ಇವತ್ತು ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ, ಪೂಜೆ-ಪುನಸ್ಕಾರ ಮುಗಿಸಿಕೊಂಡು, ಈ ನನ್ನ ರಥಕ್ಕೂ ಪೂಜೆ ಮಾಡಿ, ಟಿಫನ್ ಮುಗಿಸಿ ಮನೆಯಿಂದ ಹೊರಟೆ. ಮನೆಯಿಂದ ಹೊರಟು, ಸುಮಾರು 2-3 ತಾಸು ಆದರೂ ಇವತ್ತು ಯಾವ ಪ್ಯಾಸೇಂಜರ್ ಸಿಗಲಿಲ್ಲ. ಸುಮ್ಮನೇ ನಿಧಾನವಾಗಿ ಗಾಡಿ ಓಡಿಸ್ತಾನೇ ಇದೀನಿ. ಮನೆಯಿಂದ ಹೊರಟ ಗಳಿಗೆ ಚೆನ್ನಾಗಿಲ್ವೇನೋ ಗೊತ್ತಿಲ್ಲ. ಯಾರು ಪ್ಯಾಸೆಂಜರ್ ಸಿಗದೇ ಇದ್ದುದರಿಂದ ಮನಸಿಗೆ ಬೇಜಾರಾಯ್ತು. ಅದಕ್ಕೆ ಒಂದು ಸಣ್ಣ ಟೀ ಅಂಗಡಿ ಹತ್ರ ನಿಲ್ಲಿಸಿದೆ. ಒಂದು ಸಿಗರೇಟ್ ಹಾಗೂ ಒಂದು ಟೀ ಹಿಡ್ಕೊಂಡು ಹಾಗೇ ಬಂದು ಆಟೋ ಹತ್ತಿರ ಕುಳಿತೆ. ಸಿಗರೇಟ್ ಹಚ್ಚಿ ಒಂದು ಧಮ್ ಎಳಿದ್ಮೇಲೆ ಏನೋ ಒಂಥರಾ ತೃಪ್ತಿ. ನಿಧಾನವಾಗಿ ಮನಸು ಎಲ್ಲೆಲ್ಲೋ ತೇಲಿ ಹೋಗ್ತಾ ಇತ್ತು. ಟೀ ಕುಡಿಯುತ್ತಾ ಸಿಗರೇಟ್ ಸೇದುತ್ತಾ ಮುದಗೊಂಡಿದ್ದ ಮನಸು ನನ್ನ ಬಾಲ್ಯದ ದಿನಗಳವರೆಗೂ ಸಾಗಿತ್ತು. ಬಾಲ್ಯದ ದಿನಗಳಲ್ಲಿ ನಾನಂತು ಸ್ವಲ್ಪ ತುಂಟ. ಇಬ್ಬರು ಅಣ್ಣಂದಿರು, ಮೂವರು ಅಕ್ಕಂದಿರು ಹಾಗೂ ಒಬ್ಬ ತಮ್ಮ ಇದ್ದ ನಾನು ಎಲ್ಲರಿಗೂ ಪ್ರಿಯವಾದವನೇ. ಆಗಿನ ದಿನಗಳು ಕಷ್ಟಕರ. ಈಗಿನಷ್ಟು ಅನುಕೂಲಕರವೂ ಅಲ್ಲ ಹಾಗೂ ಆದಾಯಕರವೂ ಅಲ್ಲ, ನನ್ನ ಅಪ್ಪ ತುಂಬಾ ಶ್ರಮಪಟ್ಟು ಇಷ್ಟೂ ಜನರನ್ನು ಸಾಕುತ್ತಿದ್ದ. ನನ್ನಮ್ಮ ಕೂಡ ಎಲ್ಲರ ಹೊಟ್ಟೆ ತುಂಬಿಸಲು ಅಪ್ಪನಿಗಿಂತಲೂ ಒಂದು ಭಾಗ ಹೆಚ್ಚೇ ಕಷ್ಟ ಪಡುತ್ತಿದ್ದಳು. ನೇಕಾರಿಕೆ ವೃತ್ತಿ ಮಾಡುತ್ತಿದ್ದ ಅಪ್ಪನಿಗೆ ಸಹಾಯ ಮಾಡುತ್ತಿದ್ದ ಅಮ್ಮ, ಕಂಡಿಕೆ ಸುತ್ತೋದು, ರೇಷಿಮೆ ಸೀರೆ ನೇಯುವಾಗ ನೂಲು ಗಂಟು ಬಿದ್ದಲ್ಲಿ, ಸಿಕ್ಕು ಬಿಡಿಸೋದು, ರಾಟೆ ಸುತ್ತೋದು ಜೊತೆಗೆ ಹಾಲು- ತರಕಾರಿ ಕೂಡ ಮಾರುವುದು ಎಲ್ಲಾ ಕೆಲಸವನ್ನು ಅಮ್ಮನೇ ಮಾಡುತ್ತಿದ್ದುದು. ಹಾಗೂ ಹೀಗೂ ಎಲ್ಲರೂ ಬೆಳೆದು ದೊಡ್ಡವರಾದ್ವಿ. ಕಷ್ಟದ ನಡುವೆಯೂ ಅಣ್ಣಂದಿರ ಮದುವೆ, ಅಕ್ಕಂದಿರ ಮದುವೆಯೂ ನಡೆಯಿತು. ಅಣ್ಣಂದಿರು ಇಬ್ಬರಿಗೂ ಸರ್ಕಾರಿ ಕೆಲಸ ಸಿಕ್ಕಿತು. ಮೊದಲೇ ಹೇಳಿದೆನೆಲ್ಲಾ, ತುಂಬಾ ತುಂಟ ಹುಡುಗನಾದ್ದರಿಂದ, ಮುದ್ದಾಗಿ ಬೆಳೆದಿದ್ದೆನಾದ್ದರಿಂದ ಓದಿನಲ್ಲಿ ಮುಂದಿರಲಿಲ್ಲ. ಓದು ತಲೆಗೂ ಹತ್ತಲಿಲ್ಲ. ಮೇಷ್ಟ್ರುಗಳೇ ಬಲವಂತವಾಗಿ ಬಂದು ಪರೀಕ್ಷೆಗೆ ಕುಂತ್ಕೋಳೋ. ನಾವ್ ಪಾಸ್ ಮಾಡ್ತೀವಿ ಅಂತಾ ಹೇಳಿದ್ರು ನಾನು ಹೋಗ್ಲೇ ಇಲ್ಲ. ಅಷ್ಟು ಮೊಂಡು ಬಿದ್ದಿದ್ದೆ. ಆಗಿನ ಕಾಲದಲ್ಲಿ ಶಿಕ್ಷಣಕ್ಕೂ ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ನಾವೆಲ್ಲಾ ಎಸ್.ಎಸ್.ಎಲ್.ಸಿ. ಓದಿದ್ದೇ ಒಂದು ದೊಡ್ಡ ಸಾಧನೆ. ನಮ್ಮ ಅಣ್ಣಂದಿರು ಕೂಡ ಓದಿದ್ದು ಅದೇ ಎಸ್.ಎಸ್.ಎಲ್.ಸಿ. ಆದ್ರೆ ಅವರ ಅದೃಷ್ಟಕ್ಕೆ ಸರ್ಕಾರಿ ಕೆಲಸ ಸಿಕ್ತು. ಹಾಗಾಗಿ ಇವತ್ತು ಕೋಟಿಗಟ್ಟಲೇ ಆಸ್ತಿ ಮಾಡ್ಕೊಂಡು ಚೆನ್ನಾಗಿದ್ದಾರೆ. ಇರಲಿ ಬಿಡಿ. ಅದು ಅವರ ಅದೃಷ್ಟ.
ಅಕ್ಕಂದಿರಿಗೆ ನಮ್ಮಪ್ಪ ಓದಿಸಲೇ ಇಲ್ಲ. ಹೈಸ್ಕೂಲ್ ಮೆಟ್ಟಿಲು ಹತ್ತಿಸದೇ ಬೇಗ ಮದುವೆ ಮಾಡಿ ಕಳುಹಿಸಿಕೊಟ್ಟ. ನಂತರದ್ದು ಅವರವರದೇ ಕಥೆ. ಅಮ್ಮ ಇನ್ನೂ ಗಟ್ಟಿಮುಟ್ಟಾಗಿರುವಾಗಲೇ, ಅದೊಂದು ಎದೆನೋವು ಎಂದು ಆಸ್ಪತ್ರೆ ಸೇರಿದವಳು ಮನೆಗೆ ಬರಲೇ ಇಲ್ಲ. ನನ್ನ ಮದುವೆಯ ಮುಂಚೆ ತೀರಿಕೊಂಡು ಬಿಟ್ರು. ಇದ್ದ ಒಬ್ಬ ತಮ್ಮ ಅಣ್ಣನ ಮನೆಗೆ ಹೋದ. ಮನೆಯಲ್ಲಿ ನಾನೂ ಅಪ್ಪ ಇಬ್ಬರೇ. ನಾವೇ ಕೈಲಾದಷ್ಟು ಕೆಲಸ ಮಾಡಿಕೊಳ್ಳುತ್ತಿದ್ದೆವು. ತಾಲ್ಲೂಕು ಕೇಂದ್ರವಾದರೂ, ಒಂದು ಹಳ್ಳಿಗಿಂತ ದೊಡ್ಡದಾಗಿ, ಪಟ್ಟಣಕ್ಕಿಂತ ಚಿಕ್ಕದಾಗಿದ್ದ ನಮ್ಮೂರು ಅಂತಾ ಅನುಕೂಲಕರ ಪರಿಸರವೇನಲ್ಲ. ಸ್ನೇಹಿತರ ಹಾಗೂ ಭಾವಂದಿರ ಸಹವಾಸದಿಂದ ಕುಡಿತ, ಸಿಗರೇಟ್, ಮಟ್ಕಾ ಎಲ್ಲವನ್ನೂ ಸ್ವಲ್ಪ ಸ್ವಲ್ಪವೇ ಕಲಿತಿದ್ದೆ. ಅವರ ಸಹವಾಸದಲ್ಲಿ ಇದ್ದಷ್ಟು ದಿನ ಅದ್ಯಾವುದು ಕೆಟ್ಟದ್ದು ಅಂತಾ ಅನಿಸಲಿಲ್ಲ. ಅದು ಹೇಗೆ ಅನಿಸುತ್ತೆ ಅಲ್ವಾ? ಅಂತೂ ನಮ್ಮಪ್ಪ, ತನ್ನ ತಂಗಿ ಮಗಳನ್ನೇ ಸೊಸೆಯಾಗಿ ಒಪ್ಪಿ ನನಗೆ ಮದುವೆ ಮಾಡಿದ್ರು. ಲಕ್ಷ್ಮಿ ಬಂದ್ಮೇಲೇ ನಾನು ಬದಲಾಗಿದ್ದು. ಅಲ್ಲಿಯವರೆಗೂ ನನ್ನ ಪ್ರಪಂಚಾನೇ ನನಗೆ. ಲಕ್ಷ್ಮಿ ಬಂದಾದ ತಕ್ಷಣವೇ ನಾನೇನೂ ಬದಲಾಗಲಿಲ್ಲ. ನನ್ನ ದುಶ್ಚಟಗಳು ಇದ್ದವೂ, ನೇಯುವ ಕೆಲಸ ಸಾಗುತ್ತಿರಲಿಲ್ಲ, ಕೆಲಸವಿಲ್ಲದೇ ಸಂಸಾರ ತಾಪತ್ರಯ ಹಾಗೂ ಸ್ವಹಿತಕ್ಕಾಗಿ ಸಾಲದ ಹೊರೆಯೂ ಜಾಸ್ತಿಯಾಯಿತು. ಅಷ್ಟರಲ್ಲಾಗಲೇ ನನಗೆ ಎರಡು ಮಕ್ಕಳು. ಈ ಹಾಳಾದ ಊರಲ್ಲಿ ಇದ್ದಷ್ಟು ದಿನ ನೀವು ಉದ್ದಾರವಾಗೋದಿಲ್ಲ, ನಡೀರೀ ಬೇರೆ ಕಡೆ ಹೋಗೋಣ. ಚಿಕ್ಕಪುಟ್ಟ ಕೆಲಸ ಏನಾದ್ರೂ ಮಾಡಿ ಬದುಕೋಣ ಅಂತಾ ಗೊಣಗುತ್ತಿದ್ದ ನನ್ನ ಹೆಂಡತಿಯ ಒತ್ತಾಯದ ಮೇರೆಗೆ, ಹುಟ್ಟೂರು ಬಿಡುವ ಪರಿಸ್ಥಿತಿ ಬಂತು. ಅಂತಾ ಕಷ್ಟಕಾಲದಲ್ಲೂ ನಮಗಿಂತ ಸ್ಥಿತಿವಂತರಾಗಿದ್ದ ಅಣ್ಣಂದಿರು ಕೈಹಿಡಿಯಲಿಲ್ಲ. “ಎಲ್ಲರೂ ನಮ್ಮವರೇ, ಆದರೆ ಕಷ್ಟಕಾಲಕ್ಕಲ್ಲ” ಅನ್ನೋ ಮಾತಿನ ಸತ್ಯ ಆ ದಿನ ಅರ್ಥವಾಯಿತು. ಅಂದೇ ತೀರ್ಮಾನಿಸಿದೆ, ಇನ್ಯಾವತ್ತೂ ಕೆಟ್ಟ ಚಟಗಳ ಕಡೆ ಮುಖ ಮಾಡಬಾರದು ಎಂದು. ಆವತ್ತೆ ಕುಡಿತ, ಮಟ್ಕಾ, ಎಲ್ಲಾ ಬಿಟ್ಟೆ. ಅಂತಾ ಸ್ನೇಹಿತರನ್ನ ಆದಷ್ಟು ದೂರ ಮಾಡಿದೆ. ಕಟ್ಟಿಕೊಂಡೋಳ ಜೊತೆ ಮಕ್ಕಳನ್ನೂ ಕರೆದುಕೊಂಡು ದೂರದ ಊರಿಗೆ ಬಂದು ಬಿಟ್ಟೆ.
ಹೆಚ್ಚಿನ ಪರಿಚಯವಿರದ ಜಾಗ. ಏನು ಮಾಡುವುದು ಗೊತ್ತಿಲ್ಲ. ನನ್ನ ಹೊಟ್ಟೆಯ ಹಸಿವು ನೋವು ಕೊಟ್ಟರೂ ಸಹಿಸಿಕೊಳ್ಳುತ್ತಿದ್ದ ಮನಸು, ಮಕ್ಕಳು ಹೊಟ್ಟೆ ಹಸಿವು ಎಂದರೆ ಸಾಕು ಚುರ್ ಎಂದು ಬಿಡುತ್ತಿತ್ತು. ಅವರೆದುರು ಅಳಲಾರದೇ ಎಷ್ಟೋ ಸಾರಿ ಹೊರಬಂದುಬಿಡುತ್ತಿದ್ದೆ. ಕೈಯಲ್ಲಿ ಏನೂ ಇಲ್ಲ. ದಾರಿ ತೋರಿಸುವವರು ಇಲ್ಲ. ದೇವಸ್ಥಾನಕ್ಕೆ ಹೋಗಿ, ತಂದ ಪ್ರಸಾದದಿಂದ ಒಂದೆರಡು ಬಾರಿ ಮಕ್ಕಳ ಹೊಟ್ಟೆ ತುಂಬಿಸಿದ್ದೂ ಇದೆ. ಅಂತಾ ಕಡುಕಷ್ಟಕರಕಾಲ. ನಾನೂ ಈ ಸ್ಥಿತಿಯಲ್ಲಿ ಇದೀನಿ ಎಂದು ಗೊತ್ತಿದ್ದರೂ ಏನೂ ಗೊತ್ತಿಲ್ಲದಂತಿರುವ ಅಣ್ಣಂದಿರು. ಕನಿಷ್ಟ ಪಕ್ಷ ಆ ಸಮಯಕ್ಕೆ ಒಂದಷ್ಟು ಸಾಲವಾದರೂ ನೀಡಬಹುದಾಗಿತ್ತು. ಹೀಗೆ ಒಂದು ದಿನ ದೇವಿಯ ದೇವಸ್ಥಾನದಲ್ಲಿ ಕುಳಿತೆ. ಅದಾಗಲೇ ೧೦ ಗಂಟೆಯಾಗಿತ್ತು. ಭಕ್ತರು ಯಾರೂ ಇರಲಿಲ್ಲ. ಪೂಜಾರಿಯೂ ಇರಲಿಲ್ಲ. ಒಬ್ಬನೇ ದೇವಿಯ ಎದುರು ಕುಳಿತೆ. ನನ್ನ ಹಾಗೂ ನನ್ನ ಮಕ್ಕಳನ್ನು ಕಾಪಾಡಲು