ನಸುಕು ಇನ್ನೂ ಮೂಡದ ಹೊತ್ತು, ಮೈಕೊರೆವ ತಂಪನೇ ರಾತ್ರಿ, ನನ್ನವಳ ಆಲಿಂಗನದ ನೆನಪಲ್ಲಿ, ಬೆಚ್ಚಗೆ ಮಲಗಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚಲೇಬೇಕು. ಆ ಹೊತ್ತಲ್ಲಿ ಅದೆಂಥಾ ಗಾಢನಿದ್ರೆ ಅಂತೀರಾ. ಆದರೆ ಆ ಹೊತ್ತು ತುಂಬಾ ಹೊತ್ತು ಇರೋದಿಲ್ಲ ನೋಡಿ. ಸುಮ್ಮನಿರದ ಸೂರ್ಯ ಕರೆಕ್ಟ್ ಟೈಮಿಗೆ ಬಂದೇಬಿಡ್ತಾನೆ 'ಏಳಯ್ಯಾ ಬೆಳಗಾಯಿತು' ಅಂತಾ. ನಮ್ಮಮ್ಮಾನೇ ಆ ಸೂರ್ಯನ್ನ ಎಬ್ಬಿಸ್ತಾಳೋ, ಇಲ್ಲ ಆ ಸೂರ್ಯನೇ ನಮ್ಮಮ್ಮನ್ನ ಎಬ್ಬಿಸ್ತಾನೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾಂಪೀಟೇಷನಲ್ಲಿ ನಮ್ಮಮ್ಮ ಬೇಗ ಎದ್ದು, ಹರೆಯದ ಹೊಸ ಹಸಿಕನಸುಗಳನ್ನು ಕಾಣೋ ನನ್ನಂಥ ಬಡಪಾಯಿಯನ್ನು ಎಬ್ಬಿಸ್ತಾಳೆ. ಒಲ್ಲದ ಮನಸ್ಸಿಂದಾನೇ ಏಳಬೇಕಾದ ಪರಿಸ್ಥಿತಿ. ನನ್ನಂತೆ ನಿಮ್ಮದು ಕೂಡ ಅಲ್ಲವೇ? ಸ್ವಲ್ಪ ತಡ ಮಾಡಿದ್ರೆ ಅಮ್ಮನ ಸುಪ್ರಭಾತ ಶುರು. ಅಂತೂ ಎದ್ದೆಬಿಟ್ಟೆ.
ಹಾಲ್ ನಲ್ಲಿ ಅಪ್ಪ ಅದಾಗಲೇ ಟಿ.ವಿ. ನೋಡ್ತಾ ಇದ್ರು. ಅಮ್ಮ ಟಿಫಿನ್ ರೆಡಿ ಮಾಡ್ತಾ ಇದ್ರು. ನಾನು ಬಾತ್ ರೂಮ್ ಕಡೆ ಹೊರಟೆ. ಇನ್ನೂ ನಿದ್ದ ಮಬ್ಬಲ್ಲೇ ಇದ್ದೆ. ಬ್ರಷ್ ತಗೊಂಡು ಹಲ್ಲುಜ್ಜೋಕೆ ಶುರುಮಾಡಿದೆ. ಅಪ್ಪ ಹಾಕಿದ್ದ ನ್ಯೂಸ್ ಚಾನೆಲ್ ನಲ್ಲಿ ಲಿಪ್ ಸ್ಟಿಕ್ ಸ್ವಲ್ಪ ಜಾಸ್ತೀನೆ ಹಾಕ್ಕೊಂಡಿದ್ದ ನ್ಯೂಸ್ ಆಂಕರ್ ಏದುಸುರಿನಲ್ಲಿ ಅದೇನೋ ಒದರತಾ ಇದ್ದಳು. ಬ್ರೇಕಿಂಗ್ ನ್ಯೂಸ್ ಗಳ ಖದರ್ ಹಾಗೇ ಅಲ್ಲವಾ!! ಈ ಬ್ರಷ್ ಮಾಡೋವಾಗ ಹೊರಗಿನ ಗದ್ದಲಾನೂ ಅಷ್ಟಾಗಿ ಕೇಳಿಸೋದಿಲ್ಲ. ಆದರೂ ಈ ಹೆಲ್ಮೆಟ್, ಕಡ್ಡಾಯ, ಇಲ್ಲ ಹೀಗೆ ಒಂದೆರಡು ಪದಗಳು ಕೇಳಿಸಿತು. ಅದೇನು ಇರಬಹುದು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿ ಅವಸರವಾಗಿ ಹಲ್ಲುಜ್ಜಿ, ಮುಖಮಾರ್ಜನ ಮುಗಿಸಿ ಬಂದೆ. ಆಹಾ ನನ್ನಂಥ ಗಂಡು ಹೈಕ್ಳು ಭಾರಿ ಖುಷಿಪಡೋ ವಿಷಯ, ಈವತ್ತಿನ ಬ್ರೇಕಿಂಗ್ ನ್ಯೂಸ್. 