ಬೆಂದಕಾಳೂರೆಂಬ ಊರಲ್ಲಿ, ಟ್ರಾಫಿಕ್ ಕಿರಿಕಿರಿಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಬಿಸಿಲಿನ ತಾಪವೂ ಜೊತೆ ಸೇರಿ ನಮ್ಮ ಮನಸೂ ಕೂಡ ಬೆಂದು ಬಳಲಿತ್ತು. ಸಾಮಾನ್ಯವಾಗಿಯೇ ಬೆಂಗಳೂರಿಗರು ಪಿಕ್ನಿಕ್ ಹೊರಡುವುದು ಸಸ್ಯಶ್ಯಾಮಲೆಯ ಸಿರಿಯ ತಾಣಗಳಿಗೆ. ನಿಜಕ್ಕೂ ಅದು ಹಚ್ಚಹಸಿರಿನ ಸರ್ಗವೇ.!! ಆ ಸರ್ಗವೂ ಕರೆದಿತ್ತು, ನಮ್ಮ ಮನವೂ ಬೆಂದಿತ್ತು, ಅಷ್ಟೇ ಅಲ್ಲದೇ ಕಾಲವೂ ಕೂಡಿ ಬಂದಿತ್ತು. ಈ ಕೆಲಸಕ್ಕೆ ಸೇರಿದಾಗಿನಿಂದಲೂ ನಿತ್ಯವೂ ಒಂದಲ್ಲ ಒಂದು ಕಾರಣಗಳಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ನಾವುಗಳು, ಭೇಟಿಯಾಗುತ್ತಿದ್ದಂತೂ ಬಾನಿಂದ ಉಲ್ಕೆಗಳು ಬಿದ್ದಷ್ಟೇ ವಿರಳ. ಅಂತೂ ಚಿಕ್ಕಮಗಳೂರಿನ ಗೆಳೆಯ “ಸತೀಶ”ನ ಮದುವೆಯ ನೆಪದಲ್ಲಿ, ಸಹ್ಯಾದ್ರಿಯ ಹೆಬ್ಬಾಗಿಲಲ್ಲಿ ಅಂದರೆ ಶಿವಮೊಗ್ಗದಲ್ಲಿ 10 ಮಂದಿ ಜೊತೆಯಾದೆವು. ಬೆಂಗಳೂರಿನಿಂದ ಭರತ್ ಹಾಗೂ ನಾನು ಶಿವಮೊಗ್ಗಕ್ಕೆ ಬಂದು ಸೇರಿದೆವು. ಅಂದು ರಾತ್ರಿ ರೂಮಿನಲ್ಲಿ ಮೊದಲಿಂದಲೂ ಆವಾಸವಾಗಿದ್ದ ಸೊಳ್ಳೆಗಳ ರುದ್ರನರ್ತನಕ್ಕೆ ನಾವಂತೂ ಸೋತು, ನಿದಿರೆಯ ಮದಿರೆಯಲ್ಲಿ ತೇಲದೆ, ಕಣ್ಣು ಕೆಂಪಾಗಿಸಿಕೊಂಡು, ಮಲಗಲಾಗದೇ ಒದ್ದಾಡಿಕೊಂಡೇ ಇರುವಾಗ, ಬೆಳಗಿನ ಜಾವ 4 ಗಂಟೆಯಾಯಿತು. ಆ ಸಮಯಕ್ಕೆ ವಿಜಯಪುರದ ರಮೇಶ, ಬಾಗಲಕೋಟೆಯ ನವೀನ, ಧಾರವಾಡದ ಮಂಜುನಾಥ ತಮ್ಮ ಕಾರಲ್ಲಿ ಬಂದರು. ಅಪರೂಪದ ಭೇಟಿಯಿಂದಾಗಿ ಒಂದಷ್ಟು ಹೊತ್ತು, ಕುಶಲೋಪರಿ ನೆಪದಲ್ಲಿ ಅದು ಇದೂ ಮಾತನಾಡಿ, 5 ಗಂಟೆಯ ವೇಳೆಗೆ ಮತ್ತೆ ಮಲಗಿದೆವು. 