ಅಪ್ಪನ ಹೆಗಲ ಮೇಲೆ ಕುಳಿತು, ಅದ್ಯಾವುದೋ ಪಾರ್ಕಿನಲ್ಲಿ ಸುತ್ತಾಡುತ್ತಿದ್ದೆ. ನಾನು ಕೂಡ ರಾಜಕುಮಾರಿ ಅನ್ನೋ ಫೀಲಿಂಗು. ಅದ್ಯಾವ ದೇಶಕ್ಕೆ ಅಂತಾ ಗೊತ್ತಿಲ್ಲ‌. ಆದರೆ ಅಪ್ಪ ಇದ್ದರೆ ಸಾಕು ಅದು ಯಾವ ದೇಶದ ರಾಜಕುಮಾರಿಗೂ ನಾನು ಕಡಿಮೆಯಲ್ಲ. ಅಪ್ಪನ ಭುಜದ ಮೇಲೆ ಕುಳಿತಾಗ ಒಂದು ಕೈಯಲ್ಲಿ ನನ್ನ ಪುಟ್ಟ ಕಾಲು, ಒಂದು ಕೈಯಲ್ಲಿ ನನ್ನ ಪುಟ್ಟ ಕೈ ಹಿಡಿದಾಗ, ಅಪ್ಪನಿಗೆ ನನ್ನ ಮೇಲಿರುವ ಜಾಗ್ರತೆ, ಹಾಗೇ ಸುತ್ತಾಡುವಾಗ ಅಪ್ಪನ ಮೊಗದಲ್ಲಿನ ಖುಷಿ ನೋಡ್ತಾ ಇದ್ರೆ, ‌ನನ್ನ ಮೇಲಿನ ಅವರಿಗಿರುವ ಪ್ರೀತಿ, ಎತ್ತಿಕೊಂಡು ಹಾಗೇ ಕುಣಿಯುವಾಗ, ನನ್ನ ಬಗೆಗಿರುವ ಅವರಿಗಿರುವ ಹೆಮ್ಮೆ. ಎಲ್ಲವೂ ಅಕ್ಷರಶಃ ಸತ್ಯ. ಅಪ್ಪನ ಪ್ರೀತಿ ಆಕಾಶದಷ್ಟು ಎತ್ತರ. ನಾ ಅವರ ಭುಜದ ಮೇಲೆ ಕುಳಿತು, ನಗುತ್ತಿದ್ದರೆ ಸಾಕು, ಅವರಿಗೆ ದಣಿವಿನ ಕಡೆ ಗಮನವೇ ಇರುವುದಿಲ್ಲ. ನಾ ಏನೇ ಕೇಳಲಿ, ಕೊಡಿಸಲು ಇಲ್ಲವೆನ್ನುತ್ತಿರಲಿಲ್ಲ. ಏನಾದರೂ ಗೊತ್ತಾಗದ ಹಾಗೇ ತಪ್ಪು ಮಾಡಿದರೆ, ಏಟು ಕೊಡುವ ಬದಲಾಗಿ "ಪುಟ್ಟಾ ಹಾಗೇ ಮಾಡ್ಬಾರ್ದು ಕಣೋ" ಎಂದಷ್ಟೇ ಹೇಳ್ತಾ ಇದ್ದದು. ಅದೇ ದೊಡ್ಡ ಬೈಗುಳ ನಂಗೆ. ನಾನೆಷ್ಟು ಅದೃಷ್ಟವಂತೆ ಅಲ್ವಾ. ಹೀಗೆ ಯೋಚಿಸುತ್ತಿರುವಾಗ, ಅಪ್ಪ ಕುಣಿಯುವುದನ್ನು ನಿಲ್ಲಿಸಿ, ನಿಧಾನವಾಗಿ ನನ್ನ ಇಳಿಸಲು ಪ್ರಯತ್ನಿಸುತ್ತಿದ್ದರು. ಹಾಗೇ ಎದೆ ಮೇಲೂ ಕೈ ಇಟ್ಟುಕೊಂಡಿದ್ದರು‌. ಪೂರ್ತಿಯಾಗಿ ಬೆವೆತಿದ್ದರು. ಏದುಸಿರು ಬಿಡುತ್ತಿದ್ದರು. ಅದೇನೂ ಅಂತಾ ಗೊತ್ತಾಗಲಿಲ್ಲ. ಯಾಕಂಥಾನೂ ಗೊತ್ತಾಗಲಿಲ್ಲ. ನಂಗೆ ಅಳು ಬರ್ತಾ ಇತ್ತು ಅಷ್ಟೇ. ಅಳೋಕೆ ಶುರು ಮಾಡಿದೆ. ಅಪ್ಪ ಮಾತ್ರ ನೋವಿನಿಂದ ಗಲಿಬಿಲಿಗೊಂಡಿದ್ದರು. ನಮ್ಮಿಬ್ಬರ ಸ್ಥಿತಿ ಕಂಡ ಸುತ್ತಲಿದ್ದ ಜನ ಸಹಾಯಕ್ಕೆ ಬಂದರು. ಅಪ್ಪನಿಗೆ ಒಬ್ಬರು ಕುಡಿಯಲು ನೀರು ಕೊಟ್ಟರು, ಮತ್ತೊಬ್ಬರು ಹಿಡಿದ ನ್ಯೂಸ್ ಪೇಪರ್ ನಿಂದ ಗಾಳಿ ಬೀಸುತ್ತಿದ್ದರು. ಅಷ್ಟರಲ್ಲಿ ವಂಯ್ ವಂಯ್ ಅಂತಾ ಜೋರಾಗಿ ಶಬ್ದ ಮಾಡುತ್ತಾ ಆಂಬುಲೆನ್ಸ್ ಒಂದು ಬಂತು. ನನಗಂತೂ ಏನ್ ನಡೀತಾ ಇದೆ ಅಂತಾ ಅರ್ಥಾನೇ ಆಗಲಿಲ್ಲ. ಆ ಎಲ್ಲರ ಗಾಬರಿ ನೋಡಿ, ಅಳು ಮತ್ತಷ್ಟು ಜಾಸ್ತಿಯಾಯ್ತು. ಅಪ್ಪಾ... ಅಪ್ಪಾ... ಎಂದೇ ಜೋರಾಗಿ ಅಳುತ್ತಿದ್ದೆ. ತಕ್ಷಣವೇ ಏನೋ ಸರಿದಂತಾಗಿ ಎಚ್ಚರವಾಯ್ತು. ಕನಸು..!! ಅಬ್ಬಾ ಎಂಥಾ ಕೆಟ್ಟ ಕನಸು. ಹತ್ತಿರದಲ್ಲೆ ಇದ್ದ ನೀರನ್ನು ಕುಡಿದೆ. ಸ್ವಲ್ಪ ಸುಧಾರಿಸಿಕೊಂಡೆ.