ತಾಯಿಯನ್ನು ಬೇಡಿಕೊಂಡೆ. ಗಂಡಸಾಗಿಯೂ ಮಗುವಿನಂತೆ ಗಳಗಳನೆ ಅತ್ತುಬಿಟ್ಟೆ. ಏನಾದರೂ ದಾರಿ ತೋರಿಸು ತಾಯಿ, ಎಂದು ಬೇಡುತ್ತಿರುವಾಗ ಹೊರಗೆ ಯಾರೋ ಒಬ್ಬಾಕೆ "ಸೊಪ್ಪು ತರಕಾರಿ" ಎಂದು ಕೂಗುತ್ತಾ ಹೋಗುತ್ತಿದ್ಸಳು. ತಕ್ಷಣ ನನ್ನ ಗಮನ ಆ ಕಡೆ ಹೋಯಿತು. ದೇವಿಯೇ ಆಕೆಯ ರೂಪದಲ್ಲಿ ಬಂದು ದಾರಿ ತೋರಿಸಿದ್ದಾಳೆಂದುಕೊಂಡು ದೇವಿಗೆ ನಮಸ್ಕಾರ ಮಾಡಿ, ಜೇಬಲ್ಲಿದ್ದ ೧೦೦ ರೂಪಾಯಿ ಹಿಡಿದು ಮಾರ್ಕೆಟ್ ಕಡೆ ಹೊರಟೆ. ಆ ತಕ್ಷಣ ಡಿಸೈಡ್ ಮಾಡಿದೆ. ಸೊಪ್ಪು ತರಕಾರಿ ಮಾರೋಣವೆಂದು. ತಕ್ಷಣ ಸೊಪ್ಪು ತೆಗೆದುಕೊಂಡು ಊರೂ ಕೇರಿ ಅಲೆದು ಅಲೆದು ಮಾರಿದೆ. ಸಂಜೆ ಹೊತ್ತಿಗೆ ೩೦೦ ಆದಾಯ ಬಂತು. ಮನೆಗೆ ಬೇಕಾದ ಸಾಮಾನು ತೆಗೆದುಕೊಂಡು ಹೋದೆ. ಲಕ್ಷ್ಮಿಯೂ ಖುಷಿಯಾದಳು. ಅಲ್ಲಿಂದ ದಿನವೂ ಬೆಳಿಗ್ಗೆ ಚಳಿ ಮಳೆ ಎನ್ನದೇ ಸೊಪ್ಪು ಮಾರಲು ಹೊರಟೆ. ಒಂದೊಂದು ದಿನ ಒಳ್ಳೆಯ ಆದಾಯ. ಒಂದೊಂದು ದಿನ ಅದೆಷ್ಟೇ ಕೇರಿ ಸುತ್ತಿದರೂ ವ್ಯಾಪಾರ ಆಗುತ್ತಿರಲಿಲ್ಲ. ಸುತ್ತಿ ಸುತ್ತಿ ಕಾಲುನೋವು ಬಂದು ಸಂಜೆ ಸುಸ್ತಾಗಿ ಮಲಗುತ್ತಿದ್ದೆ. ಲಕ್ಷ್ಮೀ ಕಾಲು ಒತ್ತಿ ಸೇವೆ ಮಾಡಿದಳು. ನನ್ನ ಅವಸ್ಥೆ ನೋಡಿ, ಹೆಚ್ಚು ಸುತ್ತಿ ಸುತ್ತೀ ಕಾಲು ನೋವು ಮಾಡಿಕೊಂಡು ಆರೋಗ್ಯ ಕೆಡಿಸಿಕೊಳ್ಳುವುದರ ಬದಲಾಗಿ ಕುಳಿತಲ್ಲಿಯೇ ವ್ಯಾಪಾರ ಮಾಡುವ ಮಾರ್ಗ ಹೇಳಿದಳು. ಹೆಂಡತಿಯಾಗಿ ಬಂದವಳು ಅದೆಷ್ಟೇ ಕಷ್ಟ ಬಂದಾಗಲು ಗಂಡನ ಬೆನ್ನಿಗೆ ನಿಂತು, ಪರವಾಗಿ ಸಹಕರಿಸುತ್ತಿದ್ದರೇ ಗಂಡನಾದವನು ಖಂಡಿತ ಉದ್ದಾರವಾಗುತ್ತಾನೆ. ಅದೇ ಹೆಂಡತಿ ಗಂಡನ ನೆಮ್ಮದಿ ಹಾಳು ಮಾಡಿ ಮೂರು ಹೊತ್ತು ಕಾಡುವವಳಾದರೇ ಸಂಸಾರ ನರಕ.
