ಇವತ್ತ್ಯಾಕೋ ನೀನು ತುಂಬಾ ನೆನಪಾಗ್ತಾ ಇದೀಯಾ. ಈ ಮನಸಿಗೆ ಒಂಚೂರು ನೆಮ್ಮದಿ ತಂದೋನು ನೀನೆ. ನನ್ನ ಕೊನೆಯ ಉಸಿರೋರುವರೆಗೂ ನಿನ್ನ ಮರೆಯಲ್ಲ ಕಣೋ. ನಾನೂ ಯಾವತ್ತೂ ನಿನಗೆ ಋಣಿಯಾಗಿರ್ತೀನಿ.
ಅರೆರೇ ಏನಾಯ್ತು ನನಗೆ. ಬರೀ ಬಡಬಡಸ್ತಾ ಇದೀನಿ. ಅವನ ನೆನಪಾದಾಗಲೆಲ್ಲಾ ನಂದು ಇದೇ ಕಥೆ. ನಾನು ರಾಜಿ, ಅಂದ್ರೇ ರಾಜೇಶ್ವರಿ. ಎಸ್.ಎಸ್.ಎಲ್.ಸಿ. ಮುಗ್ಸಿ ಕಾಲೇಜು ಮೆಟ್ಲು ಹತ್ತೋದ್ರೊಳಗೆ ನಮ್ಮಪ್ಪ ಅಮ್ಮ ನಂಗೊಂದು ಮದ್ವೆ ಅಂತಾ ಮಾಡ್ಬಿಟ್ರು. ಹುಡುಗಾಟದ ವಯಸ್ಸು, ಆದರೂ ಸಂಸಾರದ ಭಾರ ಹೊರಬೇಕಾದ ಪರಿಸ್ಥಿತಿ. ಹುಡುಗಾಟದ ಮನಸು ಮಾಡುತ್ತಿದ್ದ ಚಿಕ್ಕಪುಟ್ಟ ಹಠಗಳಿಗೂ ಪ್ರೀತಿಯಿಂದಲೇ ಸ್ಪಂದಿಸುತ್ತಿದ್ದ ನನ್ನ ಇನಿಯ. ಅವನೋ ರಸಿಕತೆಯಲಿ ಮದನ. ನನ್ನ ಬೆನ್ನಿಂದೆ ಬಂದು, ಕೊರಳ ಬಳಸಿ, ಹೂ ಮುತ್ತಿಟ್ಟು ಸೆಳೆಯುತ್ತಿದ್ದ ನನ್ನ ಗಮನ. ಸಂಸಾರ ಭಾರ ಹಿತವಾಗಿಯೇ ಇತ್ತು. ಅಪ್ಪ ಅಮ್ಮನ ನೆನಪೇ ಬಾರದಂತೆ ಅವನು ನೋಡಿಕೊಳ್ಳುತ್ತಿದ್ದ. ಅವನ ರಸಿಕತೆಯ ಸಿರಿಯಲ್ಲಿ ನನ್ನನ್ನು ನಾನು ಕಳೆದುಕೊಂಡಿದ್ದೆ. ಇದಲ್ಲವೇ ಸುಖಮಯ ಜೀವನ. ಇಷ್ಟೊಂದು ಚೆಂದ ಜೀವನವಿದೆ ಎಂದರೆ ಇನ್ನೂ ಬೇಗನೆ ಮದುವೆಯಾಗಬಹುದಾಗಿತ್ತು ಎಂಬ ಆಸೆ ಹೇಳದೆ ಕೇಳದೆ ಹುಟ್ಟಿಕೊಂಡಿತ್ತು. ಯಾರಾದರೂ ಸರಿ ಹೊಟ್ಟೆ ಕಿಚ್ಚು ಪಟ್ಟುಕೊಳ್ಳುವಂಥಾ ಸಂಸಾರ ನಂದು.