ಅಪ್ಪನಿಗೆ ಏನಾಯ್ತು. ಅಪ್ಪನನ್ನು ಏಕೆ ಆಸ್ಪತ್ರೆಗೆ ಸೇರಿಸಿದ್ರು. ಅಪ್ಪನ ಹೆಗಲ ಮೇಲೆ ಇದ್ದದು ನಾನೇ ಅಲ್ವಾ. ಈಗ ನಾನು ದೊಡ್ಡವಳಾಗಿದ್ದೇನೆ‌.‌ ಅಪ್ಪನ ಆಸೆಯಂತೆ ಮದುವೆಯಾದ ನನಗೀಗ ಕನಸಿನಲ್ಲಿ ಕಂಡ ನನ್ನಷ್ಟೇ ಎತ್ತರದ ಮಕ್ಕಳಿಬ್ಬರಿದ್ದಾರೆ. ಓ ಹಾಗಾದ್ರೆ ಈ ಕನಸು ಕೆಟ್ಟದ್ದು ಹಾಗೂ ಅಷ್ಟೇ ಅಸಂಬದ್ಧ. ನನ್ನ ಬಾಲ್ಯದ ದಿನಗಳಲ್ಲಿ ಅಪ್ಪನಿಗೆ ಹೀಗೆ ಎಂದೂ ಆಗಿಲ್ಲ. ಆಗಿದ್ದು ಅಮ್ಮನಿಗೆ‌. ಅಷ್ಟು ಚಿಕ್ಕ ವಯಸ್ಸಿನಲ್ಲಿ ನಾನಿರುವಾಗ ಅಮ್ಮ ಹೃದಯಾಘಾತದಿಂದ ನಿಧನರಾದರು. ಅಮ್ಮನ ಹೋದ ಮೇಲೆ, ಅಪ್ಪನೇ ನಂಗೆ ಅಪ್ಪ ಹಾಗೂ ಅಮ್ಮನ ಸ್ಥಾನ ತುಂಬಿದವರು‌. ಅಪ್ಪನಿಗಿದ್ದಂತೆ ನನಗೂ ಒಂದು ಗಂಡು ಹಾಗೂ ಹೆಣ್ಣು ಮಗು. ಅಮ್ಮನಿಲ್ಲವೆಂಬ ಕೊರತೆ ಬಾರದಂತೆ ನೋಡಿಕೊಂಡರು ಅಪ್ಪ. ತಲೆ ಬಾಚುವುದು, ಸ್ನಾನ ಮಾಡಿಸುವುದು, ಶಾಲೆಗೆ ರೆಡಿ ಮಾಡೋದು, ಬಟ್ಟೆ ಒಗೆಯೋದು ಎಂಬ ಇನ್ನಿತರ ಕೆಲಸಗಳು ಸೇರಿ ಸಂಸ್ಕೃತಿಯಿಂದ ಬದುಕುವುದನ್ನು, ರಂಗೋಲಿ ಹಾಕುವುದನ್ನು, ಊಟ-ತಿಂಡಿ ತಯಾರಿಸೋದನ್ನು ಹೇಳಿಕೊಟ್ಟಿದ್ದು ಅಪ್ಪನೇ. ಒಂದು ಹೆಣ್ಣಿಗಿರಬೇಕಾದ ಅಷ್ಟೂ ಜಾಗರೂಕತೆ, ನಯ-ವಿನಯತೆ ಬಗ್ಗೆ ಅಪ್ಪ ಅದೆಷ್ಟು ಸೂಕ್ಷ್ಮವಾಗಿ ಹೇಳಿಕೊಟ್ಟಿದ್ದಾರೆಂದರೆ ಅಮ್ಮ ಕೂಡ ಅಷ್ಟು ಸೂಕ್ಷ್ಮವಾಗಿ ಹೇಳುತ್ತಿದ್ದರೋ ಗೊತ್ತಿಲ್ಲ. ಅಮ್ಮ ನತದೃಷ್ಟೆ. ಇಂಥಾ ಅಪ್ಪನ ಜೊತೆ ಬಾಳಲು ಆ ದೇವರೆ ಬಿಡಲಿಲ್ಲ. ಅಪ್ಪನ ಹತ್ತಿರ ಮಾತನಾಡಬೇಕು.‌ ತುಂಬಾ ದಿನ ಆಯ್ತು. ಅವರ ಆರೋಗ್ಯ ಹೇಗಿದೆಯೋ ಏನೋ? ಅಣ್ಣ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅಪ್ಪ ಅಂದ್ರೆ ಅಣ್ಣನಿಗೂ ತುಂಬಾ ಇಷ್ಟ ಹಾಗೂ ಅಷ್ಟೇ ಗೌರವ. ಒಂದು ಫೋನು ಮಾಡಿ, ನನ್ ಗಂಡನಿಗೆ ಹೇಳಿ, ಒಂದೆರಡು ದಿನದ ಮಟ್ಟಿಗಾದ್ರೂ ಊರಿಗೆ ಹೋಗಿ ಬರಬೇಕು. ಯಾಕೋ ಅಪ್ಪನನ್ನು ನೋಡ್ಬೇಕು ಅಂತಾ ಅನಿಸ್ತಿದೆ. ನೋಡಿದ್ಮೇಲೇನೆ ಸ್ವಲ್ಪ ಸಮಾಧಾನ ಆಗುತ್ತೆ.

