ನೆತ್ತಿ ಸುಡುವ ಹೊತ್ತಿಗೆ ಎಂದಿನಂತೆ ನಾನು ಹೋಟೆಲಿಗೆ ಬಂದು, ಗಲ್ಲಾಪೆಟ್ಟಿಗೆಯ ಹತ್ತಿರವಿದ್ಧ ದೇವರಪಟಕ್ಕೆ ಕೈ ಮುಗಿದು, ಅಲ್ಲೇ ಇದ್ದ ಮಗನನ್ನು ಹೊರಗೆ ಕಳುಹಿಸಿ, ಆ ಕುರ್ಚಿಯಲ್ಲಿ ನಾನೇ ಆಸೀನನಾದೆ. ಅಷ್ಟೊತ್ತಿಗಾಗಲೇ ಸಾಕಷ್ಟು ಜನ ಹೋಟೆಲಿನಲ್ಲಿ ತಿಂಡಿ ತಿನ್ನುತ್ತಿದ್ದರು, ಕೆಲವರು ಕಾಫಿ ಕುಡಿಯುತ್ತಿದ್ದರು.
“ಓಯ್ ಭಟ್ರೆ, ಹೇಗಿದಿರೀ? ಏನ್ ತುಂಬಾ ಲೇಟಾಗಿ ಬಂದ್ರಿ” ಎಂದು ಅಲ್ಲಿಂದನೇ ಕೂಗುತ್ತಾ ಶಂಕ್ರಣ್ಣ ಬಂದ. ಧಢೂತಿ ಮನುಷ್ಯ, ಜೋರು ದನಿ, ಅವನ ಕೂಗಿಗೆ ಹೋಟೆಲಿನಲ್ಲಿದ್ದ ಎಲ್ರೂ ಅವನ ಕಡೆ ತಿರುಗಿದರು. ನಂತರ ಅವರವರ ಪ್ಲೇಟ್ ಕಡೆ ಗಮನ ಕೊಟ್ರು. ನಾನು “ಹಾಗೇನಿಲ್ಲಾ ಶಂಕ್ರಣ್ಣ, ಬ್ಯಾಂಕಿಗೆ ಹೋಗಿದ್ದೆ. ಅದ್ಕೆ ಸ್ವಲ್ಪ ಲೇಟಾಯ್ತು ಅಷ್ಟೆ” ಅಂದೆ.
“ಮೋದಿ ಸಾಹೇಬ್ರು, ಇರೋ ಬರೋ ನೋಟೆಲ್ಲಾ ಬ್ಯಾನ್ ಮಾಡಿದ್ರೂ, ನಿಮ್ ಹತ್ರ ಇನ್ನೂ ಇದೆ ಅಂದ್ರೆ, ನಿಮ್ದು ಭಾರಿ ಜಬರ್ ದಸ್ತ್ ವ್ಯವಹಾರ ಇದೆ ಬಿಡಿ” ಎಂದು ಸುಮ್ಮನೇ ಛೇಡಿಸಿದ. “ಅದೆಂತದು ವ್ಯವಹಾರ ಇಲ್ಲ ಮಾರಾಯ. ಬ್ಯಾಂಕ್ ಲೋನ್ ಬೇಕಿತ್ತು. ಇವತ್ತು ಸ್ವಲ್ಪ ಫ್ರೀಯಾಗಿದ್ದೆ. ಮೊದಲೆಲ್ಲಾ ಊಟದ ಟೈಮಾಯ್ತು ಅಂದ್ರೆ ಸಾಕು, ಬಿಡುವೇ ಇರ್ತಾ ಇರ್ಲಿಲ್ಲ. ಸಾಲು ಸಾಲು ಜನ, ಹಾಗೇ ನಿಂತು ಊಟ ಮಾಡಿಕೊಂಡು ಹೋಗ್ತಾ ಇದ್ರು. ಈಗ ವ್ಯಾಪಾರ ತುಂಬಾ ಕಡಿಮೆಯಾಗಿಬಿಟ್ಟಿದೆ. ಜನ ಎಲ್ಲಾ ಆನ್ ಲೈನಲ್ಲೇ ಊಟ ತಿಂಡಿನೂ ಬುಕ್ ಮಾಡ್ಕೊಂಡು ಆಫೀಸಿಗೆ, ಮನೆಗೆ ತರಿಸ್ಕೊಂಡು ತಿಂತಾ ಇದಾರೆ ಅಲ್ವಾ. ಆಫೀಸ್ ಗೆ ಲಂಚ್ ಬಾಕ್ಸ್ ಕೂಡ ತಗೊಂಡ್ ಹೋಗ್ತಾ ಇಲ್ಲಾ ಜನ ಇತ್ತೀಚೆಗೆ. ಎಲ್ಲಾ ಆನ್ ಲೈನ್ ಮಯ” ಎಂದೆ ಇದ್ದ ಗೋಳನ್ನೇ ಹೇಳುತ್ತಾ.
