ರಾತ್ರಿ ಮೂರನೇ ಜಾವ, ಎಂಥದೋ ಕೆಟ್ಟ ಕನಸು. ಬೆಚ್ಚಿಬಿದ್ದು ತಟಕ್ಕನೆ ಎದ್ದು ಕುಂತೆ. ಮೈಯೆಲ್ಲಾ ಒಂದು ಥರ ತಣ್ಣಗೆ ಆದಂಗಿತ್ತು. ಒಂಥರ ಸಣ್ಣ ಭಯ ಆವರಿಸಿ, ನಾಲಿಗೆ ಒಣಗಿತ್ತು. ಹತ್ತಿರದಲ್ಲೇ ಇದ್ದ, ನೀರಿನ ಲೋಟ ತೆಗೆದುಕೊಂಡು, ಗಂಟಲು ತಂಪಾಗುವವರೆಗೂ ಕುಡಿದೆ. ಬೇಸಿಗೆ ಕಾಲ ಅಲ್ವಾ, ಸೆಕೆ ಜಾಸ್ತಿ ಆಗಿ, ಮೈಯೆಲ್ಲಾ ಬೆವರಿನಿಂದ ನೆನೆದಂತಾಗಿತ್ತು. ಹಾಗೇ ಸ್ವಲ್ಪ ಬಗ್ಗಿ ನೋಡಿ, ಹಾಲ್ ಕಡೆ ನೋಡಿದೆ. ನನ್ನ ಯಜಮಾನ ಜೋರು ಗೊರಕೆ ಹೊಡೆಯುತ್ತಿದ್ದ. ಅವರ ಗೊರಕೆಯ ರೀತಿ ಕಂಡು, ಸ್ವಲ್ಪ ನಗು ಬಂತು. ಟೈಮ್ ನೋಡಿದೆ. ಆಗಲೇ 4:00 ಗಂಟೆಯಾಗಿತ್ತು. ಇನ್ನೂ ಸ್ವಲ್ಪ ಹೊತ್ತಿನ ನಂತರ ಎದ್ದರಾಯ್ತು ಅಂತಾ ಹಾಗೇ ಮಲಗಿಕೊಂಡೆ. ಆದರೆ ನಿದ್ದೆ ಬರಲಿಲ್ಲ. ಏನೇನೋ ಯೋಚನೆಗಳು. 60 ದಾಟಿದರೆ ಅರಳು ಮರಳು ಅಲ್ವಾ. ಹಾಗೇ ಏನೇನೋ ಯೋಚನೆ. ಒಂದಕ್ಕೊಂದು ಸಂಬಂಧವೇ ಇಲ್ಲ. ನಿದ್ದೆ ಬರದೇ ಹಾಗೇ ಮಗ್ಗಲು ಬದಲಿಸಿ ಹಾಸಿಗೆಯಲ್ಲಿ ಒದ್ದಾಡುತ್ತಿದ್ದೆ. ಮತ್ತೆ ಟೈಮ್ ನೋಡಿದಾಗ 5:00 ಗಂಟೆಯಾಗಿತ್ತು. ಸರಿ ಇನ್ನೇನು ಅಂತಾ, ಎದ್ದು ಮನೆದೇವರಿಗೆ ನಮಸ್ಕಾರ ಮಾಡಿ, ಬಾತ್ ರೂಮಿನ ಕಡೆ ಹೊರಟೆ. ನಿತ್ಯ ಕರ್ಮ ಪೂರೈಸಿಕೊಂಡು ಹೊರಗೆ ಬಂದೆ. ಅಷ್ಟರಲ್ಲಿ ನನ್ನ ಪ್ರೀತಿಯ ಮೊಮ್ಮಗ ಬಂದ. ಅವನು ನಿತ್ಯದಂತೆ ಬಂದು, ಅವನ ಸ್ಕೂಟರ್ ತೆಗೆದುಕೊಂಡು ಜಿಮ್ ಗೆ ಹೊರಟ. 27ರ ಹರೆಯದ ಹುಡುಗ, ಕಟುಮಸ್ತಾಗಿ ಇದ್ದಾನೆ. ನನಗಂತೂ ತುಂಬಾ ಮುದ್ದು. ಅಷ್ಟರಲ್ಲಿ ನನ್ನ ಸೊಸೆ, ನಿತ್ಯದಂತೆ ಮನೆ ಕಸ ಗುಡಿಸಿ, ರಂಗೋಲಿ ಹಾಕ್ತಾ ಇದ್ದಳು. ಮಗ ಕೂಡ ಅದೆಲ್ಲಿಗೋ ಹೋದ. ನಾನು ಹಾಗೇ ವಾಕ್ ಹೊರಟೆ. ಮನೆ ಹತ್ತಿರ ಪಾರ್ಕ್ ಗೆ ಹೋಗಿ, ತುಂಬಾ ದಿನಗಳಾಗಿತ್ತು. ಅಲ್ಲಿಗೆ ಹೊರಟೆ.