ಅಪ್ಪನ ನೆನಪು ಹೀಗೆಯೇ ಇರುವುದಾಗಿ ಮತ್ತೆ ನಿದಿರೆಯ ಮಾತೆಲ್ಲಿ. ಟೈಮ್ ನೋಡಿದೆ. ಐದೂವರೆ ಆಗಿತ್ತು.‌ ಮಕ್ಕಳಿನ್ನೂ ಎದ್ದಿರಲಿಲ್ಲ.‌ ಯಜಮಾನ್ರು ಪ್ರೊಫೆಷನಲ್ ಟ್ರಿಪ್ ಹೋಗಿದ್ದಾರೆ. ಬರೋದು ಇನ್ನೂ ಒಂದು ವಾರ ಆಗಬಹುದು ಅಂಥಾ ನಿನ್ನೆ ತಾನೇ ಫೋನ್ ಮಾಡಿ ಹೇಳಿದ್ರು. ಮಕ್ಕಳಿಗೆ ನಾನು ಫ್ರೆಷ್ ಅಪ್ ಆಗಿ‌ ಬಂದೆ. ರೆಡಿಯಾಗಿ ಜಿಮ್ ಗೆ ಹೊರಟೆ. ಒಂದೂವರೆ ಗಂಟೆ ಹಾಗೇ ವರ್ಕೌಟ್ ಮಾಡಿ ಬಂದೆ. ಚೆನ್ನಾಗಿ ದಣಿವೂ ಆಗಿತ್ತು. ಬೆವೆತಿದ್ದ ಮುಖ ಒರೆಸಿಕೊಂಡು, ಮನೆಗೆ ಬಂದೆ. ಅದಾಗಲೇ ಸಮಯ ಎಂಟು ಗಂಟೆಯಾಗಿತ್ತು. ಶಾಲೆ ಕಡೆ ಹೊರಡಬೇಕಾಗಿದ್ದ ಮಕ್ಕಳು ಇನ್ನೂ ಪೂರ್ತಿ ರೆಡಿಯಾಗದೇ ತಿಂಡಿ ತಿನ್ನುತ್ತಾ ಇದ್ದವು. ಕನಿಷ್ಠ ಅಂದ್ರೂ ಇಪ್ಪತ್ತು ನಿಮಿಷ ಬೇಕು, ಮನೆಯಿಂದ ಶಾಲೆಗೆ ಹೋಗಲು. ಇವರುಗಳು ಪೂರ್ತಿ ರೆಡಿಯಾಗೋಕೆ ಇನ್ನೂ ಐದು-ಹತ್ತು ನಿಮಿಷಗಳಾದ್ರೂ ಬೇಕು. ಮೊದಲೇ ದಣಿದು ಬಂದಿದ್ದ ಅಡಿಯಿಂದ ಮುಡಿಯವರೆಗೂ ಮೈಯುರಿದು ಕೋಪ ಬಂದು ಮಕ್ಕಳ ಮೇಲೆ ರೇಗಾಡಿದೆ. "ಅಮ್ಮಾ, ತಾತ ಇಡ್ಲಿ ವಡ ತಂದಿದ್ದೇ ಲೇಟಾಯ್ತು. ಇಲ್ಲಾಂದ್ರೆ ಬೇಗ ಹೊರಡ್ತಾ ಇದ್ವಿ" ಅಂದ್ರು. ತಕ್ಷಣಕೆ ಕೋಪ ಬಂದ್ರೂ ಹಾಗೇ ನುಂಗಿಕೊಂಡೆ. ಯಾಕಂದ್ರೆ ಅವರಿಗೆ ಬೈಯೋದಿಕ್ಕಾಗೋದಿಲ್ಲ ಅಲ್ವಾ ಅದ್ಕೆ. "ತಿಂದಿದ್ದು ಸಾಕು, ಬೇಗ ರೆಡಿಯಾಗ್ರಿ" ಅಂತಾ ಅಷ್ಟೇ ಹೇಳಿ, ಮಾವನ ಕಡೆ ದುರುಗುಟ್ಟಿ ನೋಡಿ, ಅಡುಗೆಮನೆಗೆ ಹೋದೆ. ನಿನ್ನೆ ತೆಗೆದುಕೊಂಡು ಹೋಗಿದ್ದ ಲಂಚ್ ಬಾಕ್ಸ್ ಇನ್ನೂ ತೊಳೆದೆ ಇರಲಿಲ್ಲ. ನನ್ನ ಸಿಟ್ಟು ಮನೆಕೆಲಸದವಳ ಕಡೆ ಹರಿಯಿತು. "ಈ ಬೇವರ್ಸಿ ಬೇರೆ, ಈಗಲೇ ರಜಾ ಹಾಕಿದ್ದಾಳೆ. ಅದೆಲ್ಲಿ ಹಾಳಾಗ್ ಹೋದ್ಲೋ ಏನೋ‌. ಭಾರಿ ಘನಂದಾರಿ ಕೆಲ್ಸ ಅಂತಾ ಮೂರು ದಿನ ಬೇರೆ ಬರೊಲ್ಲಂತೆ" ಅಂತಾ ನನ್ನಷ್ಟಕ್ಕೆ ‌ನಾನೇ ಗೊಣಗಿಕೊಂಡು, ಬಾಕ್ಸ್ ತೊಳೆದು ಪಾರ್ಸಲ್ ತಂದಿದ್ದ ಸೆಟ್ ದೋಸೆಯನ್ನು ಬಾಕ್ಸ್ ಗೆ ಹಾಕಿ ಲಂಚ್ ಬಾಕ್ಸ್ ರೆಡಿ ಮಾಡಿದೆ. ಮಾವ ಚಿಂಟೂವಿಗೆ ಶೂ ಹಾಕುತ್ತಿದ್ದರು. ಮಗಳ ಕೈಗೆ ಲಂಚ್ ಬಾಕ್ಸ್ ಬ್ಯಾಗ್ ಕೊಟ್ಟು, ನಡೀ ಟೈಮಾಯ್ತು, ನಾನೇ ಬಿಟ್ಟು ಬರ್ತೀನಿ. ಹೊರಗೆ ವೈಟ್ ಮಾಡು ಅಂತಾ ಗದರಿದೆ. ಸ್ಕೂಟರಿನ ಕೀ ತೆಗೆದುಕೊಂಡು ಬರುವಾಗ, ಕಾಲಿಗೆ ಏನೋ ತಾಕಿ, ಎಡವಿ ಬೀಳುವಂತಾದೆ.

ಶೂ ಹಾಕಿ ಚಿಂಟೂವನ್ನು ರೆಡಿ ಮಾಡಿ ಮಾವ ನನ್ನ ನೋಡ್ತಾ ಇದ್ರು. "ಅದೇನ್ ನೋಡ್ತಾ ಇದಿರಿ. ಸ್ವಲ್ಪ ಕಸ ಅನ್ನೋಕಾಗಲ್ವ. ಕಾಲಿಗೆ ಕಸ ಸಿಕ್ಕಿಕೊಳ್ತಾ ಇದೆ. ಸ್ಕೂಲಿಗೆ ಹೋಗಿ ಬರೋದ್ರೊಳಗೆ ಕಸ ಬಿಸಾಕಿ" ಅಂದೆ ಸ್ವಲ್ಪ ದುರುಗುಟ್ಟೀನೆ. ಮಾವ ಏನೂ ಮಾತನಾಡಲಿಲ್ಲ. ಮತ್ತೊಂದು ಮಾತನಾಡುವ ಸಮಯ ಇಲ್ಲವಾದ್ದರಿಂದ ಹೊರಗೆ ಹೊರಟು ಸ್ಕೂಟರಿನಲ್ಲಿ ಇಬ್ಬರೂ ಮಕ್ಕಳನ್ನು ಕೂರಿಸಿಕೊಂಡು ಶಾಲೆ ಕಡೆ ಹೊರಟೆ. ಅಂತೂ ಶಾಲೆ ಬಂತು. ಅಬ್ಬಾ ಇನ್ನೂ ಮೊದಲ ಬೆಲ್ ಆಗಿರಲಿಲ್ಲ, ಸಮಾಧಾನ ಆಯ್ತು. ಮಕ್ಕಳಿಬ್ಬರನ್ನೂ ಬಿಟ್ಟು ಯೂ ಟರ್ನ್ ತಗೊಂಡ್ ಹೊರಡ್ತಾ ಇದ್ದು. ಮಾವನ ಫ್ರೆಂಡ್ ಸಿಕ್ರು. ಅಷ್ಟೊತ್ತು ಸಿಡುಕು ಮೂತಿ ಇಟ್ಕೊಂಡಿದ್ದ ನಾನು, ಬೇಡದೇ ಇದ್ರೂ ಸ್ಮೈಲ್ ಕೊಟ್ಟೆ. ಪರಿಚಯಿಸಿದರು ಎದುರು ಬಂದ್ರೆ ಇಷ್ಟಾದ್ರೂ ಮಾಡ್ಬೇಕಲ್ಲ. "ಏನಮ್ಮಾ ಲತಾ? ಹೇಗಿದ್ದೀರಾ? ಆಯ್ತಾ ತಿಂಡಿ?'" ಅಂತಾ ಕೇಳಿದ್ರು. " ಚೆನ್ನಾಗಿದ್ದೀನಿ ಅಂಕಲ್, ತಿಂಡಿ ಇನ್ನೂ ಆಗಿಲ್ಲ. ಮಕ್ಕಳಿಗೆ ಸ್ಕೂಲಿಗೆ ಬಿಡೋಕೆ ಬಂದೆ. ಇವ್ರದ್ದೇ ಕೆಲಸ ಆಯ್ತು" ಅಂದೆ. "ಅದು ನಿಜ ಬಿಡಮ್ಮಾ.. ಮಕ್ಕಳಿದ್ರೆ ಅವರದೇ ತುಂಬಾ ಕೆಲಸ. ಅದ್ಸರಿ ನಿಮ್ ಮಾವ ಹೇಗಿದ್ದಾರೆ. ಏನು ಮಾಡ್ತಾ ಇದ್ರು" ಅಂತಾ ಕೇಳಿದ್ರು. ಅವರಿಗೇನಾಗಿದೆ ದಾಡಿ, ಚೆನ್ನಾಗಿ ಇದ್ದಾರೆ ಅಂತಾ ಮನಸಲ್ ಅಂದ್ಕೊಂಡು, "ಚೆನ್ನಾಗಿ ಇದ್ದಾರೆ ಅಂಕಲ್, ಪೇಪರ್ ಓದ್ತಾ ಇದ್ರು." ಅಂದೆ. ಅದಕ್ಕವರು "ಹೌದಾ! ಕನಿಷ್ಠ ಈ ಮಕ್ಕಳನಾದ್ರೂ ಸ್ಕೂಲಿಗೆ ಬಿಡೋಕಾದ್ರೂ ಬರಬೋದಿತ್ತಲ್ಲಮಾ, ನಿಂಗೂ ಸ್ವಲ್ಪ ರಿಸ್ಕ್ ಕಡಿಮೆ ಆಗಿರೋದು" ಅಂದ್ರು. "ಅಯ್ಯೋ ರಿಸ್ಕ್ ಏನಿಲ್ಲ ಅಂಕಲ್. ಅವರಿಗೆ ಕಾಲು ನೋವು. ಅದೂ ಅಲ್ಲದೆ ಮನೆ ಹತ್ತಿರ ಸ್ಕೂಲ್ ವ್ಯಾನ್ ಬರುತ್ತೆ. ಇವತ್ತು ಟಿಫನ್ ರೆಡಿ ಮಾಡೋಕೆ ಲೇಟ್ ಆಯ್ತು. ಅದಕೆ ಎಲ್ಲಾನೂ ಲೇಟ್. ವ್ಯಾನ್ ಕೂಡ ಮಿಸ್ ಆಯ್ತು. ಸೋ, ನಾನೇ ಬಂದೆ‌" ಅಂತಾ ಹೇಳಿದೆ. ಇಷ್ಟ್ ಹೊತ್ತು ಹೇಳಿದ್ದು ಸುಳ್ಳೆ ಸುಳ್ಳು ಅಂತಾ ಗೊತ್ತು. ಒಂದು ಮ್ಯಾನೇಜ್ ಮಾಡೋಕ್ ಹೋಗಿ ಇನ್ನೊಂದು ಸುಳ್ಳು ಹೇಳಲೇಬೇಕಲ್ಲ. "ಸರಿ ಅಂಕಲ್ ಬರ್ತೀನಿ. ಮಾವನಿಗೆ ಟಿಫಿನ್ ಕೊಡಬೇಕು" ಅಂತಾ ಹೇಳಿ ಅಲ್ಲಿಂದ ಹೊರಟೆ. "ಅವರ ಮಾವನ್ನ ಅವಳು ಎಷ್ಟು ಚೆನ್ನಾಗಿ ನೋಡ್ಕೋತಾಳೆ. ನನ್ ಸೊಸೇನೂ ಇದಾಳೆ. ಒಳ್ಳೆ ರಣಚಂಡಿ ಥರಾ" ಅಂತಾ ಮ‌ನಸಲ್ಲ್ ಹೇಳ್ಕೊಂಡ ಮಾತು ಮಾತ್ರ ನಂಗೇ ಕೇಳಿಸ್ತು. ಅವರು ಹಾಗೇ ಹೇಳ್ಕೊಂಡ್ರೋ ಇಲ್ವೋ ಗೊತ್ತಿಲ್ಲ, ನಂಗೆ ಮಾತ್ರ ಹಾಗೇ ಕೇಳಿಸ್ತು. ನಿಜ ಹೇಳ್ಬೇಕು ಅಂದ್ರೆ, ಮನೆ ಕೆಲಸದಲ್ಲಿ ಸುಮಾರು ಮುಕ್ಕಾಲು ಪಾಲು ಅವರೇ ಮಾಡೋದು. ಮಾಡಲಿ ಅನ್ನೋದೆ ನನ್ ವಾದ ಕೂಡ. ಹೀಗೆ ಏನೇನೋ ಯೋಚಿಸುತ್ತಾ ಮನೆಗೆ ಬಂದೆ. ಅಷ್ಟೊತ್ತಿಗಾಗಲೇ ಮಾವ ಕಸಗುಡಿಸಿ ಸ್ವಚ್ಛ ಮಾಡಿದ್ರು. ನನ್ನ ಸಿಟ್ಟು ಕೂಡ ಒಂಚೂರು ಕಡಿಮೆಯಾಗಿತ್ತು. ಅಡುಗೆಮನೆಗೆ ಹೋಗಿ ಒಂದು ಲೋಟ ಹಾಲು ಕುಡಿದು, ಮೊಬೈಲ್ ತಗೊಂಡು Swiggy ಯಲ್ಲಿ ಒಂದ್ ಮಸಾಲ ದೋಸ ಆರ್ಡರ್ ಮಾಡಿದೆ. ಎಣ್ಣೆಯಲ್ಲಿ ಕರಿದ ಪದಾರ್ಥ ತಿನ್ನೋದು ತಪ್ಸಲ್ಲ; ಈ ಜಿಮ್ ಗೆ ಹೋಗಿ ವರ್ಕೌಟ್ ಮಾಡೋದು ತಪ್ಸಲ್ಲ. ನಾನೊಬ್ಳೆ ಹೀಗೇನೋ ಅಥವಾ ಎಲ್ರೂ ಹಾಗೇನೋ ಗೊತ್ತಿಲ್ಲ. ಟಿ.ವಿ. ಆನ್ ಮಾಡಿದೆ. ಒಂದಷ್ಟು ಸಾಂಗ್ಸ್ ಪ್ಲೇ ಆಗ್ತಾ ಇತ್ತು. ಮಾವ ಮಕ್ಕಳಿಗೆ ತಂದು ಉಳಿದಿದ್ದ ಒಂದು ದೋಸೆನಾ ತಂದು ಹಾಲ್ ನಲ್ಲಿ ಕೂತು ತಿನ್ನುತ್ತಿದ್ದರು. ನಾನು ಅದನ್ನು ನೋಡಿಯೂ ನೋಡದವಳಂತೆ ನನ್ನ ಪಾಡಿಗೆ ನಾನು ಸೋಫಾ ಮೇಲೆ ಕಾಲುಚಾಚಿ ಕುಂತು ಟಿ.ವಿ. ನೋಡ್ತಾ ಇದ್ದೆ‌. ಸ್ವಲ್ಪ ಹೊತ್ತಲ್ಲೇ Swiggyಯವ ಬಂದ. ನಾನೆದ್ದು ಹೋಗಿ ಪಾರ್ಸಲ್ ತಗೊಂಡ್ ಸೀದಾ ನನ್ ಬೆಡ್ ರೂಮ್ ಗೆ ಹೋದೆ. ದೋಸೆ ತಿಂದು ಹಾಗೇ ಬೆಡ್ ಮೇಲೆ ಬಿದ್ದುಕೊಂಡೆ.

ಎಲ್ಲಾ ಹಳೆಯ ನೆನಪುಗಳು ಒಂದೊಂದರಂತೆ ನೆನಪಾಗತೊಡಗಿದವು. ತಾಯಿ ಇಲ್ಲದ ಕೊರತೆಯನ್ನು ಅಪ್ಪ ನೀಗಿಸಿದ್ದರು. ನಾನು ನನ್ನ ಕಾಲೇಜು ಶಿಕ್ಷಣ ಮುಗಿಸೋದರಳಗಾಗಿ ಅಣ್ಣನೂ ಅಪ್ಪನಿಗೆ ಆರ್ಥಿಕವಾಗಿ ನೆರವಾಗತೊಡಗಿದ. ನನಗಂತೂ ಹೆಚ್ಚಿನ ರಿಸ್ಕ್ ಇರಲಿಲ್ಲ. ಹೆಸರಿಗಷ್ಟೇ ನೆಂಟರು ಇದ್ದುದರಿಂದ ಮನೆಗೆ ಬಂದು ಹೋಗುವವರ ಸಂಖ್ಯೆಯು ಕಡಿಮೆ. ಒಂದೊಳ್ಳೆ ಸಂಬಂಧ ನೋಡಿ ಮದುವೆ ಮಾಡಿಕೊಟ್ಟರು. ತವರುಮನೆಯಲ್ಲಿ ತುಸು ಹೆಚ್ಚಾಗಿಯೇ ಸುಖವಾಗಿ ಬೆಳೆದ ನನಗೆ, ಮದುವೆ ನಂತರದ ಜವಬ್ದಾರಿ, ಮನೆಕೆಲಸ ಈ ಎಲ್ಲದರಲ್ಲೂ ಅಷ್ಟಾಗಿ ತೊಡಗಿಸಿಕೊಳ್ಳೋದು ಸ್ವಾಭಾವಿಕವಾಗಿ ಇಷ್ಟವಾಗಲಿಲ್ಲ. ಬಹುತೇಕ ಸಂಸಾರಗಳಲ್ಲಿ ಮದುವೆ ನಂತರದಲ್ಲಿ ಮನೆಯ ಪ್ರತಿ ಸಣ್ಣ ಕೆಲಸಗಳನ್ನು ಮಾಡಲು ಮುಖ ತಿರುಗಿಸೋರು ನನ್ನಂತೆ ಸುಖವಾಗಿ ಬೆಳೆದವರು, ಕಷ್ಟ ನಷ್ಟಗಳ ಪರಿಚಯ ಇರದವರು, ಆಲಸಿತನ ಬೆಳೆಸಿಕೊಂಡವರೇ ಇರಬೇಕು ಅನ್ನೋದು ನನ್ನ ಅಭಿಪ್ರಾಯ. ಮದುವೆ ನಂತರದಲ್ಲಿ ಮಾಮೂಲಿನಂತೆಯೇ ಅತ್ತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಹೇಳುತ್ತಿದ್ದರು. ಅವರುಗಳನ್ನು ಮನಸಿನಲ್ಲೇ ಬೈದುಕೊಂಡೇ ಎಲ್ಲಾ ಕೆಲಸ ಮಾಡಿ ಮುಗಿಸುತ್ತಿದ್ದೆ. ಒಂಥರಾ ಜೀವನ ಸಾಕಾಗಿ ಹೋಗಿತ್ತು.