“ಅದು ನಿಜಾನೇ ಭಟ್ರೆ, ಊಟಕ್ಕೆ ಅಂತಾ ಸ್ವಲ್ಪ ಟೈಮ್ ಕೊಡೋಕಾಗ್ದೇ ಇರೋ ಪರಿಸ್ಥಿತಿಯಲ್ಲಿ ಜನ ಇದಾರೆ. ಏನ್ ಮಾಡೋಕಾಗ್ತದೆ. ಅವರವರ ಅವಸರ. ಅಲ್ವಾ” ಅಂದ್ರು. “ಅದು ಸರಿನೇ ಬಿಡಿ,” ಎಂದು ಹೌದೆನುತ್ತಾ, ಒಳಗಿದ್ದ ಮಾಣಿಗೆ, ಶಂಕ್ರಣ್ಣನಿಗೆ ಒಂದು ಕಾಫಿ ಕೊಡು ಮಾರಾಯ ಅಂತಾ ಕೂಗಿದೆ. ನಾನಿದ್ದಾಗ, ಶಂಕ್ರಣ್ಣ ದಿನಾ ತಪ್ಪದೇ ಕಾಫಿಗೆ ಬಂದು ಬಿಡ್ತಾನೆ. ತುಂಬಾ ವಾಚಾಳಿ. ಏನೇನೋ ಬಡಬಡ್ಸಿ, ಅದೂ ಇದೂ ಅಂತಾ ಮಾತಾಡಿ, ನಂಗೆ ಬೋರ್ ಆಗದೇ ಇರೋ ಹಾಗೇ ನೋಡ್ಕೋತಾನೆ. ಒಂದೊಂದ್ ಸಲ, ಅವನ ಮಾತುಗಳು ಬಾರಿ ಬೋರ್ ಆಗೋದು ಉಂಟು. ಒಂದ್ ದಿನ ಅವನನ್ನ ನೋಡಿಲ್ಲ ಅಂದ್ರೆ ಏನೋ ಮಿಸ್ ಮಾಡ್ಕೊಂಡ ಹಾಗೇ ಅಂತಾ ಅನಿಸುತ್ತೆ.
