ಒಲವಿಂದ ಒಲವಿಗಾಗಿ ಒಲವಿಂದಲೇ ಬರೆದ ಸಾಲುಗಳು ಒಲವಿನ ಒಲುಮೆಗೆ ಕಿರುನಗೆಯಾಗಿ ಅಮೃತದ ಚಿಲುಮೆಯಾಗಿರಲು, ಬರೆದಾತನ ಒಲವಿಗೆ ಎಣೆಯುಂಟೆ.
ಕೆಲವು ದಿನಗಳ ಹಿಂದಷ್ಟೇ ಈ ಕಾಲೇಜು ಸೇರಿದ್ದ ನಾನು, ಕ್ಲಾಸಿನ ಹೊರಗೆ ಹೊಸ ಸ್ನೇಹಿತರೊಂದಿಗೆ ಹರಟುತ್ತಿದ್ದೆ. 'ಎಕ್ಸ್ ಕ್ಯೂಸ್ ಮೀ...' ಎಂದು ಯಾರೋ ಕರೆದಂತಾಯ್ತು. ದನಿ ಬಂದ ಕಡೆ ತಿರುಗಿ ನೋಡಿದೆ. ದಾರಿಗೆ ಅಡ್ಡವಾಗಿ ನಿಂತಿದ್ದ ನನ್ನನು ಸರಿದುಕೊಳ್ಳುವಂತೆ ಮಾತಿಲ್ಲದೆ, ತುಟಿಯರಳಿಸಿ ಮನವಿ ಮಾಡಿದ ಚಂದನೆಯ ಚೆಂದುಳ್ಳಿ ಚೆಲುವೆ. ನಾನು ಅದೇ ಮೊದಲು ಅವಳನ್ನು ನೋಡಿದ್ದು. ಅವಳನು ಕಂಡಾಗ ನನಗೆ ಮಾತೇ ನಿಂತಂತಾಯ್ತು. ಆ ಅಂದ ಚಂದ ವರ್ಣಿಸಲು ನನಗಂತೂ ಸಾಧ್ಯವಾಗುತ್ತಿಲ್ಲ. ಸಪೂರ ಸುಂದರಿ, ಹೊಳೆವ ಕಂಗಳು, ಮುತ್ತಿಡಬೇಕೇನಿಸುವಂತಿರುವ ಹುಬ್ಬು, ಕಪ್ಪು ಹಚ್ಚಿಕೊಂಡು ಇನ್ನಷ್ಟು ಮೆರುಗು ನೀಡುವ ಕಣ್ ರೆಪ್ಪೆಗಳು, ಕೆನೆಹಾಲಿನ ಕಡಲಲ್ಲಿ ಮಿಂದು ಬಂದಂತಾ ಗೊಂಬೆಯಂತೆ ಕಾಣುತ್ತಿದ್ದಾಳೆ. ಹೆಚ್ಚಿನ ಮೇಕಪ್ ಇಲ್ಲ, ಮಾಸದ ನಸುನಗುವೇ ಆ ಅಂದಕೆ ಆಸ್ತಿ. ಅವಳ ಕಡೆಗೆ ನೋಡುತ್ತಿದ್ದೆ. ನೋಡುತ್ತಾ ನೋಡುತ್ತಾ ಎಲ್ಲವನ್ನೂ ಮರೆತಿದ್ದೆ. ಜೊತೆಗಿದ್ದವ "ನಡೆಯೋ ಕ್ಲಾಸ್ಗೆ ಟೈಮಾಯ್ತು" ಎಂದು ತಳ್ಳಿದಾಗಲೇ ವಾಸ್ತವಕ್ಕೆ ಬಂದದ್ದು. ಅವರೊಟ್ಟಿಗೆ ಹೆಜ್ಜೆ ಹಾಕಿದೆ. ಕ್ಲಾಸಲ್ಲೂ ಕೂತೆ. ಆ ಲೆಕ್ಚರರ್ ಮೋಟು ಹನುಮಂತರಾಯ ಬಂದದ್ದೂ ಗೊತ್ತಾಗಲಿಲ್ಲ. ಆ ಬೇಡದ ಪಾಠವೂ ಕಿವಿಯ ತನಕ ತಲುಪುತ್ತಲೂ ಇಲ್ಲ. ಯಾವುದೋ ಮಾಯೆಯಲ್ಲಿ ಸಿಲುಕಿಕೊಂಡಂತೆ, ಏನನ್ನೋ ಕಳೆದುಕೊಂಡವನಂತೆ, ನನ್ನನೇ ನಾನು ಹುಡುಕಿಕೊಳ್ಳುತ್ತಿದ್ದೇನೆ ಅವಳ ಕಣ್ಣಂಚಿನ ಹೊಳಪಿನಲ್ಲಿ. ಗೆಳೆಯರ ಮಾತು ಅಸ್ಪಷ್ಟವಾಗಿ ಕೇಳುತ್ತಿದೆ. ಕ್ಲಾಸ್ ಮುಗಿದದ್ದೂ ಗೊತ್ತಾಗಲಿಲ್ಲ. ಏನೋ ಒಂಥರಾ ಮಧುರ ಯಾತನೆ.
ಅದೇ ಭಾವಲಹರಿಯಲಿ ಸಿಲುಕಿ, ಶೂನ್ಯದೃಷ್ಠಿಯಲ್ಲಿ ಅತ್ತಿತ್ತ ನೋಡುತ್ತಿರಲು ಅವಳು ಕಂಡಳು. ಅವಳು ನನ್ನದೇ ಕ್ಲಾಸಿನಲ್ಲಿ ಕೂತ ಹುಡುಗಿ. ನನ್ನದು ಅದೃಷ್ಟವೇ ಇರಬೇಕು. ನನಗಂತೂ ಅವಳ ಕಡೆ ನೋಡುತ್ತಲೇ ಕಳೆದುಹೋಗುವ ಕೆಲಸ. ಈ ಪ್ರಾಯಕ್ಕೆ ನಮ್ಮನ್ನು ಮಂತ್ರಮುಗ್ಧರನ್ನಾಗಿಸುವ ತಂತ್ರ ತಿಳಿದಂತಿದೆ. ಕನಸುಗಳು ಗರಿಗೆದರಿ, ಹೊಸ ಆಸೆಗಳು ರೆಕ್ಕೆ ಬಿಚ್ಚಿ ಬಾನೆತ್ತರಕ್ಕೆ ಹಾರಿಸಿ ತೇಲಿಸಿಬಿಡುವ ಮಾಯಾಂಗನೆಯ ತೆಕ್ಕೆಯಲ್ಲಿ ನಾನಿದ್ದೇನೆ. ಅಷ್ಟರಲ್ಲಾಗಲೇ ಮನಸು ತೀರ್ಮಾನಿಸಿದಂತಿತ್ತು, ಸದಾ ನಾನು ಅವಳ ಜೊತೆ ಇರಬೇಕೆಂದು. ಕಂಡ ಮೊದಲ ದಿನವೇ ಹೇಳುವುದು ಹೇಗೆ? ಕೇಳುವುದು ಹೇಗೆ? ಪ್ರೀತಿಯ ಅಮಲಿನಲಿ ತೇಲುವ ನಾನು ಕಾಣುತ್ತಿರುವುದು ಕನಸೋ ನನಸೋ ಎಂಬ ಸಂದಿಗ್ಧತೆಯಲಿ ಸಿಲುಕಿ ನಲುಗುತ್ತಿರುವಾಗ ಪ್ರೀತಿಯ ಜ್ಯೋತಿ ಬೆಳಗಿದವಳ ಕಂಡು ಮಾತನಾಡಿಸುವ ಬಯಕೆ ನನ್ನನು ಸುಮ್ಮನಿರಲು ಬಿಡುತ್ತಿಲ್ಲ. ಹಾಗೆಯೇ ಅವಳು ಮೊದಲು ಏನಂದಾಳು ಎಂಬ ಭಯವೂ ಅವಳೆಡೆಗೆ ಹೆಜ್ಜೆ ಹಾಕದಂತೆ ತಡೆದಿತ್ತು. ಈ ಹಸಿಪ್ರೀತಿ ಹುಸಿಯಾಗದಿರಲಿ ಎಂಬ ಆಶಯದೊಂದಿಗೆ ಅವಳ ನೆನಪಲ್ಲಿ, ಅವಳ ಹಿಂದೆ ಮುಂದೆಯೇ, ಅವಳನೇ ಗಮನಿಸುತಾ, ಆರಾಧಿಸುತಾ, ಅರಸುತಾ ದುಂಬಿಯಂತಾದೆ. ನಾ ದುಂಬಿಯಾದರೆ ಅಕ್ಷರಶಃ ಅವಳು ನಗುವಾ ತಾವರೆಯಲ್ಲವೇ? ಬೆಕ್ಕು ಅದೆಷ್ಟು