'ದ್ವಿಚಕ್ರ ವಾಹನದ ಇಬ್ಬರೂ ಸವಾರರಿಗೆ ಹೆಲ್ಮೆಟ್ ಕಡ್ಡಾಯವಲ್ಲ' ಅನ್ನೋ ಸುದ್ದಿ ನೋಡಿ, ಆ ಆ್ಯಂಕರ್ ಗೆ ಮನಸಲ್ಲೇ ನಾಲ್ಕು ಮುತ್ತು ಕೊಟ್ಟೆ. ಈ ನ್ಯೂಸ್ ರಾತ್ರಿನೇ ಬಂದಿದೆ. ಆದರೆ ನಂಗೆ ಗೊತ್ತಿಲ್ಲ. ಸ್ವಲ್ಪ ತಲೆನೋವು ಹೆಚ್ಚಾಗಿದ್ದರಿಂದ ಸಂಜೆ ೭ ಗಂಟೆಗೇನೇ ಮಲಗಿದ್ದೆ. ಅದೇನೆ ಇರಲಿ ಬಿಡಿ.. ಇಷ್ಟು ದಿನಕ್ಕೆ ಅಪ್ಪ ಯಾವಾಗಲೂ ಹಾಕಿಕೊಳ್ತ ಇದ್ದ ಈ ಚಾನೆಲ್ ಅಂತೂ ಖುಷಿಕೊಡ್ತು.
ಇನ್ಮೇಲ್ ಈ ವೈಟ್ ಹ್ಯಾಟ್ ಕ್ಯಾಟ್ ಕಾಟ ಇರೊಲ್ಲ. ಅದೇ ಟ್ರಾಫಿಕ್ ಪೋಲೀಸ್ ಕಾಟ ಇರಲ್ಲ ಅಂದೆ. ಅದ್ಯಾವ ಗಳಿಗೆ, ಅದೆಲ್ಲಿ ಇರ್ತಾರೋ ರಪಕ್ ಅಂತಾ ಬಂದು ಕ್ಯಾಚ್ ಹಾಕ್ಕೊಳ್ತಾ ಇದ್ರು. ಅಪ್ಪನ ಹತ್ರ ಕದ್ಕೊಂಡಿದ್ದ ನೂರಿನ್ನೂರು ರೂಪಾಯಿ ಇವ್ರ ಪಾಲು ಆಗ್ತಾ ಇತ್ತು. ಬಾಯಿಗೆ ಬಂದಂಗೆ ಬೈಕೊಳ್ತಾ ಇದ್ದೆ. ಆದರೆ ಆ ಪೋಲೀಸಪ್ಪನ ಎದುರು ಅಲ್ಲ. ಇವರುಗಳ ಕಾಟಕ್ಕೆ ಯಾವ ಹುಡುಗೀರನ್ನೂ ಕೂಡ ಹಿಂದೆ ಕೂರಿಸ್ಕೊಂಡು ಹೋಗೋಕ್ ಆಗ್ತಾ ಇರಲಿಲ್ಲ. ಹೆಲ್ಮೆಟ್ ಹಾಕ್ಕೊಂಡ್ರೆ ಬೆವರು ಬಂದು, ಕೆನ್ನೆ ಮೇಲಿಳಿದು ಕಾಲು ಕೆ.ಜಿ. ಮೇಕಪ್ ಹಾಳಾಗುತ್ತೆ ಅಂತಾ, ಅದೂ ಅಲ್ಲದೇ ಅದೆಂತಂತದೋ ಹೇರ್ ಸ್ಟೈಲ್ ಹಾಳಾಗ್ತದೆ ಅಂತಾ ಯಾವ ಸ್ವಯಂಘೋಷಿತ ಸುಂದರೀನೂ ಬೈಕ್ ಹತ್ತುತ್ತಿರಲಿಲ್ಲ. ನನ್ನ ಕ್ರಷ್, ನನ್ನ ಹಾರ್ಟ್ ಅರ್ಚನಾ ಕೂಡ ಜಾಸ್ತಿ ಬೈಕ್ ಹತ್ತಿಲಿಲ್ಲ. ಮನೆಯಲಿ ಅಪ್ಪ-ಅಮ್ಮನ ಕಣ್ ತಪ್ಪಿಸಿ ಅರ್ಚನಾಳನ್ನು ಕರೆದುಕೊಂಡು ಹೋಗಿದ್ದಕ್ಕಿಂತಾ, ಈ ಪೋಲಿಸಪ್ಪನ ಕಣ್ ತಪ್ಪಿಸಿ ಓಡಾಡಿದ್ದೇ ಹೆಚ್ಚು. ಇವತ್ತಾದ್ರೂ ಒಂದೆರಡು ರೌಂಡ್ ಜಾಸ್ತೀನೇ ಸುತ್ತಾಡೋ ಆಸೆ ಶುರುವಾಯಿತು.
ಅಮ್ಮ ಮಾಡಿದ ಕಾಫಿ ಕುಡಿದು, ಟಿಫಿನ್ ಮಾಡಿ ಹೊರಗೆ ಬಂದೆ. ಅರ್ಚನಾ ಮನೆ ಹತ್ರ ಬಂದು ಕಾಲ್ ಮಾಡಿದೆ. ಅವಳಿಗೆ ಇಷ್ಟು ಬೆಳಿಗ್ಗೆ ಬೆಳಿಗ್ಗೇನೆ ಹೀಗೆ ಸುತ್ತಾಡೋ ಮೂಡ್ ಇರಲಿಲ್ಲ. ಹೊಸ ಟ್ರಾಫಿಕ್ ರೂಲ್ಸ್ ಹೇಳಿ, ಬಾ ಹೋಗೋಣ ಅಂತಾ ಕರೆದೆ. ಅಂತೂ ಬಲವಂತವಾಗಿ ರೆಡಿಯಾಗಿ ಬಂದ್ಲು. ಇವತ್ತು ಸೆಕೆಂಡ್ ಸ್ಯಾಟರ್ಡೆ. ಹಾಗಾಗಿ ಆಂಜನೇಯಸ್ವಾಮಿ ಗುಡಿಗೆ ಹೋದ್ವಿ ಫಸ್ಟ್. ದರುಷನ ಮಾಡ್ಕೊಂಡ್ ಪ್ರಸಾದ ತಿನ್ಕೊಂಡು, ತಿಂಡಿಮನೆ ಹೋಟೆಲ್ಲಿಗೆ ಹೋಗಿ ಎರಡೆರಡು ದೋಸೆ ತಿನ್ಕೊಂಡು ಒಂಚೂರು ಲಾಂಗ್ ಡ್ರೈವ್ ಹೋಗೋಣ ಅಂತಾ ಅಂದ್ಕೊಂಡ್ ಟ್ರಾಫಿಕಲ್ಲಿ ಹೋಗ್ತಾ ಇದ್ವಿ. ಸ್ವಲ್ಪ ದೂರದಲ್ಲೇ ಪೋಲಿಸ್ ಮಾಮ ಕಾಣಿಸ್ಕೊಂಡ. ಅವನನ್ನ ನೋಡಿದಾಗಲೆಲ್ಲಾ ಎದೆ ಧಸಕ್ ಅನ್ನೋದು. ಈಗ ರಾಯಲ್ ಆಗಿ ಅವನ ಮುಂದೆನೇ ಹೋದೆ. ಇಬ್ಬರೂ ಹೆಲ್ಮೆಟ್ ಇಲ್ಲದೇನೆ.