ಕೊಟ್ಟ ಕಾಫೀನಾ ಸೊರ್ ಸೊರ್ ಅಂತಾ ಏರಿಸ್ಕೊಂಡು, ಬಾಯಿ ಚಪ್ಪರಿಸಿ, “ನಿಮ್ ಹೋಟ್ಲು ಕಾಫಿನೇ ಕಾಫಿ ಭಟ್ರೆ. ನನ್ನ ಹೆಂಡ್ತೀನೂ ಹೀಗೆ ಮಾಡಲ್ಲ.” ಅಂತಾ ನನ್ನ ಅಟ್ಟಕ್ಕೆ ಏರಿಸುತ್ತಾ, ಮಾತಿಗೆ ಮತ್ತೇ ಪೀಠಿಕೆ ಇಟ್ಟ. ನಾನೋ ಚೂರು ನಸುನಕ್ಕು ಹಾಗೇ ಸುಮ್ಮನಾದೆ. “ಅದ್ಸರಿ ಭಟ್ರೆ, ಈ ಸರಿ ಎಲೆಕ್ಷನಲ್ಲಿ ಯಾರಿಗೆ ನಿಮ್ಮ ಓಟು. ಯಾರ್ ಬರ್ತಾರೆ ಮುಂದೆ ಸರ್ಕಾರ ನಡ್ಸೋಕೆ” ಅಂತಾ ಕೇಳಿದ. “ಯಾರ್ ಬಂದ್ರೆ ಏನು ಉಪಯೋಗ ಶಂಕ್ರಣ್ಣ. ಯಾವ ಪಕ್ಷ ತಾನೇ ನೆಟ್ಟಗಿದೆ ಹೇಳಿ. ಅದೇ ಹಳೇ ರಾಜಕಾರಣಿಗಳು, ಮತ್ತೆ ಮತ್ತೆ ಎಲೆಕ್ಷನಲ್ಲಿ ನಿಂತ್ಕೋತಾರೆ. ಅವರು ಭ್ರಷ್ಟ ರಾಜಕಾರಣಿ ಅಂತಾ ಗೊತ್ತಿದ್ರೂ, ಓಟು ಮಾರ್ಕೊಂಡ ಜನ ಅವರಿಗೇನೆ ಓಟ್ ಹಾಕಿ ಅವ್ರನ್ನೇ ಗೆಲ್ಲಿಸ್ತಾರೆ. ಅವರೂ ಮತ್ತೆ ಮತ್ತೆ ರಾಜ್ಯನ ಲೂಟಿ ಮಾಡಿ, ಕೋಟಿ ಕೋಟಿ ಆಸ್ತಿ ಮಾಡ್ಕೋತಾ ಇದಾರೆ. ಅಷ್ಟೇ ಅಲ್ವಾ.”
ಇಷ್ಟನ್ನು ಕೇಳಿದ ಶಂಕ್ರಣ್ಣ, ಸುಮ್ಮನೇ ತಲೆಯಾಡಿಸಿದರು. ಕಾಫಿ ಕುಡಿದಾದ ಮೇಲೆ, ಸಂಜೆ ಸಿಕ್ತಿನಿ ಅಂತಾ ದುಡ್ಡು ಕೂಡ ಕೊಡದೇ ಹೋದ್ರು. ಕೆಲವು ಜನ ಇರ್ತಾರೆ ಕಣ್ರೀ, ಕೈಯಿಂದ ಕೊಡ್ಬೇಕು ಅಂದ್ರೆ, ಏನೋ ಮಹಾ ಕಳಕೊಂಡವರಂತೆ ಆಡ್ತಾರೆ. ಕಾಫಿ ದುಡ್ಡು ಕೂಡ, ಈ ಪುಣ್ಯಾತ್ಮ ಸರಿಯಾಗಿ ಕೊಡಲ್ಲ. ಯಾವಾಗಲೋ ಕೊಡ್ತಾನೆ. ಪುಕ್ಸಟ್ಟೆ ಕುಡಿಯೋದು ಈತನ ಚಟ. ಗೊತ್ತಿದ್ದು ಗೊತ್ತಿದ್ದೂ ನಾನ್ ಸಾಲ ಕೊಡ್ತಾ ಇರ್ತೀನಿ.
ಹಾಳಾದ್ ಶುಗರ್ ಬಂದ್ಮೇಲೆ ಆಗಾಗ ಏನಾದ್ರೂ ತಿಂತಾ ಇರ್ಬೇಕು, ಹೊಟ್ಟೆ ತುಂಬಾ ಹಸಿಯುತ್ತಾ ಇರುತ್ತೆ. ಅದಕ್ಕೆ ನನ್ನ ಮಗನನ್ನು ಗಲ್ಲಾದ ಮೇಲೆ ಕೂರಿಸಿ, ಒಂದು ಮಸಾಲೆ ದೋಸೆ ತಂದು ಒಂದು ಟೇಬಲ್ ಹತ್ತಿರ ಬಂದು ಕುಂತೆ. ಅಷ್ಟರಲ್ಲಿ, 60 ವಯಸ್ಸು ದಾಟಿದ ಒಬ್ಬಾತ, ಊದಿನಕಡ್ಡಿ ಪೊಟ್ಟಣ ಮಾರಿಕೊಂಡು ಬಂದ. ಅವನಿಗೂ ಹಸಿವಾಗಿತ್ತು ಅನಿಸುತ್ತದೆ, ಬಂದವನೇ ನನ್ನ ಮುಂದಿನ ಟೇಬಲ್ಲಿನಲ್ಲಿ ಕೂತ. ಮಾಣಿಯನ್ನು ಕರೆದು ಎರಡು ಮಸಾಲೆ ದೋಸೆ ಆರ್ಡರ್ ಮಾಡಿದ.
ಬಂದದ್ದು ಒಬ್ಬ, ಆದರೆ ಎರಡು ಮಸಾಲೆ ದೋಸೆ ಯಾಕೆ ಅಂತಂದುಕೊಂಡೆ. ಇವನೇ ಎರಡೂ ತಿನ್ನುತ್ತಾನಾ ? ಇಲ್ಲ ಪಾರ್ಸಲ್ ತಗೊಂಡ್ ಹೋಗ್ತಾನಾ? ಎಲ್ಲ ಅನುಮಾನ ಬಂದವು. ಅವನಿಗೆ ಕೇಳೋಣ ಎನಿಸಿತು. ಆದರೆ ಹೇಗೆ ಕೇಳೋದು. ಹೀಗೆ ಯೋಚಿಸುತ್ತಿರುವಾಗಲೇ ಮಾಣಿ ಬಂದು "ಯಜಮಾನ್ರೇ, ತಗೊಳ್ಳಿ ಇಡ್ಲಿ ವಡಾ" ಅಂದ. ನಾನು ಇಡ್ಲಿ ವಡಾ ತಿನ್ನಲು ಶುರು ಮಾಡಿದೆ.
ಅಷ್ಟರಲ್ಲಿ ಅವನ ಎರಡೂ ಪ್ಲೇಟ್ ಮಸಾಲೆ ದೋಸೆ ಬಂತು. ಸ್ವಲ್ಪ ದೂರದಲ್ಲಿದ್ದ ಬಡಕಲು ಹುಡುಗನಿಗೆ ಒಂದು ದೋಸೆಯನ್ನು ಕೊಟ್ಟ. ಇನ್ನೊಂದನ್ನು ತಾನು ತಿನ್ನಲು ಶುರು ಮಾಡಿದ. ಆ ಹುಡುಗ ಯಾರು? ಇವನ್ಯಾಕೆ ಕೊಟ್ಟ? ಹೀಗೆ ಒಂದೆರಡು ಬೇಕಿರದ ಪ್ರಶ್ನೆಗಳು ನನ್ನ ತಲೆ ಕೆಡಿಸುತ್ತಿತ್ತು. ನಾಲಿಗೆ ಚಪಲದಿಂದ ಆತನಿಗೆ ಕೇಳಿಯೇಬಿಟ್ಟೆ.
"ನಂಗೆ ನನ್ ಹೆಂಡ್ತಿ ಅಂದ್ರೆ ತುಂಬಾ ಇಷ್ಟ. ನಂಗೂ ಅವಳಿಗೂ ಮಸಾಲೆ ದೋಸೆ ಅಂದ್ರೆ ತುಂಬಾನೇ ಇಷ್ಟ. ಅದಕ್ಕೋಸ್ಕರಾನೇ ದಿನ ಎರಡು ಮಸಾಲೆ ದೋಸೆ ತಗೋತಿನಿ. ಒಂದು ನಾನು ತಿಂತೀನಿ. ಇನ್ನೊಂದು ಅವಳ ಪರವಾಗಿ ಮತ್ತ್ಯಾರಾದ್ರೂ ಹಸಿದ ಮಕ್ಕಳಿಗೆ ಕೊಡ್ತೀನಿ” ಅಂತಾ ಅವನು ಹೇಳಿದ. “ಮತ್ತೇ, ಮನೆಗೆ ಹೋದ್ಮೇಲೆ ಅಮ್ಮಾವ್ರಿಗೆ ಏನ್ ಕೊಡ್ತೀರಿ” ಅಂತ ಕೇಳಿದೆ ಸ್ವಲ್ಪ ವ್ಯಂಗ್ಯವಾಗಿ. ಅದಕ್ಕವವರು “ಶಾರೀರಕವಾಗಿ ಅವಳು ನನ್ನಿಂದ ತುಂಬಾ ದೂರ ಹೋಗಿದಾಳೆ. ಆದರೆ ಮನಸಲ್ಲಿ ಇನ್ನೂ ನಗ್ ನಗ್ತಾ ಇದಾಳೆ. ಅವಳ ಆದರ್ಶಾನೇ ನಾನು ಪಾಲಿಸ್ತಾ ಇರೋದು. ನಾನು ತಿನ್ನಿಸೋ ಮಕ್ಕಳ ಖುಷಿಯಲ್ಲಿ ನನ್ನವಳ ಮುಖ ಕಾಣುತ್ತೆ. ಅವಳ ನಗು