ಅದೊಂದು ಹಚ್ಚಹಸಿರಿನ ಪಾರ್ಕು. ರಾತ್ರಿ ಸುರಿದ ಮಳೆಗೆ ನೆನೆದ ಮಣ್ಣು ಘಮಘಮಿಸುತ್ತಿತ್ತು. ನಾನು ನನ್ನ ಒಂದಿಬ್ಬರು ಫ್ರೆಂಡ್ಸ್ ಜೊತೆ ಬೆಂಚೊದರ ಮೇಲೆ ಕುಳಿತು ಹರಟುತ್ತಿದ್ದೆ. ಹಾಗೇ ಹರಟುತ್ತಿರುವ ಚಿಟ್ಟೆಯೊಂದು ಹಾರುತ್ತಾ, ಹೂವೊಂದರ ಮೇಲೆ ಕುಳಿತಿತ್ತು. ಅದನ್ನೇ ನೋಡುತ್ತಿರಲು, ಮತ್ತೇನೊ ಬಂದಂತಾಗಿ, ದೃಷ್ಟಿ ಹಾಯಿಸಿದೆ. ಚಂದದ ಚೆಲುವೆಯೊಬ್ಬಳು, ಹಾರುವ ನೆಪ ತೋರುವ ಮುಂಗುರುಳ ಸರಿಸುತಾ, ತನ್ನ ಸಖಿಯೊಂದಿಗೆ ಏನನ್ನೋ ಮಾತನಾಡುತ್ತಾ ಹೋಗುತ್ತಿದ್ದಳು. ಅವಳ ಮುಖ, ಕಣ್ಣು, ಅವಳ ಚೆಂದುಟಿ ಎಲ್ಲವನೂ ನೋಡುತಾ ನಾ ಕಳೆದೆ ಹೋದೆ. ಸಿನಿಮಾಗಳಲ್ಲಿ ತೋರಿಸುವ ಹಾಗೇ ಸ್ಲೋ ಮೋಷನ್ ನಲ್ಲಿ ಅವಳ ನಗು, ಮಾತು, ಮುಂಗುರುಳ ಸರಿಸುವಿಕೆ ಕಾಣಿಸುತ್ತಿತ್ತು. ತಕ್ಷಣಕ್ಕೆ ಜೊತೆಯಲ್ಲಿದ್ದವರು ಮಾಯವಾಗಿ, ನಾನೂ ಅವಳು ಮಾತ್ರ ಇದ್ವಿ. ಏನೂ ಮಾಡಲು ತೋಚದಾಗಿ, ಅವಳನ್ನೇ ಮಾತನಾಡಿಸುವ ಮನಸಾಗಿ ಅವಳ ಕಡೆ ಹೊರಟೆ. "ಎಕ್ಸ್ ಕ್ಸೂಸ್ ಮೀ" ಅಂತಾ ಇನ್ನೇನು ಮಾತನಾಡಿಸಬೇಕು ಅನ್ನೋಷ್ಟರಲ್ಲಿ ಭುಜ ಹಿಡಿದು "ಚಿನ್ನು.. ಚಿನ್ನೂ" ಅಂತಾ ಮಾತನಾಡಿಸಿದಂತಾಯ್ತು. ಹಿಂದೆ ತಿರುಗಿ ನೋಡಿದರೆ ಪೂರ್ಣ ಕತ್ತಲೆ.. ಆದರೂ "ಚಿನ್ನು.. ಚಿನ್ನೂ" ಎನ್ನೋ ಕೂಗು ಕೇಳಿಸಿತು. ಗಾಬರಿಯಾಯ್ತು. ಬೆಚ್ಚಿದೆ... ಥಟ್ಟನೆ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅರಿವಾದದ್ದು, ಇಷ್ಟೊತ್ತು ಕಂಡಿದ್ದು ಕನಸು ಅಂತ. ಎಂಥಾ ಒಳ್ಳೆಯ ಕನಸು, ಅದ್ಯಾರಪ್ಪಾ ಅವಳು ... ಮನಸೊಳಗೆ ಪ್ರಶ್ನೆ ಹಾಕಿ ಕೂತೆ. ಅಷ್ಟರಲ್ಲಿ "ಏಳೋ ಚಿನ್ನು, ಟೈಮಾಯ್ತು. ಆಗಲೇ ಏಳು ಗಂಟೆಯಾಗಿದೆ. ಇನ್ನೂ ಮಲಗೇ ಇದಿಯಾ" ಅಂತಾ ಅಮ್ಮಾ ಕೂಗಿಕೊಂಡಳು.

"ಹ್ಞೂಂ" ಎಂದಷ್ಟೇ ಜೋರಾಗಿ ಹೇಳಿ, "ಎಂಥಾ ಒಳ್ಳೆಯ ಕನಸು, ಹಾಳು ಮಾಡಿಬಿಟ್ಟೆ" ಅಂತಾ ಗೊಣಗಿಕೊಂಡೆ. ಎದ್ದು ರೆಡಿಯಾಗಿ ಜಿಮ್ ಗೆ ಹೋದೆ. ಡೈಲಿ ರೋಟೀನ್ ಅನ್ನೋ ಜಿಮ್ ಕೋಚ್ ಹೇಳೊದನ್ನಷ್ಟೇ ಮಾಡಿ, ಮನೆಗೆ ಬಂದ್ಬಿಟ್ಟೆ‌. ಅಮ್ಮಾ ನೀರು ಕಾಯಿಸಿ ರೆಡಿ ಇಟ್ಟಿದ್ರು. ಸ್ನಾನ ಮಾಡಿ ಹೊರಬಂದೆ. ಇನ್ನೂ ಮೂರು ದಿನಕ್ಕೆ ನಂಗೆ ಹದಿನೈದು ತುಂಬಿ‌ ಹದಿನಾರರ ಹರೆಯಕ್ಕೆ ನಾನೂ ಕಾಲಿಡ್ತಾ ಇದೀನಿ. ಈ ಪ್ರಾಯ ಒಂಥರಾ ಖುಷಿ ಕೊಡುತ್ತದೆ. ಸ್ನಾನ ಮಾಡಿ ಬಂದು, ತಲೆ ಒರೆಸಿಕೊಳ್ಳುತ್ತಾ, ಚಿಗುರುತ್ತಾ ಇರೋ ಮೀಸೇನಾ ಕನ್ನಡಿಯಲ್ಲಿ ನೋಡ್ತಾ ಇದ್ರೆ ಮಸ್ತ್ ಖುಷಿ ಆಗುತ್ತೆ. ಅದಕ್ಕೆ ಇರ್ಬೋದು ರಾತ್ರಿ ಅಂಥಾ ರೊಮ್ಯಾಂಟಿಕ್ ಕನಸು ಬಿದ್ದಿದ್ದು.

"ಚಿನ್ನೂ, ಬಾರೋ ಟಿಫನ್ ರೆಡಿ ಇದೆ. ತಿ‌ನ್ನು.." ಅಂತಾ ಅಮ್ಮಾ ಕರೆದ್ಲು. ಸರಿ ಅಂತಾ ಸರಸರನೆ‌ ರೆಡಿಯಾದೆ. ಅಮ್ಮಾ ಅದೇ ಉಪ್ಪಿಟ್ಟು ಮಾಡಿದ್ಲು. ನಂಗೆ ಅಷ್ಟಾಗಿ ಇಷ್ಟವಾಗಲ್ಲ ಅಂತಾ ಗೊತ್ರಿದ್ರೂ, ಅದೇ ಹಾಳು ಉಪ್ಪಿಟ್ಟು ನೋಡಿ, ಮೈಯೆಲ್ಲಾ ಉರಿದು ಹೋಯ್ತು. "ಏನಮ್ಮಾ ನೀನು, ಅದೇ ಹಾಳಾದ್ ಉಪ್ಪಿಟ್ಟು ಮಾಡಿದಿಯಾ" ಅಂತಾ ನನ್ನ ಸಿಟ್ಟು ಹೊರಹಾಕಿದೆ. "ಅದ್ಯಾಕೋ ಹಾಳಾದ್ ಉಪ್ಪಿಟ್ಟು ಆಗ್ತದೆ. ಗಂಜಿಗೂ ಗತಿ ಇಲ್ದೇ ಇರೋ ಜನಾನ ನೋಡು. ಉಪ್ಪಿಟ್ಟಿನ ಬೆಲೆ ಗೊತ್ತಾಗ್ತದೆ. ಒಂದೆರಡು ದಿನ ಉಪವಾಸ ಕೆಡವಬೇಕು‌ ನಿನ್ನ" ಅಂತಾ ಅಮ್ಮಾ ಕೂಡ ರೇಗಿದ್ಲು.