6 ಗಂಟೆಯ ವೇಳೆಗೆ ಚಿಕ್ಕಮಗಳೂರಿನ ಹರೀಶ, ಹಾಸನದ ಪ್ರದೀಪ ಹಾಗೂ ಕಲಬುರಗಿಯ ಶಕ್ತಿರಾಜ್ ಕೂಡ ಬಂದು ಸೇರಿದರು. ಎಲ್ಲರೂ ಸೇರಿ, ಮುಂಜಾನೆಯ ನಿತ್ಯಕರ್ಮಗಳ ಮುಗಿದ ನಂತರದಲ್ಲಿ ತಿಂಡಿ ತಿಂದು, ಶಿವಮೊಗ್ಗದ ಪುನೀತ್ ಮನೆಗೆ ಹೊರಟೆವು. ಪುನೀತನ ಎರಡು ತಿಂಗಳ ಕಂದನ ಮೊಗದ ಚೆಲುವಲ್ಲಿ, ಅವನ ನಗುವಲ್ಲಿ, ಮನಸು ಮುದಗೊಂಡಿತು. ನಾವೆಲ್ಲಾ ಬಂದ ಖುಷಿಗೆ ಮನೆಯಲ್ಲಿ ಮಾಡಸಿದ ಜಾಮೂನ್ ಹಾಗೂ ಕಾಫಿ ಕುಡಿದು, ಅವನನ್ನೂ ಜೊತೆ ಸೇರಿಸಿಕೊಂಡು, 2 ಕಾರುಗಳಲ್ಲಿ ಶಿವಮೊಗ್ಗ ಸಿಟಿ 10 ಗಂಟೆಗೆ ಬಿಟ್ಟೆವು.


ಶಿವಮೊಗ್ಗೆಯಿಂದ ಸಾಗರದ ರಸ್ತೆಯಲ್ಲಿ ಸುಮಾರು 10 ಕಿ.ಮೀ. ದೂರದಲ್ಲಿರುವ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಭೇಟಿ ನೀಡಿದೆವು. ಅಲ್ಲಿದ್ದ ಅಪರೂಪದ ಪ್ರಾಣಿ ಪಕ್ಷಿಗಳನ್ನು ನೋಡಿ, ಒಂದಷ್ಟು ಸೆಲ್ಫಿ, ಒಂದಷ್ಟು ವಿಧವಿಧವಾದ ಭಂಗಿಯಲ್ಲಿ ಫೋಟೋಸ್ ತೆಗೆದುಕೊಂಡು ಅಲ್ಲಿಂದ ಹೊರಟೆವು. ಸೀದಾ ಸಾಗರ ವೆಂಬ ಊರು ದಾಟಿ, ಸಿಗಂಧೂರು ಕ್ಷೇತ್ರ ನೋಡಲು ನದಿಯ ದಡದ ಬಳಿ ಬಂದೆವು. ತಯಾರಾಗಿ ನಿಂತಿದ್ದ ಲಾಂಚವನ್ನೇರಿ ನಿಂತು, ನದಿಯನು ದಾಟಿ, ಮಧ್ಯಾಹ್ನದ ಕೊನೆಯ ಪೂಜೆಯ ವೇಳೆಗೆ ಸರಿಯಾಗಿ ನಾವೆಲ್ಲರೂ ತಲುಪಿದೆವು. ತಾಯಿ ಚೌಡೇಶ್ವರಿಯ ದೇವಿಯ ದರ್ಶನವಂತೂ ಅದ್ಭುತವಾಗಿತ್ತು. ನಂತರ ಎಲ್ಲರೂ ಅದೇ ದೇವಸ್ಥಾನದ ಭೋಜನಾಲಯಕ್ಕೆ ಹೋಗಿ, ಹೊಟ್ಟೆ ತುಂಬಾ ಪ್ರಸಾದ ಉಂಡು, ಮತ್ತೇ ಲಾಂಚವನ್ನೇರಿ ವಾಪಾಸ್ಸು ಕಾರಿನ ಬಳಿ ಬಂದೆವು. ಅಲ್ಲಿಗಾಗಲೇ ಸಮಯ ಸಂಜೆ 4 ಗಂಟೆ. ತಂತ್ರಜ್ಙಾನ ತುಂಬಾ ಮುಂದುವರೆದಿದೆಯಾದರೂ ಅಲ್ಲಲ್ಲಿ, ಎಡವಟ್ಟು ಉಂಟು ಮಾಡುತ್ತದೆ. ಈ ಮಾತನ್ನು ಒಪ್ಪಲೇಬೇಕಾಗಬಹುದು. ಸಿಂಗಧೂರು ದೇವಿಯ ದರ್ಶನ ಮುಗಿಸಿ, ಸಾಗರ ದಾಟಿ, ಅಲ್ಲಿಂದ ತೀರ್ಥಹಳ್ಳಿಯ ಕಡೆ ನಮ್ಮ ಪಯಣ ಶುರು ಮಾಡಬೇಕಿತ್ತು. ಅಂತೆಯೇ, ಸಾಗರದ ಕಡೆ ಹೊರಟೆವು. ಈ ನಡುವೆ ಭರತನಿಗೆ ಅದೇನನ್ನಿಸಿತೋ ಏನೋ, ಗೂಗಲ್ ಮ್ಯಾಪ್ ಹಾಕಿಕೊಂಡು ಇದೇ ಹತ್ತಿರದ ದಾರಿ ಸಾಗರ ಸಿಗುವ ಮುಂಚೆ ಬಲಕ್ಕೆ ತಿರುಗಿಸಿದ. ಅಲ್ಲಿಂದ ಅವನು ಹೇಳಿದ ಕಡೆ (ಗೂಗಲ್ ಮ್ಯಾಪ್ ತೋರಿಸಿದ ಕಡೆ) ಕಾರು ಹೊರಟಿದ್ದೆ ದಾರಿ. ನಮ್ಮೆರಡು ಕಾರುಗಳದ್ದೆ ಸಂಚಾರ. ದಟ್ಟ ಅರಣ್ಯ, ಅಲ್ಲಲ್ಲಿ ಸಿಗುವ ಮನೆಗಳು, ನೀರಿನ ಕೊಳಗಳು, ಸಣ್ಣ ಸಣ್ಣ ಊರುಗಳು ಇದೇ ಸಿಗುತ್ತಿತ್ತೇ ಹೊರತು, ಸೇರಬೇಕಾದ ಸಮಯಕ್ಕೆ ತೀರ್ಥಹಳ್ಳಿ ಸಿಗಲೇ ಇಲ್ಲ. ತೀರ್ಥಹಳ್ಳಿ ಸಿಗದಿದ್ದರೂ ಸರಿ, ಹೊಸ ಹೊಸ ದಾರಿ, ಹಸಿರು ಸಿರಿ, ತಾವರೆ ಹೂಗಳು, ಚಿಕ್ಕ ಚಿಕ್ಕ ಮನೆಗಳು, ಈ ಮನಮೋಹಕ ವಾತಾವರಣವಂತೂ ನಮ್ಮೆಲ್ಲರ ಮನಸಿಗೂ ಆಹ್ಲಾದಕರವಾಗಿದ್ದಂತೂ ಸತ್ಯ. ಕೊನೆಗೂ 7 ಗಂಟೆಯ ಹೊತ್ತಿಗೆ ತೀರ್ಥಹಳ್ಳಿ ತಲುಪಿ, ನಿಗಧಿಯಾಗಿದ್ದ ಹೋಟೆಲು