‌ ಅತ್ತೆ ಹೇಳುತ್ತಿದ್ದ ಅಷ್ಟೂ ಕೆಲಸಗಳು ಒಬ್ಬ ಗೃಹಿಣಿ ನಿರ್ವಹಿಸಬೇಕಾದ ಕರ್ತವ್ಯಗಳೇ ಹೊರತು ಬೇರೆ ಮಹಾ ಕಷ್ಟಕರ ಕೆಲಸಗಳೇನಲ್ಲ. ಆದರೂ ಅದನು ಮಾಡುವ ಮನಸು ನನಗಿರಬೇಕಲ್ಲ. ಅಷ್ಟಕ್ಕೇ ಅತ್ತೆ ನಂಗೆ ವಿಲನ್ ಥರ. ತುಂಬಾ ಬೈಕೊಳ್ತಾ ಇದ್ದೆ. ಒಂದಿನ ನಮ್ಮ ಅತ್ತೇನೂ ತೀರಿಕೊಂಡ್ರು. ಆವತ್ತಿಂದ ನಂದೇ ರಾಜ್ಯಭಾರ. ಅತ್ತೆ ಮೇಲಿನ ಕೋಪನಾ ಮಾವನ ಮೇಲೆ ತೀರಿಸಿಕೊಳ್ತಾ ಇದ್ದೆ. ಅದು ಇದು ಅಂತಾ ಗೋಳ್ ಹೋಯ್ಕೊಳ್ತಾನೆ ಇದೀನಿ. ಅವರು ಒಂದು ಮಾತಾಡದೇ ಎಲ್ಲಾನೂ ಆದಷ್ಟು ಮಾಡ್ತಾ ಇದ್ರು. ಯಾವದಾದ್ರೂ ಸ್ವಲ್ಪ ಲೇಟ್ ಮಾಡಿದ್ರೂ, ಗಂಡನ ಹತ್ತಿರ ಕಂಪ್ಲೆಂಟ್ ಮಾಡ್ತಾ ಇದ್ದೆ. ದಿನಾ ಯಾವದಾದ್ರೂ ಒಂದ್ ಕಂಪ್ಲೆಂಟ್ ಆದ್ರೂ ಇದ್ದೆ ಇರುತ್ತೆ ನಂದು.

ಹೀಗೆ ಯೋಚನೆ ಮಾಡ್ತಾ ಇದ್ದೆ. ನಿದ್ದೆ ಕೂಡ ಬಂದ್ಬಿಟ್ಟಿತ್ತು. ಯಾರೋ ಕಾಲಿಂಗ್ ಬೆಲ್ ಮಾಡಿದಂತಾಯ್ತು. ನಂಗೆ ಎಚ್ಚರವಾಯ್ತು. ಟೈಂ ನೋಡಿದೆ, ಮಧ್ಯಾಹ್ನ ೧೨ ಗಂಟೆಯಾಗಿತ್ತು. ಅದ್ಯಾರು ಬಂದ್ರು ಅಂತಾ ನೋಡೊಕೆ ಎದ್ದು ಬಂದೆ. ಅಷ್ಟರಲ್ಲಿ ಮಾವ ಬಾಗಿಲು ತೆರೆದಿದ್ರು. ಬಂದ ವ್ಯಕ್ತಿಯನ್ನು ನಂಗೆ ಅಚ್ಚರಿ ಒಂದು ಕಡೆ, ಜೊತೆಗೆ ನಂಗೆ ತುಂಬಾ ಖುಷಿಯಾಯ್ತು. ಬೆಳಗ್ಗೆ ಕನಸಿನಲ್ಲಿ ಕಂಡ ಅಪ್ಪ ಬಂದ್ರು. ಹೋಗಿ ತಬ್ಬಿಕೊಂಡೆ. ಖುಷಿಯಿಂದ ಕಣ್ಣಲ್ಲಿ ನೀರು ಬಂತು. ಮಾತೇ ಬರಲಿಲ್ಲ ಬೇಗ. ಆಮೇಲೆ ಸುಧಾರಿಸಿಕೊಂಡು ಅಪ್ಪನ ಗಮನಿಸಿದೆ. ಯಾಕೋ ಸ್ವಲ್ಪ ಡಲ್ ಆಗಿದ್ರು. ಬಡಕಲು ಕೂಡ ಆಗಿದ್ರು. "ಅಪ್ಪಾ... ಇದೇನಿದು ಫೋನ್ ಕೂಡ ಮಾಡದೇ ಸಡನ್ ಆಗಿ ಬಂದಿದ್ದೀರಿ. ಅಣ್ಣ - ಅತ್ತಿಗೆ ಚೆನ್ನಾಗಿದಾರಾ?" ಅಂತಾ ಕೇಳಿದೆ. ಅದಕ್ಕವರು "ಅಮ್ಮಾ.. ಲತಾ..! ನಂಗೆ ಹೊಟ್ಟೆ ತುಂಬಾ ಹಸಿಯುತ್ತಿದೆ ಕಣೋ. ಏನಾದ್ರೂ ಸ್ವಲ್ಪ ತಿನ್ನೋದಕ್ಕೆ ಕೊಡೋ" ಅಂದ್ರು. ಅವರ ಮುಖ ಬಾಡಿ ಹೋಗಿತ್ತು.‌ ನಾ ಕೇಳಿದ್ದೇ ಬೇರೆ. ಅವರು ಹೇಳಿದ್ದೇ ಬೇರೆ. ಮೊದಲು ಅವರ ಹೊಟ್ಟೆ ಹಸಿವು ನೀಗಿಸಬೇಕು. ಆಮೇಲೆ ಮಾತನಾಡಿದ್ರಾಯ್ತು ಅಂತಾ ಅಂದ್ಕೊಂಡೆ. ಓ ನಾನು ಟಿಫನ್ ಏನೂ ಮಾಡಿಲ್ಲ ಅನ್ನೋದು ನೆನಪಾಯ್ತು. ತಕ್ಷಣಕೆ ಅಪ್ಪಾ ನೀವು ಸ್ನಾನ ಮಾಡ್ಕೊಂಡು ಬನ್ನಿ, ಅಷ್ಟರಲ್ಲಿ ಟಿಫನ್ ರೆಡಿ ಮಾಡಿಕೊಂಡು ಬರ್ತೀನಿ ಅಂತಾ ಹೇಳಿ, ನಾನು ಅಡುಗೆಮನೆಗೆ ಬಂದೆ. ಅವರು ಸ್ನಾನಕ್ಕೆ ಹೋದರು. ಇದನ್ನೆಲ್ಲಾ ಮಾವನವರು ಗಮನಿಸುತ್ತಿದ್ದರು. ಏನೊಂದು ಮಾತನಾಡಲಿಲ್ಲ.

ಅಪ್ಪ ಸ್ನಾನ ಮಾಡಿ ಬಂದರು. ಅಷ್ಟರಲ್ಲಿ ಉಪ್ಪಿಟ್ಟು ರೆಡಿ ಮಾಡಿದೆ. ಅಪ್ಪನಿಗೆ ಬಡಿಸಿದೆ. ಅಪ್ಪ ಮಾವನವರನ್ನು ಕರೆದು, ಒಟ್ಟಿಗೆ ಕೂತು ತಿಂದರು. ಸ್ವಲ್ಪ ಹೊತ್ತು ಮಲಗಿಕೊಳ್ತೇನೆ ಅಂದ್ರು. ಅಷ್ಟೇ ಸಾಕು ಅಂತಾ ಅಪ್ಪನನ್ನು ಬೆಡ್ ರೂಮಿಗೆ ಕರೆದುಕೊಂಡು ಬಂದೆ. ಮಲಗಲು ಹಾಸಿಗೆ ರೆಡಿ ಮಾಡಿ, ಅಪ್ಪನಿಗೆ ಮಲಗಲು ಸಹಾಯ ಮಾಡಿ "ಅಪ್ಪ, ಯಾಕಿಷ್ಟು ಬಡಕಲಾಗಿದ್ದೀಯಾ?" ಎಂದಷ್ಟೇ ಕೇಳಿದೆ. ಅದುವರೆಗೂ ಸುಮ್ಮನಿದ್ದ ಅಪ್ಪ, ಅಳಲು ಶುರು ಮಾಡಿದರು. ಗಂಟಲು ಕಟ್ಟಿ ಮಾತೇ ಹೊರಡಂತಾಗಿತ್ತು ಅವರಿಗೆ. ಕಣ್ಣೀರು ಝಳಝಳನೆ ಹರಿದು ಬಂತು. ಅವರ ಅಳು ಕಂಡು ನಂಗೆ ಗಾಬರಿ, ನೋವು ಜಾಸ್ತಿಯಾಯ್ತು. ನಾನೂ ಅತ್ತೆ. ಸ್ವಲ್ಪ ಹೊತ್ತಿನ ನಂತರ, ಅವರೇ ಮಾತನಾಡಿದರು. ತನ್ನ ಬಗ್ಗೆ ಸೊಸೆಗಿದ್ದ ಹಠ, ಅವಳು ಮಾಡುತ್ತಿದ್ದದನ್ನು ಹೇಳಿದರು. ಸರಿಯಾಗಿ ಒಂದು ಹೊತ್ತು ಊಟ ಕೂಡ ನೆಮ್ಮದಿಯಿಂದ ತಿನ್ನಲು ಸಾಧ್ಯವಾಗದ ಪರಿಸ್ಥಿತಿ ಅಪ್ಪನದ್ದಾಯಿತು. ಅಣ್ಣ ಹೆಂಡತಿ ಗುಲಾಮನಾದ. ಅಪ್ಪ ಇಬ್ಬರಿಗೂ ನಿರ್ಲಕ್ಷ್ಯ. ಅಪ್ಪನ ನೋವು, ಅತ್ತಿಗೆಯ ಉಪಟಳ, ಅಣ್ಣನ ನಿರ್ಲಕ್ಷ್ಯ, ಈ ಎಲ್ಲವನೂ ಕೇಳಿದಾಗ ಇಲ್ಲಿ ನಾನು ಮಾವನವರನ್ನು ನೋಡಿಕೊಳ್ಳುತ್ತಿದ್ದ ರೀತಿಯು ಹೆಚ್ಚು ಕಡಿಮೆ ಅದೇ ಆಗಿತ್ತು. ನನ್ನದೇ ಗುಣಗಳು ಅವಳಿಗೂ ಇತ್ತು. ಅಣ್ಣ-ಅತ್ತಿಗೆ ಇಬ್ಬರ ಮೇಲೂ ಕೋಪ ಬಂತು. ಆಮೇಲೆ ಯೋಚಿಸತೊಡಗಿದೆ. ಹೆಚ್ಚೂ ಕಡಿಮೆ ಅದೇ ತಪ್ಪುಗಳನ್ನು ಮಾಡುತ್ತಿದ್ದೇನೆ. ಮೊದಲು ನಾನು ತಿದ್ದಿಕೊಳ್ಳಬೇಕು. ಅಪ್ಪ ಆದ್ರೂ ಮಗಳ ಹತ್ತಿರ ಬಂದ್ರು. ಮಾವ ಯಾರ ಹತ್ರ ಹೋಗ್ತಾರೆ. ಇಷ್ಟೂ ದಿನ ಒಂದು ಮಾತನಾಡದೇ ನನ್ನನ್ನು ಹಾಗೂ ನನ್ನ ಮಾತನ್ನು ಸಹಿಸಿಕೊಂಡಿದ್ದಾರೆ. ಅವರ ತಾಳ್ಮೆಗೆ ಮೊದಲು ಶರಣಾಗಬೇಕು. "ನಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ" ಅಂತಾ ಹೇಗೆ ಕೇಳೊದು. ಕೇಳೊದೋ ಬೇಡವೋ ಎಂಬ ಗೊಂದಲ ಶುರುವಾಗಿ, ಮೊದಲು ನನ್ನ ತಪ್ಪು ಸರಿ ಮಾಡಿಕೊಂಡು ಅತ್ತಿಗೆಯ ತಪ್ಪಿನ ಬಗ್ಗೆ ಮಾತನಾಡಬೇಕು ಅಂತಾ ಡಿಸೈಡ್ ಮಾಡಿ, ಅಪ್ಪನನು ಮಲಗಿಸಿದೆ. ಹಾಲ್ ಗೆ ಬಂದೆ. ಮಾವ ಆರಾಮ ಖುರ್ಚಿಯಲಿ ಹಾಗೇ ಹಿಂದಕೆ ಒರಗಿ, ಕಣ್ ಮುಚ್ಚಿ ಅರೆನಿದಿರೆಗೆ ಜಾರಿದ್ದರು. ಅವರ ಬಳಿ ಬಂದು, ಕಾಲಿಗೆ ಬಿದ್ದು "ಮಾವ" ಅಂದೆ. ಅವರು