"ಅದಿರಲಿ, ನಂಗೆ 5000 ದುಡ್ಡು ಬೇಕು ಅಂತಾ ಹೇಳಿದ್ನಲ್ಲ, ಫ್ರೆಂಡ್ಸ್ ಎಲ್ರೂ ಎರಡು ದಿನ ಟ್ರಿಪ್ ಹೋಗೋಣ ಅಂತಾ ಪ್ಲಾನ್ ಮಾಡಿದೀವಿ. ಅಪ್ಪನ ಹತ್ರ ಇಸ್ಕೊಂಡಿಯಾ?" ಅಂತಾ ಕೇಳ್ದೆ. ಅಲ್ಲಿಯವರೆಗೂ ಬಿಸಿ ಮೂಡಲ್ಲಿದ್ದ ಅಮ್ಮ ತಣ್ಣಗಾಗಿ, "ಇನ್ನೂ ಸ್ವಲ್ಪ ಉಪ್ಪಿಟ್ಟು ಬೇಕೇನೋ?" ಅಂತಾ ಹೊರಗೆ ಬಂದ್ಲು. ತುಂಬಾ ಮುದ್ದು ಮಾಡುತ್ತಾ, ತಿನ್ಸೋಕೆ ಬಂದ್ಲು. ಅದು ನೋಡಿ, "ಇದೆಲ್ಲಾ ಇರಲಿ, ಅಪ್ಪನ ಹತ್ರ ಇಸ್ಕೊಂಡಿದಿಯಾ ?" ಮತ್ತೆ ಜೋರಾಗಿ ಕೇಳ್ದೆ‌. "ಅಲ್ಲಾ ಕಣೋ, ನೆಕ್ಸ್ಟ್ ಮಂತ್ ಹೋದ್ರೆ ಆಗಲ್ವಾ? ಈ ಸಾರಿ ಬೇಡ. ಪ್ಲಾನ್ ಛೇಂಜ್ ಮಾಡಿ. ಒಳ್ಳೆಯದು" ಅಂತಾ ಮಾತು ಮುಗಿಸಿದ್ಲು. ಅಷ್ಟನ್ನು ಕೇಳಿದ ತಕ್ಷಣ ನನ್ನೊಳಗೆ ಮಲಗಿದ್ದ ಉಗ್ರಪ್ರತಾಪಿ ಹೆಡೆ ತುಳಿಸಿಕೊಂಡ ಹಾವಿನಂತೆ ಸರ್ರನೆ ಹಾರಿ, ಕೋಪ ಅನ್ನೋ ಉಗ್ರನರಸಿಂಹ ಅವತಾರ ತಾಳಿ, ತಲೆ ಹತ್ತಿ ಕುಂತ. ಕೈಯಲಿದ್ದ ಉಪ್ಪಿಟ್ಟಿನ ತಟ್ಟೆಯನ್ನು ಹಾಗೆಯೇ ಎಸೆದು, ಏದುಸಿರು ಬಿಡುತ್ತಾ, ಕೆಂಗಣ್ಣಿಂದ ಅಮ್ಮನ ನೋಡುತ್ತಿದ್ದೆ.

ತನಗಿಂತಲೂ ಎತ್ತರ ಬೆಳೆದ ಮಗ, ಹೀಗೆ ಉಗ್ರಪ್ರತಾಪ ತೋರುತ್ತಾ ನಿಂತರೆ, ಬೆಣ್ಣೆ ಮನಸ್ಸಿನ ಹೆಣ್ಣಾದ ಆಕೆ ತಾನೇ ಅದೇನು ಮಾಡಿಯಾಳು. "ಯಾವಾಗಲೂ ಇದೇ ಗೋಳು. ಇದೇ ತರಹ ನಾಲ್ಕನೇ ಸಾರಿ ಟ್ರಿಪ್ ಮಿಸ್ ಮಾಡ್ಕೊಂಡಿದ್ದೀನಿ. ತಾಯಿಯೇ ದೇವರು, ಅಂತಾರೆ. ಆದರೆ ನೀನ್ ದೇವರಲ್ಲ.. ರಾಕ್ಷಸಿ..!! ಬ್ರಹ್ಮರಾಕ್ಷಸಿ..!!! ಮಗ ಖುಷಿಯಾಗಿ ಇರೋದ್ ನಿಂಗೇ ಬೇಡ್ವೇ ಬೇಡ. ನೀನೆ ಒಂದೈದು ಸಾವಿರ ಹಣ ಜೋಡಿಸಿ ಕೊಡೋಕಾಗಲ್ಲ ಅಲ್ವಾ? ಹಾಳಾಗಿ‌ ಹೋಗು" ಎಂದು ಕೂಗುತ್ತಾ ಹೊರಗೆ ಬಂದು ಬೈಕ್ ತಗೊಂಡು ಹೊರಟೆ. ಅಮ್ಮ ಏನೊಂದು ಮಾತನಾಡದೇ ಸುಮ್ಮನೆ ಕಣ್ಣೀರು ಸುರಿಸುತ್ತಾ ನಿಂತಿದ್ದಳು. ಬೈಕ್ ಹತ್ತಿ ಹೊರಡುವಾಗ ಮಾತ್ರ "ಚಿನ್ನು... ಚಿನ್ನೂ.." ಅಂತಾ ಕೂಗಿದಳು. ಅವಳ ಕಡೆ ನೋಡುವ ಮನಸಾಗದೇ ಹಾಗೇ ಬಂದುಬಿಟ್ಟೆ.