ಅದ್ಕೆ ಯಾರೋ ಯಾಕೆ, ಆ ದೇವರೇ ಹೊಟ್ಟೆ ಕಿಚ್ಚು ಪಟ್ಟ ಅಂತಾ ಅನ್ಸುತ್ತೆ. ಒಂದು ದಿನ ಆಸ್ಪತ್ರೆಗೆ ಹೋಗಿ ಬಂದ ನನ್ನ ಗಂಡ ಯಾಕೋ ಆಕಾಶ ಕಳಚಿ ಬಿದ್ದವರಂತೆ ಕೂತು ಬಿಟ್ಟಿದ್ದರು. ಏನಾಯ್ತು ಅಂತಾ ಒಂದು ನೂರು ಸಾರಿ ಕೇಳಿದ ಮೇಲೆ ಹೇಳಿದ್ದು... ಅವರು ಏಡ್ಸ್ ರೋಗಿಯಾಗಿದ್ದರೆಂದು. ಅದನ್ನು ಕೇಳಿದ ನಂತರದಲ್ಲಿ ನನಗಾದದ್ದು ಭಾರಿ ಆಘಾತ. ದುಃಖ ಭೋರ್ಗರೆದು ಕಾಣುತ್ತಿದ್ದ ಹೊಸ ಹೊಸ ಕನಸೆಲ್ಲವೂ ಛಿದ್ರವಾದಂತೆ, ಎದೆಯೊಡೆದು ನಾನೇ ಕಲ್ಲಾದಂತೆ, ತಲೆ ಅಗ್ನಿಪರ್ವತವಾಗಿ ಮೆದುಳು ಛಿದ್ರಗೊಂಡು ಲಾವಾರಸದಂತೆ ಹೊರ ಉಕ್ಕಿ ಬಂದಂತೆ, ಏನೇನೋ ಭಯಂಕರ ವೇದನೆ ಶುರುವಾಯ್ತು. ಅವನು ಅಳುತ್ತಿದ್ದಾನೆ. ನಾನು ಅಳುತ್ತಿದ್ದೇನೆ. ತನ್ನದೇನು ತಪ್ಪಿಲ್ಲ, ಇದು ಹೇಗೆ ಬಂತೋ ಗೊತ್ತಿಲ್ಲ ಎಂದು ಉತ್ತರ ಚೆಲ್ಲಿ, ನಿಸ್ಸಹಾಯಕನಾಗಿ ಅಳುತ್ತಾ ಕುಳಿತಿದ್ದಾನೆ. ಅವನು ತೋರಿಸುತ್ತಿದ್ದ ಪ್ರೀತಿಯಲ್ಲಿ ಯಾವುದೇ ಕಪಟವಿರಲಿಲ್ಲ. ಅವನು ನನ್ನನು ಬಿಟ್ಟು ದೂರದ ಕಾಣದ ಲೋಕಕೆ ಹೋಗುವುದಂತೂ ಖಚಿತವಾಯ್ತು. ಅಲ್ಲಿಂದ ನಾನು ಹುಚ್ಚಿಯಾದೆ. ಏನು ಮಾಡುತ್ತಿದ್ದೇನೆ, ಹೇಗಿದ್ದೇನೆ ಎಂಬ ಅರಿವು ಕೂಡ ಇಲ್ಲ. ಆದರೂ ಒಮ್ಮೊಮ್ಮೆ ಯಾರೋ ಕರೆದಂತೆ, ಮಾತಾಡಿಸಿದಂತೆ ಭಾಸವಾಗುತ್ತಿತ್ತು. ದೇಹದಲ್ಲಿದ್ದ ಮನಸು ಮರೆಯಾಗಿ, ಯಾಂತ್ರಿಕವಾಗಿ ಎಲ್ಲದಕೂ ಒಗ್ಗಿಕೊಂಡೆ. ನಲ್ಲನಿರುವಷ್ಟು ದಿನ ಅವನನ್ನು ಖುಷಿಯಾಗಿ ಇಡಬೇಕು ಎಂದು ತೀರ್ಮಾನಿಸಿ ಅವನ ದಾಸಿಯಾಗಿಬಿಟ್ಟೆ. ಅವನೊಳಗಿದ್ದ ಕಾಮಕ್ಕೆ ದಿನ ನೀರೆರೆದು ಪೋಷಿಸಿಸುತ್ತಿದ್ದೆ. ಒಂದರ್ಥದಲ್ಲಿ ಅವನ ಕಾಮದ ಬೊಂಬೆಯಾದೆ. ನನಗೆ ಬೇರೆ ಏನು ತೋಚಲಿಲ್ಲ. ಗಂಡನ ಖುಷಿಯೇ ನನ್ನ ಕರ್ತವ್ಯ ಅಂತ ಈ ಸಮಾಜ ಕೂಡ ಹೇಳುತ್ತೆ ಅಂತ ಗೊತ್ತಿತ್ತು. ಅವನ ಕೊನೆಯ ಕ್ಷಣದವರೆಗೂ ಅವನನ್ನು ಖುಷಿಯಾಗಿ ನೋಡಿಕೊಂಡೆ ಎಂಬ ಸಂತೃಪ್ತಿ ಇದೆ. ಆದರೆ ಅವನ ಪ್ರೀತಿಯನ್ನು ಮಾತ್ರ ಕೊನೆಯವರೆಗೂ ಉಳಿಸಿಕೊಳ್ಳಲಾಗದ ನತದೃಷ್ಟೆ ನಾನು.
ಒಳಗೊಳಗೆ ಮೊಳೆತು ನಗುತ್ತಿದ್ದ ಚಿಕ್ಕದೊಂದು ಆಸೆ ಎಂದರೆ, ನನಗೊಂದು ಮಗು ಆಗಿಬಿಟ್ಟರೆ ಸಾಕು ಎಂಬುದು. ಅವನಿಗೂ ಅದೇ ಆಸೆ ಇತ್ತು. ಅದಕ್ಕಾಗಿ ಟೆಸ್ಟ್ ಟ್ಯೂಬ್ ಬೇಬಿ ಪ್ಲಾನ್ ಕೂಡ ಮಾಡಿ ನಮ್ಮೂರಿಂದ ಬೆಂಗಳೂರಿಗೆ ಬಂದು ಹತ್ತಾರು ಆಸ್ಪತ್ರೆಗೆ ಬಂದ್ವಿ. ಅಲ್ಲಿಯವರೆಗೂ ಸೆಕ್ಸ್ ಜೀವನದಲ್ಲಿ ನನಗಿದ್ದ ಹಿಂಜರಿಕೆ, ನಾಚಿಕೆ, ಭಯ, ಸಂಕೋಚ ಎಲ್ಲವೂ ಮಾಯವಾಗಿ, ನನ್ನ ಗಂಡನಿಗಾಗಿ ಏನು ಬೇಕಾದರೂ ಮಾಡುವ ಮೊಂಡು ಧೈರ್ಯ ಬಂದಿತ್ತು. ತುಂಬಾ ದಿನಗಳ ನಂತರದಲ್ಲಿ ಪ್ರೇಗ್ನೆಂಟ್ ಆದೆ. ಅಪ್ಪ ಅಮ್ಮನಿಗೂ ನನ್ನ ಕಷ್ಟ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಮನಸು ವಿಲವಿಲ ಅಂತಿತ್ತು. ಕಷ್ಟ ಹೇಳಿಕೊಂಡರೇನು ಪ್ರಯೋಜನ. ಎಲ್ಲರು ತಲೆಗೊಂದು ಸಲಹೆ ಕೊಡುವವರೇ ಹೊರತು, ನನ್ನ ನೋವು ಕಡಿಮೆ ಮಾಡುವವರಿಲ್ಲ ಎಂಬುದು ಗೊತ್ತಿತ್ತು. ನನ್ನ ಗಂಡನ ಕಾಯಿಲೆ ಬಗ್ಗೆ ಅಂತೂ ಮನೆಗೂ ಗೊತ್ತಾಯ್ತು. ಅವರೂ ನೊಂದುಕೊಂಡರು. ಸಮಾಧಾನಿಸಿದರು. ನನಗಂತೂ ಏನು ಉಪಯೋಗವಾಲಿಲ್ಲ. ಒಂದು ಸಂಜೆ ಕಾಯಿಲೆಯಿಂದ ನರಳಿ ನರಳಿ ಜರ್ಜರಿತನಾದ ನನ್ನ ಗಂಡ ಇಹಲೋಕ ತ್ಯಜಿಸಿಬಿಟ್ಟ. ನನ್ನನು ಕೊನೆಗೂ ಒಂಟಿಯಾಗಿ ಬಿಟ್ಟು ಹೋದ. ದುಃಖದಲಿ ಮೂರ್ಛೆ ಹೋದೆ. ಒಟ್ಟಾರೆ ನಾನು ನಾನಾಗಿರಲಿಲ್ಲ. ಊಟ, ತಿಂಡಿ, ಏನೂ ಬೇಕಿರದ ಸ್ಥಿತಿ ನನ್ನದು. ಎದೆಯೊಳಗಿನ ನೋವು ಪ್ರತಿ ಸೆಕೆಂಡಿಗೂ ಚುಚ್ಚಿ ಚುಚ್ಚಿ ನೋವು ಕೊಡುತಿತ್ತು. ನನ್ನ ನೋವು ಯಾರಿಗೂ ಬರದೇ ಇರಲಿ. ಆ ಸ್ಥಿತಿಯಲ್ಲಿದ್ದ ಕಾರಣ, ಹೊಟ್ಟೆಯೊಳಗಿನ ಮಗು ಕೂಡ ಸತ್ತು ಹೋಯ್ತು. ಈಗಂತೂ ನಾನು ಸಂಪೂರ್ಣ ಒಂಟಿಯಾಗಿಬಿಟ್ಟೆ. ಹುಚ್ಚಿಯಾಗಿಬಿಟ್ಟೆ. ಅರೆಹುಚ್ಚಿಯಾಗಿಬಿಟ್ಟೆ.
ಗಂಡನನ್ನು, ಮಗುವನ್ನು ಕಳೆದುಕೊಂಡು, ತವರಿಗೆ ಬಂದು ಕೂತೆ. ನಾನು ಏನು ಮಾಡುತ್ತಿದ್ದೇನೆ. ನಾನು ಹೇಗಿದ್ದೇನೆ. ನನ್ನ ಕರ್ತವ್ಯ ಏನು. ಈ ಸಮಾಜ ನನ್ನ ಬಗ್ಗೆ ಏನನ್ನುತಿದ್ದೆ. ಇದ್ಯಾವುದರ ಪರಿವೆ ಇರದಾದೆ. ನನಗೆ ಯಾರೊಂದಿಗೂ ಮಾತನಾಡುವ ಇಷ್ಟ ಇಲ್ಲ. ಯಾರ ಮೇಲೆಯೂ ನಂಬಿಕೆಯೂ ಇಲ್ಲ. ಹತಾಶ ಜೀವನ ನನ್ನದು. ಈ ಜೀವನ ಬೇಡವೆಂದು ಸಾಕಷ್ಟು ಬಾರಿ ಪ್ರಾಣ ಕಳೆದುಕೊಳ್ಳಲು ತೀರ್ಮಾನಿಸಿದ್ದೆ. ನನ್ನ ನೋವು ನೋಡಿ, ಅವಳಿಗೆ ಇಷ್ಟ ಬಂದಂತೆ ಇದ್ದು ಬಿಡಲಿ ಎಂದು ಅಪ್ಪ ಅಮ್ಮನು ನನ್ನ ಬಿಟ್ಟರು. ಒಂಟಿಯಾದೆ. ನಾನು ನಿಜವಾಗಿಯೂ ಒಂಟಿಯಾದೆ. ಅತ್ತರು, ಸತ್ತರು, ಸಾವೇ ಇರದ ಈ ವೇದನೆಯ ಜೊತೆ ಜಂಟಿಯಾಗಿ ನಾ ಒಂಟಿಯಾದೆ.