ಸಬ್ ವೇ ಇಂದ ಫ್ಲೈ ಓವರ್ ಹತ್ತಿದ್ವಿ. ಟ್ರಾಫಿಕ್ ಸ್ವಲ್ಪ ಕಡಿಮೆ ಇತ್ತು. ಓವರ್ ಸ್ಪೀಡ್ ಆಗಿ ಹೋಗದೇ ಒಂದ್ ರೇಂಜಲ್ಲಿ ಹೋಗ್ತಾ ಇದ್ದೆ. ಎರಡೂ ಕೈಯಿಂದ ನನ್ನ ಸೊಂಟ ಬಳಸಿ ಹಿಂದೆ ಫ್ರೀಯಾಗಿ ಕೂತಿದ್ಲು ಅರ್ಚನಾ. ಬೆನ್ನ ಮೇಲೆ ಕಿವಿಯಿಟ್ಟು, ನನ್ ಹೃದಯದ ಬಡಿತ ಕೇಳ್ತಾ ಇದ್ಲು. ಭಾರಿ ಖುಷಿ ಮಾರ್ರೆ, ಈ ಥರ ಡ್ರೈವ್ ಅಂದ್ರೆ ಅಲ್ವಾ. ಅರ್ಚನಾಳನ್ನು ಯಾವತ್ತೂ ಮಿಸ್ ಮಾಡ್ಕೋಬಾರ್ದು ಲೈಫಲ್ಲಿ ಅಂತಾ ಮನಸು ಮತ್ತೇ ಡಿಸೈಡ್ ಮಾಡೇಬಿಡ್ತು. ಜೀವನ ರಸಮಯ ಅಂತಾ ಅನ್ಸೋದೇ ಇಂತಾ ಅಪರೂಪದ ಕ್ಷಣಗಳಿಂದ. ಇಬ್ಬರೂ ಒಂಥರಾ ಖುಷಿಯಲ್ಲಿದ್ವಿ. ಅದೇನೋ ಗೊತ್ತಿಲ್ಲ, ತಕ್ಷಣಕ್ಕೆ ಭಾರಿ ಜೋರಾದ ಶಬ್ದದಿಂದ ಹಿಂದಿನಿಂದ ಏನೋ ಬಡಿದಂಗಾಯ್ತು. ನಾನು ಎಲ್ಲೋ ಹಾರುತ್ತಾ ಇದೀನಿ, ಆಮೇಲೆ ಧಪ್ ಅಂತಾ ಬಿದ್ದೆ. ಕಣ್ ಮಂಜು ಮಂಜಾಗಿ ಕಾಣಿಸ್ತಾ ಇತ್ತು. ಹಾಗೇ ಸ್ವಲ್ಪ ಹೊತ್ತು ಕಣ್ ಮುಚ್ಚಿದ್ದೆ. ಯಾರೋ ಮುಖದ ಮೇಲೆ ನೀರು ಹಾಕಿದಂಗಾಯ್ತು. ಮಾತನಾಡಿಸುತ್ತಿದ್ದರು. ನಂಗೆ ನಿದ್ರೆಯೋ ಏನೋ ಗೊತ್ತಾಗ್ತಾ ಇಲ್ಲ. ಆದರೂ ನಿಧಾನವಾಗಿ ಕಣ್ತೆರೆದು ನೋಡಿದೆ. ಹೇ ಹುಡುಗಾ ಇದಾನೆ. ಆಂಬುಲೆನ್ಸ್ ಗೆ ಫೋನ್ ಮಾಡ್ರೋ ಅಂತಾ ಯಾರೋ ಅಂದಾಗಲೇ ವಾಸ್ತವಕ್ಕೆ ಬಂದೆ. ಮೈಯೆಲ್ಲಾ ರಕ್ತ, ಕಾಲು ಮುರಿದುಕೊಂಡಿತ್ತು. ತಲೆಯಿಂದಲೂ ರಕ್ತ ಸುರಿಯುತ್ತಿತ್ತು. ಭಯವಾಯಿತು. ಒಂದಷ್ಟು ದೂರದಲ್ಲಿ ಲಾರಿಯೊಂದರ ಬಳಿ ನನ್ನದೇ ಬೈಕು ಗುರುತು ಸಿಗದಷ್ಟು ರೀತಿಯಲ್ಲಿ ಚಿಂದಿಯಾಗಿತ್ತು. ಆಕ್ಸಿಡೆಂಟ್ ಆಗಿದೆ ಅನ್ನೋದು ಆಗ ಖಾತ್ರಿಯಾಯ್ತು. ತಕ್ಷಣ ಅರ್ಚನಾಳ ನೆನಪಾಯ್ತು. ಅವಳು ಈಗ ಬಲವಂತವಾಗಿಯೇ ಬಂದಿದ್ದಳು ಅಲ್ವಾ. ಅವಳಿಗೇನಾದ್ರೂ ಕೈ ಮೈ ತರಚಿದ ಗಾಯಗಳಾಗಿರಬಹುದಾ ಅಂತಾ ಅವಳಿಗಾಗಿ ತಡಕಾಡಿದೆ. ನನ್ನ ಬಲಭಾಗದಲ್ಲಿ ಒಂದಷ್ಟು ದೂರ ಅವಳೂ ಬಿದ್ದಿದ್ದಳು. ಅವಳು ಬಿದ್ದಿದ್ದ ರೀತಿ, ಅಪಘಾತದ ತೀವ್ರತೆ ಹೇಳುತ್ತಿತ್ತು. ಕೈಕಾಲು ತಿರುವಿಕೊಂಡಿತ್ತು. ಅಲ್ಲದೇ ತಲೆಯಿಂದ ಮೆದುಳು ಕೂಡ ಹೊರಬಂದಿತ್ತು. ಇಡೀ ಜೀವಮಾನದುದ್ದಕ್ಕೂ ಇವಳ ಜೊತೆ ನಾನಿರಬೇಕೆಂದುಕೊಂಡಿದ್ದೆ. ಆದರಿಂದು ಅವಳ ಸಾವಿಗೆ ನಾನೇ ಕಾರಣನಾದೆ. ಕಣ್ಣಲ್ಲಿ ಗಳಗಳನೆ ನೀರು ಸುರಿಯುತ್ರಿತ್ತು. ಅಲ್ಲಿಯವರೆಗೂ ಒತ್ತಟ್ಟಿಕೊಂಡಿದ್ದ ನೋವು, ಒಮ್ಮೆಗೆ ಎದೆ ತಟ್ಟಿ ಗಂಟಲುವರೆಗೆ ಬಂದು, ಕಟ್ಟಿಕೊಂಡಿದ್ದ ಅರ್ಚನಾ ಅಂತಾ ಜೋರಾಗಿ ಕೂಗಿದೆ.