ಪುಟ್ಟ ಅಂಗಡಿಯೊಂದರಿಂದ ಸಿಗರೇಟೊಂದನ್ನು ತಗೊಂಡು, ಪಾರ್ಕ್ ಹೊರಗೆ ಬೈಕ್ ನಿಲ್ಲಿಸಿ, ಅದಕೊರಗಿಕೊಂಡೇ ಸಿಗರೇಟ್ ಹೊತ್ತಿಸಿಕೊಂಡು ನಿಂತೆ. ಸ್ನೇಹಿತರ ಜೊತೆ ಸೇರಿ ಕಲಿತ ಈ ವಿದ್ಯೆ, ಇಂಥಾ ಟೆನ್ಷನಲ್ಲಿದ್ದಾಗ ತಂತಾನೇ ನೆನಪಿಗೆ ಬಂದು ಬಿಡುತ್ತದೆ. ನಾಲ್ಕೈದು ಧಮ್ ಹೊಡೆದು, ಮನಸು ರಿಲಾಕ್ಸ್ ಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ನಮ್ ಮನೆ ಓನರ್ ಮಗ ಕೂಡ ಆ ಕಡೇನೆ ಬಂದ. ಅವನು ನನ್ ಕಡೆ ಬರೋದ್ ನೋಡಿ, ತಕ್ಷಣ ಕೈಯಲ್ಲಿದ್ದ ಸಿಗರೇಟ್ ಹಿಂದಕ್ಕೆ ಬಿಸಾಕಿ, ಹಲ್ಲು ಕಿಸಿಯುತ್ತಾ ನಿಂತೆ. ಸಿಗರೇಟ್ ಬಿಸಾಕಿದ್ದನ್ನು ಕಂಡೂ ಕಾಣದಂತೆ, ಬಂದವನೇ "ಏನೋ ಚಿನ್ನು, ಇಲ್ಲಿ. ಏನ್ ಮಾಡ್ತಾ ಇದಿಯಾ ಇಲ್ಲಿ?" ಅಂತಾ ಕೇಳಿದ್ರು. "ಏನಿಲ್ಲಾ ರಾಘಣ್ಣ, ನನ್ ಫ್ರೆಂಡ್ ಬರ್ತೀನಿ ಅಂದ. ಅವನಿಗೆ ಕಾಯ್ತಾ ಇದೀನಿ" ಅಂತಷ್ಟೇ ಹೇಳ್ದೆ.

"ಅದ್ಸರಿ, ಬೆಳಿಗ್ಗೆ ಏನೋ ಭಾರಿ ಗಲಾಟೆ ಮಾಡ್ತಾ ಇದ್ಯಲ್ಲೋ, ನಿಮ್ ಅಮ್ಮಾ ಹತ್ತಿರ. ಏನ್ ಸಮಾಚಾರ" ಅಂತಾ ನೇರ ವಿಷಯಕ್ಕೆ ಬಂದ್ರು. "ಏನಿಲ್ಲ ಅಣ್ಣಾ" ಅಂದೆ. "ಅದೇನಾದ್ರೂ ಇರಲಿ. ಅಷ್ಟೊಂದ್ ಯಾಕೆ, ನಿಮ್ಮ ತಾಯಿ ಹತ್ರ ಜಗಳ ಆಡ್ತಿದ್ದೆ. ಅವರು ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾ? ನಿಂಗೂ ಎಲ್ಲಾನೂ ಗೊತ್ತಿದೆ. ಆದ್ರೂ ಹೀಗಾಡ್ತಿಯಾ? ನಾನೇನು ಜಾಸ್ತಿ ಹೇಳಲ್ಲ. ನಿಂಗೊತ್ತಾ, ಈ ಸಾರಿ ಮನೆ ಬಾಡಿಗೆ ಕೊಡೋಕೆ ಲೇಟ್ ಆಗ್ತದೆ, ಸ್ವಲ್ಪ ತೊಂದರೆಯಲ್ಲಿದ್ದೇನೆ, ಸ್ವಲ್ಪ ದಿನ ಟೈಮ್ ಕೊಡಿ ಅಂತಾ ನಿಮ್ಮಪ್ಪ, ನಮ್ಮಪ್ಪನ ಹತ್ರ ಕೇಳ್ತಾ ಇದ್ರು. ಒಂದೇ ಒಂದ್ ಸಾರಿ ನೀನು ಮತ್ತೆ ನಿನ್ನ ತಾಯಿ ಇಬ್ಬರ ಬಗ್ಗೇನೇ ಸ್ವಲ್ಪ ಯೋಚ್ನೇ ಮಾಡು. ಆಗ ನಿಂಗೆ ಅರ್ಥ ಆಗ್ತದೆ. ನೀನ್ ಮಾಡಿದ್ದು ಏನು ಅಂತಾ" ಅಂತಾ ಅಷ್ಟೇ ಹೇಳಿ ಮುಂದೆ ಹೊರಟರು.

