"ರೂಪಸೀ ಸುಮ್ಮನೇ ಹೇಗಿರಲಿ, ನಿನ್ನನೇ ನೋಡುತಾ ಕೂತು" ಎಂದು ಈ ಮನ ಸದಾ ಗುನುಗುತ್ತಲೇ ಇರುತ್ತೆ. ನಿನ್ನ ನೋಡುವಾಗಲೆಲ್ಲಾ, ನಿನ್ನ ನೆನಪಾದಾಗೆಲ್ಲಾ. ಎದೆಯೊಳಗೆ ಇಣುಕಿ ನೋಡಿದ ಚಂದ್ರಮ, ನಾ ನಿನಗಾಗಿ ಬರೆದ ಪದಗಳ ನಿಧಿಯನ್ನು ಕಂಡು, ಇದು ಜೇನುಗೂಡಿಗಿಂತಲೂ ಸಿಹಿ ಎಂದು, ಅದರೊಳಗೆ ಮಿಂದು ಬಂದು ಜೇನ್ಗಡಲಿನಿಂದ ನಾ ಬಂದೆ ಎಂದು ನಿನ್ನ ಕಣಗಳಿಗಾನಂದವ ತರುತ್ತಿದ್ದಾನೆ ನೋಡು. ಮಳೆಹನಿಯಲಿ ನೀ ನೆನೆಯುತಾ ಖುಷಿ ಪಡುವಾಗ, ಪಾತರಗಿತ್ತಿಯ ಚಂದಕೆ ಸೋತು ಕಣ್ ತುಂಬಿಕೊಳ್ಳುವಾಗ, ಸಂಪಿಗೆಯ ಹೂವಿನ ಪರಿಮಳಕೆ ಕರಗಿ, ಅದನು ಮುಡಿಗೇರಿಸಿಕೊಳ್ಳುವಾಗ, ಕಣ್ಣಿಗೆ ಕಾಡಿಗೆ ತೀಡಿಕೊಳ್ಳುವಾಗ, ತಂಗಾಳಿಗೆ ಚಳಿ ಹಿಡಿಸೋ ಹಾಗೇ, ಆ ಮುಂಗುರುಳ ಪದೆಪದೇ ನೀ ಸರಿಸುವಾಗ, ಕನ್ನಡಿ ಮುಂದೆ ನಿಂತು ನಿರಿಗೆ ಸರಿಮಾಡಿಕೊಳ್ಳುವಾಗ, ಶುಚಿರ್ಭೂತೆಯಾಗಿ ತುಳಸಿಕಟ್ಟೆಯನು ನೀ ಸುತ್ತುವಾಗ, ಗೆಳತಿಯರ ನಡುವೆ ಎಂಥದೋ ನೀ ಪಿಸುಗುಟ್ಟುವಾಗ, ದೇವಸ್ಥಾನದಿ ಕಣ್ಮುಚ್ಚಿ ಧ್ಯಾನಿಸುವಾಗ, ಮಕ್ಕಳ ಜೊತೆ ನೀ ಮಗುವಾಗಿ ನಗುವಾಗ ನಿನ್ನ ಕದ್ದು ಕದ್ದು ನಾ ನೋಡಿದ್ದೇನೆ ಚೆಲುವೆ. ಅದೆಷ್ಟೋ ಬಾರಿ ಇದೆಲ್ಲವೂ ಕಣ್ಣ ಮುಂದೆ ಬಂದು, ನನ್ನ ನಿಯತ್ತನ್ನೇ ಕೆಡಿಸಿಬಿಡುತ್ತೆ. ನನ್ನೊಳಗಿನ ಪ್ರೀತಿಯ ಇಮ್ಮಡಿಗೊಳಿಸುತ್ತೆ. ಆ ನಿನ್ನ ಪ್ರೇಮಪಾಶದಿ ಸಿಲುಕಿ, ಸಿಹಿಯಾಗಿ ನರಳುವ ಬಡಪಾಯಿ ನಾನು.

