು. ಎಲ್ಲಾ ಪತ್ರಿಕೆಗಳಲ್ಲೂ ಬಂತು. ಅನೇಕರು ಅಯ್ಯೋ ಪಾಪ ಎಂದು ಮರುಗಿದರು. ಆದರೆ ನನ್ನ ಮಕ್ಕಳು ಮಾತ್ರ ಬರಲಿಲ್ಲ. ಊರಿನವರೇ ಸೇರಿ ನನ್ನವಳ ಅಂತಿಮ ಕಾರ್ಯ ಮಾಡಿದರು. ಇಂಥಾ ಸಾವು ನೋವು ಯಾರಿಗೂ ಬೇಡ. ನನ್ನ ಮಕ್ಕಳಿಗಷ್ಟೇ ಅಲ್ಲ... ವಯಸ್ಸಾದ ತಂದೆ ತಾಯಿಯರನ್ನು ದೂರವಿಟ್ಟು ಸುಖ ಜೀವನ ನಡೆಸುತ್ತಿರುವ ಎಲ್ಲಾ ಮಕ್ಕಳಿಗೂ ಹಿಡಿಶಾಪ ಹಾಕುತ್ತೇನೆ. ಸ್ವಲ್ಪವಾದರೂ ಮಾನವೀಯತೆ ಉಳಿದಿದ್ದರೆ, ಅಂತಹವರು ದೂರವಿಟ್ಟ ಇಳಿವಯಸ್ಸಿನ ತಂದೆ ತಾಯಿಯರನ್ನು ಮನೆಗೆ ಕರೆದುತಂದು ಪ್ರೀತಿಯಿಂದ ನೋಡಿಕೊಳ್ಳಲಿ. ಇಲ್ಲವಾದಲ್ಲಿ, ಕಾಲ ಸುಮ್ಮನೇ ಇರಲ್ಲ. ನಮಗಿಂತಲೂ ಹೆಚ್ಚಿನ ನೋವು, ಹೀನಾಯ ಸಾವು ಅನುಭವಿಸಿಯೇ ತೀರುತ್ತಾರೆ.
ಕಾಲ ಬದಲಾಗಲಿ ಬಿಡಲಿ... ಮನಸುಗಳು ಒಳ್ಳೆಯತನಕ್ಕಾಗಿ ಬದಲಾಗಲಿ.. ಇದೊಂದೆ ಆಶಯ ನನ್ನದು.