ದಿನ ತಾನೇ ಕಣ್ ಮುಚ್ಚಿ ಹಾಲನ್ನು ಕುಡಿದೀತು. ಇಡೀ ಕಾಲೇಜಿಗೆ ನನ್ನ ಕಥೆ ಗೊತ್ತಾಗಿತ್ತು ಎನಿಸುತ್ತದೆ. ಗೆಳೆಯರೂ ನನ್ನ ರೇಗಿಸಲು ಶುರು ಮಾಡಿಕೊಂಡಿದ್ದರು, ಅವಳೂ ಕೂಡ ಒಮ್ಮೊಮ್ಮೆ ನನ್ನ ಕಡೆ ತಿರುಗಿ ನೋಡಿ ನಕ್ಕಂತೆ, ಕಣ್ಣಲ್ಲೆ ಕರೆದಂತೆ ಕಂಡಂತಾಗುತ್ತಿತ್ತು. ಇದು ನಿಜವೋ ಸುಳ್ಳೋ ತಿಳಿಯದ ಚಡಪಡಿಕೆಯ ಕ್ಷಣಗಳು ನನ್ನವಷ್ಟೆ.
ಒಂದು ದಿನ ಬೆಳಿಗ್ಗೆ ರಾಮಾಶಾಸ್ತ್ರಿಗಳ ಮನೆಗೆ ಮನೆಪಾಠಕ್ಕೆ ಹೋಗಿ ಬರುವಾಗ ಅವಳ ಕೈಗೆ ಕಾಗದದ ಚೂರೊಂದನ್ನು ಕೈಗಿಟ್ಟು ಬಂದಿದ್ದೆ. ಆಗ ಅದ್ಯಾವ ಧೈರ್ಯದಲ್ಲಿ ಕೊಟ್ಟೆನೋ ಏನೋ? ಗಡಿಯಲ್ಲಿ ಶತ್ರುಸೈನ್ಯದ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣ ರಕ್ಷಿಸಿಕೊಂಡವನಂತೆ, ಜೇನುಗೂಡಿಗೇ ಕೈಹಾಕಿ ಜೇನುಹುಳುಗಳಿಂದ ತನ್ನನು ತಾನು ರಕ್ಷಿಸಿಕೊಳ್ಳಲೆತ್ನಿಸುವವನಂತೆ ಅವಳ ಉತ್ತರಕ್ಕೂ ಕಾಯದೇ ಓಡಿ ಬಂದಿದ್ದೆ.
"ತಾವರೆಯಂತಿರುವ ನೀನು,
ಸದಾ ನಗುತ್ತಿದ್ದರೇನೆ ಚಂದ.
ಹೀಗೆ ನಸುನಗುತಾ ನೀನು
ನಲಿಯುತಲಿದ್ದರೇನೆ ಚಂದ.
ನಾ ನಿನಗೆ ಮನಸೋತಿದ್ದು
ಅದು ಹೇಗೋ ಗೊತ್ತಿಲ್ಲ.
ನೀನೊಪ್ಪಿ ಅಪ್ಪಿದರೆ ನಾ
ಆಗಬಯಸುವೆ ನಿನ್ನ ನಲ್ಲ.
ನೀ ಒಪ್ಪುವುದಾರೇ,
ಒಪ್ಪಿ ಅಪ್ಪುವುದಾದರೇ,
ಒಂದೇ ಒಂದು ಬಾರಿ
ಕಣ್ಣಲ್ಲಿ ಕಣ್ಣಿಟ್ಟು ನೋಡುವ
ಆಸೆಯ ತವಕವ ಕಣ್ಣಲ್ಲೇ ತಿಳಿಸು..
