"ಮೌನ ತಬ್ಬಿತು ನೆಲವ, ಜುಮ್ಮನೆ ಪುಳಕಗೊಂಡಿತು ಧಾರಿಣಿ " ಎನ್ನೋ ಗೀತೆ ಕೇಳಿದಾಗ ಮನಸಲ್ಲಿ ಏನೋ ಒಂಥರಾ ಭಾವನೆ ಆವರಿಸುತ್ತೆ. ಅದೇನು ಅಂತಾನೂ ಗೊತ್ತಾಗೋದೇ ಇಲ್ಲ. ಒಂಥರ ನೀರವ ಮೌನ ಒಂದಷ್ಟು ಕ್ಷಣ ಆವರಿಸುತ್ತೆ. ಹಾಗೆ ಏನೇನೋ ನೆನಪಾಗಿ, ಮನಸು ತಂತಾನೇ ಕೊರಗಿ, ಒಂದಷ್ಟು ಹನಿಗಳನ್ನು ಕೆನ್ನೆ ಮೇಲೆ ಹರಿಸಿಬಿಡುತ್ತದೆ. ಇದೊಂದೇ ಹಾಡಲ್ಲ... ಆಗಾಗ ಈ ಹಾಳಾದ ಮನಸು ಏನನ್ನೋ ನೆನೆದು ನೆನೆದು ತಂತಾನೇ ಕೊರಗುತ್ತಿರುತ್ತದೆ. ಈ ನೋವು ಏನೆಂದು ನನಗೆ ಗೊತ್ತಿದ್ದರೂ, ಗೊತ್ತಾಗದಿದ್ದರೂ, ಆ ನೋವಿಗೆ ಮೂಕನಾಗಿ ಸಾಕ್ಷಿ ಆಗಿಬಿಡುತ್ತೇನೆ.

ಆ ದಿನ. ..

ಅದೇ ಯಾವ ದಿನ. .

ಅದೇ ಆ ದಿನ... ಅವಳು ನನ್ನ ಕಂಡ ದಿನ. ಅವಳ ನಾ ಕಂಡ ಆ ಹೊತ್ತು, ನಾನು ಯಾರು ಎಂಬುದು ಗೊತ್ತಾಗದೆ ಇದ್ದ ದಿನ. ಕಾಣದ ಲೋಕದೊಳು, ನನ್ನದೇ ಲೋಕ ಎಂದ್ರು ಭ್ರಮಿಸಿ ನಾ ನಗುತ್ತಿದ್ದ, ಅಳುತಿದ್ದ, ಆಟವಾಡುತ್ತಿದ್ದ ಮಾಯಾಲೋಕದಿಂದ ಯಾವುದೋ ಲೋಕಕ್ಕೆ ಜಾರಿ ಬಂದಂತ ಅನುಭವ ನೀಡಿದ ದಿನ. ಕಾರಣವೇ ಗೊತ್ತಿರದೆ ಸುಮ್ಮನೇ ಅಳುತಿದ್ದೆ. ಈ ಲೋಕದಲಿ ನನ್ನ ಮೊದಲ ಅಳು ಕಂಡು ಭಾರಿ ಖುಷಿ ಪಟ್ಟ ಅವಳು, ನನ್ನ ಬಾಚಿ, ತಬ್ಬಿ, ಮುತ್ತಿಟ್ಟು ಸಂಭ್ರಮಿಸಿದ ಕ್ಷಣ. ಅಮ್ಮಾ... ಎನ್ನುವ ನನ್ನ ಪಾಲಿನ ದೇವತೆ.

