"ತೀರ್ಥರೂಪ ಶ್ರೀ ಟೊಣಪೆ ತಿಪ್ಪೇಸ್ವಾಮಿ ತಾತನವರಿಗೆ ನಿಮ್ಮ ಮೊಮ್ಮಗನಾದ ರಾಘವೇಂದ್ರ ಮಾಡುವ ನಮಸ್ಕಾರಗಳು.
ಚಿಕ್ಕಪ್ಪನವರಾದ ಶ್ರೀ ಜಿಮ್ಮೇಶಣ್ಣ ರವರಿಗೂ ನಮಸ್ಕಾರಗಳು. ಇಲ್ಲಿ ನಾವು ಕ್ಷೇಮ, ನೀವೂ ಕ್ಷೇಮ ಎಂದು ಭಾವಿಸುತ್ತೇವೆ." ಹೀಗೆ ಆ ಕಾಲದಲ್ಲಿ 25 ಪೈಸೆಯ ಕಡುಬಾದಾಮಿ ಬಣ್ಣದ ಆಯತಾಕಾರದ ಪತ್ರದಲ್ಲಿ ಬರೆದು ಪೋಸ್ಟ್ ಬಾಕ್ಸಿಗೆ ಹಾಕುವಾಗ ತುಂಬಾ ಖುಷಿಯಾಗುತ್ತಿತ್ತು. ಬರೆಯುವಾಗಲಂತೂ ಮೊಳಕಾಲ್ಮೂರಿನ ಮನೆಯಲ್ಲೇ, ಅವರ ಸುತ್ತಮುತ್ತ ಕುಳಿತೇ ಪತ್ರ ಬರೆದಂತೆ ಭಾಸವಾಗುತ್ತಿತ್ತು. ಬರೆದ ಪತ್ರವಂತೂ ಎರಡು ಮೂರು ದಿನಗಳೊಗಾಗಿ ಊರು ತಲುಪುತ್ತಿತ್ತು. ಮತ್ತೆ ಒಂದೆರಡು ದಿನಗಳಲ್ಲಿ ಅಂಚೆಯವ ಸೈಕಲ್ಲಿನಲ್ಲಿ ಬಂದು ಬೆಲ್ ಮಾಡಿ ಜೋರುದನಿಯಲ್ಲಿ ಪೋಸ್ಟ್ ಎಂದು ಕೂಗಿದಾಗ ಓ.. ಎಂದು ಖುಷಿಯಿಂದ ಅವನ ಹತ್ತಿರ ಓಡುತ್ತಿದ್ದೆವು. ನನ್ನ ಬಾಲ್ಯದ ದಿನಗಳ ನೆನಪು ಇನ್ನೂ ಹಸಿಯಾಗಿ ಕಾಡುತ್ತಿದೆ ಎಂದನಿಸುತಿದೆ. ಪತ್ರ ಬರೆಯಲೆಂದೆ ಅಪ್ಪನ ಬಳಿ ಒಂದು ರೂಪಾಯಿ ಪಡೆದು ಪೋಸ್ಟಾಫೀಸಿನಲ್ಲಿ ನಾಲ್ಕು ಪತ್ರ ತರುತ್ತಿದ್ದೆ
ಹಾಗೇ ಕೂಗುತ್ತಾ ಬಂದು ಅಂಚೆಯವ ಕೊಟ್ಟು ಹೋದ ಕಾಗದ ಮೊಳಕಾಲ್ಮೂರಿನಿಂದ ಬಂದದ್ದು ಗೊತ್ತಾದಾಗ ಖುಷಿ ಇನ್ನೂ ಹೆಚ್ಚಾಗುತ್ತಿತ್ತು. 75 ಪೈಸೆಯ ನೀಲಿ ಬಣ್ಣದ ಮಡಚಿಟ್ಟ ಕಾಗದ (ಇನ್ ಲ್ಯಾಂಡ್ ಲೆಟರ್ ಎಂದು ಕರೆಯುತ್ತಿದ್ದೆವು) ಬಿಚ್ಚಿ ಮನೆಯ ಎಲ್ಲರಿಗೂ ಕೇಳಿಸುವಂತೆ ಓದುತ್ತಿದ್ದವನು ನಾನೇ.