ಎದೆಯ ಗುಡಿಯಲಿ,
ಉಸಿರಿನ ಜ್ಯೋತಿ ಕಮರುವ
ತನಕ ನನ್ನ ಉಸಿರಂತೆಯೇ
ನೋಡಿಕೊಳ್ಳುವೆ..."
ಎಂದಷ್ಟೇ ಬರೆದು ಅವಳ ಕೈಗಿಟ್ಟು, ಉತ್ತರಕ್ಕೂ ಕಾಯದೇ ಬಂದಿದ್ದೆ. ಅದ್ಯಾವ ಗಳಿಗೆಯಲ್ಲಿ ಕವಿಯಾದೆನೋ, ಅಥವಾ ಅವಳ ಕಂಡ ಕ್ಷಣದಿಂದ ಬರೆದಿದ್ದೆಲ್ಲವೂ ಕವಿತೆಯಾಯಿತೋ ತಿಳಿಯದು. ಬರೆದು ಕೊಡುವ ಧೈರ್ಯ ಬಂದಿತ್ತಾದರೂ, ಕೊಟ್ಟ ಮೇಲೆ ಅವಳ ನೋಡುವ ಧೈರ್ಯ ಬಂದಿರಲಿಲ್ಲ. ಆ ಇಡೀ ದಿನ ಅವಳು ಕಾಲೇಜಿನ ಕಡೆಗೂ ಬಂದಿರಲಿಲ್ಲ. ಅವಳ ಸೈಕಲ್ಲು ಕೂಡ ಕಾಣಿಸಲಿಲ್ಲ. ಮಾಗಿಯ ಚಳಿಯಲ್ಲೂ ಬೆವೆತೆ. ಏನಾಯ್ತು? ಏನಾಗಿರಬಹುದು? ಎಂಬ ಪ್ರಶ್ನೆಯನ್ನು ನನ್ನಷ್ಟಕ್ಕೆ ನಾನೇ ಗಳಿಗೆಗೆ ಒಂದು ಸಾವಿರ ಬಾರಿ ಕೇಳಿಕೊಂಡಿರಬಹುದು. ಅಂತೂ ಮಾರನೆಯ ದಿನ ಅವಳು ಬಂದಳು. ನನ್ನ ಪುಣ್ಯವೋ ಏನೋ ಒಬ್ಬಳೆ ಬರುತ್ತಿದ್ದಾಳೆ. ಅವಳ ಕಡೆ ನೋಡುತ್ತಲೇ ಇದ್ದೆ. ಅವಳು ನನ್ನೆಡೆಗೆ ನೋಡುವಾಗ ತಲೆ ತಗ್ಗಿಸಿ ಸಂಕೋಚದ ಮುದ್ದೆಯಂತಾಗುತ್ತಿದ್ದೆ. ಆದರೂ ಧೈರ್ಯ ಮಾಡಿ, ಅವಳ ಕಡೆ ನೋಡಿದಾಗಂತೂ, ಅವಳ ತುಟಿಯಂಚಿನಲ್ಲಿ ಮೂಡಿದ್ದ ಸಣ್ಣ ನಗು ನನಗೆ ಜೀವವಾಯುವಾಗಿತ್ತು. ಅದುವರೆಗೂ ಹಸಿದ ಭೂಮಿಯಂತಾದ ನರನಾಡಿಗೆ ರಕ್ತಸಂಚಲನ ಶುರುವಾದಂತಾಗಿತ್ತು. ಅಂತೂ ನಮ್ಮಿಬ್ಬರ ಮನಸು ಒಂದಾಯಿತು. ಅವಳು ನಾಚುತಾ ಕ್ಲಾಸಿನ ಕಡೆ ಹೊರಡುವಾಗ ಅವಳ ಮುಡಿಯಿಂದಲೇ ಮಲ್ಲಿಗೆಮೊಗ್ಗಿನ ಹೂದಂಡು ಕೆಳಗೆ ಉದುರಿತ್ತು. ಅದನ್ನೆತ್ತಿ ಅವಳಿಗೆ ಕೊಡಲು ಹೋದಾಗ, ಅವಳೋ ಇನ್ನಷ್ಟು ನಾಚಿ, ಕೆಂಪಾಗಿ ಸರಸರನೆ ಕ್ಲಾಸಿನೊಳಗೆ ಹೋದಳು. ಈ ನಾಚಿಕೆ ಅನ್ನೋದನ್ನ ದೇವರು ಹೆಣ್ಣಿಗೇ ಅಂತಾನೇ ಕೊಟ್ಟಿದ್ದು ಯಾಕಂತಾ, ನನಗೀಗ ಅರ್ಥ ಆಯ್ತು. ಹೆಣ್ಣು ನಾಚುವ ಆ ಎಲ್ಲಾ ಸಂಧರ್ಭಗಳೂ ಗಂಡಿನ ಹೃದಯಕೆ ಮರೆಯದ ನೆನಪಿನ ಅರಮನೆಯನ್ನು ಸೃಷ್ಟಿಸಿರುತ್ತವೆ. ೭೦ರ ದಶಕದ ಪ್ರೇಮಿಗಳಂತೆ ಕದ್ದುಮುಚ್ಚಿ ಪ್ರೀತಿಸುತ್ತಿದ್ದ ನಮಗೆ ದಿನಗಳು ಉರುಳಿದ್ದು ಗೊತ್ತಾಗಲಿಲ್ಲ.