ವೇಳೆಯ ಅರಿವಿಲ್ಲದೇ ಬರುತ್ತಿದ್ದ ನನ್ನ ಅಳುವಿಗೆ ಅವಳು ಸಮಾಧಾನಿಸುವ ರೀತಿ, ನನ್ನ ಬೆಳವಣಿಗೆಗೆ ಅವಳ ಆರೈಕೆ, ಅವಳ ಮುದ್ದಿಸುವ ಪರಿ, ಅವಳ‌ ಲಾಲಿ ಹಾಡು ಹೀಗೆ ಒಂದೆ ಎರಡೇ ಅವಳ ಪಾಲನೆ ಪೋಷಣೆಯ ಕುರಿತು ಹೇಳಲು. ಅದು ಅವಳಿಗೆ ತಾಯ್ತನದ ಸಂಭ್ರಮವಾದರೆ, ನನಗೋ ಬಾಲ್ಯದ ಮೊದಲ ದಿನಗಳ ಭವ್ಯ ಮೆರವಣಿಗೆ. ಅವಳ ಎದೆಹಾಲೇ ನನಗೆ ಅಮೃತ. ಆ ಅಮೃತಪಾನದಿಂದಲೇ ಈ ಜೀವಕ್ಕೊಂದು ಚೇತನ. ಒಂದು ಜೀವದ ಸೃಷ್ಟಿಯಲ್ಲಿ ಗಂಡು ಹೆಣ್ಣು ಸಮಪಾಲು ಇರುವುದು ಹೌದಾದರೂ, ಹೆಣ್ಣಿನ ಪಾಲು ಸದಾ ಹೆಚ್ಚಾಗಿರಲು ಆ ಹೆಣ್ಣಿನ ತಾಯ್ತನದ ತಾಕತ್ತೇ ಕಾರಣ ಇರಬಹುದು.

ಮಾತೇ ಬರದ ನಾನು, ತುಸು ನಕ್ಕರೇ ಸಾಕು ಅವಳ ಸಂತೋಷಕೆ ಸ್ವರ್ಗವನ್ನೂ ನಿವಾಳಿಸಬೇಕು. ಅವಳ ಪ್ರೀತಿಯ ಅಮೃತಧಾರೆಯಲಿ ಪುಟ್ಟ ಹೆಜ್ಜೆಯನಿಟ್ಟು ನಡೆಯುವುದನ್ನೂ ಕಲಿತೆ. ಮೊದಲ ತಪ್ಪು ಹೆಜ್ಜೆಗಳನ್ನು ಸರಿಪಡಿಸಿ, ನನ್ನ ಕಾಲ ಮೇಲೆ ನಾನು ವಿಶ್ವಾಸದಿಂದ ನಿಲ್ಲುವಂತೆ ಮಾಡಿದಳು ತಾಯಿ. ಮಮತೆಯ ಕಾವಲಿನಲ್ಲಿ ದಿನ ಸರಿದದ್ದೂ ಗೊತ್ತಾಗಲಿಲ್ಲ. ಅಂತೂ ಸ್ವಲ್ಪ ದೊಡ್ಡವನಾಗಿಬಿಟ್ಟಿದ್ದೆ. ಅದೆಷ್ಟು ದೊಡ್ಡವನೆಂದರೆ, ಅಮ್ಮನ ಮಾತು ಬೋರು, ಅಮ್ಮನ ಪ್ರೀತಿ ಒಂಥರಾ ಪಿರಿಪಿರಿ. ಅವಳ ಕೇರಿಂಗ್ ಒಂಥರಾ ಹಿಂಸೆಯಂತೆ ಫೀಲ್ ಮಾಡೋ ಮಟ್ಟಿಗೆ ದೊಡ್ಡವನಾದೆ.