" ಕ್ಷೇಮ.., ತೀರ್ಥರೂಪ ಅಣ್ಣ-ಅತ್ತಿಗೆಯವರಿಗೆ ನಿಮ್ಮ ಜಿಹ್ವೇಶ್ವರ ಮಾಡುವ ನಮಸ್ಕಾರಗಳು. ಪುಟಾಣಿಗಳಾದ ರಾಘು ಹಾಗೂ ಗಿರಿಗೆ ನನ್ನ ಆಶೀರ್ವಾದಗಳು. ನಾವು ಆರೋಗ್ಯವಾಗಿದ್ದೇವೆ. ನೀವೂ ಆರೋಗ್ಯವಾಗಿದ್ದೀರೆಂದು ಭಾವಿಸುತ್ತೇವೆ. ನಿಮ್ಮ ಕ್ಷೇಮ ಸಮಾಚಾರ ಕುರಿತು ಪತ್ರ ಬರೆಯಿರಿ" ಎಂಬ ಸಾಲುಗಳೊಂದಿಗೆ ಹಾಗೂ ಇನ್ನಷ್ಟು ವಿಷಯಗಳೊಂದಿಗೆ ಪತ್ರ ಮುಗಿಯುತ್ತಿತ್ತು. ಈ ಪತ್ರಗಳು ನಮ್ಮನ್ನು ಅದೆಷ್ಟು ಹತ್ತಿರವಾಗಿಸಿತ್ತೆಂದರೆ ನಾವೂ ದೂರ ಇದ್ದೇವೆ ಎಂಬ ಪರಿವೆ ಬಾರದಂತೆ ನೋಡಿಕೊಂಡಿದೆ. ಪತ್ರ ಬಂದಾಗಲಷ್ಡೇ ನಾನು ಜಿಮ್ಮೇಶಣ್ಣ ಎಂದು ಕರೆಯುತ್ತಿದ್ದವರ ಹೆಸರು ಜಿಹ್ವೇಶ್ವರ ಎಂದು ಗೊತ್ತಾದದ್ದು. ಆದರೆ ಮಾತಿಗೆ ಹೆಸರು ಕರೆಯುವ ರೂಢಿಯಿಂದ ಅಪ್ಪ-ಅಮ್ಮ ಕೂಡ ಕರೆಯುವಂತೆ ಜಿಮ್ಮೇಶಣ್ಣ ಎನ್ನುತ್ತೇನಾದರೂ ಬರೆಯುವಾಗಲಂತೂ ಜಿಹ್ವೇಶ್ವರ ಎಂದೇ ಬರೆಯುತ್ತೇನೆ. ಈ ಪತ್ರಗಳನ್ನು ಬರೆಯುವಾಗಲೇ ಕನ್ನಡವನ್ನು ತಪ್ಪುಗಳಿಲ್ಲದೇ ಶುದ್ದವಾಗಿ ಬಳಸುವುದನ್ನು ಕಲಿತದ್ದು ಎನಿಸುತ್ತದೆ. ಇವತ್ತಿನ ಫೋನ್, ವಾಟ್ಸಾಪ್, ಫೇಸ್ ಬುಕ್ ಯಾವುದರಿಂದ ಕೂಡ ಸಾಧ್ಯವಾಗದ ಅನುಬಂಧ ಈ ಪತ್ರಗಳಲ್ಲಿನ ಪದಗಳು ಅನುರಾಗವನ್ನು ಹೃದಯದ ಅಂತರಾಳಕ್ಕಿಳಿಯುವಂತೆ ಮಾಡುತ್ತವೆ. ಈಗಲೂ ಪತ್ರ ಬರೆಯುವಾಸೆ.
ಮೊಳಕಾಲ್ಮೂರಿನ ಊರಿನ ಕೊನೆಭಾಗದಲ್ಲಿ (ಆಗ ಕೊನೆಭಾಗ, ಈಗ ಗೊತ್ತಿಲ್ಲ) ರೇಷ್ಮೆ ಸೀರೆಗಳ ಕೈಮಗ್ಗ ನೇಕಾರರ ಕಾಲೋನಿಯಲ್ಲಿದ್ದ ಕೊನೆಸಾಲಿನ ಮನೆಗಳಲ್ಲಿ ಒಂದು ಮನೆ. ಸುಣ್ಣ ಬಳಿದ ಮನೆ. ಈಗಿನಂತೆ ಯಾರೂ ಮನೆಗಳಿಗೆ ಆಗ ಪೇಂಟ್ ಹೊಡೆಸುತ್ತಿರಲಿಲ್ಲ. ಶೀಟಿನ ಮನೆ. ವಿಶಾಲವಾದ ಪಡಸಾಲೆ, ಅಡುಗೆ ಮನೆ, ಒಂದು ರೂಮು ಹಾಗೂ ಬಚ್ಚಲುಮನೆ. ನೀರವ ಮೌನ, ಬಿಸಿಲುಕಾಲದಲ್ಲಂತೂ ರುದ್ರಮೌನ. ಮನೆಯ ಪಕ್ಕದಲ್ಲೆ ಒಂದಷ್ಟು ಜಾಗ, ಕೆಲವರು ಹೂದೋಟ ಮಾಡಿಕೊಂಡಿದ್ದರು, ಕೆಲವರು ಮನೆಯ ಹಳೆಯ ಸಾಮಾನುಗಳನ್ನು ಇಟ್ಟಿದ್ದರು. ಮನೆ ಒಳಗೆ ಬಂದಾಗ ನಡುವೆ ಕೈಮಗ್ಗದಿಂದ ರೇಷ್ಮೇ ದಾರದ ಎಳೆಗಳ ಹಾಸು. ಮೂಲೆಯಲ್ಲೊಂದು ಚರಕ. ಕೈಮಗ್ಗದ ಬಳಿಯೇ ೧೦೦ ಕ್ಯಾಂಡಲಿನ ಒಂದು ಮೈಸೂರು ಲ್ಯಾಂಪ್ ಲೈಟು. ಮಗ್ಗದ ಕುಣಿ, ಲಾಳಿ, ಜಾಕಾರ್ಡ್, ಸೀರೆಯ ಅಂಚಿನಿಂದ ಈ ಕಡೆಯಿಂದ ಆ ಕಡೆಗೆ ಓಡುವ ಚಿಕ್ಕ ಬೋಟಿನಂತಿರುವ ಒಂದು ವಸ್ತು. ಅದರ ಹೆಸರು ನೆನಪಿಗೆ ಬರುತ್ತಿಲ್ಲ. ಮೊಳಕಾಲ್ಮೂರಿನ ಬಹುತೇಕ ಕುಟುಂಬಗಳು ನೇಕಾರಿಕೆಯನ್ನು ನೆಚ್ಚಿಕೊಂಡ ಕುಟುಂಬಗಳೆ. ಮನೆಯ ಬಾಗಿಲಿನ ಎದುರಿನ ಗೋಡೆಗೆ ಮೈಸೂರು ಮಹಾರಾಜರ ಚಿತ್ರಪಟವಿತ್ತು. ಆ ಮನೆ ಇನ್ನೂ ನೆನಪಿದೆ. ದೊಡ್ಡದಾದ ಅಡುಗೆ ಮನೆಯೇ ಊಟದ ಮನೆಯಾಗಿಯೂ ಇತ್ತು. ದೊಡ್ಡ ತಾಮ್ರದ ಕೊಡದಲ್ಲಿ ಕುಡಿಯುವ ನೀರು. ತಿಪ್ಪೇಸ್ವಾಮಿ ತಾತ ಕಚ್ಚೆ ಪಂಚೆಯುಟ್ಟು, ಮೇಲಂಗಿ ಇಲ್ಲದೇ, ಬೀಡಿ ಸೇದುತ್ತಾ, ಚರಕ ತಿರುಗಿಸುತ್ತಾ, ಕಂಡಿಕೆ ಸುತ್ತುತ್ತಾ ಇದ್ದುದು ಇನ್ನೂ ನೆನಪಿದೆ. ತಾತ ಎಂದರೆ ತುಂಬಾ ಖುಷಿ. ಕುಣಿಯುತ್ತಾ ತಾತನ ಬಳಿ ಹೋಗುತ್ತಿದ್ದೆವು. ಆಗ ಜಿಮ್ಮೇಶಣ್ಣ ಎಂದರೆ ಸ್ವಲ್ಪ ಭಯ. ಈ "ಕಾಮನಬಿಲ್ಲು" ಸಿನಿಮಾದ ರಾಜ್ ಕುಮಾರ್ ಥರ ಅವರು ತುಂಬಾ ಸ್ಟ್ರಿಕ್ಟ್. ಸ್ವಚ್ಛವಾಗಿರಬೇಕು, ಒಳ್ಳೆಯ ಮಾತುಗಳನ್ನೇ ಆಡಬೇಕು, ಬೆಳಿಗ್ಗೆ ಬೇಗ ಏಳಬೇಕು, ಸಂಜೆ ಬೇಗ ಮಲಗಬೇಕು, ಗುರು ಹಿರಿಯರಿಗೆ ಭಕ್ತಿ ಗೌರವ ಕೊಡಬೇಕು ಎಂಬುದನ್ನು ಅವರಿಂದಲೇ ತಿಳಿದದ್ದು, ಕಲಿತದ್ದು ಎಂದರೇ ಅತಿಶಯೋಕ್ತಿಯೇನಲ್ಲ.
ಜಿಮ್ಮೇಶಣ್ಣ ಅಪ್ಪನ ಸ್ವಂತ ತಮ್ಮ ಎಂದೇ ತಿಳಿದಿದ್ದೆ. ನಾನೂ ತುಂಬಾ ಚಿಕ್ಕವನಿದ್ದಾಗ, ಅಂದರೆ ಎರಡು ವರ್ಷದ ಹುಡುಗನಿದ್ದಾಗ, ಅವರ ಮನೆಯ ಎದುರಿನಲ್ಲಿ ನಮ್ಮ ಮನೆ ಇತ್ತಂತೆ. ನನ್ನನ್ನೂ ನನ್ನ ತಮ್ಮನನ್ನೂ ಪ್ರೀತಿಯಿಂದ ನೋಡಿಕೊಂಡವರು ಇವರೇ. ಟೊಣಪೆ ತಿಪ್ಪೇಸ್ವಾಮಿ ತಾತ ಮೊದಲು ನಮಗೆ ಕೈತುತ್ತು ನೀಡಿ, ನಂತರ ತಾವು ಊಟ ಮಾಡುತ್ತಿದ್ದುದು ಮೊನ್ನೆಯಷ್ಟೇ ತಂದೆಯವರಿಂದ ತಿಳಿಯಿತು. ಇದಲ್ಲವೇ ನಿಷ್ಕಲ್ಮಷ ಪ್ರೀತಿ, ವಿಶ್ವಾಸ, ಅಭಿಮಾನ. ಈ ಪ್ರೀತಿಗೆ ಸೋತ ನಾವು, ಅದೇ ಊರಿನಲ್ಲಿ ಅಮ್ಮನ ಕಡೆಯವರ ಮನೆಗಳೂ ತುಂಬಾ ಇದ್ದರೂ, ಹೋಗುತ್ತಿದ್ದುದು