ಪಾರ್ಕಿಗೆ ಬಂದ ಕೂಡಲೇ, ಅಲ್ಲೇ ಕಂಡ ಸುಮಿತ್ರಮ್ಮ, “ಏನ್ರೀ, ಶಾರದಮ್ಮೋರೆ, ತುಂಬಾ ದಿನ ಆಯ್ತು, ಈ ಕಡೆ ಬಂದು.?” ಅಂತಾ ಕೇಳಿದ್ರು. “ಹೂಂ… ಸ್ವಲ್ಪ ಕಾಲು ನೋವು ಜಾಸ್ತಿ ಆಗಿತ್ತು ಕಣ್ರೀ. ಅದಕ್ಕೆ ಬರಲಿಲ್ಲ ಅಷ್ಟೆ” ಅಂತ ಉತ್ತರ ಕೊಟ್ಟೆ. “ಮತ್ತೇ ಈಗ ಹೇಗಿದಿರೀ? ಅಂತಾ ಕೇಳಿದ್ರು, “ಹಾಗೇ ಇದೆ. ಸ್ವಲ್ಪ ಪರವಾಗಿಲ್ಲ. ವಯಸ್ಸಾದ್ ಮೇಲೆ ಅಷ್ಟೇ ಅಲ್ವಾ. ಶುಗರ್ ಬೇರೆ ಕಾಟ ಕೊಡುತ್ತೇ ಆಗಾಗ” ಅಂತಾ ಹೇಳಿದೆ. ಹಾಗೇ ಮಾತನಾಡುತ್ತಲೇ ಒಂದೈದು ರೌಂಡು ಹಾಕಿದೆ. ಅಲ್ಲಿಗೆ ಸ್ವಲ್ಪ ಸುಸ್ತು ಆದಂಗಾಯ್ತು. ಸುಮಿತ್ರಮ್ಮಾನೇ ಸ್ವಲ್ಪ ನೀರು ಕೊಟ್ರು, ಕುಡಿದು ಹಾಗೇ ಸುಧಾರಿಸಿಕೊಂಡೆ. “ಇಷ್ಟೋಂದು ಸುಸ್ತಾಗಿದ್ದೀರಿ, ಮತ್ತ್ಯಾಕೇ ಬರೋದಿಕೆ ಹೋದ್ರಿ ನೀವು” ಅಂತಾ ಕೇಳಿದ್ರು. “ಮನೇಲಿ ಕುತ್ಕೊಂಡು ಇನ್ನೇನು ಮಾಡೋದು. ಅದ್ಕೆ ಹಾಗೇ ಬಂದೆ. ಸರಿ ನನ್ನ ಮೊಮ್ಮಗ ಬರ್ತಾನೆ. ಅವ್ನು ಬರೋದ್ರೊಳಗೆ ಸ್ನಾನ ಮಾಡ್ಕೊಂಡು, ಅವನು ಬಿಸಿನೀರು ಕಾಯಿಸಿ ರೆಡಿ ಮಾಡ್ಬೇಕು. ಅವನು ಜಿಮ್ ಇಂದಾ ಬರ್ತಾನೆ ಅಲ್ವಾ. ಅವನಿಗೆ ಎಲ್ಲಾ ರೆಡಿ ಮಾಡಿಕೊಡ್ಬೇಕು. ಸರಿ ನಾನು ಬರ್ತೀನಿ” ಅಂದೆ. ಅದ್ಕೆ ಸುಮಿತ್ರಮ್ಮ, “ಹೌದಾ, ಮೊಮ್ಮಗನ ಕಂಡ್ರೆ ತುಂಬಾ ಪ್ರೀತಿ ಅಲ್ವಾ ನಿಮ್ಗೆ.” ಅಂದ್ರು. “ಹೌದು ಮತ್ತೆ. ಅವನಿಗೆ ಒಂದು ಮದ್ವೆ ಮಾಡ್ಬೇಕು ಈ ವರ್ಷ. ಅದೊಂದೆ ನನಗೆ ಉಳಿದಿರೋ ಆಸೆ.” ಅಂತಾ ಹೇಳಿ, “ಸರಿ ಕಣಮ್ಮಾ, ಬರ್ತೀನಿ. ಮನೆಗೆ ಹೋಗ್ಬೇಕು” ಅಂತಾ ಹೇಳಿ ಹೊರಟೆ.