ಬರೀ ದೂರದಲ್ಲೇ ಕದ್ದು ನೋಡುವ ನನಗೆ, ಹತ್ತಿರದಿಂದಲೂ ನಿನ್ನ ನೋಡುವ ಸಮಯ ಬಂತು. ಪಾರಿಜಾತ ಪುಷ್ಪದಂಥ ನಿನ್ನ ಚೆಲುವನ್ನು ವರ್ಣಿಸಲು ಸಾವಿರಾರು ಪದಗಳ ಪೋಣಿಸಿ ಬರೆದೆ, ಮತ್ತೆ ಬರೆದೆ, ಇನ್ನೂ ಬರೆಯುತ್ತಲೇ ಇದ್ದೇನೆ. ಮೊಗೆದಷ್ಟು ಪ್ರೀತಿ, ತುಂಬಿಕೊಂಡಷ್ಟು ಭಾವ ಜೊತೆಯಾಗಿ ಪದಗಳು ಒಂದಕ್ಕೊಂದು ಬೆಸೆದು ಮಣಿಹಾರದಂತೆ ನಿನ್ನ ಕೊರಳ ಬಳಸಿ ನಗುತಿರಲು, ನನ್ನ ಲೇಖನಿಯೇ ಖುಷಿಯಾಗಿ ಕಣ್ ಹೊಡೆದು ಹೇಳಿತು "ಗುರೂ... ಯೂ ಆರ್ ವೆರಿ ಲಕ್ಕೀ" ಅಂತಾ. ಸಾವಿರ ಜನುಮಗಳೇ ಇರಲಿ, ಇರದಿರಲಿ, ನಿನ್ನ ಕಣ್ ಮಿಂಚಿನ ಮೋಹಕೆ ಸೋತ ಈ ಜನುಮ ಮಾತ್ರ ಪ್ರಮುಖವಾಗಿಯೇ ಇರುತ್ತೆ ನೋಡು. ಹತ್ತಿರ ನಿಂತರೂ, ನಿನ್ನ ಕಂಗಳ ಹೊಳಪಿನ ನೋಟಕೆ ನನ್ನೇ ನಾ ಮರೆತು, ಮೂಕನಾಗಿ ಹೋದೆ. ಏನು ಹೇಳಬೇಕೆಂದು ತೋಚದೇ ಆ ರೆಪ್ಪೆಗಳ ಚೆಲುವಲ್ಲೇ ಕರಗಿಹೋದೆ. ನೋಡು, ಮತ್ತೆ ನಿನ್ನ ಬಣ್ಣಿಸಬೇಕೆನಿಸುತಿದೆ. ಅದೇ ಕಂಗಳು, ಅದೇ ಕಾಡಿಗೆ, ಅದೇ ಜುಮುಕಿ, ಅದೇ ಕೆಂಪೇರಿದ ಕೆನ್ನೆ, ಅದೇ ಚೆಂದುಟಿ, ಅದೇ ಮುಂಗುರುಳು, ಅದೇ ತುದಿಬೆರಳು, ಒಂದಾ ಎರಡಾ ನನ್ನ ಕಾಡುತ್ತಿರುವುದು. ಎಲ್ಲವೂ ಗೊತ್ತಿದ್ದೂ, ಗೊತ್ತಿಲ್ಲದ ಹಾಗೇ ನಟಿಸುವ ನಿನ್ನ ಚಾತುರ್ಯ ನನಗಂತೂ ತಿಳಿದಿಲ್ಲ.. ನಾ ತುಟಿಬಿಚ್ಚಿ ಮಾತನಾಡಿದ್ದಕ್ಕಿಂತಾ ಕಣ್ ಕಣ್ಣಲ್ಲೇ ಮಾತನಾಡಿ, ನಿನ್ನ ಪ್ರೀತಿ ಒಪ್ಪಿಸಿಕೊಂಡಿದ್ದು, ಹಾಗೇ ಅಪ್ಪಿಕೊಂಡಿದ್ದು‌. ಇರುಳು ಕಳೆಯದೇ ಇರಲಿ, ಹಗಲು ಮೂಡದೇ ಇರಲಿ, ನೀ ನನ್ನ ಎದೆ ಮೇಲೆ ಮಲಗಿ, ನನ್ನ ಕಂಗಳಲಿ ನಿನ್ನ ನೋಟ ಬೆರೆಸಿ, ಪ್ರೀತಿಸುತ್ತಾ ಇರುವಾಗ.