ದಿನ ಕಳೆದಂತೆ ಪ್ರೀತಿ ಬೇರೂರಿ ಆಳಕಿಳಿದು ಒಬ್ಬರಿಗೊಬ್ಬರು ಹೃದಯಕೆ ಬಿಡಿಸಲಾರದಷ್ಟು ಹತ್ತಿರವಾದೆವು. ಪ್ರೀತಿಯಲ್ಲಿ ಬಿದ್ದವರಿಗೆ ಲೋಕದ ಪರಿವಿರಿವುದಿಲ್ಲ. ಸ್ವಾಭಾವಿಕವಾಗಿ ಇಬ್ಬರ ಮನೆಯವರಿಗೂ ತಿಳಿಯಿತು. ಹೆತ್ತವರ ಬಳಿ ಅಂಗಲಾಚಿದೆವು, ಕೊನೆಗೆ ಅವರ ವಿರುದ್ಧ ಹೋರಾಡಿದೆವು. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬಂತೆ ನಮ್ಮ ಪ್ರೀತಿ ಒಂದಾಗಲಿಲ್ಲ. "ನಿನ್ನ ಪ್ರೀತಿ ಜೀವನ ಪರ್ಯಂತ ನನ್ನದಾಗಿರಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ ಆಸೆ ಕೈಗೂಡುತ್ತಿಲ್ಲ ಕಣೋ" ಎಂದು ಗಳಗಳನೆ ಅತ್ತಿದ್ದಳು. ಕೊನೆಗೆ ಎರಡೂ ಮನೆಯವರೇ ಗೆದ್ದರು. ಅವಳೂ ಕೂಡಾ ಅವರ ಮಾತಿಗೆ ಒಪ್ಪಿದಳು. ಅವಳೇ ಒಪ್ಪಿ ದೂರಾದ ಮೇಲೆ ಮತ್ತೇನಿದೆ. ಅವಳನ್ನೂ ಕಾಡಿದೆ, ಬೇಡಿದೆ. ಕಣ್ಣೀರಲ್ಲದೇ ಬೇರೇನೂ ಉತ್ತರವಿಲ್ಲ ಅವಳ ಬಳಿ. ಅವಳಿಲ್ಲದ ಜೀವನ ನಶ್ವರವೆಂದೇ ತಿಳಿದು ಸಾಯಲು ನೂರಾರು ಬಾರಿ ಪ್ರಯತ್ನಿಸಿದೆ. ಸಾವಿಗೂ ನಾ ಅಸಹನೀಯ. ಎಲ್ಲಾ ಪ್ರಯತ್ನವೂ ವಿಫಲ. ಅನುರಾಗವೂ ವಿಫಲ.