ಯಾಕೋ ಕೈಕಾಲು ಹಾಗೇ ಎಳಿತಾ ಇದ್ದಂಗೆ ಭಾಸವಾಗ್ತಾ ಇತ್ತು. ತುಂಬಾ ಆಯಾಸಪಟ್ಟು ಹೆಜ್ಜೆ ಇಡ್ತಾ ಇದ್ದೆ. ಮನೆ ಹತ್ತಿರ ಬಂತು. ಸುಸ್ತು ಹೆಚ್ಚಾಗಿತ್ತು. ಹಾಗೇ ಹೋಗಿ ಒಳಗೆ ಕುಂತ್ಕೊಂಡೆ. ನನ್ನ ಪರಿಸ್ಥಿತಿ ನೋಡಿ, ಸೊಸೆ ಕುಡಿಯಲು ನೀರು ಕೊಟ್ಲು. ಕುಡಿದೆ. ಗಂಟಲು ಸ್ವಲ್ಪ ತಣ್ಣಗಾಯ್ತು ಅಷ್ಟೇ, ಆದರೆ ಸುಸ್ತು ಹಾಗೇ ಇತ್ತು. ಅಷ್ಟರಲ್ಲಿ, ನನ್ನ ಗಂಡ ಬಂದ್ರು. ಮದುವೆಯಾಗಿ ಸುಮಾರು 50 ವರ್ಷ ದಾಟಿದರೂ, ನನ್ನ ಗಂಡನಿಗೆ ನನ್ನ ಮೇಲಿನ ಪ್ರೀತಿ ಎಳ್ಳುಕಾಳಿನಷ್ಟೂ ಕಡಿಮೆಯಾಗಿರಲಿಲ್ಲ. ನಾನೆಷ್ಟೇ ರೇಗಿದರೂ, ಮತ್ತೆ ಮತ್ತೆ ಬಂದು ನನ್ನ ಕೆಣಕುತ್ತಿದ್ದರು. ಅವರ ಪ್ರೀತಿ ವಿಷಯದಲ್ಲಿ ನಾನಂತೂ ತುಂಬಾ ಲಕ್ಕಿ. ಹೀಗೆ ಸುಸ್ತಾಗಿದ್ದ ನನ್ನನ್ನು ಕಂಡ 80ರ ಹರೆಯದ ನನ್ನ ಯಜಮಾನ, ಗಾಬರಿಗೊಂಡರು. “ಶಾರದ ಏನಾಯ್ತು.. “ ಅಂತಾ ಕಣ್ಣಲ್ಲಿ ನೀರು ತುಂಬಿಕೊಂಡು, ಮರುಗಿದರು. ಅಷ್ಟಕ್ಕೇ ಸುಮ್ನಿರದೇ, ಹೊರಗೆ ಹೋಗಿ, ನನ್ನ ಮೊಮ್ಮಗನಿಗೆ ಫೋನು ಮಾಡಲು ಹೊರಟರು. ಇನ್ನೊಬ್ಬ ಮೊಮ್ಮ ಗ ಕೂಡ ಕಾಲೇಜಿಗೆ ಆಗಷ್ಟೇ ಹೋಗಿದ್ದ. ಮಗನೂ ಮನೆಯಲ್ಲಿರಲಿಲ್ಲ. ಇದ್ದದ್ದು, ಸೊಸೆ, ನಾನು ಹಾಗೂ ನನ್ನ ದೇವರು. ಗಾಬರಿಯಿಂದ ಹೊರಗೆ ಹೋಗಿ, ಮೊಮ್ಮಗನ ಸ್ನೇಹಿತನನ್ನು ಹಿಡಿದು, ಮೊಮ್ಮಗನಿಗೆ ಫೋನಾಯಿಸಲು ಹೇಳಿದರು. ಆ ಹುಡುಗ ಕೂಡ, ನನ್ನ ಮಗಳ ಮನೆಗೆ ಹೋಗಿ, ಮಗಳಿಗೂ ಅಳಿಯನಿಗೂ ಹೇಳಿ, ಕರೆತಂದ. ಅಷ್ಟರಲ್ಲಾಗಲೇ ನನಗೆ ಮೈಯೆಲ್ಲಿ ಶಕ್ತಿಯೇ ಇಲ್ಲ. ಮಾತನಾಡಲು ಆಗುತ್ತಿಲ್ಲ. ಕುಸಿದು ಹೋಗಿದ್ದೆ. ಶುಗರ್ ಜಾಸ್ತಿಯಾಗಿ ಬಿಟ್ಟಿದೆ ಅಂತಾ ಎಲ್ಲರಿಗೂ ಕನಫರ್ಮ್ ಆಯ್ತು. ಯಜಮಾನರು ಕರೆತಂದ ಆಟೋ ಏರಲು, ಮಗಳು, ಸೊಸೆ ಜೊತೆಗೆ ಮೊಮ್ಮಗನ ಫ್ರೆಂಡು ಕೂಡ ಸಹಾಯ ಮಾಡಿದ. ಅಲ್ಲಿಯವರೆಗೂ ಹೊಟ್ಟೆ ತೊಳೆಸಿದಂತಾಗಿ, ಒದ್ದಾಡುತ್ತಿದ್ದ ನನಗೆ ಒಮ್ಮೆಲೆ ವಾಂತಿ ಶುರುವಾಯ್ತು. ಪಾಪ ಆಟೋದವ ಏನೂ ಮಾತಾಡಲಿಲ್ಲ. ಹತ್ತಿರದ ಆಸ್ಪತ್ರೆಗೆ ನನ್ನನ್ನು ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿದ್ರು. ಬಂದ ಡಾಕ್ಟರು, ಏನೇನೋ ಇಂಜಕ್ಷನ್ ಅದೂ ಇದೂ ಕೊಟ್ಟು, ಸ್ವಲ್ಪ ಸುಧಾರಿಸಿಕೊಳ್ಳುವಂತೆ ಮಾಡಿದರು. ಅಷ್ಟರಲ್ಲಿ ಮಗ, ಅಳಿಯ ಹಾಗೂ ನನ್ನ ಮೊಮ್ಮಗ ಕೂಡ ಆಸ್ಪತ್ರೆಯ ಹತ್ತಿರ ಬಂದರು. ಮೊಮ್ಮಗನನ್ನು ನೋಡಿದಾಗಲೇ ನನಗೆ ಸ್ವಲ್ಪ ಸಮಾಧಾನ ಆಯ್ತು.

ನಾನು ಸ್ವಲ್ಪ ಸುಧಾರಿಸಿಕೊಂಡಿದ್ದನ್ನು ನೋಡಿ, ಎಲ್ಲರೂ ನಿರಾಳರಾದರು. ತಮ್ಮ ತಮ್ಮ ಕೆಲಸಗಳನ್ನು ಬಿಟ್ಟು, ಗಾಬರಿಯಿಂದಾನೇ ಎಲ್ರೂ ಸೇರಿದ್ರು. ಆಮೇಲಾಮೇಲೆ ನಾನು ಆರಾಮಾಗಿದೀನಿ ಅಂತಾ ಗೊತ್ತಾಗಿ, ತಿಂಡಿ ತೀರ್ಥ ಮುಗಿಸಿಕೊಂಡರು. ನಂತರ ನಾನು ಗಾಢನಿದ್ರೆಗೆ ಜಾರಿಕೊಂಡೆ. ನಿದ್ರೆ ಮಂಪರು ಬೆನ್ನು ಬಿಡಲಿಲ್ಲ. ಹಾಗೇ ಸ್ವಲ್ಪ ಹೊತ್ತು ಮಲಗಿಕೊಂಡೆ. ಅದೇ ಬೆಳಗಿನ ಜಾವ, ನನಗೆ ಕಂಡ ಕನಸು, ಅದೇ ಕನಸು ಮತ್ತೇ ಮುಂದುವರೆದಂತಿತ್ತು. ಯಾರೋ ಎಳೆದ ಹಾಗೇ, ಮತ್ತ್ಯಾರೋ ಕೆಡವಿದ ಹಾಗೇ, ಒಂಥರಾ ವಿಚಿತ್ರ ವಿಚಿತ್ರ ಅನಿಸ್ತಾ ಇತ್ತು. ಅದು ಏನೂ ಅಂತಾ ಅರ್ಥ ಆಗಲಿಲ್ಲ. ಎಚ್ಚರ ಕೂಡ ಆಯ್ತು. ಆಸ್ಪತ್ರೆಯಲ್ಲಿ ನಾನಿದ್ದ ಬೆಡ್ ನಿಂದ ಸ್ವಲ್ಪವೇ ದೂರದಲ್ಲಿದ್ದ ನನ್ನ ಮಗಳಿಗೂ ಕೂಗಿ ಕರೆಯಲು ದನಿ ಸಾಕಾಗಲಿಲ್ಲ. ಮತ್ತದೇ ಸುಸ್ತು. ಮತ್ತದೇ ಹೇಳಲಾರದ ನೋವು. ಅಲ್ಲಿಂದಾನೇ ಗಮನಿಸಿದ ಮಗಳು, ಟಕ್ಕನೆ ಬಂದು, ಏನಾಯ್ತು ಎಂದು ಕೇಳುತ್ತಾ, ಡಾಕ್ಟರ್ ಡಾಕ್ಟರ್ ಎಂದು ಕೂಗುತ್ತಾ, ಡಾಕ್ಟರನ್ನು ಕರೆತಂದಳು. ಅಷ್ಟರಲ್ಲಾಗಲೇ ನನಗೆ ಮಂಪರು. ಮುಂದಿನದು ಸ್ವಲ್ಪ ಅಸ್ಪಷ್ಟ. ಮತ್ತೆ ಸುಧಾರಿಸಿಕೊಂಡು ಕಣ್ತೆರೆದಾಗ ಮತ್ತ್ಯಾವುದೋ ಹಾಸ್ಪಿಟಲ್ ನಲ್ಲಿ ಇದ್ದೆ. ಯಾಕೆ ಅಂತಾ ಕೇಳಿದ್ರೆ, “ನಮ್ಮ ರೆಗುಲರ್ ಡಾಕ್ಟ್ರು ಹತ್ರ ಬಂದಿದೀವಿ. ಅವರೇ ಬರ್ತಾರೆ ಇನ್ನು ಸ್ವಲ್ಪ ಹೊತ್ತಲ್ಲಿ” ಅಂತಾ ಮಗಳು ಹೇಳಿದ್ಲು. ಮೊಮ್ಮಗ ಜೊತೆಯಲ್ಲೇ ಇದ್ದ. ಅವನಿಗೂ ಏನೋ ಟೆನ್ಷನ್ನು. ಅವನ ಟೆನ್ಷನ್ ನೋಡಿ, ನನಗೂ ಸ್ವಲ್ಪ ಆತಂಕ. ಮತ್ತೆ ನಿದ್ರೆಗೆ ಜಾರಿದೆ. ಮತ್ತೆ ಎಚ್ಚರವಾದಾಗ ಮೊಮ್ಮಗ ಏನೋ ಅವಸರವಾಗಿ ಏನನ್ನೋ ರೆಡಿ ಮಾಡುತ್ತಿದ್ದವನಂತೆ ಕಾಣುತ್ತಿದ್ದ. ಏನೋ ಟೆನ್ಷನ್ ನಲ್ಲಿ ಒದ್ದಾಡುತ್ತಿದ್ದ. ಯಾಕೆ ಅಂತಾ ಗೊತ್ತಾಗಲಿಲ್ಲ. ಅಷ್ಟರಲ್ಲಿ ಎದೆಯಲ್ಲಿ ನೋವು ಕಾಣಿಸಿಕೊಂಡು, ಉಸಿರಾಡಲು ಆಗದ ಪರಿಸ್ಥಿತಿಯಲ್ಲಿ ನಾನಿದ್ದೆ. ಕೈಸನ್ನೆ ಮಾಡಿ, ಮೊಮ್ಮಗನನ್ನು ಕರೆಯಲು ಡಾಕ್ಟರಿಗೆ ಹೇಳಿದೆ. “ಏನಿಲ್ಲ.. ಏನೂ ಆಗಿಲ್ಲ.. ಮನೆಗೆ ಹೋಗೋಣ” ಅಂತಾ ಸುಳ್ಳು ಹೇಳ್ತಾ ಇದ್ದ. ಇನ್ನೊಂದು ಬೆಡ್ ಗೆ ಶಿಫ್ಟ್ ಮಾಡಲು ರೆಡಿ ಮಾಡ್ತಾ ಇದ್ದರು. ನನಗೋ ಗಾಬರಿ, ಎದೆನೋವು, ಸುಸ್ತು ಜಾಸ್ತಿ ಆಗಿ ಮೊಮ್ಮಗನ ಕೈ ಬಿಗಿಯಾಗಿ ಹಿಡಿದುಕೊಂಡಿದ್ದೆ. ಅದ್ಯಾವಾಗ ಆ ಕೈ ಬಿಡಿಸಿಕೊಂಡೆನೋ ಗೊತ್ತೇ ಇಲ್ಲ. ನನ್ನ ಮೈ ನೋವು, ಎದೆನೋವು, ಕಡಿಮೆ ಎನಿಸಿ, ದೇಹವೆಲ್ಲ ಹಗುರ ಅನ್ನಿಸಿ, ಇನ್ನೇನು ಸ್ವಲ್ಪ ನಿರಾಳ ಆಯ್ತು ಅಂತಾ ಸ್ವಲ್ಪ ಸಮಾಧಾನದಲಿ ನಾನು ಸುತ್ತಲೂ ನೋಡಿದಾಗ, ನನಗೆ ಕಂಡಿದ್ದು ನನ್ನದೇ ದೇಹ. ಅದರ ಸುತ್ತಲೂ ಕಣ್ಣೀರಿಡುತ್ತಿರುವ ನನ್ನ ಬಳಗ. ಭಯಂಕರ ಷಾಕ್ ಆಯ್ತು. ಅಂದರೆ, ಅಂದರೆ ನಾನೀಗ ನನ್ನ ದೇಹದಲ್ಲಿಲ್ಲ. ಆ ಕಟುಸತ್ಯ ಗೊತ್ತಾದಾಗ ಅವರೆಲ್ಲರಿಗಿಂತಾ ಹೆಚ್ಚಾಗಿ ನಾನೇ ಅತ್ತಿದ್ದು. ನಾನೇ ಜೋರಾಗಿ ಚೀರುತ್ತಾ, ನನ್ನ ಮನೋವೇದನೆಯನ್ನು ತಡೆದುಕೊಳ್ಳಲಾಗದೇ ಮತ್ತೆ ಮತ್ತೆ ಬಿದ್ದು ಅಳುತ್ತಿದ್ದೆ.

ಎಲ್ಲರೂ ಅಳುತ್ತಿದ್ದಾರೆ. ಆದರೆ ನನ್ನ ಮೊಮ್ಮಗ.. ಅವನು ಅಳುತ್ತಿಲ್ಲ. ಅವನಿಗೆ ನಾನಿಲ್ಲ ಎಂಬ ಸತ್ಯ ಒಪ್ಪಿಕೊಳ್ಳಲು ಅವನು ತಯಾರಿಲ್ಲ. ಅಷ್ಟೊಂದು ಜೀವದ ಜೀವ, ನನ್ನ ಕಂದ. ಯಾರಾದ್ರೂ ಸತ್ತಾಗ ಎಲ್ರೂ, ನಾವು ಎಂಥಾ ವ್ಯಕ್ತಿಯೊಬ್ಬನನ್ನು ಕಳ್ಕೊಂಡ್ವಿ ಅಂತಾ, ಆದರೆ ಸತ್ತಮೇಲೆ ನಂಗೆ ಗೊತ್ತಾಯ್ತು, ನಾನೇನು ಕಳ್ಕೊಂಡೆ ಅಂತಾ. ಇಷ್ಟು ಧೀರ್ಘದ ಜೀವನದಲ್ಲಿ ಎಲ್ಲವೂ ಚೆಂದವಾಗಿತ್ತು. ಯಾವುದರಿಂದಲೂ ನನ್ನ ಮನಸಿಗೆ ಹೆಚ್ಚಿನ ನೋವಾಗಿರಲಿಲ್ಲ. ಈ ಲೋಕ ತ್ಯಜಿಸಿದ ನಾನೂ ಕೂಡ, ನನ್ನ ಪ್ರೀತಿಸುವ ನನ್ನ ಗಂಡ ಹಾಗೂ ನಾನು ಪ್ರೀತಿಸುವ ನನ್ನ ಮೊಮ್ಮಗ ಇಬ್ಬರನೂ ಕಳೆದುಕೊಂಡೆ ಎಂಬ ಭಾವನೆ ನನ್ನನು ಕಾಡುತ್ತಿತ್ತು. ದೇಹವನ್ನು ಆಸ್ಪತ್ರೆಯಿಂದ ಮನೆಗೆ ತಂದಾಯ್ತು. ಮುಂದಿನ ಕಾರ್ಯಕ್ರಮಗಳು ತನ್ನ ಪಾಡಿಗೆ ಸಾಗುತ್ತಿತ್ತು. ಆದರೆ ನನ್ನದೇ ದೇಹದ ಮುಂದೆ, ನನ್ನದೇ ಕಂದನ ಜೊತೆಯಲ್ಲಿದ್ದು, ನಾನು ರೋಧಿಸುತ್ತಿದ್ದೆ. “ನಾನು ಅಳೋದಿಲ್ಲ.., ನಮ್ಮ ಅಜ್ಜಿ ಇನ್ನೂ ಬದುಕಿದ್ದಾರೆ.. ನನ್ ಜೊತೆ ಇದ್ದಾರೆ” ಅಂತಾ ಅವನು ಹೇಳುವಾಗ, ನನ್ನ ಕರುಳು ಹಿಂಡಿದಂತಾಗಿ, ಕಣ್ಣಲ್ಲಿ ಝಳಝಳನೆ ನೀರು ಸುರಿಯುತ್ತಿತ್ತು. “ಇಷ್ಟು ಬೇಗ ನಿನ್ನನು ನಾನು ಬಿಟ್ಟು ಬರಬಾರದಿತ್ತು. ನಿನ್ನ ಮದುವೆ ಮಾಡಿ, ನಾನು ನಿನ್ನ ಮಗುವಿನ ಜೊತೆ ಆಟ ಆಡಬೇಕು ಅನ್ನೋದು ನಂಗೆ ತುಂಬಾ ಆಸೆ ಇತ್ತು. ಆದರೆ ವಿಧಿ ಬಿಡಲಿಲ್ಲ. ನೀನೇನೋ ಚಿಂತೆ ಮಾಡಬೇಡ ಕಣೋ, ನಾನು ನಿನ್ನ ಜೊತೆಯಲ್ಲೇ ಇರ್ತೀನಿ, ನಿನ್ನ ಮದುವೆ ಮಾಡ್ತೀನಿ, ಮತ್ತೆ ನಿನ್ನ ಮಗಳಾಗಿ ಹುಟ್ಟಿ ಬರ್ತೀನಿ” ಅಂತಾ ಸಾರಿ ಸಾರಿ ಜೋರಾಗಿ ಅವನಿಗೆ ಕೇಳಿಸುವ ಹಾಗೇ ಹೇಳಿದೆ. ಅವನಿಗೆ ಕೇಳಿಸಿತೋ, ಇಲ್ಲವೋ ಗೊತ್ತಿಲ್ಲ. ಆದರೆ, ನಾನಂತೂ, ನನ್ನ ಯಜಮಾನರನ್ನೂ ಹಾಗೂ ಮೊಮ್ಮಗನನ್ನೂ ಕಳೆದುಕೊಂಡೆ.

ಇದೇ ನನ್ನ ಕೊನೆಯ ದಿನ. ಆದರೆ ಮುಂದೆ ನನಗೂ ಒಂದು ಹೊಸ ಯುಗ ಪ್ರಾರಂಭ ಆಗುತ್ತೆ ಎಂಬ ನಿರೀಕ್ಷೆ ಇದೆ. ಸದ್ಯದಲ್ಲೇ ದೇವರು ನಿಜವಾಗಿಸಿಕೊಡುತ್ತಾನೆ ಅನ್ನೋ ನಂಬಿಕೆ.