ಕಾಣುತ್ತೆ. ದಿನಕ್ಕೊಂದು ರೂಪದಲ್ಲಿ ನಂಗೆ ಅವಳು ಕಾಣಿಸ್ತಾಳೆ. ನನ್ನ ಜೊತೆ ಅವಳು ಇನ್ನೂ ಇದಾಳೆ. ಒಂದು ಕಾಲದಲ್ಲಿ ಅವಳು ಹೀಗೆ, ಕಂಡ ಕಂಡ ಮಕ್ಕಳಿಗೆ ಕೈಯಾರೆ ಊಟ ತಿನ್ನಿಸ್ತಾ ಇದ್ದಳು. ಮಕ್ಕಳೆಂದರೆ ಅವಳಿಗೆ ತುಂಬಾ ಇಷ್ಟ. ಅವಳಿಗೆ ಅದೆಷ್ಟು ಖುಷಿ ಕೊಡ್ತಾ ಇತ್ತು ಅಂದ್ರೆ, ವರ್ಣಿಸೋಕೆ ಸಾಧ್ಯವಿಲ್ಲ ಅನ್ಸುತ್ತೆ. ಅದಕ್ಕಾಗಿನೇ ನಾನು ಕೂಡ ಈಗ ಅದನ್ನೇ ಮುಂದುವರೆಸ್ತಾ ಇದೀನಿ ಅಷ್ಟೇ” ಅಂತಾ ಹೇಳಿದರು.
ಆತನ ಮಾತುಗಳನ್ನು ಕೇಳುತ್ತಾ ಭಾವಪರವಶನಾಗಿ ನಾನೇ ಕಳೆದುಹೋಗಿದ್ದೆ. ಮತ್ತೆ ಜಾಗೃತನಾಗಿ, “ನಿಮಗೆ ಮಕ್ಕಳಿರಲಿಲ್ಲವಾ?” ಎಂದು ಪ್ರಶ್ನಿಸಿದೆ. “ಇದ್ದಾರೆ. ರೆಕ್ಕೆ ಬಲಿತ ಮೇಲೆ, ತುಂಬ ಎತ್ತರಕ್ಕೆ ಹಾರಿದ್ದಾರೆ. ಇನ್ನೂ ನೆಲದ ಮೇಲೆ ಇರೋ ನಾವು ಅವರಿಗೆ ಕಾಣಿಸಲಿಲ್ಲ. ಅವರಿಗೆ ಕಾಣಿಸದೇ ಇದ್ದಾಗ, ಆ ನೋವನ್ನು ಈ ಮಕ್ಕಳ ಖುಷಿಯಲ್ಲಿ ಮರೆತೆವು” ಎಂದ ಬೇಸರದಿಂದ. “ಅದ್ಸರಿ ಸಾರ್, ಈ ಹುಡುಗ ಯಾರು?” ಅಂದೆ. “ಅವನ್ಯಾರೋ ಗೊತ್ತಿಲ್ಲ ಸರ್. ನನ್ನ ಹಾಗೇ ಅವನೂ ಕೂಡ ಎಂಥದೋ ಚಿಕ್ಕ ಪುಟ್ಟ ಸಾಮಾನುಗಳನ್ನು ಸಿಗ್ನಲ್ ನಲ್ಲಿ ಮಾರುತ್ತಾ ಇರ್ತಾನೆ. ಯಾಕೋ ತಲೆಸುತ್ತು ಬಂದು ಸುಮ್ಮನೆ ಮಲಗಿದ್ದ. ಹಾಗೇ ಅವನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಟ್ರೀಟ್ಮೆಂಟ್ ಕೊಡ್ಸಿ, ಇಲ್ಲಿ ಕರ್ಕೊಂಡು ಬಂದು ಒಂದು ದೋಸೆ ಕೊಡಿಸಿದೆ ಅಷ್ಟೇ." ಅಂತಾ ಹೇಳಿದ. ಸಂಬಂಧವೇ ಇರದ ವ್ಯಕ್ತಿಯೊಬ್ಬನ ಕಾಳಜಿ ವಹಿಸೋ ಜನ ಇನ್ನೂ ಇದ್ದಾರ ಅಂತಾ ಡೌಟು ಬಂತು, ಜೊತೆಗೆ ಖುಷಿಯೂ ಆಯಿತು.
"ಅಲ್ಲಾ..., ನೀವು ಯಾಕೆ ಇಷ್ಟೆಲ್ಲಾ ಸಹಾಯ ಮಾಡಿದ್ರಿ. ಎಲ್ಲರ ಥರ ನಿಮ್ಮ ಪಾಡಿಗೆ ನೀವು ಇರಬಹುದಿತ್ತು ಅಲ್ವಾ." ಅಂತಾ ಕೇಳಿದೆ. ಅದಕ್ಕಾತ “ಕಳಕೊಳ್ಳೋದ್ ಏನಿದೆ ಸಾರ್. ಕಳಕೊಳ್ಳೋಕೆ, ನಾ ತಂದಿದ್ದಾರೂ ಏನು? ಬರಿ ಕೈಯಲ್ಲೇ ಬಂದೆ, ಬರೀ ಕೈಯಲ್ಲೇ ಹೋಗ್ತೀನಿ. ಕೈಲಾದ್ರೆ ಸಹಾಯ ಮಾಡೋಣ. ಇಲ್ಲಾಂದ್ರೆ ಸುಮ್ನಿರೋಣ.”
ಊಟ ಮಾಡಿ, ಹೊರ ಬರುವ ಹೋಟೆಲಿನ ಕಸ್ಟಮರ್ ಗಳು, ಹೋಟೆಲ್ ಹೊರಗೆ ಯಾರಾದ್ರೂ ಬೇಡುತ್ತಾ ನಿಂತವರನ್ನು ಕಂಡ್ರೆ, ಹತ್ತು ರೂಪಾಯಿ ಚಿಲ್ರೆ ಕೊಟ್ಟು, ಸೆಲ್ಫಿ ತೆಗೆದುಕೊಂಡು, ಮಹಾದಾನಿಯಂತೆ ಪೋಸ್ ಕೊಟ್ಟು, ಫೇಸ್ಬುಕ್, ಟ್ಟಿಟ್ಟರನಲ್ಲಿ ಹಾಕಿಕೊಳ್ಳೋ ಬೇಕಾದಷ್ಟು ಮಂದಿಯನ್ನು ನಾನು ಕಂಡಿದ್ದೀನಿ. ಆದರೆ ಯಾವುದೇ ಪುರಸ್ಕಾರಗಳ ಹಂಗಿಲ್ಲದೇ, ಈ ಥರ ನಿತ್ಯ ಅನ್ನಸಂತರ್ಪಣೆ ಮಾಡೋರನ್ನ ಕಂಡಿದ್ದು ಇದೇ ಮೊದಲು. ಯಾವುದೋ ಸಣ್ಣ ಕಾರಣಕ್ಕೆ ಮನೆಯಲ್ಲಿ ಹೆಂಡತಿ ಜೊತೆ ಬೆಳಿಗ್ಗೆ ಜಗಳವಾಡಿ ಬಂದಿದ್ದೆ. ಈಗ ನನಗೆ ತಪ್ಪಿನ ಅರಿವಾಗುತ್ತಿದೆ. ಅವಳನ್ನು ಕ್ಷಮೆ ಕೇಳಬೇಕು ಎನಿಸಿ, ಅವಳಿಗೂ ಫೋನಾಯಿಸಿ ಕ್ಷಮೆ ಕೇಳಿಯೇಬಿಟ್ಟೆ. ಅವಳಿಗೂ ಆಶ್ಚರ್ಯ. ನನಗೂ ನನ್ನ ಜೀವನದ ಇಲ್ಲಿಯವರೆಗಿನ ದಿನಗಳ ಅವಲೋಕನ ಮಾಡುತ್ತಿತ್ತು ಮನಸು. ಒಂದರ್ಥದಲ್ಲಿ ನಾನು ಕಳೆದುಹೋಗಿದ್ದೆ. ಆಗ “ಸರಿ ಸಾರ್, ನಾನು ಬರ್ತೇನೆ” ಅಂದಾಗ ನಾನು ಜಾಗೃತನಾದೆ. ಮಾತಿಲ್ಲದೇ ನಗುತ್ತಾ ಅವನ ಬೀಳ್ಕೊಟ್ಟೆ.