ಆಕೆಯ ಸಲಹೆಯಂತೆ ಒಂದು ಕೈಗಾಡಿ ಮಾಡಿಕೊಂಡು ಸಂಜೆ ಹೊತ್ತು ಬೋಂಡ ಬಜ್ಜಿ ಮಾರಿದೆ. ನನ್ನ ಲಕ್ಷ್ಮಿಯೂ ಜೊತೆಯಾಗಿ ಕೆಲಸ ಮಾಡಿದಳು. ಮಕ್ಕಳು ನಾವು ಬರುವ ಹೊತ್ತಿಗೆ ತಮ್ಮ ಪಾಡಿಗೆ ತಾವು ಆಟವಾಡಿ, ಒಮ್ಮೆ ಊಟ ಮಾಡಿ, ಒಮ್ಮೊಮ್ಮೆ ಊಟ ಮಾಡದೇ ಮಲಗಿರುತ್ತಿದ್ದವು. ಸಣ್ಣ ಮಗನದ್ದು ಹಠ ಜಾಸ್ತಿ, ಅವನ ರಂಪಾಟಕ್ಕೆ ನಾನು ಸಿಟ್ಟಾದರೂ, ಲಕ್ಷ್ಮಿ ಮಕ್ಕಳ ಜೊತೆ ನನ್ನನ್ನೂ ಸುಧಾರಿಸಬೇಕಾಗಿತ್ತು. ವರ್ಷಕ್ಕೊಮ್ಮೆ ಕುಟುಂಬದ ಎಲ್ಲರೂ ಸೇರಿ ಹಿರಿಯರ ಹಬ್ಬ ಮಾಡುವ ಸಂಪ್ರದಾಯ ಇದೆ ನಮ್ಮಲ್ಲಿ. ಹೆಂಡತಿ ಮಕ್ಕಳನ್ನು ಕರೆದುಕೊಂಡು ಊರಿಗೆ ಬರುವಾಗ ಆರ್ಥಿಕವಾಗಿ ತುಂಬಾ ತೊಂದರೆಯಾಗುತ್ತಿತ್ತು. ಅಣ್ಣಂದಿರಾಗಲೀ, ಅವರ ಕುಟುಂಬದವರಾಗಲೀ ಅಂತಾ ಪ್ರೀತಿ, ಆತ್ಮೀಯತೆಯಿಂದ ಕಾಣುತ್ತಿರಲಿಲ್ಲ. ಲಕ್ಷ್ಮಿ ಅಲ್ಲಿಯೂ ಸಾಕಷ್ಟು ಮನೆ ಕೆಲಸ ಮಾಡಿಯೇ ಊರಿಗೆ ಹಿಂದಿರುಗಬೇಕಾಗಿತ್ತು. ಅವರಿಗೆ ನಮ್ಮ ಮೇಲಿದ್ದ ನಿರ್ಲಕ್ಷ್ಯ ಪ್ರತಿ ಸಣ್ಣ ವಿಷಯದಲ್ಲೂ ಕಾಣಿಸುತ್ತಿತ್ತು. ಆದರೆ ಪ್ರತಿಭಟಿಸದ ಮನಸ್ಥಿತಿ ನಮ್ಮದು. ಏನೋ ಇದ್ದ ಎರಡು ದಿನ ಸುಧಾರಿಸಿಕೊಂಡು ಊರಿಗೆ ಹಿಂದಿರುಗುತ್ತಿದ್ದೆವು. ಅಂತೂ ಇಂತೂ ಲಕ್ಷ್ಮಿಯ ಬಲವಂತದಿಂದಲೇ ಮನಸು ಮಾಡಿ, ಕಂತಿನಲ್ಲಿ ಸಾಲ ಮರುಪಾವತಿ ಮಾಡುವ ಕರಾರಿನಲ್ಲಿ ಆಟೋ ಖರೀದಿಸಿದೆ. ಆಟೋ ಓಡಿಸಲು ಡಿ.ಎಲ್. ಮಾಡಿಸಬೇಕಾದ ದಿನ ೮ ನೇ ಕ್ಲಾಸ್ ಅರ್ಧಕ್ಕೆ ಬಿಟ್ಟಿದ್ದು ಎಷ್ಟು ತಪ್ಪು ಎಂಬ ಅರ್ಥ ಆಯ್ತು. ಏನನ್ನಾದರೂ ಕಳೆದುಕೊಂಡಾಗಲೇ ಅದರ ಬೆಲೆ ಗೊತ್ತಾಗುವುದು. ಆಗ ಆರ್.ಟಿ.ಓ. ನಿಯಮಗಳು ಅಷ್ಟೊಂದು ಬಿಗಿಯಿರಲಿಲ್ಲ. ಅಲ್ಲದೇ ಊರಿಗೆ ಹೋಗಿ ಎಂಟನೇ ಕ್ಲಾಸು ಟಿ.ಸಿ. ತಂದು ಡಿ.ಎಲ್. ಮಾಡಿಸಿದೆ. ಅಂತೂ ಆಟೋ ಡ್ರೈವರ್ ಆದೆ.