ಹೇಳೋರಿಗೆ ಏನು, ಏನು ಬೇಕಾದರೂ ಹೇಳ್ತಾರೆ ಅಂತಾ ಈ ರಾಘಣ್ಣನ ಮಾತು ಕೇಳೋದ್ ಯಾರು ಅಂತಾ ಸುಮ್ಮನಾದೆ. ಆದರೂ ಕೊನೆಯಲ್ಲಿ ಅವರು ಹೇಳಿದ ಮಾತು ಯಾಕೋ ಸರಿ ಅನಿಸ್ತು. ಅಮ್ಮ ಹಾಗೂ ನಾನು.. ಇಬ್ಬರ ಪರಪಂಚಾನ ನನ್ನದೇ ಕೋನದಲ್ಲಿ ಆ ಹಿಂದಿನ ದಿನಗಳ ಮೆಲುಕು ಹಾಕುತ್ತಿದ್ದೆ.

ಅಮ್ಮನ ಹೊಟ್ಟೆಯಲ್ಲಿ ನಾನು ಇದ್ದೇನೆ ಎಂಬುದನ್ನು ಕೇಳಿ ಅಮ್ಮ ಖುಷಿ ಪಟ್ಟಿದ್ದು, ಅಪ್ಪನ ಹತ್ರ ಅದನ್ನು ನಾಚಿಕೆ ಹಾಗೂ ಖುಷಿಯಿಂದ ಹೇಳಿ, ಸಂಭ್ರಮಿಸಿದ್ದು, ದಿನೆದಿನೇ ನನ್ನ ಬೆಳವಣಿಗೆಗೆ ಅವರು ತೆಗೆದುಕೊಂಡ ಜಾಗ್ರತೆ, ನಾ ಹುಟ್ಟುವಾಗಿನ ಹೆರಿಗೆ ನೋವು ಅನುಭವಿಸಿದ್ದು, ಹೋದ ಜೀವ ಮತ್ತೆ ಬಂದಂತಾದ ಅಮ್ಮ ನನ್ನ ಮೊದಲ ಅಳು ಕಂಡು ಖುಷಿಪಟ್ಟಿದ್ದು, ಅಲ್ಲಿಂದನೂ ನನ್ನ ಎದೆಗಪ್ಪಿಕೊಂಡೆ ನನ್ನ ಆರೈಕೆ ಮಾಡಿದ್ದು, ಅಂಬೆಗಾಲಿಟ್ಟು ನಡೆಸಲು ಕಲಿಸಿದ್ದು, ಹೊಸ ಹೊಸ ಆಟದ ಸಾಮಾನು ಕೊಡಿಸಿದ್ದು, ಆಡುವಾಗ ಬಿದ್ದು ಗಾಯ ಮಾಡಿಕೊಂಡರೇ ನನಗಿಂತಾ ಹೆಚ್ಚಾಗಿ ಅವರೇ ನೊಂದುಕೊಂಡು ನನ್ನ ಉಪಚರಿಸಿದ್ದು, ಅಪ್ಪ ಭುಜದ ಮೇಲೆ ಕೂರಿಸಿಕೊಂಡು ಊರೆಲ್ಲಾ ಸುತ್ತಿಸಿದ್ದು, ನಂಗಿಷ್ಟದ ಕೋಡುಬಳೆ, ಚಕ್ಕಲಿ ಅಮ್ಮಾ ಮಾಡಿಕೊಡುತ್ತಿದ್ದುದು, ಅಪ್ಪನ ಹೊಡೆತಗಳಿಂದ ತಪ್ಪಿಸುತಿದ್ದದು, ನಾ ಏನೇ ಮಾಡಿದರೂ ಸಹಿಸಿಕೊಳ್ಳುತ್ತಿದ್ದುದ್ದು, ಈಗಲೂ ಅನ್ನ ತುತ್ತು ಮಾಡಿ ತಿನಿಸುತ್ತಿದ್ದುದು, ಹೀಗೆ ಒಂದೇ ಎರಡೇ ಅವರು ನನಗೋಸ್ಕರ ಮಾಡಿದ್ದು, ಮಾಡ್ತಾ ಇರೋದು. ಅವರಿಗೆ ನಾನೊಬ್ಬನೇ ಕಂದಾ. ಅವರಿಗೋ ನಾ ನಗುನಗುತ್ತಿದ್ದರೇನೆ ಚಂದ. ಅದೆಷ್ಟು ಅದೃಷ್ಟ ಮಾಡಿದ್ದೀನೋ ಅಲ್ವಾ. ಇವರ ಈ ಪ್ರೀತಿಯ ಆಸರೆಯಲ್ಲಿ ನಾ ಚಿಗುರುತ್ತಿರುವ ಅವರ ಕನಸಿನ ಕುಡಿ. ಅವರುಗಳು ನಂಗೋಸ್ಕರ ಅದೆಷ್ಟು ತ್ಯಾಗ ಮಾಡಿಲ್ಲ. ಅವರ ಊಟ, ನಿದಿರೆ, ಖುಷಿ, ಸೇರಿದಂತೆ ಮನೆ‌ ಖರ್ಚು ಸರಿದೂಗಿಸಲು ಅಮ್ಮ ಒಡವೆಗಳ ಖರೀದಿಸುವ ಆಸೆಯನ್ನೇ ಕೈಬಿಟ್ಟಿದ್ದಾಳೆ.