ದೂರದಲ್ಲಿ ಹೋಗುತ್ತಿದ್ದ ಆತನನ್ನೆ ನಾನು ನೋಡುತ್ತಿರಲು, ಇತ್ತ ಗಲ್ಲಾಪೆಟ್ಟಿಗೆ ಬಳಿ ಯಾರೋ ಮೇಲೆ ನನ್ನ ಮಗ ಕೂಗಾಡುತ್ತಿದ್ದ. ಆ ಕೂಗಾಟ ಕೇಳಿ, ಏನಾಯ್ತು ಎಂದು ವಿಚಾರಿಸಲು ತಿಂಡಿ ತಿಂದವನೊಬ್ಬ, ಸರ್, ನನ್ಹತ್ರ ಇರೋದೇ ಇಪ್ಪತ್ತು ರೂಪಾಯಿ. ದಯವಿಟ್ಟು ಎರಡು ಅನ್ನ ಸಾಂಬರ್ ಕೊಡಿ. ನನ್ನಾಕೆ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಕೇಳಿಕೊಂಡನಂತೆ. ಅದಕ್ಕೆ ನನ್ನ ಮಗ, ಸುತರಾಂ ಒಪ್ಪದೇ, ನಿಕೃಷ್ಠವಾಗಿ ನಿಂದಿಸುತ್ತಿದ್ದ. ಆಗ ನಾನು, ಮಗನನ್ನು ಸಮಾಧಾನಿಸಿ, ಪರವಾಗಿಲ್ಲ ಆ ಇಪ್ಪತ್ತು ರೂಪಾಯಿ ನೀವೇ ಇಟ್ಟುಕೊಳ್ಳಿ, ಎರಡು ಅನ್ನಸಾಂಬಾರ್ ಪಾರ್ಸಲ್ ತೆಗೆದುಕೊಂಡು ಹೋಗಿ ಎಂದು ಹೇಳಿ. ಪಾರ್ಸಲ್ ಮಾಡಲು ಒಳಗಿನ ಮಾಣಿಗೆ ನಾನೇ ಆರ್ಡರ್ ಕೊಟ್ಟೆ.
“ಕಳಕೊಳ್ಳೋದ್ ಏನಿದೆ ಸಾರ್. ಕಳಕೊಳ್ಳೋಕೆ, ನಾ ತಂದಿದ್ದಾರೂ ಏನು? ಬರಿ ಕೈಯಲ್ಲೇ ಬಂದೆ, ಬರೀ ಕೈಯಲ್ಲೇ ಹೋಗ್ತೀನಿ. ಕೈಲಾದ್ರೆ ಸಹಾಯ ಮಾಡೋಣ. ಇಲ್ಲಾಂದ್ರೆ ಸುಮ್ನಿರೋಣ.” ಅಂತಾ ಹೇಳಿದ ಮಾತುಗಳು ಮಾತ್ರ ಪದೇಪದೇ ಕಿವಿಯೊಳಗೆ ಗುನುಗುತ್ತಿತ್ತು ಜೊತೆಗೆ ಆತ ತಿನ್ನುತ್ತಿದ್ದ ಆ ಮಸಾಲೆ ದೋಸೆ ಮಾತ್ರ ಕಣ್ಣಿಗೆ ಕಾಣಿಸುತ್ತಿತ್ತು.