ಎಚ್ಚರವಾಗಿ ನೋಡಿದಾಗ, ನಾನು ಅವರ ಕಾಲು ಹಿಡಿದು ಅಳುವುದನ್ನು ನೋಡಿ ಗಾಬರಿಯಿಂದ "ಏನಾಯ್ತಮ್ಮಾ ಲತಾ? " ಅಂತ ಅಂದ್ರು. ನಾನೂ ಅಳುತ್ತಲೇ "ತಪ್ಪಾಯ್ತು ಮಾವ, ನಿಮಗೆ ನಾನೂ ಇಲ್ಲಿಯವರೆಗೂ ತುಂಬಾ ಕಷ್ಟ ಕೊಟ್ಟಿದ್ದೀನಿ. ದಯವಿಟ್ಟು ಕ್ಷಮಿಸಿ. ನಾನೇನು ಮಾಡ್ತಾ ಇದೀನಿ ಅಂತಾ ನಂಗೆ ಗೊತ್ತಾಗ್ತಾ ಇರಲಿಲ್ಲ. ನಂಗೆ ನಂದೇ ಸರಿ ಅನಿಸೋದು. ಈಗ ನನ್ನ ತಪ್ಪಿನ ಅರಿವಾಗ್ತಾ ಇದೆ. ಕ್ಷಮಿಸಿಬಿಡಿ" ಎಂದು ಕೇಳಿಕೊಂಡೆ. ನನ್ಮಲಿಯ ಮಾನಸಿನ ಬದಲಾವಣೆಯ ಸೂಕ್ಷ್ಮತೆ ಅರಿತು "ಅವರಿಷ್ಟ ಬಂದಂತೆ ಬದುಕೋದು ಎಲ್ಲರ ಹಕ್ಕು. ಆ ಹಕ್ಕು ಉಪಯೋಗಿಸಿಕೊಂಡು ಸ್ವೇಚ್ಛೆಯಾಗಿದ್ದು, ಬೇರೆಯವರ ಮನಸಿಗೆ ನೋವು ಕೊಡಬಾರದು ತಾಯಿ. ಆಗಿದ್ದೆಲ್ಲಾ ಒಳ್ಳೆಯದು. ಇರಲಿ ಬಿಡು. ನೀನೂ ನನ್ನ ಮಗಳು ಥರಾನೇ ಅಲ್ವಾ" ಅಂದ್ರು. ಮಧ್ಯಾಹ್ನ ನಾನೇ ಅಡುಗೆ ಮಾಡಿ, ಇಬ್ಬರಿಗೂ ಕೈತುತ್ತು ತಿನ್ನಿಸಿದೆ. ಅಪ್ಪ- ಮಾವ ಇಬ್ಬರೂ ನಂಗೆ ಜೊತೆಯಾದರು. ನನ್ನ ತಿದ್ದಿ ತೀಡಿ ಸಂಸಾರ ಪಾಠ ಕಲಿಸಿದರು. ಮನೆಕೆಲಸದವಳನ್ನೂ ಬಿಡಿಸಿ, ಮನೆಯ ಎಲ್ಲಾ ಕೆಲಸಗಳನ್ನು ನಾನೇ ಮುತುವರ್ಜಿಯಿಂದ ಮಾಡಲು ಶುರುಮಾಡಿದೆ.

ಎಲ್ಲರೂ ಒಂದಾಗಿ ಜೀವನ ಮಾಡುವಾಗ ಯಾವ ತೊಂದರೆಗಳು ನಮ್ ಹತ್ತಿರ ಬರೊಲ್ಲ. ಬಂದ್ರೆ ಅದನ್ನು ಎದುರಿಸೋಕೆ ಬೆನ್ನೆಲುಬಾಗಿ ನಮ್ಮವರು ಇರ್ತಾರೆ. ಅಪ್ಪ, ಮಾವ, ಮಕ್ಕಳು ಜೊತೆ ಹೀಗೆ ಕಾಲ ಕಳೆಯುತ್ತಿರುವಾಗ ಒಂದು ವಾರ ಸರಿದು ಹೋಗಿದ್ದೇ ಗೊತ್ತಾಗಲಿಲ್ಲ. ಗಂಡ ಊರಿಂದ ಬಂದ್ರು. ಅಪ್ಪ ಬಂದಿದ್ದೂ ಕೂಡ ಅವರಿಗೆ ಖುಷಿಯಾಯ್ತು. ಮನೆಯ ಎಲ್ಲಾ ಕೆಲಸ ನಾನೇ ಮಾಡಿಕೊಂಡು, ಅಪ್ಪ ಹಾಗೂ ಮಾವನ ಜೊತೆ ಖುಷಿಯಾಗಿ ಇದ್ದುದನ್ನು ನೋಡಿ ಗಂಡ ಖುಷಿಪಟ್ರು. "ಏನೂ ಅಮ್ಮಾವ್ರು, ಇವತ್ತ್ಯಾವ್ದು ಕಂಪ್ಲೆಂಟ್ ಇಲ್ವಾ" ಅಂತಾ ಕೇಳಿದ್ರು. ಅದಕೆ ನಾನ್ ಹೇಳಿದ್ ಕೇಳಿ ತುಂಬಾ ಖುಷಿ ಪಟ್ರು. ಬಾಚಿ ನನ್ನ ತಬ್ಬಿ ಹಣೆಗೊಂದು ಮುತ್ತು ಕೊಟ್ಟು "ವೆರಿಗುಡ್" ಅಂತಾ ಹೇಳಿದ್ರು. ನಾನ್ ಹೇಳಿದ್ದು ಇಷ್ಟು.. "ಇಲ್ಲಾರೀ, ನಾನೇ ಇಷ್ಟು ದಿನ ತಪ್ಪು ಮಾಡ್ತಾ ಇದ್ದದು. ಅಪ್ಪನ ಮನಸ್ಥಿತಿ ನೋಡಿದ್ಮೇಲೆ ನನ್ನ ತಪ್ಪು ಅರ್ಥ ಆಯ್ತು. ಇನ್ಮೇಲೆ ಆ ತಪ್ಪುಗಳನ್ನು ಮಾಡೊಲ್ಲ. ನಂಗೆ ಇಬ್ಬರೂ ಒಂದೆ. ನಂಗೇ ಇಬ್ಬರೂ ಅಪ್ಪಂದಿರೇ" ಅಂತಾ ಹೇಳಿದೆ.