ಅವಳ ಅಗಲಿಕೆಯ ನೋವಿನಲಿ ಒಂದೈದು ವರುಷ ಕಳೆದೆ. ಅಷ್ಟರೊಳಗೆ ಅವಳಿಗೆ ಮದುವೆಯಾಗಿ ಎರಡು ಮಕ್ಕಳಿದ್ದರು. ನನ್ನ ಸ್ಥಿತಿ ಕಂಡು ದಿನೇದಿನೇ ಕೃಶಗೊಂಡು ಮರುಗುತ್ತಿದ್ದ ಅಮ್ಮನಿಗಾಗಿ ನಾನೂ ಮದುವೆಯಾದೆ. ಪ್ರೀತಿಸಿದವಳನ್ನೇ ಮದುವೆಯಾಗಬೇಕಾದ ನಾನು, ಹೃದಯವು ಬಯಸದವಳ ಜೊತೆ ಸಹಗಮಿಸಿದೆ. ಇವಳು ಮನೆಗೆ ಸೊಸೆಯಾದಳೇ ಹೊರತಾಗಿ ನನ್ನ ಹೆಂಡತಿಯೆಂದು ಹೇಳಿಕೊಳ್ಳಲು ಮನಸು ಸಂಪೂರ್ಣವಾಗಿ ಒಪ್ಪಿರಲಿಲ್ಲ. ಜೀವನದಲ್ಲಿ ಪ್ರೀತಿ, ನಗು, ವಿಶ್ವಾಸ ಎಲ್ಲವೂ ಕೃತಕವಾಯಿತು. ಬಣ್ಣ ಹಚ್ಚದೇ ನಟಿಸುವ ಸರದಿ ನನ್ನದಾಗಿತ್ತು. ಎಲ್ಲವೂ ಸಮಾಜಕ್ಕಾಗಿ. ನಾನೊಬ್ಬನೇ ಅಲ್ಲ. ಸಮಾಜದಲ್ಲಿ ಬಹುತೇಕ ಮಂದಿ, ನಟಿಸುತ್ತಿದ್ದಾರೆ. ಯಾರೋ ಮಹಾತ್ಮರು ಹೇಳಿದ್ದಾರಲ್ಲ, "ಜಗವೇ ನಾಟಕರಂಗ. ಪರಮಾತ್ಮನೇ ಸೂತ್ರಧಾರಿ" ಎಂದು. ಈ ಮದುವೆಯ ನಾಟಕದ ಫಲವಾಗಿ ಎರಡು ಹೆಣ್ಣುಮಕ್ಕಳ ತಂದೆಯಾದೆ. ಸರಿಸುಮಾರು ೩೫ ವರುಷಗಳಿಂದ ಸಂಸಾರದ ನೊಗ ಹೊತ್ತು ಅಮ್ಮನ ಮೇಲಿನ ಪ್ರೀತಿಗಾಗಿ, ನನ್ನ ಪ್ರೀತಿಯ ಮರೆತು, ಇವಳೊಂದಿಗೆ ಹಾದಿ ಸವೆಸಿದ್ದೆ. ಈ ನಡುವೆ ಅಮ್ಮನೂ ನನ್ನ ಬಿಟ್ಟು ಹೋದಳು. ಮಕ್ಕಳ ಮದುವೆಯೂ ಆಯಿತು. ಜೀವನದ ಜಂಜಾಟದಲಿ ಒಂದಷ್ಟು ಮಹತ್ತರ ಘಟ್ಟಗಳನ್ನು ದಾಟಿದೆ.