ಈ ಆಟೋ ಬಂದ್ಮೇಲೇ… ನನ್ನ ಜೀವನದಲ್ಲೂ ಸುಖದ ಕ್ಷಣಗಳು ಇವೆ. ಅವು ಬರುತ್ತೆ ಅಂತಾ ಗೊತ್ತಾಗಿದ್ದು. ಎಂದಿನಂತೆ ಕಷ್ಟಪಟ್ಟು ದುಡಿದೆ. ಯಾವುದೇ ಕೆಲಸವಾಗಲೀ ಶ್ರದ್ದೆ ಹಾಗೂ ನಿಷ್ಠೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತೆ ಅನ್ನೊದಕ್ಕೆ ನಾನೇ ಉದಾಹರಣೆ. ಸ್ವಂತ ಮನೆ ಕೂಡ ಮಾಡಿಕೊಂಡೆ. ಇವತ್ತು ಮಕ್ಕಳು ಕೂಡ ದುಡಿಯುತ್ತಾರೆ. ಒಬ್ಬ ಮಗನ ಮದುವೆಯನ್ನು ಮಾಡಿದ್ದೇನೆ. ಈಗ ಇಷ್ಟೆಲ್ಲ ಅನುಕೂಲದ ನಡುವೆ ಇರುವಾಗ ದೂರ ದೂರ ಸರಿಯುತ್ತಿದ್ದ ಜನರಿಗೆ ಕಾಣಿಸಿದೆ. ಅಂದಿನ ಕಷ್ಟಕಾಲದಲ್ಲಿ ಕಂಡೂ ಕಾಣದಂತೆ ಆಡುತ್ತಿದ್ದ, ಮಾತುಗಳಲ್ಲೇ ಚುಚ್ಚುತ್ತಿದ್ದ, ನಮ್ಮ ಬಗ್ಗೆ ಅತಿಯಾದ ನಿರ್ಲಕ್ಷ್ಯ ಮಾಡುತ್ತಿದ್ದ ನಮ್ಮವರಿಗೆ ಈಗ ನಾವು ಕಾಣಿಸುತ್ತಿದ್ದೇವೆ. ಈಗ ಅವರಾಗಿಯೇ ಬಂದು ಮಾತನಾಡಿಸುವಂತಾಯ್ತು. ಅವರಾಗಿಯೇ ಬಂದುದಕ್ಕೆ ಖುಷಿ. ಅಣ್ಣಂದಿರಿಗೆ ನೆನಪಾದೆನಲ್ಲ ಅನ್ನೋದೇ ಸಮಾಧಾನ. ಎಲ್ಲರೂ ಮತ್ತೆ ಒಂದಾಗಿದ್ದು, ಮೈಕ್ರೋ ಫ್ಯಾಮಿಲಿಯಂತಾಗಿದ್ದ ನಮ್ಮ ಕುಟುಂಬ ಅಪ್ಪ, ಅಣ್ಣಂದಿರು, ಅತ್ತಿಗೆ, ಮಕ್ಕಳು, ಅಕ್ಕಂದಿರು ಎಲ್ಲರೂ ಸೇರಿ ತುಂಬಿದ ಕುಟುಂಬ ಆಯಿತೆಂದು ತುಂಬಾ ಖುಷಿಯಾಯ್ತು.