ಬಾಲ್ಯ ಕಳೆದದ್ದೂ ಗೊತ್ತಿಲ್ಲ, ಹರೆಯ ಬಂದದ್ದು ಗೊತ್ತಿಲ್ಲ. ವಯೋಸಹಜವಾಗಿ ಕೋಪ, ರೋಷಾವೇಶಕ್ಕೇನೂ ಕಮ್ಮಿ ಇಲ್ಲ. ಹರೆಯದ ಹೃದಯಕೆ ಹೊಸಹುಚ್ಚು‌ ಹಿಡಿದು ಮತ್ತೊಂದು ಹೆಣ್ ಹೃದಯಕೆ ಮನಸೋತಿದ್ದು ಗೊತ್ತಿಲ್ಲ. ಆ ಹೃದಯಕ್ಕೆ ದಾಸನಾಗಿ, ಆ ಪ್ರೀತಿಯಲಿ‌ ಪರವಶನಾಗಿ ತೇಲುವಾಗ ಅಮ್ಮ ಅಷ್ಟಾಗಿ ನೆನಪಾಗಲಿಲ್ಲ. ಆ ಪ್ರೀತಿಗೆ ಪರಮಾತ್ಮನ ಕಾಣಿಕೆಯಂತೆ ಮಡಿಲಲ್ಲಿ ನಮಗೊಂದು ಪುಟ್ಟ ಜೀವ ಕಾಲಿಟ್ಟಾಗಲೇ ಅಮ್ಮನ ಪ್ರೀತಿಯ ಭವ್ಯ ದರ್ಶನವಾಗಿದ್ದು. ನನ್ನ ಕಂದನ ನಗುವಿನಲ್ಲಿ ಅಳುವಿನಲ್ಲಿ ಅಮ್ಮನ ಪ್ರೀತಿಯು ಮತ್ತೆ ಮತ್ತೆ ಗರಿಬಿಚ್ಚಿ ನರ್ತಿಸುತ್ತಿತ್ತು. ಅಮ್ಮ ಬಂದಳು, ಕಂದನ ಜೊತೆಯಲ್ಲಿ ನಗುತಾ, ಕುಣಿಯುತಾ ಮತ್ತೆ ಮಗುವಾದಳು‌.

ಈ ಖುಷಿಯನ್ನಾ ದಿನಾ ಕಣ್ ತುಂಬಿಕೊಳ್ತಿದ್ದೆ‌. ಅದು ಆ ದೇವರಿಗೆ ಇಷ್ಟವಾಗಲಿಲ್ಲ ಎಂದು ಅನಿಸುತ್ತೆ. ಅಮ್ಮನಿಗೊಂದು ದೊಡ್ಡ ಖಾಯಿಲೆಯ ವರವಾಗಿ ಕೊಟ್ಟ. ಸಂಭ್ರಮಿಸುತ್ತಿದ್ದ ಅಮ್ಮ ದಿನೆದಿನೇ ಕೊರಗಿ ಕೊರಗಿ ಹಾಗೂ ಸೊರಗಿ ಹಾಸಿಗೆ ಹಿಡಿದೇ ಬಿಟ್ಟಳು. ಅಮ್ಮನ ಆರೈಕೆಯೊಂದೆ ನನ್ನ ಆದ್ಯ ಕರ್ತವ್ಯವಾಗಿ ಬಿಟ್ಟಿತು. ಆಸ್ಪತ್ರೆ ವಾತಾವರಣದಲ್ಲೇ ದಿನ ಕಳೆಯಬೇಕಾಗಿ ಬಂದ ದೇಹ ನಿತ್ಯವೂ ಸ್ವಲ್ಪ ಸ್ಬಲ್ಪವಾಗಿ ಲವಲವಿಕೆ ಕಳೆಗುಂದುಂತಾ ಬಂತು. ಆ ದೇವರ ಮುಂದೆ "ನನಗೆ ಅಮ್ಮಾ ಬೇಕು" ಎಂದು‌ ಚಿಕ್ಕ ಮಗುವಿನ ಹಾಗೇ ಅಳುತ್ತಾ ಅದೆಷ್ಟೋ ಬಾರಿ ಕೂತಿದ್ದೆ. ಈ ಮಧ್ಯೆ ನನ್ನ ಸಹಧರ್ಮಿಣಿಯೂ ಎರಡನೇ ಬಾಣಂತನಕೆ ಹೋದಳು. ಮತ್ತೆ ಒಂಟಿಯಾದೆ.. ಎರಡು ಸೆಕೆಂಡ್ ಕೂಡ ಸುಮ್ಮನಿರದೇ, ಪಟಪಟನೆ ಮಾತನಾಡಿ, ಎಲ್ಲರ ತಲೆ ತಿನ್ಮುತ್ತಿದ್ದ ನಾನು .... ಮೌನಿಯಾದೆ. ಒಮ್ಮೊಮ್ಮೆ ಧ್ಯಾನಿಯಾಗಿಬಿಡುತ್ತಿದ್ದೆ. ನೀರವತೆಗೆ ಅಷ್ಟೊಂದು ದಾಸನಾಗಿಬಿಟ್ಟಿದ್ದೆ.