ಒಮ್ಮೆ ನಾನು ನನ್ನ ಹೆಂಡತಿ ಹೀಗೆ ಮಾತನಾಡುತ್ತಾ ಕುಳಿತಿರುವಾಗ "ನಿಮಗಿನ್ನೂ ಆರತಿಯ ನೆನಪು ಮಾಸಲಿಲ್ಲವೇ?" ಎಂದು ಕೇಳಿದಳು. ನನಗೋ ಆಶ್ಚರ್ಯ. ಅವಳ ಕುರಿತು ನಿನಗೆ ಅದ್ಹೇಗೆ ತಿಳಿದಿದೆ ಎಂದು ಕೇಳಿದೆ. "ಅವಳು ನನ್ನ ಫ್ರೆಂಡ್. ನಿಮ್ಮನ್ನು ಮದುವೆಯಾಗಲು ಒಪ್ಪೋದಕ್ಕೆ ಅವಳೇ ಕಾರಣ. ನೀವು ಪ್ರೀತಿಸುವ ಪರಿಯನ್ನು ಅವಳು ಹೇಳಿದ್ದಳು. ಮದುವೆಯಾಗಿ ಇಷ್ಟು ವರುಷವಾಯಿತು. ಅಮ್ಮನಿಗಾಗಿ ನಿಮಗಿಷ್ಟವಿರದ ನನ್ನ ನೀವು ಮದುವೆಯಾಗಿದ್ದರೂ, ಒಂದು ಬಾರಿಯೂ ಮನಸು ನೋಯಿಸಲಿಲ್ಲ. ನನ್ನ ಗೌರವಕ್ಕೂ ಯಾವುದೇ ಕುಂದು ತರದೇ, ಮನೆಯ ಯಜಮಾನರಾಗಿ ಎಲ್ಲವನ್ನೂ ನಿಭಾಯಿಸಿದ್ದೀರಿ. ನಿಮ್ಮ ಪ್ರೀತಿ, ಅನುರಾಗ, ಜೀವನದಲ್ಲಿ ನನ್ನ ಪಾಲಿಗೇ ಯಾವುದೂ ಕಡಿಮೆ ಇರದಂತೆ ನೋಡಿಕೊಂಡಿರಿ. ಇದಕ್ಕಿಂತಾ ಒಂದು ಹೆಣ್ಣಿಗೆ ಇನ್ನೇನು ಬೇಕು ಹೇಳಿ. ನಾನು ಪುಣ್ಯ ಮಾಡಿದ್ದೀನಿ. ಆರತಿ ನತದೃಷ್ಟೆ. ನೀವು ಯಾವಾಗಲೂ ಸಂತೋಷವಾಗಿ ಇರಬೇಕು ಅನ್ನೋದೆ ನನ್ನ ಆಸೆ ಕಣ್ರೀ" ಎಂದು ಅವಳು ಹೇಳುವಾಗ ವೈವಾಹಿಕ ಜೀವನದ ಸಾರ್ಥಕ್ಯತೆಯ ಕುರಿತು ನನಗರುಹುತ್ತಿದ್ದಾಳೆ. ಅವಳ ಮಾತು ಕೇಳುವಾಗ, ನಮ್ಮಿಬ್ಬರ ಅಷ್ಟೂ ದಿನಗಳು ಒಂದರ ಹಿಂದೆ ಒಂದರಂತೆ ನೆನಪಾಗತೊಡಗಿದವು. ಒಮ್ಮೊಮ್ಮೆ ನಾನೇ ಹಿಂದೆ ಸರಿದಾಗಲೂ, ಅವಳು ನನ್ನ ಬೆನ್ನ ಹಿಂದೆ ನಿಂತು ನನ್ನನ್ನು ಸರಿದಾರಿಗೆ ತಂದಿದ್ದಾಳೆ. ನನ್ನ ಅನೇಕ ನೋವುಗಳನ್ನು ಜೊತೆಯಾಗಿ ಅನುಭವಿಸಿ, ಲಾಲಿಸಿ ಅವುಗಳ ಮರೆಸಿದ್ದಾಳೆ. ಹೆಂಡತಿಯಾದವಳು ಕಷ್ಟಸುಖಗಳೆಂಬ ಎಲ್ಲಾ ಕಾಲಕ್ಕೂ ಜೊತೆಯಾಗಿ ನಿಂತರೆ ಗಂಡನೆನಿಸಿಕೊಂಡವನಿಗೆ ಸಂಸಾರದ ಭಾರ ಸರಾಗ. ಇಲ್ಲವಾದರೆ ಆ ನೊಗ, ಉರುಳಾಗಿ ಪರಿಣಮಿಸುತ್ತದೆ. ಇಂಥಾ ಹೆಂಡತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲವಲ್ಲ ನಾನು ಎಂದು ಪಶ್ಚಾತಾಪ ಪಟ್ಟೆ.