ಗುಣದಲ್ಲಿ, ಪ್ರೀತಿಯಲ್ಲಿ, ಆತ್ಮೀಯತೆಯಲ್ಲಿ ನಮ್ಮ ಮನಸಿನಲ್ಲಿ ನಮ್ಮವರೇ ಆದ ಜಿಮ್ಮೇಶಣ್ಣನ ಮನೆಗೆ ಹೊರತು ಮತ್ತ್ಯಾರ ಮನೆಗಲ್ಲ. ಅಲ್ಲಿಯೇ ಮಲಗಿ ಬೆಳಗ್ಗೆ ಎದ್ದಾಗ, ಜಿಮ್ಮೇಶಣ್ಣನೇ ನಂಜನಗೂಡಿನ ಹಲ್ಲಿನ ಪುಡಿಯನ್ನು ತಂದು ಕೊಡುತ್ತಿದ್ದರು. ಬೆಳಗಿನ ಕರ್ಮ ಮುಗಿಸಿ, ಸ್ನಾನ ಮಾಡಿ, ಕುಂಕುಮ ವಿಭೂತಿ ಇಟ್ಟ ಬಳಿಕ ದೇವರಿಗೆ ನಮಸ್ಕರಿಸಿದ ನಂತರವಷ್ಟೇ ತಿಂಡಿ. ಮನೆಯಲ್ಲಿ ಹೆಣ್ಣು ಇರದಿದ್ದರೂ ಮನೆಯ ಪ್ರತಿ ಕೆಲಸಗಳನ್ನು ತಾವೇ ಖುದ್ದು ಮಾಡಿಕೊಳ್ಳುತ್ರಿದ್ದರು ಜಿಮ್ಮೇಶಣ್ಣ. ನಾನಾಗಲೀ, ತಮ್ಮ ಗಿರೀಶನಾಗಲೀ ಸ್ವಲ್ಪ ಗಲಾಟೆ ಮಾಡಿದರೂ ಸಾಕು 'ಏಯ್' ಎಂದು ಕಣ್ಣು ಬಿಟ್ಟು ಹೆದರಿಸುತ್ತಿದ್ದರು. ಒಂದು ದಿನವಾದರೂ ನಮಗೊಂದು ಏಟು ಕೊಡಲಿಲ್ಲ. ಸ್ವಚ್ಚ ಮನಸಿನ ಮೂರ್ತರೂಪವೇ ಈ ಜಿಹ್ವೇಶ್ವರ.
ಹೀಗೆ ದಿನ ಕಳೆದಂತೆ ಒಂದಿನ ಧರ್ಮಾವರಂ ಮೂಲದ ಲಕ್ಷ್ಮಿಅವರೊಂದಿಗೆ ಜಿಮ್ಮೇಶಣ್ಣರವರ ಮದುವೆ ಆಯಿತು. ಅವರ ಮದುವೆಯ ನಂತರ ಒಮ್ಮೆ ಅವರ ಮನೆಗೆ ಹೋಗಿದ್ದೆವು. ಯಾವಾಗ ಮನೆಗೆ ಹೋದರೂ ತಾತ ಹಾಗೂ ಅಣ್ಣ ಮಾತ್ರ ಇರುತ್ತಿದ್ದರು. ಈಗ ಹೊಸಬರನ್ನು ಕಂಡಾಗ ಸ್ವಲ್ಪ ಸಂಕೋಚವಂತೂ ಇತ್ತು. ಆಂಟಿ ಕೂಡ ತುಂಬಾ ಚೆನ್ನಾಗಿ ನಗುನಗುತ್ತಾ, ಪ್ರೀತಿಯಿಂದ, ಆತ್ಮೀಯತೆಯಿಂದ ಮಾತನಾಡಿಸಿದಾಗ ಇವರೂ ನಮ್ಮವರೇ ಅನ್ನೋ ಭಾವನೆ ಅವತ್ತೇ ಬಂತು. ಸ್ವಲ್ಪ ದಿನಗಳು ಕಳೆದ ನಂತರ ಮೊಳಕಾಲ್ಮೂರು ಬಿಟ್ಟು, ಧರ್ಮಾವರಂಗೆ ಹೋಗಿ ವಾಸ ಮಾಡುತ್ತಾರೆಂದು ತಿಳಿಯಿತು. ಆಗ ನಂಗೊಂಥರಾ ಮನಸಿಗೆ ಬೇಜಾರಾಯ್ತು. ಅವರು ಹೋದ ನಂತರ ಮೊಳಕಾಲ್ಮೂರಿನ ಕಡೆ ಹೆಚ್ಚಾಗಿ ಬರಲಿಲ್ಲ, ಹೆಚ್ಚೆಂದರೆ ಒಂದು ಹತ್ತು ಐದಿನೈದು ಬಾರಿ ಹೋಗಿ ಬಂದಿರಬಹುದು ಅಷ್ಟೇ. ಅಲ್ಲಿಗೆ ಹೋದ ಮೇಲೆ ಕಾಗದ-ಪತ್ರಗಳು ಬರುತ್ತಿದ್ದವು. ಹೊಸ ವರ್ಷದ ನೆಪದಲ್ಲಿ ಪ್ರತಿ ವರ್ಷವೂ ಒಂದು ಗ್ರೀಟಿಂಗ್ ಕಾರ್ಡು ಕೂಡ ಬಂದು ಸೇರುತ್ತಿತ್ತು. ನಾವೂ ಕೂಡ ಕಳುಹಿಸುತ್ತಿದ್ದೆವು. ಒಂದು ದಿನ ಪತ್ರದಲ್ಲಿ ನಮಗೊಂದು ಹೆಣ್ಣು ಮಗು ಜನಿಸಿದೆ. ಅವಳಿಗೆ "ಗೀತಾ" ಎಂದು ನಾಮಕರಣ ಮಾಡಿದ್ದೇವೆ ಎಂದು ಬರೆದಿದ್ದನ್ನು ಓದಿದ್ದು ಇನ್ನೂ ನೆನಪಿದೆ. ನನ್ನ ಇನ್ನೊಬ್ಬ ಪುಟ್ಟ ತಮ್ಮನನ್ನು ತೊಟ್ಟಿಲಲ್ಲಿ ಮಲಗಿಸಿ ಲಾಲಿ..ಲಾಲೀ... ಎಂದು ತೂಗುವಾಗ, ನನ್ನನು ನೋಡಿ ಟೊಣಪೆ ತಿಪ್ಪೇಸ್ವಾಮಿ ತಾತ ನಗುತ್ತಾ ತುಂಬಾ ಖುಷಿಪಡುತ್ತಿದ್ದರು. ಬದಲಾಗುತ್ತಿದ್ದ ಕೌಟುಂಬಿಕ ಪರಿಸ್ಥಿತಿಗಳೊಂದಿಗೆ, ಕ್ರಮೇಣ ಈ ಪತ್ರ ಬರೆಯುವುದೂ ಕೂಡ ಕಡಿಮೆಯಾಯಿತು. ಆದರೆ ಅವರು ಯಾರನ್ನೂ ಮರೆತಿರಲಿಲ್ಲ. ಅದಾಗಿ ತುಂಬಾ ವರುಷಗಳ ನಂತರ ಅಣ್ಣ ಮನೆಗೆ ಬಂದಿದ್ದರು. "ಗೀತಾ ಹೇಗಿದ್ದಾಳೆ" ಎಂದು ಕೇಳಿದ್ದೆ. ಇನ್ನೂ ನೆನಪಿದ್ಯಲ್ಲ ನಿಂಗೆ ಅಂತಾ ತಲೆ ನೇವರಿಸಿದ್ದರು.