ಇಂತಾ ಸಮಯದಲ್ಲಿ ಜೊತೆಯಾದದ್ದು ಫೋನು. ಯಾರು ಯಾರಿಗೋ ಫೋನು ಮಾಡುವುದು. ಏನೋ ಮಾತಾಡುವುದು, ಇನ್ನೇನೋ ಬಯ್ಯುವುದು. ಅದೆಷ್ಟೋ ಬಾರಿ ಅಶ್ಲೀಲ ಪದಗಳಿಂದ ಬೇರೆಯವರಿಂದ ಬೈಸಿಕೊಂಡಿದ್ದು ಉಂಟು. ಈ ಫೋನು ಎಷ್ಟು ಉಪಯೋಗವು ಅಷ್ಟೇ ಕೆಟ್ಟದ್ದು. ನನ್ನನ್ನು ಯಾರೋ ಬೆಲೆವೆಣ್ಣು ಎಂದು ಅಪಾರ್ಥ ಮಾಡಿಕೊಂಡವರಿದ್ದಾರೆ. ಇನ್ಯಾರೋ ಹುಚ್ಚಿ ಎಂದುಕೊಂಡಿದ್ದಾರೆ. ಅಲ್ಲೂ ಅಷ್ಟೇ ತಪ್ಪಾಗಿ ಅರ್ಥ ಮಾಡಿಕೊಳ್ಳುವರೇ ಹೆಚ್ಚು. ಪ್ರಪಂಚಾನೇ ಹೀಗಿದೆ. ನನ್ನ ಅರ್ಥ ಮಾಡಿಕೊಳ್ಳುವ ಆ ಒಬ್ಬನಿಗಾಗಿ ಕಾಯುವುದೇಕೆ ಎಂಬ ನಿರ್ಧಾರ ತೆಗೆದುಕೊಂಡೆ. ಅನೇಕ ಹೆಣ್ಣು ಜೀವಗಳು ಈ ಮೊಬೈಲಿಗೆ ಅಂಟಿಕೊಂಡಿದೆ. ಅವರ ಒಂಟಿತನಕ್ಕಾಗಿ, ಅವರ ಹೇಳಿಕೊಳ್ಳದ ಯಾತನೆಗಾಗಿ, ಅವರ ನೋವು ಮರೆಯುವುದಕ್ಕಾಗಿ, ತನ್ನನು ಅರ್ಥ ಮಾಡಿಕೊಳ್ಳುವ ಜೀವಕ್ಕಾಗಿ ಈ ಮೊಬೈಲಿಗೆ ಅಂಟಿಕೊಂಡಿವೆ. ಆದರೆ ಭಾಗಶಃ ಇಂತಾ ಜೀವಗಳು ಕಂಡು ಕಂಡೂ ಹಾಳು ಬಾವಿಗೆ ಬಿದ್ದಂತೆ, ಯಾವುದೋ ಹೊಲಸಿನಲ್ಲಿ ಕಾಣದೆ ಬಿದ್ದು, ತಮ್ಮ ಜೀವನ ಮುಕ್ತಾಯಗೊಳಿಸುತ್ತವೆ. ಯಾರೋ ಗೊತ್ತೇ ಇರದವರ ಜೊತೆ, ಖುಷಿಯಾಗಿ ನಮ್ಮ ಮನಸಿನ ದುಗುಡ ಹಂಚಿಕೊಳ್ಳುವ ನಾವು, ನಮ್ಮ ಮನೆಯವರನ್ನ ಹಾಗೂ ಸ್ನೇಹಿತರನ್ನು ಕಡೆಗಣಿಸುತ್ತೇವೆ. ಇದು ತಪ್ಪು ಎಂದು ಗೊತ್ತಿದ್ದರೂ.