ಯೌವನದಲ್ಲಿ ಪ್ರೀತಿ, ಆಕರ್ಷಣೆ ಸಹಜ. ಅದರಲ್ಲಿ ಗೆಲುವು - ಸೋಲು ಎರಡೂ ಮುಖ್ಯವಲ್ಲ. ಮದುವೆ ಎಂಬ ಬಂಧನದಲ್ಲಿ ಜೊತೆಯಾಗಿ ಬರುವ ಸಂಗಾತಿಯೊಂದಿಗೆ ಕೊನೆವರೆಗೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು, ಎಂಥಾ ಪರಿಸ್ಥಿತಿಯಲ್ಲೂ ಬಿಟ್ಟುಕೊಡದೇ ನಗುತ್ತಾ ಜೀವನ ಮಾಡೋದೇ ನಿಜವಾದ ಪ್ರೀತಿ. ಆ ಪ್ರೀತಿ ಇಬ್ಬರಲ್ಲೂ ಇರಬೇಕು. ಆಗಲೇ ಅವರು ಕುಟುಂಬಕ್ಕೂ ಮಾದರಿ. ಇಲ್ಲವಾದಲ್ಲಿ ಮಕ್ಕಳೂ ಹಾದಿ ತಪ್ಪಿಯಾರೂ.....
ಜೀವನದಲ್ಲಿ ಇಷ್ಟನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡಂತಾಯ್ತು. ಅಂದಿನಿಂದ ಆರತಿಗೆ ಮೀಸಲಾಗಿದ್ದ ಹೃದಯದಲ್ಲಿ ಪ್ರೇಯಸಿ ಆರತಿ ಕರಗಿಹೋಗಿ ಹೆಂಡತಿ ಸಾವಿತ್ರಿ ಬಂದಳು. ಅವಳಿಗೂ ಖುಷಿಯಾಗಿ ವೃದ್ಧಾಪ್ಯದ ಮೊದಲ ಮಜಲುಗಳಲ್ಲಿ ನಲಿದಾಡುತ್ತಲಿದ್ದೆವು. ಇದ್ದಕ್ಕಿಂದಂತೆ ಅವಳಿಗೆ ಎದೆನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ಸೇರಿಸಿದೆ. ಮಕ್ಕಳೂ ಅಳಿಯಂದಿರೂ ಕೂಡ ಬಂದರು. ಅವಳಿಗೆ ಹೃದಯಾಘಾತವಾಗಿತ್ತು. ಛೇ, ಇಷ್ಟು ದಿನ ಅದೆಷ್ಟು ನೊಂದಿತ್ತೋ ಎಂದು ನೆನೆದು ದುಃಖ ಹೆಚ್ಚಾಗಿತ್ತು. ಹಾರ್ಟ್ ಸರ್ಜರಿ ಎಲ್ಲಾ ಮುಗಿದ ಬಳಿಕ ಅವಳ ಬಳಿ ನಾನೊಬ್ಬನೇ ಕುಳಿತು ಮನಸೊಳಗೆ ಹೇಳಿಕೊಂಡ ಮಾತು... "ಸಾವಿತ್ರಿ, ಬಿಟ್ಟ್ ಹೋಗ್ಬೇಡಾ ನನ್ನ..". ಮನಸೊಳಗೆ ಹೇಳಿಕೊಂಡ ಈ ಮಾತು ಅವಳಿಗಷ್ಟೇ ಕೇಳಿಸಿತೋ ಏನೋ, ಅವಳ ಕಣ್ಣಲ್ಲಿ ಹನಿ ಜಿನುಗುತ್ತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ಡಾಕ್ಟರ್ " NOTHING TO WORRY... ಸಾವಿತ್ರಮ್ಮ ಬೇಗ ಹುಷಾರಾಗ್ತಾರೆ." ಎಂದು ಹೇಳಿದರು. ತಕ್ಷಣವೇ ಡಾಕ್ಟರ್ ಇರುವಿಕೆಯನ್ನು ಗಮನಿಸದೇ ಸಾವಿತ್ರಿಯ ಹಣೆಗೊಂದು ಮುತ್ತನೊತ್ತಿ, "ಸಾವಿತ್ರೀ... " ಎಂದೆ. ಪ್ರೀತಿ ಎಂದರೇನು? ಕುಟುಂಬದ ಜವಬ್ದಾರಿ ಎಂದರೇನು? ಜೀವನ ಎಂದರೇನು? ಎಂಬುದರ ಕುರಿತು ಪರೋಕ್ಷವಾಗಿ ತಿಳಿಹೇಳಿ ತಿದ್ದಿ ತೀಡಿದ ಸಾವಿತ್ರಿಗೆ ನಾನು ಸದಾ ಹೇಳೋದೊಂದೆ... "ಬಿಟ್ಟ್ ಹೋಗ್ಬೇಡಾ..".