ಹಲವು ವರುಷಗಳು ಕಳೆದವು. ನಾವೂ ಬೆಳೆದು ದೊಡ್ಡವರಾದೆವು. ಪ್ರತಿ ಸೂಕ್ಷ್ಮ ವಿಷಯಗಳ ನೋಡಿಯೇ ತಿಳಿದುಕೊಳ್ಳುವಷ್ಟು ಚಾತುರ್ಯತೆಯಂತೂ ಕರಗತವಾಗಿತ್ತು. ಕೆಲವು ವರುಷಗಳ ಹಿಂದೆಯಷ್ಟೇ ಅಣ್ಣ, ಗೀತಾ, ರೂಪ, ಜೀವೀತಾ ಎಂಬ ತನ್ನ ಮೂರು ಮಕ್ಕಳೊಂದಿಗೆ ಬಂದಾಗ ಅದೇ ಆತ್ಮೀಯತೆ, ಅದೇ ಪ್ರೀತಿ, ಅದೇ ವಿಶ್ವಾಸ ಮನೆ ಮಾಡಿತ್ತು. ನೆರೆಯ ಆಂಧ್ರದಲ್ಲಿ ವಾಸವಾಗಿದ್ದರೂ, ಕನ್ನಡದ ಮೇಲಿನ ಪ್ರೀತಿ ಎಳ್ಳುಕಾಳಿನಷ್ಟೂ ಕಡಿಮೆಯಾಗಿರಲಿಲ್ಲ. ಹಾರ್ಟ್ ಅಟ್ಯಾಕ್ ನಂತರ ಕ್ಯಾನ್ಸರ್ ನಿಂದ ಬಳಲಿ ಬೆಂಡಾದ ಅಮ್ಮನ ಅನಾರೋಗ್ಯದ ಘನಘೋರ ದಿನಗಳಲ್ಲಿ ಅಪ್ಪ-ಅಮ್ಮನ ರಕ್ತಸಂಬಂಧಿಗಳ ನಿಜರೂಪ ದರುಷನವಾಗುತ್ತಿತ್ತು. ಇದೆಲ್ಲವನೂ ಗಮನಿಸುತ್ತಿದ್ದ ನನಗಂತೂ ಸಂಬಂಧಿಗಳ ಮೇಲೆ ಹಸಿಮುನಿಸಿತ್ತು. ಒಮ್ಮೆ ಅಣ್ಣ ಊರಿಗೆ ಬಂದಾಗ ಅಮ್ಮನ ಪರಿಸ್ಥಿತಿಯನ್ನು ಕಂಡು ಮರುಗಿದ್ದು, ಒಮ್ನೆ ಫೋನಿನಲ್ಲಿ ಮಾತನಾಡುವಾಗ ಕಣ್ತುಂಬಿ ಗಂಟಲು ಕಟ್ಟಿ ಮಾತನಾಡಿದ್ದು ಎಲ್ಲವನೂ ಕಂಡಾಗ ನಿಜವಾದ ಪ್ರೀತಿ, ವಿಶ್ವಾಸ, ಹೃದಯವಂತಿಕೆ ಅಂದರೆ ಇದೆ. ಈತ ಹೃದಯಶ್ರೀಮಂತ ಎಂದು ಮನಸು ಹೇಳುತ್ತಿತ್ತು.