ಸುಡುಗಾಡು ಫೋನಿನಲ್ಲಿ ಹೀಗೆ ಕಾಲ ಕಳೆವಾಗ, ಸಿಕ್ಕಿದ್ದು ಅಮೂಲ್ಯ ರತ್ನ. ಮೊದಲ ಬಾರಿ ಅವನ ದನಿ ಕೇಳಿದಾಗಲೇ ಏನೋ ಒಂಥರ ಸಮಾಧಾನ ಆವರಿಸಿತ್ತು. ಆವತ್ತು ಏನೋ ಒಂತರ ನೆಮ್ಮದಿ ಸಿಕ್ಕಂತಾ ಅನುಭವ. ದಿನಾ ಗೊಂದಲದಲ್ಲಿ ಮುಳುಗಿ, ಏನನ್ನು ಸರಿಯಾಗಿ ಮಾಡದ ನಾನು, ಆ ದಿನ ಮನೆಯ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಒಂದು ತಾಸು ನಿದ್ದೆಗೂ ಜಾರಿ, ಮೈಮನ ನೆಮ್ಮದಿಯಿಂದ ನಿಟ್ಟುಸಿರುಬಿಟ್ಟಂತೆ ನಿರಾಳಳಾದೆ. ಅವನಿಗೆ ಮತ್ತೊಮ್ಮೆ ಕರೆ ಮಾಡುವ ಆಸೆ ಒಂದು ಕಡೆಯಾದರೆ, ಅವನು ನನ್ನ ಏನಂದುಕೊಂಡಾನೋ ಎಂಬ ಭಯ ಇನ್ನೊಂದು ಕಡೆ. ಒಂದು ಅಸಹಾಯಕ ಒಂಟಿ ಹೆಣ್ಣಿಗೆ ಸಮಾಜದಲ್ಲಿ ಯಾವ ರೀತಿಯಲ್ಲಿ ಮರ್ಯಾದೆ ನೀಡುತ್ತಾರೆ ಎಂಬ ಕೆಟ್ಟ ಅನುಭವ ನನಗಂತೂ ತುಂಬಾ ಇದೆ. ಆದರೂ ಆದದ್ದಾಗಲಿ ಎಂದು ಮನಸು ಕಲ್ಲು ಮಾಡಿಕೊಂಡು, ಅವನಿಗೆ ಫೋನು ಮಾಡಿ, ಮನಸಿನ ಎಲ್ಲಾ ನೋವು ಹೇಳಿಕೊಂಡು ಅತ್ತು, ನಿಮ್ಮಿಂದ ನನಗೆ ಏನೂ ಬೇಕಿಲ್ಲ, ನೋವಿಂದ ಬೆಂದ ನನ್ನ ಮನಸಿಗೆ ಒಂದಷ್ಟು ನೆಮ್ಮದಿ ನೀಡುವ ಮಾತುಗಳನ್ನಾಡಿ ಎಂದು ಕೇಳಿಕೊಂಡೆ. ಆತ ಒಪ್ಪಿಕೊಂಡ.