ಇಂಥಾ ನನ್ನ ಅಮ್ಮನನ್ನು ಇವತ್ತು ಬೆಳಿಗ್ಗೆ ಅದೆಷ್ಟು ನೋಯಿಸಿ ಬಂದೆ. ಕಣ್ಣೀರು ಹಾಕಿಸಿ ಬಂದೆ. ಬಾಯಿಗೆ ಬಂದಂತೆ ಬೈದು ನನ್ನ ಉತ್ತರಕುಮಾರನಂಥಾ ಪೌರುಷ ತೋರಿಸಿ ಬಂದೆ. ಈಗ ನನ್ನ ಬಗ್ಗೆ ನನಗೆ ಒಂಥರಾ ಅಸಹ್ಯ ಎನಿಸುತ್ತಿದೆ. ಛೇ..!! ಎಂಥಾ ಕೆಲಸ ಮಾಡಿಬಿಟ್ಟೆನಲ್ಲ. ಕೈಯಲ್ಲಿದ್ದ ಉಪ್ಪಿಟ್ಟಿನ ತಟ್ಟೆ ರಪಕ್ಕನೆ ಬಿಸಾಡಿದೆ. ಅಮ್ಮನಿಗೆ ರಾಕ್ಷಸಿ, ಬ್ರಹ್ಮರಾಕ್ಷಸಿ ಅಂತೆಲ್ಲಾ ಬೈದೆ. ಯಾಕೆ ಹೀಗೆ ಮಾಡಿದೆ. ನನ್ನಲ್ಲೇನಾದರು ದೆವ್ವ ಮೆಟ್ಟಿಕೊಂಡಿದೆಯೇ? ಅಮ್ಮನಿಗೆ ಹೇಗೆ ಮುಖ ತೋರಿಸಲಿ. ಅಪ್ಪನಿಗೆ ಅಮ್ಮ ಏನಾದ್ರೂ ವಿಷಯ ಮುಟ್ಟಿಸಿದ್ದಲ್ಲಿ ಅಪ್ಪ ಬಾರಿಸುವ ಏಟುಗಳನ್ನು ಹೇಗೆ ತಡೆದುಕೊಳ್ಳಲಿ. ಅಮ್ಮನನ್ನು ಹೀಗೆ ನೋಯಿಸಬಾರದಿತ್ತು ಎಂದು ಮನಸು ಈಗ ಪದೆಪದೇ ಒತ್ತಿ ಹೇಳುತ್ತಿದೆ. ನೀ ಮಾಡಿದ್ದು ತಪ್ಪು ತಪ್ಪು ಎಂದು ನನ್ನದೇ ಆತ್ಮಸಾಕ್ಷಿ ನನ್ನ ಕಡೆಯೇ ಬೆರಳು ಮಾಡಿ ಒತ್ತಿ ಒತ್ತಿ ಹೇಳುತ್ತಿದೆ. ಅಮ್ಮನ ಕಾಲು ಹಿಡಿದು ಮತ್ತೆಂದೂ ಈ ತಪ್ಪು ಮಾಡೊಲ್ಲ ಅಂತಾ ಕ್ಷಮೆ ಕೇಳೋಣ ಎಂದೆನಿಸುತ್ತಿದೆ. ಮತ್ತೆಂದೂ ಇಂಥಾ ತಪ್ಪು ಮಾಡಲಾರೆ ಎಂಬ ಸಂಕಲ್ಪ ಹೊತ್ತು, ಹೊರಡಲು ತಯಾರಾಗಿ ಕೈಗೆ ಕಟ್ಟಿದ ವಾಚು ನೋಡಿದೆ. ಆಗಲೇ ಸಂಜೆ ಏಳು ಗಂಟೆ. ಬೆಳಿಗ್ಗೆ ೧೦ ಗಂಟೆಗೆ ಬಂದ ನಾನು ಇಲ್ಲಿಯವರೆಗೂ ಸಮಯದ ಪರಿವೇ ಇಲ್ಲದೇ, ಇದೆಲ್ಲವನೂ ಯೋಚಿಸಿದ್ದೆ. ಅಮ್ಮನ ನೋಡುವ ತವಕದ ಜೊತೆಗೆ ಅಪ್ಪನ ಏಟಿನ ಭಯವೂ ಶುರುವಾಗಿ ನಡುಕ ಉಂಟಾಯಿತು. ಆದರೂ ಮ‌ನಸು ಮಾಡಿ ಮನೆ ಕಡೆ ಹೊರಟೆ.