ಆದರೆ ಈ ತುಂಬಿದ ಮನೆ ತುಂಬಾ ದಿನ ಒಂದಾಗಿರಲಿಲ್ಲ. ಒಂದಾಗುವುದರ ಹಿಂದೆ ಇದ್ದ ಅವರ ಸ್ವಾರ್ಥ ಬುದ್ದಿ ನನ್ನ ಮನಸನ್ನು ಘಾಸಿಗೊಳಿಸಿತು. ಹೆಂಡತಿ ಮಕ್ಕಳಿಗೂ ಬೇಜಾರು. ಒಂದು ಮನೆ ತುಂಬಿದಮನೆಯಾಗಿರಬೇಕಾದರೆ ಮನೆಯಲ್ಲಿನ ಎಲ್ಲರಲ್ಲೂ ಆತ್ಮೀಯತೆ ಇರಬೇಕು. ಯಾರೋ ಒಬ್ಬನಲ್ಲಿ ಆ ಭಾವನೆ ಇದ್ದರೆ ಸಾಲೋದಿಲ್ಲ. ಎಲ್ಲರೂ ನಮ್ಮವರೇ ಅನ್ನೋದು ಪ್ರತಿಯೊಬ್ಬರ ಅಂತರಾಳದ ಮಾತಾಗಿರಬೇಕು. ಆಗಲೇ ಒಗ್ಗಟ್ಟಿನ ಕುಟುಂಬ, ಪ್ರೀತಿ ಎಲ್ಲಾ. ಹೀಗೆ ಯೋಚಿಸುತ್ತಲೇ ಇದ್ದ ನನಗೆ ಸಿಗರೇಟು ಮುಗಿದದ್ದು ಗೊತ್ತಾಗಲಿಲ್ಲ ಟೀ ತಣ್ಣಗೂ ಆಗಿದ್ದು ಗೊತ್ತಾಗಲಿಲ್ಲ. ನನ್ನ ಫೋನ್ ರಿಂಗ್ ಆದಾಗಲೇ ಗೊತ್ತಾಗಿದ್ದು. ಮನೆಗೆ ಅಣ್ಣ ಅತ್ತಿಗೆ ಮಕ್ಕಳು ಎಲ್ರೂ ಮತ್ತೇ ಬಂದಿದ್ದಾರಂತೆ, ನನ್ನ ಹತ್ತಿರ ಕ್ಷಮೆ ಕೇಳೋಕೆ. ನಂಗೆ ಒಂಥರಾ ಸಿಟ್ಟು ಬರ್ತಿದೆ. ಆದರೂ ಮಾನವೀಯತೆಯಿಂದ ಯೋಚನೆ ಮಾಡಬೇಕಲ್ಲ. ನಾವು ಈ ಭೂಮಿ ಮೇಲೆ ಇರೋದ್ ಅದೆಷ್ಟು ದಿನ. ಇರೋ ಅಷ್ಟೂ ದಿನ ಚೆನ್ನಾಗಿರಬೇಕು ಅಷ್ಟೇ. ಮತ್ತೆ ನಾವೆಲ್ಲರೂ ಸೇರಿದರೆ ಮಾತ್ರ ನಮ್ಮದೂ ತುಂಬಿದ ಮನೆ ಅಂತಾ ಆಗುತ್ತೆ. ಈ ಈಗೋ ಇರೋದ್ರಿಂದಾನೇ ಮನೆಗಳು ಒಡೆದು ಸಣ್ಣದಾಗಿರೋದು. ಕ್ಷಮಿಸುವ ಹಾಗೂ ಮರೆಯುವ ಗುಣ ಮುಖ್ಯ. ಟೀ ಅಂಗಡಿಯಾಕೆಗೆ ಕಾಸು ಕೊಟ್ಟು ಆಟೋ ಏರಿದೆ. ಆಟೋ ಸ್ಟಾರ್ಟ್ ಮಾಡುವಾಗ ಅಂದುಕೊಂಡಿದ್ದು, ಈ ಆಟೋ ಬಂದ್ಮೇಲೇ… ಸಾಕಷ್ಟು ಅನುಕೂಲಕರ ಬದಲಾವಣೆ ಆಗಿದೆ ನನ್ನ ಜೀವನದಲ್ಲಿ. ಮನೆಗೆ ಹೊರಟೆ. ಮುಂದೇನಾಯ್ತು ಅಂತಾ ನಿಮಗೆ ಗೊತ್ತಾಗಬಹುದು ಅಲ್ವಾ....