ತಕ್ಷಣವೇ ಗಾಬರಿಯಿಂದ ಬಂದ ಅಮ್ಮ, ಏನಾಯ್ತೋ ಅಂತಾ ನನ್ನ ಮುಖಕ್ಕೆ ನೀರು ಸಿಂಪಡಿಸಿ, ಎಚ್ಚರಪಡಿಸಿ ಕೇಳಿದ್ಲು. ಇದು ಕನಸಾ..!! ಎಷ್ಟು ಭಯಂಕರವಾಗಿದೆ. ಅಮ್ಮ ತಂದ ನೀರು ಕುಡಿದು, ಸ್ವಲ್ಪ ಸಮಾಧಾನಿಸಿಕೊಂಡೆ. ಅಷ್ಟರಲ್ಲಿ ಅರ್ಚನಾಳದ್ದೇ ಮೆಸೇಜು, Where are U ? ಅಂತಾ. ಮನೆಯಲ್ಲೇ ಇದೀನಿ, ಇಲ್ಲಿಗೆ ಬಾ ಪರವಾಗಿಲ್ಲ ಅಂತಾ ರಿಪ್ಲೈ ಮಾಡಿದೆ. ಯಾವ್ದ್ಯಾವ್ದೋ ಕಾರಣದ ನೆಪ ಹೇಳ್ಕೊಂಡು ನಾವ್ ಹೆಲ್ಮೆಟ್ ಹಾಕೋದಿಲ್ಲ. 100/- ರುಪಾಯಿ ಉಳಿಸೋಕೆ, ಪೋಲೀಸಪ್ಪನ ಕಣ್ ತಪ್ಪಿಸಿ ಮತ್ತೇನೋ ಎಡವಟ್ಟು ಮಾಡಿಕೊಳ್ತೇವೆ. ಅಪ್ಪಿತಪ್ಪಿಯೂ "ಹೆಲ್ಮೆಟ್ ಕಡ್ಡಾಯವಲ್ಲ" ಎಂಬ ಪದಗಳು ನಿಮ್ಮ ಕಿವಿಗೆ ಬೀಳದಿರಲಿ. ನಿಮ್ಮ ಜೀವ ರಕ್ಷಣೆಗಾಗಿ ಹಾಗೂ ನಿಮ್ಮವರ ರಕ್ಷಣೆಗಾಗಿ ಸಂಚಾರಿ ನಿಯಮ ಪಾಲಿಸಿ.. ಕಿಟಕಿಯಿಂದಲೇ ಹೊರ ಇಣುಕಿದೆ. ಬೈಕು ಅಲ್ಲೇ ನಿಂತಿತ್ತು. ಎಲ್ಲವನೂ ನೆನೆಯುತ್ತಾ ಹೀಗೆ ಮಂಕಾಗಿರುವಾಗ ಅರ್ಚನಾ ಬಂದಳು. ಅವಳನ್ನು ನೋಡಿದ ಕೂಡಲೇ ಗಂಟಲು ಕಟ್ಟಿದಂತಾಗಿ, ಮಾತೇ ಬರದಂತಾಯಿತು. ಸುಮ್ಮನೇ ಹೋಗಿ ಮನೆಯಲ್ಲಿಯೇ ಅವಳನ್ನು ಬಾಚಿ ತಬ್ಬಿ ಜೋರಾಗಿ ಅಳುತ್ತಿದ್ದೆ...