ಮನೆ ಮುಂದೆ ಬೈಕಿನ ಶಬ್ದವಾದ ತಕ್ಷಣವೇ ಅಮ್ಮ ಹೊರಗೆ ಬಂದು, "ಚಿನ್ನೂ" ಅಂತ ಕೂಗಿದರು. ಏನೂ ಮಾತಾಡಲಾರದ ಪರಿಸ್ಥಿತಿಯಲ್ಲಿ ಮನಸು ಕೂತು, ಗಂಟಲು ಕಟ್ಟಿಕೊಂಡಿತ್ತು. ಸುಮ್ಮನೇ ಒಳಹೋದೆ. "ಎಲ್ಲಿ ಹೋಗಿದ್ದೆ ಕಂದಾ, ಬೆಳಿಗ್ಗೆ ಸರಿಯಾಗಿ ತಿನ್ನಲಿಲ್ಲ, ಮಧ್ಯಾಹ್ನ ಏನ್ ತಿಂದೆ ಏನೋ? ಹೋಗು ಮುಖ ತೊಳೆದುಕೊಂಡು ಬಾ, ನಿಂಗಿಷ್ಟದ ಸಾರು ಮಾಡಿದೀನಿ. ಬೇಗ ಬಾ" ಅಂದ್ರು. ನಂಗೆ ಅಳು ಬರೋ ಥರ ಆಗ್ತಾ ಇದೆ. ಅಳಬೇಕೋ ಸುಮ್ನಿರಬೇಕೋ ಗೊತ್ತಾಗ್ತ ಇಲ್ಲ. ಗಂಟಲು ಕಟ್ಟಿ ಮಾತು ಕೂಡ ಹೊರ ಬರ್ತಾ ಇಲ್ಲ. ಸರಿ ಬಟ್ಟೆ ಬದಲಿಸಿ, ಮುಖ ತೊಳೆದುಕೊಂಡು ಬಂದೆ. ಅಷ್ಟರಲ್ಲೆ ತಟ್ಟೆಗೆ ಅನ್ನ, ಅವರೆಕಾಳು ಸಾರು, ತುಪ್ಪ ಎಲ್ಲಾ ಹಾಕಿ, ಕಲಸಿಕೊಂಡು ಅಮ್ಮ ಬಂದ್ರು. ಬೆಳಿಗ್ಗೆ ಅಷ್ಟೆಲ್ಲಾ ರಾಮಾಯಣ ಮಾಡಿ ಹೋದ ನನ್ನನು ಹೊಡೆಯದೆ ಬಡಿಯದೇ, ನನ್ನ ಹಸಿವನ್ನು ಗಮನಿಸಿ, ತುತ್ತು ತಿನ್ನಿಸಲು ಅಮ್ಮ ರೆಡಿಯಾಗಿದ್ದು ಕಂಡು ನನಗೆ ತುಂಬಾ ಖುಷಿಯಾಯ್ತು. ಇಂತಹಾ ಅಮ್ಮ ನನ್ನ ಪಾಲಿಗೆ ದೇವರು ಕೊಟ್ಟ ವರ. ಅಂತಹ ಅಮ್ಮನನ್ನು ರಾಕ್ಷಸಿ ಅಂದುಬಿಟ್ಟೆನಲ್ಲ. ಅಮ್ಮಾ ನಾನೀಗಲೂ ಹೇಳ್ತಾ ಇದೀನಿ, ನೀನೇನ್ ದೇವರಲ್ಲ... ಅದಕ್ಕಿಂತಲೂ ಹೆಚ್ಚು. ನಂಗೆ ಏನು ಬೇಕು, ಏನು ಬೇಡ ಎಂಬುದನ್ನು ಅರಿತು ನಾ ಕೇಳದೆಯೇ ವರ ಕೊಡುವ ನೀನು ಕೋಟಿ ಕೋಟಿ ದೇವರಿಗಿಂತಲೂ ಹೆಚ್ಚು. ನಿನ್ನ ಸೇವೆ ಮಾಡುವ ಭಾಗ್ಯ ನನ್ನದಾಗಿರಲಿ. ಈ ಪ್ರೀತಿಗೆ ಸಾವೇ ಇರದಿರಲಿ ಎಂದು ಮನಸೊಳಗೆ ಹೇಳಿಕೊಳ್ಳುತ್ತಿದ್ದೆ. ಅಮ್ಮಾ ತುತ್ತು ಮಾಡಿ ತಿನ್ನಿಸುತ್ತಿದ್ದಳು. ಹೇಳದೆ ಕೇಳದೆ ಕಣ್ಣಿಂದ ನೀರು ಜಾರಿ ಬಂತು. ಅಮ್ಮ ದಿಗಿಲಾಗಿ "ಯಾಕೋ ಅಳ್ತಾ ಇದಿಯಾ?" ಅಂತಾ ಸೆರಗಿಂದ ನನ್ನ ಕಣ್ಣೀರೊರೆಸಿ "ಅಳಬೇಡ.. ಏನೂ ಬೇಜಾರಾಗಬೇಡ. ಅಪ್ಪನಿಗೆ ಏನೋ ಸ್ವಲ್ಪ ಫೈನಾನ್ಸ್ ಪ್ರಾಬ್ಲಮ್ ಇದೆ. ಮುಂದಿನ ತಿಂಗಳು ಐದು ಸಾವಿರಾನಾ ನಾನೇ ಹೇಗೊ ಹೊಂದಿಸಿಕೊಡ್ತೀನಿ ಬಿಡು" ಅಂದ್ರು. ತಕ್ಷಣಕ್ಕೆ ಎದೆಯಿಂದ ಕಟ್ಟೆಯೊಡೆದುಕೊಂಡು ದುಃಖ ಉಮ್ಮಳಿಸಿ, "ನಂಗೇನೂ ಬೇಡ, ನಾನೆಲ್ಲೂ ಹೋಗಲ್ಲ. ನಂಗೇ ನೀನು ಬೇಕು. ಅಮ್ಮಾ, ದಯವಿಟ್ಟು ಕ್ಷಮಿಸು. ನಾನು ನಿಂಗೆ ತುಂಬಾ ನೋವು ಕೊಟ್ಟಿದೀನಿ. ಇನ್ಮೇಲೆ ಹಾಗೇ ಮಾಡಲಮ್ಮಾ" ಅಂತಾ ಪುಟ್ಟ ಕಂದನ ಹಾಗೆ ಅಮ್ಮನ ಎದೆಗವುಚಿಕೊಂಡು ಮನಸಾರೆ ಅತ್ತುಬಿಟ್ಟೆ. ಎಷ್ಟಾದರೂ ತಾಯ ಹೃದಯ.. ತಾನೂ ಕಣ್ಣೀರು ಹಾಕಿ ನನ್ನ ಸಂತೈಸತೊಡಗಿದಳು‌. ಮಧ್ಯಾಹ್ನದ ಹಸಿವು ಜೊತೆ ಸೇರಿದ್ದರಿಂದ ಅನ್ನ ಸಾರು ತುಪ್ಪ ಬೆರೆಸಿದ ಅಮ್ಮನ ಕೈತುತ್ತು ಹಸಿವು ನೀಗಿಸಿ, ಅಮ್ಮನ ಮಡಿಲಲ್ಲೇ ಮಲಗಿಬಿಟ್ಟೆ. ಕಣ್ಣು ಮುಚ್ಚಿ ಮಲಗಿದ್ದೆನಾದರೂ ನಿದ್ರೆ ಪೂರ್ಣ ಬಂದಿರಲಿಲ್ಲ.

ಅಷ್ಟರೊಳಗೆ ಅಪ್ಪ ಬಂದಂತಾಯ್ತು. ಅವರ ಪಾಡಿಗೆ ಅವರು ಬಂದು ಫ್ರೆಷ್ ಆಗಿ, ಬಂದು ಟಿ.ವಿ. ಆನ್ ಮಾಡಿದ್ರು. ಅಲ್ಲಿಗೆ ನನಗೊಂದು ನಿಟ್ಟುಸಿರು‌. ಅಪ್ಪನಿಗೆ ಅಮ್ಮಾ ಏನೂ ಹೇಳಿಲ್ಲ‌ ಅಂಥಾ. ಇಲ್ಲವಾದಲ್ಲಿ ಅಪ್ಪನ ಜೋರು ಹೊಡೆತಕ್ಕೆ ಮೈತುಂಬ ಬಾಸುಂಡೆ ಗ್ಯಾರಂಟಿ. ಅಮ್ಮನ ಮೇಲೆ ಇನ್ನೂ ಪ್ರೀತಿ ಉಕ್ಕಿ ಬಂತು. ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡು ಐ ಲವ್ ಯೂ ಅಂತಾ ಹೇಳೋಣ ಎನಿಸಿತು. ಅಷ್ಟರೊಳಗೆ ಅಪ್ಪ ಹಾಕಿದ ಟಿ.ವಿ. ಇಂದ "ಅಮ್ಮಾ ಎಂದರೇ ಏನೋ ಹರುಷವೂ" ಎಂಬ ಹಾಡು ಬರುತ್ತಿತ್ತು. ಅದನ್ನು ಕೇಳಿದ ಮನಸು, ಅಮ್ಮನನ್ನು ಇನ್ನೂ ಗಟ್ಟಿಯಾಗಿ ತಬ್ಬಿಕೊಂಡು, ನಿದಿರೆ ಬರುವವರೆಗೂ ಅಮ್ಮನನ್ನು ಬಿಡದೆ, ಹಸುಗೂಸಿನ ಹಾಗೆ ನಿದಿರೆಗೆ ಜಾರಿದೆ‌.. ಮತ್ತೆಂದಿಗೂ ಅಮ್ಮನ ಮನಸನ್ನು ನೋಯಿಸೋದಿಲ್ಲ ಎಂಬ ಧೃಡಸಂಕಲ್ಪದೊಂದಿಗೆ..‌