ಅಂದಿನಿಂದ ಅವನೊಟ್ಟಿಗೆ ಮಾತನಾಡಿದೆ. ಯಾವತ್ತಿಗೂ ಬೇಜಾರಾಗದೆ ನನ್ನ ಎಲ್ಲ ಮಾತು ಕೇಳುತ್ತಿದ್ದ. ಅವನು ಒಳ್ಳೆಯವನು ಎಂದು ಗೊತ್ತಿದರು, ಇನ್ನು ಅವನ ಒಳ್ಳೆಯತನ ಪರೀಕ್ಷಿಸಿದೆ. ಬೇಕೆಂದೇ ಸರಸ ಸಲ್ಲಾಪದ ಮಾತನಾಡಿ ಕೆಣಕುತಿದ್ದೆ. ಆದರೆ ಯಾವುದಕ್ಕೂ ಜಗ್ಗದ ಆಸಾಮಿ ಅವನಾಗಿದ್ದ. ಅವನ ಜವಾಬ್ದಾರಿಯುತ ಮನುಷ್ಯ ಅಂತ ಗೊತ್ತಾಯ್ತು. ಅವನಿಗೂ ನನ್ನಷ್ಟೇ ವಯಸ್ಸು ಎಂದು ಕೇಳಿ, ಅವನನ್ನು ನೋಡಬೇಕು, ಅವನ ಸಾಂಗತ್ಯ ಬೇಕು ಎಂದು ಎನಿಸಿ, ಅವನ ನೇರವಾಗಿ ನೋಡುವ, ಮಾತನಾಡುವ, ಬಯಕೆ ಮಂಡಿಸಿದೆ. ಅದಕ್ಕೆ ಅವನು ಒಪ್ಪಲಿಲ್ಲ. ಅವನ ಒಳ್ಳೆಯತನಕ್ಕೆ ಸೋತು, ದಿನ ದಿನಕ್ಕೂ ನನ್ನ ಮನಸು ಅವನಿಗೆ ಇನಿಯನ ಸ್ಥಾನ ತುಂಬಿ ಮರೆಯಾದ ಇನಿಯನ ಮರೆಸಿತ್ತು. ವಯೋಸಹಜವಾಗಿ ಹೀಗೆಲ್ಲ ಆಗಿರಬಹುದು ಎಂದುಕೊಂಡೆ. ಅವನು ಯಾವತ್ತಿಗೂ ನನ್ನನು ಕೆಟ್ಟ ದೃಷ್ಟಿಯಿಂದ ಕಾಣಲಿಲ್ಲ. ನನ್ನನು ಅಗೌರವದಿಂದ ಕಾಣಲಿಲ್ಲ. ನನ್ನನು ಅವಮಾನಿಸಲಿಲ್ಲ. ಒಂದು ಹೆಣ್ಣಿಗೆ ಇಂತವನೇ ತಾನೇ ಬೇಕಿರುವುದು. ಗಂಡನನ್ನು ಕಳೆದುಕೊಂಡು, ಮಗುವನ್ನು, ಕಳೆದುಕೊಂಡು ನೋವಿನಲ್ಲಿ ಬೆಂದು ಬಡವಾಗಿದ್ದ ನನಗೆ, ಅವನು ಪಿತೃ ಸ್ಥಾನ, ಮಾತೃ ಸ್ಥಾನದಲ್ಲಿ ನಿಂತು, ನನ್ನ ಮನಸಿಗೆ ನೆಮ್ಮದಿ ಕೊಟ್ಟ. ನನ್ನ ಬದುಕು ಸುಂದರವಾಗಿ ಇರಲೆಂದು, ಸದಾ ಆಶಿಸುತ್ತಿದ್ದ. ಅವನ ಆಶೀರ್ವಾದ ಫಲ ನೀಡಿತು. ನಾನು ಬದುಕಬೇಕು ಎಂಬ ಆಸೆ ಮೂಡುವಂತೆ ಮಾಡಿದ. ಈ ಪ್ರಪಂಚದಲ್ಲಿ ನನಗಿಂತಲೂ ನೋವು ಅನುಭವಿಸುವವರಿದ್ದಾರೆ, ಅವರೆಲ್ಲರಿಗಿಂತಲೂ ನಾನೇ ಅದೃಷ್ಟಶಾಲಿ ಎಂದು ಹೇಳುತಿದ್ದ. ಅವನು ಹೇಳಿದ್ದೆಲವೂ ನಿಜ. ನಮಗಿಂತಲೂ ನೋವು ಅನುಭವಿಸುವವ ಪ್ರಪಂಚದಲ್ಲಿ ಇದ್ದಾರೆ, ಅವರೇ ಜೀವನ ನಡೆಸುವಾಗ ನಮ್ಮೆದಂತಾ ಪಿರಿಪಿರಿ.