ನಾ ಬರೆಯ ಹೊರಟಿದ್ದು ಕವಿತೆಯೋ, ಕಥೆಯೋ ಒಂದು ತಿಳಿಯದಂತೆ ಮಾಡಿದೆ ನೋಡು ನಿನ್ನ ನೆನಪು. ಒಂದಂತೂ ನಿಜ ಕಣೇ, ಕಾಡಿಗೆ ತೀಡಿದ ನಿನ್ನ‌ ಕಣ್ಗಳ ಅಂದ-ಚಂದದ ಮೇಲಾಣೆ, ನಿನ್ನ ಮೇಲಿನ ರಸಮಯ ಒಲವಿನ ಪ್ರೀತಿಯಲ್ಲಿ ಮಿಂದು ಮತಿ ಕಳೆದುಕೊಂಡ ಪ್ರೇಮಿಯ ಚಡಪಡಿಕೆಯೇ ಈ ಪದಸಂಗಮ. ನೀನೇ ಹೇಳೇ ರೂಪಸಿ... ಸುಮ್ಮನೇ ನಾ ಹೇಗಿರಲಿ, ನಿನ್ನನೇ ನಾ ನೋಡುತಾ ಕೂತು..

ಹೀಗೆಯೇ ನಿನ್ನ ನೋಡುತಾ ನೋಡುತಾ ನನ್ನ ಲೋಕದಲ್ಲಿ ತೇಲುತಿರುವಾಗ ಇಬ್ಬನಿಯ ಬಿದ್ದಂತಾಯ್ತು. ಮತ್ತೂ ಸ್ವಲ್ಪ ಹೊತ್ತಿನಲ್ಲಿ ಹನಿ ಹನಿ ಸೇರಿ ಮಂಜಿನ‌ ಮಳೆಯಂತೆ ಬಂದಂತಾಯ್ತು.. ನೀನು, ನಿನ್ನ ನೆನಪು, ಮಂಜಿನ ಮಳೆ ಎಲ್ಲವೂ ಸೇರಿ ನನ್ನನು ಇನ್ನೂ ಹುಚ್ಚೆಬ್ಬಿಸುತ್ತಿದೆ. ಅಯ್ಯೋ, ಖುಷಿಯಿಂದ ಕುಣಿದು, ನಿನ್ನನೇ ತಬ್ಬುವ ಬಯಕೆಯಲಿ, ಹಣೆಗೊಂದು ಮುತ್ತನಿಡುವ ಆಸೆಯಲಿ, ನಿನ್ನ ಬಳಿಗೆ ನಾನೋಡಿ ಬರಲು ಅಣಿಯಾದೆ. ಅಷ್ಟರಲ್ಲಿ ಮಳೆಹನಿ‌ ಜಾಸ್ತಿಯಾಯ್ತು. ಮೈಯೆಲ್ಲಾ ತಂಪಾಯ್ತು. ಮತ್ತ್ಯಾರೋ ಕರೆದಂತಾಯ್ತು... "ಮಳೆ ಬಂತು, ಜೋರಾಯ್ತು... ಬಾರೋ ಒಳಗೆ" ಎಂದು. ಏನಪ್ಪಾ ಇದು ಎಂದು ಕೈಯಲ್ಲಿ ಇದ್ದ ಚಾದರ ಸರಿಸಿ ನೋಡಲು ಮಿಂಚೋಂದು ಭಾರಿ ಬೆಳಕಿನ ದರುಷನ ಮಾಡಿಸಿತು. ಹಿಂದೆಯೇ ಭಾರಿ ಗುಡುಗು. ಥತ್ತೇರಿಕೆ ಇಷ್ಟ್ಹೋತ್ತು ನಾ ಕಂಡಿದ್ದು ಕನಸಾ? ಎಂದು ನನ್ನ ನಾನೇ ಪ್ರಶ್ನಿಸಿಕೊಂಡು ದಿಂಬು ಚಾಪೆ ಸೇರಿಸಿ ಒಳ ಓಡಿಹೋದೆ.. "ಸಾಕಪ್ಪಾ ಈ‌ ಬ್ಯಾಚುಲರ್ ಲೈಫು.. ಬೇಗ ಒಂದ್ ಮದ್ವೆ ಆಗ್ಬಿಡಬೇಕು.." ಅಂತಾ ನಮ್ ಕಥಾನಾಯಕ ಬಾಲ್ಕನಿಯಿಂದ ಮನೆ ಒಳಗೆ ಹೋದ.