ಹಾಸಿಗೆಯಲ್ಲಿನ ಅಮ್ಮ ಕೂಗಿದಾಗಷ್ಟೇ ಹತ್ತಿರ ಹೋಗಿ, ಅವಳ ಬೇಕುಬೇಡಗಳ ನೋಡುತ್ತಿದ್ದೆ. ಅವಳು ಸಂಕಟ ಪಡುವಾಗ ಅವಳಿಗೆ ಧೈರ್ಯ ನೀಡುವ ನೆಪ ಮಾಡಿ, ನಂತರದಲ್ಲಿ ಮರೆಯಾಗಿ ನಿಂತು ಮಗುವಿನಂತೆ ಗಳಗಳನೆ ಅತ್ತುಬಿಡುತ್ತಿದ್ದೆ. ದೇವರಲ್ಲಿ ಅವಳ ಕಷ್ಟ ಯಾರಿಗೂ ಬೇಡವೇ ಬೇಡ ಎಂಬ ಮನವಿ ಮಾಡುತ್ತಿದ್ದೆ.

ಒಮ್ಮೆ ಹಾಸಿಗೆಯಲ್ಲಿ ಮಲಗಿದ್ದ ಅಮ್ಮನ ನಾನೂ ಹಾಗೇ ನೋಡುತ್ತಾ ಇರುವಾಗ, ಅಮ್ಮನಿಗೆ ಎಚ್ಚರವಾಗಿ ಕಣ್ಣು ಬಿಟ್ಟರು, "ಮಗೂ, ನಾನಿಲ್ಲ ಅಂತ ಕೊರಗಬೇಡವೋ, ನಾ‌ ನಿನ್ನ ಬಿಟ್ಟು ಹೋಗಲ್ಲ" ಅಂತಾ ಅವಳು ನನ್ನ ತಲೆ ಸವರಿ ನೇವರಿಸುತ್ತಾ ಹೇಳುವಾಗಲೋ, ಬಲವಂತವಾಗಿ ಯಾರೋ ಎಳೆದಂತಾಗಿ, ತಕ್ಷಣಕೆ ಬಿರುಗಾಳಿ, ಹಾಸಿಗೆ ದಿಂಬು ಹಾಗೂ ಅಮ್ಮ ಸಮೇತ ಯಾವುದೋ ಪ್ರಪಾತಕ್ಕೆ ಜೋರಾಗಿ ಜಾರಿ ಹೋಗುತಿರುವಂತೆ ಭಾಸ... ಅಮ್ಮಾ ಕೂಡ ಜೋರಾಗಿ ಕಿರಿಚುತ್ತಿದ್ದಾಳೆ. ಏನಾಗುತ್ತಿದೆ ಎಂಬ ಅರಿವು ಕೂಡ ನನಗಿಲ್ಲ. ನಾನೂ ಪ್ರಪಾತಕ್ಕೆ ಎಗರಿ ಅಮ್ಮನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಜೋರಾಗಿ ಅಮ್ಮಾ ಎಂದು ಕಿರುಚುತ್ತಾ ಹಾರಿದೆ.... ಯಾವ ಘಳಿಗೆಯಲ್ಲಿ ಮೌನಿಯಾಗಿದ್ದೇನೋ, ಏನೋ ಗಂಟಲಿನ ಶಕ್ತಿಯೂ ಕುಂದಿತ್ತು. ನಾ ಕಿರುಚುವುದು ನನಗೆ ಮಾತ್ರ ಕೇಳಿಸುತ್ತಿತ್ತು. ಮತ್ತೂ ಶಕ್ತಿ ಮೀರಿ ಅಮ್ಮಾ ಎಂದು‌ ಕೂಗಿದೆ... ಬಡಿದಾಡಿದೆ.... ತಕ್ಷಣಕ್ಕೆ "ಏನಾಯ್ತು ರೀ" ಎಂದು ಗಾಬರಿಯಿಂದ ನನ್ನ ಹೆಂಡತಿ ಒಳಬಂದಳು. ಬಂದವಳೇ ಮುಖಕ್ಕೆ ಒಂದಷ್ಟು ತಣ್ಣೀರು ಚಿಮುಕಿಸಿ ಎಚ್ಚರಗೊಳಿಸಿದಳು. ಭಯಭೀತನಾಗಿದ್ದ ನಾನು, "ಏನಿಲ್ಲಾ.... ಏನಿಲ್ಲಾ.." ಎಂದಷ್ಟೇ ಹೇಳಿ, ಲೋಟ ನೀರು ಪಡೆದು ಗಟಗಟನೆ ಕುಡಿದು ಮುಗಿಸಿದ್ದೆ. ಅಬ್ಬಾ ಇಷ್ಟೊತ್ತು ನಾ ಕಂಡಿದ್ದು ಕನಸು. ಅಬ್ಬಾ ಇದೆಂತಾ ಕೆಟ್ಟ ಕನಸು. ಅದೆಂತಾ ಗಾಢ ಭಯಾನಕವಾಗಿತ್ತು. ಒಂಚೂರು ನೆನೆದೊಡೆ ಮತ್ತೆ ಮೈಯೊಳಗಿನ ರಕ್ತ ತಣ್ಣಗಾಗಿ ಬಿಡುತ್ತದೆ. "ಅಮ್ಮಾ.., ಅಮ್ಮಾ..." ಎಂದಷ್ಟೇ ಹೆಂಡತಿಯನು ಕೇಳಿದೆ? ಅದಕ್ಕವಳು ಒಳಗೆ ಇದ್ದಾರೆ ಎಂಬ ಪ್ರತ್ಯುತ್ತರ ಕೊಟ್ಟು, ಕಿಚನ್ ಇಂದ ಬಂದ ಕುಕ್ಕರ್ ವಿಷಲ್ ಸೌಂಡಿಗೆ ಬೆಚ್ಚಿ ಬಿದ್ದು ಓಡಿದಳು.