ಬಾಲ್ಯದ ಆ ದಿನಗಳಲ್ಲಿ ಕೇವಲ ಏಳೆಂಟು ತಿಂಗಳು ಮಾತ್ರ ಅವರ ಮನೆ ಮುಂದೆ ವಾಸವಾಗಿದ್ದೆವು. ಆದರೆ ಇವತ್ತಿನವರೆಗೂ ನಮ್ಮ ನಡುವೆ ವಿಶ್ವಾಸ, ಪ್ರೀತಿ ಇದೆ ಅಂದರೆ ಇಬ್ಬರಲ್ಲೂ ನಿಸ್ವಾರ್ಥವಿದೆ ಎಂದೇ ಅರ್ಥ. ಅವರು ಯಾವಾಗಲೂ ಸುಖವಾಗಿ ಇರಲಿ, ಖಾಯಿಲೆಯಿಂದ ಬಳಲುತ್ತಿರುವ ಚಿಕ್ಕಮ್ಮ ಕೂಡ ಮತ್ತೆ ಆರೋಗ್ಯವಂತಳಾಗಿ ನಗುನಗುತಿರಲಿ ಎಂದು ದೇವರಲ್ಲಿ ಬೇಡುತ್ತೇನೆ.
ಪುಟ್ಟ ಸಹೋದರಿಯಾದ ಗೀತಾ, ರೂಪ, ಜೀವೀತಾ ನಿಮಗಂತೂ ನಿಮ್ಮ ಈ ಅಣ್ಣನ ಅಕ್ಕರೆಯ ಹಾರೈಕೆಯಂತೂ ಸದಾ ಇದೆ. ವಯೋಸಹಜವಾಗಿ ನಿಮಗೆ ಏನಾದರೂ ಚಿಕ್ಕಪುಟ್ಟ ಆಸೆ ಆಕಾಂಕ್ಷೆಗಳು ಇರಬಹುದು. ಅಪ್ಪ ಏನಾದರೂ ನಿಮ್ಮ ಆಸೆ-ಆಕಾಂಕ್ಷೆಗಳನ್ನು ಪೂರೈಸಲಾಗದಿದ್ದರೆ, ಬದಲಾಗಿ ಅವರ ಮೇಲೆ ಕೋಪಿಸಿಕೊಳ್ಳಬೇಡಿ. ಅವರನ್ನು ಯಾವುದೇ ಕಾರಣಕ್ಕೂ ನೋಯಿಸಬೇಡಿ. ಪ್ರತಿಯಾಗಿ ಅವರನ್ನು ಪೂಜಿಸಿ, ಆರಾಧಿಸಿ. ತಂದೆ-ತಾಯಿಯಾದವರು ಮಕ್ಕಳನ್ನು ಸಾಕಿ, ಸಲಹಿ ದೊಡ್ಡವರನ್ನಾಗಿ ಮಾಡಿ, ಒಂದು ಹಂತ ತಲುಪಿಸಲು ಅವರ ಪಡುವ ಯಾತನೆಯಲ್ಲಿ ಒಂದು ಅಕ್ಕಿ ಕಾಳಿನಷ್ಟೇ ಭಾಗ ನಮಗರಿವಾಗುವುದು. ಉಳಿದ ಯಾತನೆ, ನೋವು ಅವರು ಹೇಳಿಕೊಳ್ಳುವುದಿಲ್ಲ. ಅಣ್ಣನಾಗಿ ನಿಮಗೆ ತಿಳಿಹೇಳಬಯಸುವುದಿಷ್ಟೇ ಯಾವುದೇ ಕಾರಣಕ್ಕೂ ತಂದೆ-ತಾಯಿಯ ಮನಸು ನೋಯಿಸದಿರಿ. ನೀವು ಹಾಗೇ ಮಾಡುವುದಿಲ್ಲ ಎಂದು ಚೆನ್ನಾಗಿ ಗೊತ್ತು. ಆದರೂ ಹೇಳಬೇಕೆನಿಸಿತು.
ಚಿಕ್ಕಪ್ಪನವರಾದ ಜಿಹ್ವೇಶ್ವರ ಹಾಗೂ ಚಿಕ್ಕಮ್ಮ ಲಕ್ಷ್ಮಿಯವರ ಚರಣಗಳಿಗೆ ನನ್ನ ನಮನಗಳು. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ಪ್ರೀತಿಯಿಂದ
ನಿಮ್ಮವ....