ಮತ್ತೆ ಮೊದಲಿನಂತಾದ ನಾನು, ಅಪ್ಪ ಅಮ್ಮನ ಜೊತೆ ಸೇರಿ ಖುಷಿಯಾಗಿದ್ದೆ. ನನ್ನ ತಪ್ಪು ಹೆಜ್ಜೆಗಳನ್ನು ಸರಿಪಡಿಸಿ, ಬದುಕುವ ಆಸೆ ಹೆಚ್ಚಿಸಿ, ಸ್ವಾಭಿಮಾನದ ಬದುಕು ಬದುಕುವಂತೆ ಮಾಡಿದ. ಮಗಳ ಬಾಳು ಹೀಗಾಯ್ತಲ್ಲ ಎಂದು ಸದಾ ಕೊರಗುವ, ವಯಸ್ಸಾದ ನನ್ನ ಅಪ್ಪ ಅಮ್ಮನಿಗೋಸ್ಕರ ಮತ್ತೊಂದು ಮದುವೆಯಾದೆ. ಈಗ ಮುತ್ತಿನಂಥಾ ಎರಡು ಮಕ್ಕಳೂ ಇವೆ. ಈ ಗಂಡನಿಂದ ಆಗಾಗ್ಗೆ ಮನಸಿಗೆ ನೋವಾದರೂ ನನ್ನ ಫೋನಿಂದ ಪರಿಚಿತನಾದ ಆ ಆತ್ಮೀಯ ಹೇಳಿದಂತೆ ಬದುಕಿನ ಪ್ರತಿ ನೋವನ್ನು ಖುಷಿಯಿಂದ ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇನೆ.
ಆಗ ಕೆಲವು ತಿಂಗಳುಗಳಷ್ಟೇ ನನ್ನ ಬಳಿ ಅವನು ಮಾತನಾಡಿದ. ನನ್ನ ಮನಸು ತಿಳಿಗೊಳಿಸಿ, ಬಾಳು ಹಸನಾಗುವಂತೆ ನನ್ನ ತಿದ್ದಿ ತೀಡಿದ. ನಂತರದ ಅವನ ಪೋನು ಸ್ವಿಚ್ ಆಫ್. ಅವನನ್ನು ಒಮ್ಮೆಯೂ ನೋಡಲಿಲ್ಲ. ಅವನು ಹೇಗಿದ್ದಾನೋ ಗೊತ್ತಿಲ್ಲ, ಅವನ ನೋವು - ನಲಿವು ಯಾವುದೂ ಗೊತ್ತಿಲ್ಲ. ಗುರುತು ಪರಿಚಯವಿರದ ನನ್ನಂಥ ನತದೃಷ್ಟೆಗೆ, ಜೀವನದ ಪಾಠ ಮಾಡಿ, ನಾಲ್ಕು ಜನರೊಂದಿಗೆ ಬೆರೆತು ಸಮಾಜದಲ್ಲಿ ಗೌರವಯುತವಾಗಿ ಬಾಳು ನಡೆಸುವಂತೆ ಪ್ರೇರೇಪಿಸಿದ ಅವನು ನನ್ನ ಇನಿಯನೂ ಅಲ್ಲ, ಗೆಳೆಯನೂ ಅಲ್ಲ.
ಇನಿಯನೂ ಅಲ್ಲದ, ಗೆಳೆಯನೂ ಅಲ್ಲದ ಆ ಮಹಾನುಭಾವ ಎಲ್ಲಿದ್ದರೂ ಚೆನ್ನಾಗಿರಲಿ ಎಂಬ ಹಾರೈಕೆ ನನ್ನದು.