ಇತ್ತ ನಾನು ಸ್ವಲ್ಪ ಸುಧಾರಿಸಿಕೊಂಡು, ನಂತರ ಎದ್ದು ಮುಖ ತೊಳೆದು ಕನ್ನಡಿ ನೋಡುತಾ ಮುಖ ಒರೆಸಿಕೊಳ್ಳುವಾಗಲೂ ಅದೇ ಕನಸಿನ ನೆನಪು. ಮತ್ತೆ ಮೈ ಜುಮ್ಮಂತು. ಹಾಗೇ ನೋಡುತ್ತಲಿರುವಾಗ ಎಷ್ಟೊಂದು ಸಣ್ಣ ಆಗಿದ್ದೇನೆ ಎಂದನಿಸಿತು. ಅಮ್ಮಾ ಬೈದು ಬಿಟ್ಟಾಳು, ಇನ್ನು ಚೆನ್ನಾಗಿ ತಿಂದು ಸ್ವಲ್ಪ ದಪ್ಪ ಆಗಬೇಕು ಎಂದು ತೀರ್ಮಾನಿಸಿದೆ. ಬಾಚಣಿಗೆ ತೆಗೆದು ತಲೆ ಬಾಚಿಕೊಂಡು ಬೆಡ್ ರೂಮಿಂದಾ ಆಚೆ ಬಂದೆ. ಆಚೆ ಬಂದು ಹಾಲ್ ನಲ್ಲಿಯೇ ದಿವಾನ್ ಕಾಟ್ ಹತ್ತಿರದಲ್ಲಿ ಅಮ್ಮ ಮಲಗಿದ್ದಳು. ದಿವಾನ್ ಕಾಟ್ ಹತ್ತಿರದಲ್ಲೇ ಇದ್ದ ತೊಟ್ಟಿಲಲ್ಲಿ‌ ಆರು ತಿಂಗಳ‌ ಮಗುವಾಗಿ ಅಮ್ಮ ಮಲಗಿದ್ದಳು. ಅಮ್ಮ ಮತ್ತೆ ಮಗುವಾಗಿ ಬಂದಳು....

ಹೌದು, ನನ್ನ ಮಗಳು ಹುಟ್ಟಿದ ದಿನದಂದೆ ಅಮ್ಮ ಇಹಲೋಕ ತ್ಯಜಿಸಿದ್ದಳು. ಆದರೆ ಅವಳು‌ ನನ್ನ ಮಗಳ ರೂಪದಲ್ಲಿ ಮತ್ತೆ ಬಂದಿದ್ದಾಳೆ ಎಂದೇ ನಾನು ನಂಬಿರುವೆ. ನನ್ನ ನಂಬಿಕೆಯನ್ನು ನನ್ನಾಕೆಯೂ ಕೂಡ ಗೌರವಿಸುತ್ತಾಳೆ. ನನ್ನ ಕಂದಮ್ಮಳನ್ನಾ ನಾನೂ ಅಮ್ಮಾ ಎಂದೇ ಕರೆಯುವುದು. ಅಮ್ಮನ ಪ್ರೀತಿಯ ಮರೆಯಲು ಸಾಧ್ಯವೇ? ಮತ್ತೆ ಮಗುವಾಗಿ ಬಂದ ಅಮ್ಮನ ಸೇವೆ ಗಿಂತ ಬೇರೆ ಭಾಗ್ಯ ಏಕೆ ಅಲ್ಲವೇ? ನಾ ಮೌನಿಯಾಗಿ ಅಮ್ಮನನ್ನು ಆರಾಧಿಸುತ್ತಿದ್ದೇನೆ.

"ಮೌನ ತಬ್ಬಿತು ನೆಲವ, ಜುಮ್ಮನೆ ಪುಳಕಗೊಂಡಿತು ಧಾರಿಣಿ" ಎನ್ನೋ ಗೀತೆ ಕೇಳಿದಾಗ ಮನಸಲ್ಲಿ ಏನೋ ಒಂಥರಾ ಭಾವನೆ ಆವರಿಸುತ್ತೆ. ಅದೇನು ಅಂತಾನೂ ಗೊತ್ತಾಗೋದೇ ಇಲ್ಲ. ಒಂಥರ ನೀರವ ಮೌನ ಒಂದಷ್ಟು ಕ್ಷಣ ಆವರಿಸುತ್ತೆ. ಹಾಗೆ ಏನೇನೋ ನೆನಪಾಗಿ, ಮನಸು ತಂತಾನೇ ಕೊರಗಿ, ಒಂದಷ್ಟು ಹನಿಗಳನ್ನು ಕೆನ್ನೆ ಮೇಲೆ ಹರಿಸಿಬಿಡುತ್ತದೆ. ಇದೊಂದೇ ಹಾಡಲ್ಲ... ಆಗಾಗ ಈ ಹಾಳಾದ ಮನಸು ಏನನ್ನೋ ನೆನೆದು ನೆನೆದು ತಂತಾನೇ ಕೊರಗುತ್ತಿರುತ್ತದೆ. ಈ ನೋವು ಏನೆಂದು ನನಗೆ ಗೊತ್ತಿದ್ದರೂ, ಗೊತ್ತಾಗದಿದ್ದರೂ, ಆ ನೋವಿಗೆ ಮೂಕನಾಗಿ ಸಾಕ್ಷಿ ಆಗಿಬಿಡುತ್ತೇನೆ. ನಡುನಡುವೆ "ಮಗೂ, ನಾನಿಲ್ಲ ಅಂತ ಕೊರಗಬೇಡವೋ, ನಾ‌ ನಿನ್ನ ಬಿಟ್ಟು ಹೋಗಲ್ಲ" ಅಂತಾ ಅಮ್ಮಾ ಹೇಳಿದ ಮಾತು ನನ್ನ ಕಿವಿಯಲ್ಲಿ ಆಗಾಗ ಕೇಳಿಸುತ್ತಲೇ ಇರುತ್ತದೆ.