ರೂಮು ತಲುಪಿ, ಫ್ರೆಷ್ ಅಪ್ ಆಗಿ, ಆ “ತೀರ್ಥ ಪ್ರಸಾದ” ಸ್ವೀಕರಿಸಲು ಗುಂಪು ಮಲೆನಾಡಿನ “ಮಲ್ನಾಡ್ ಕ್ಲಬ್” ಗೆ ಹೊರಟೇ ಬಿಟ್ಟಿತು. ಅಲ್ಲಿ ಶುರುವಾದ ಯಾನ, ಮರೆಯಾದ ಮೌನ, ಗಂಭೀರವಲ್ಲದ ಅದೆಷ್ಟೋ ವಿಷಯಗಳಿಗೆ ವೇದಿಕೆಯಾಗಿ, ಏಳಲು ಮನಸಾಗದೇ, ಮತ್ತೊಂದು, ಇನ್ನೊಂದು ಎಂದು ಆರ್ಡರ್ ಮಾಡುತ್ತಲೇ ಇರುವ ಗೆಳೆಯರು, ಅದನ್ನು ಬೇಕೆಂತಲೋ ಏನೋ ತಡವಾಗಿಯೇ ತರುವ ವೇಟರುಗಳು, ಸೈಲೈಂಟಾಗಿದ್ದವರು ನಾನವನಲ್ಲ ಎಂಬಂತೆ ಇದ್ದದು, ಒಟ್ಟಿನಲ್ಲಿ ಅರ್ಧ ಮನಸಿನಲ್ಲಿಯೇ ವಾಪಾಸ್ಸು ರೂಮಿಗೆ ಹೊರಟ ನಮಗೆ ಅದೊಂಥರ ತೀರ್ಥಯಾತ್ರೆಯೇ ಆಯಿತು.

ಮರುದಿನ ಬೆಳಿಗ್ಗೆ ವಾಹ್ ಎನಿಸುವಂತಾ ಅಮೋಘ ವಾತಾವರಣ. ಸುತ್ತಲೂ ಹಸಿರು, ತಿಳಿಯಾಗಿ ಕಾಣುತ್ತಿದ್ದ ಮಂಜು, ಜುಮ್ಮೆನಿಸುವಂತಾ, ರೋಮಾಂಚನವಾಗುವ ವಾತಾವರಣದಲ್ಲಿ ಕೆಲವರಷ್ಟೆ ವಾಕ್ ಹೊರಟೆವು. ನನಗೋ ಕವಿಶೈಲಕೆ ಹೋಗುವ ಮನಸು. ಕೆಲವರಿಗೋ ಅಲ್ಲೇನಿದೆ ಬಿಡಿ ಎಂಬ ಹುಸಿಮುನಿಸು. ಒಟ್ಟಿನಲ್ಲಿ ಕವಿಶೈಲಕೆ ತಿಂಡಿ ತಿಂದ ಬಳಿಕ ಹೊರಟೆವು. ನಿನ್ನೆ ಸ್ವಲ್ಪ ದಾರಿ ತಪ್ಪಿಸಿದ ಅದೇ ಗೂಗಲ್ ಮ್ಯಾಪನ್ನೇ ಮತ್ತೇ ನಂಬಿಕೊಂಡು, ನಮ್ಮೊಂದಿಗೆ ಹೊಸದಾಗಿ ಜೊತೆಯಾದ ಮಂಗಳೂರಿನ ನವೀನ ಕೃಷ್ಣ ಭಟ್ಟನನ್ನು ಕರೆದುಕೊಂಡು ಕವಿಶೈಲದ ಹಾದಿಯ ಬಳಸಿದೆವು. ಹಾದಿಯ ನಡುವೆ, ಒಂದು ಸೇತುವೆ, ಅಲ್ಲೆಲ್ಲೋ ಗುಡ್ಡದ ಮೇಲೊಂದು ದೇವಸ್ಥಾನ ಎಲ್ಲವೂ ನಮ್ಮನು ಸ್ವಾಗತಿಸಿದಂತಿತ್ತು.


ಕತೆ, ಚಿತ್ರಕಥೆ, ನಾಟಕ, ಕವಿತೆ, ಹಾಡು, ಕಿರುಚಿತ್ರ, ಸಿನಿಮಾ ಹೀಗೆ ಅನೇಕ ವಿಭಾಗಗಳಲ್ಲಿ ತೊಡಗಿಸಿಕೊಂಡ ನನಗೆ ಸಾಹಿತ್ಯದ ಅಭಿರುಚಿಯಿತ್ತು. ಅಂತೆಯೇ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯನ್ನೂ ತಪ್ಪದೇ ನೋಡುವ ಆಸೆಯೂ ಹೆಚ್ಚಾಗಿತ್ತು. ಕೊನೆಗೂ ಕುಪ್ಪಳಿಯನ್ನು ತಲುಪಿದೆವು. ವಿಸ್ತಾರವಾದ ಜಾಗದಲ್ಲಿ ಹಸಿರು ಸಿರಿಯ ನಡುವೆ ಕೆಂಪು ಹೆಂಚಿನ ಮನೆಯ ಸೌಂದರ್ಯ ಕೂಗಿ ಕರೆಯಿತು. ಮಗುವಿನಂತೆ ಖುಷಿಗೊಂಡು, ಉಲ್ಲಸಿತನಾಗಿ ಕವಿಮನೆಯ ಒಳಗೆ ಗೆಳೆಯರೊಂದಿಗೆ ಹೊರೆಟೆ. ದೊಡ್ಡಬಾನು, ಕುವೆಂಪು ರವರು ಮದುವೆಯಾಗಿದ್ದ ಮಂಟಪ, ಅವರ ಮದುವೆಯ ಕರೆಯೋಲೆ, ಕತ್ತಿ, ಅಪರೂಪದ ಫೋಟೊಗಳು, ಪುಸ್ತಕಗಳು, ಅವರು ಪಡೆದ ಪ್ರಶಸ್ತಿಗಳು, ಅನೇಕ ಪ್ರಸಿದ್ಧ ಕವಿಗಳು ಅವರ ಕುರಿತಂತೆ ಹಂಚಿಕೊಂಡ ಅಭಿಪ್ರಾಯಗಳು, ಸಣ್ಣಗೆ ಕೇಳಿಸುತ್ತಿದ್ದ ಕುವೆಂಪು ರವರು ರಚಿಸಿದ ಕವಿತೆಗಳನ್ನಾಧರಿಸಿದ ಹಾಡುಗಳು, ಕೋಟು, ಬಾಣಂತಿ ಮನೆ, ಕಡೆಗೋಲು, ಕೋವಿ (ಬಂದೂಕು), ಅಡುಗೆ ಮನೆ ಉಪಕರಣಗಳು, ಹಾಳೆ ಟೋಪಿ, ಧಿಮ್ಮನೆಯ ಮರದ ಮೆಟ್ಟಿಲುಗಳು, ಮನೆಯ ಮಧ್ಯದಲ್ಲಿದ್ದ ವರಾಂಡದಲ್ಲಿ (ಪಡಸಾಲೆ) ಹಸಿರುಟ್ಟು ನಗುತ್ತಿದ್ದ ತುಳಸಿ, ಅವರು ಕುಳಿತ ಖುರ್ಚಿ, ಬಳಸುತ್ತಿದ್ದ ಪೆನ್ನು, ವಾಚು, ಕಂಬಳಿ. ಮೂರು ತಲೆಮಾರಿನವರ ಫೋಟೊಗಳು, ಟಾಂಗಾ, ಹರಿಗೋಲು ಮುಂತಾದವುಗಳನ್ನು ನೋಡುತ್ತಾ ನೋಡುತ್ತಾ ಆ ಮನೆಯ ಅಂದಿನ ದಿನಗಳ ವೈಭವವನ್ನು ಇನ್ನೂ ಹೆಚ್ಚಾಗಿ ತಾನೇ ಊಹಿಸಿಕೊಂಡು, ಅವರ ನಡುವೆ ನಾವಿದ್ದೇವೆ ಎಂದು ಖುಷಿಪಡುತ್ತಿದ್ದೆ. ಅವರ ಬರೆದ ಪುಸ್ತಕಗಳ ಸಂಗ್ರಹ ನೋಡುವಾಗಲಂತೂ, ಚಿಕ್ಕಮಗುವಿನ ಹಾಗೆ, ಈ ಪುಸ್ತಕ ನನ್ನ ಬಳಿ ಇದೆ ಎಂದು ಸುಮಾರು 30 ಕ್ಕೂ ಹೆಚ್ಚು ಪುಸ್ತಕಗಳ ಕಡೆ ಬೆರಳು ಮಾಡಿ, ಗೆಳೆಯರಿಗೆ ತೋರಿಸಿದ್ದೆ. ಆ ಮನೆಯೊಳಗೆ ಬಂದಾಗ ಇದು ಕುವೆಂಪು ರವರ ಮನೆಯೆಂದು ಅನಿಸಿದ್ದು, ಹೊರ ಹೊರಟಾದ ಇದು ಕುವೆಂಪು ರವರು ಬಾಳಿ ಬದುಕಿದ, ಭವ್ಯದರಮನೆ ಎಂದು ಬೀಗುವಷ್ಟು ಸಂಭ್ರಮ ಆ ಕವಿಮನೆ ನೀಡುತ್ತದೆ. ಬಯಲುಸೀಮೆಯ ನಾವುಗಳು ಒಮ್ಮೆಯಾದರೂ ಹೋಗಿ ಬರಲೇಬೇಕಾದ ಜಾಗವದು. ಕುವೆಂಪು ಅಜ್ಜ, ಅಲ್ಲಿದ್ದಷ್ಟು ಹೊತ್ತು, ನಮ್ಮ ಬೆನ್ನ ಹಿಂದೆಯೇ ನಿಂತಿದ್ದಾರೆಂದು ನನಗನಿಸಿತು. ಅವರನ್ನು ನೋಡಿದಂತೆ ಭಾಸವಾಯಿತು. ಅವರು ನಮ್ಮೊಡನೇ ನಗುತ್ತಾ, ಸ್ವಾಗತಿಸಿದಂತೆ, ಬೀಳ್ಕೊಟ್ಟಂತೆ ಭಾಸವಾಗಿದ್ದಂತೂ ನಿಜ. ಕವಿಮನೆಯ ಹಸಿರು ಹುಲ್ಲಿನ ನೆಲದಲ್ಲಿ, ಕುಳಿತು, ನಿಂತು, ಒಂದಷ್ಟು ಸೆಲ್ಫಿ, ಪೋಟೋ ತೆಗೆದುಕೊಳ್ಳಲಾಯಿತು. ಗೆಳೆಯರಿಗಂತೂ ತುಂಬಾ ಖುಷಿಯಾಗಿತ್ತು. ಕವಿಮನೆಯಿಂದ ಹೊರಗೆ ಬಂದಾಗ, ಪುನೀತ ಹಕ್ಕಿಯಂತೆ ಸದ್ದು ಮಾಡುವ ವಸ್ತುವೊಂದನ್ನು ತೆಗೆದುಕೊಂಡ. ಅದು ಚೆನ್ನಾಗಿ ಸದ್ದು ಮಾಡುತ್ತಿದ್ದು. ಪುನೀತ್, ನವೀನ, ಹರೀಶ್, ಶಕ್ತಿರಾಜ್ ಹಾಗೂ ನಾನು ಕವಿಶೈಲಕೆ ಕಾಲುಹಾದಿಯನ್ನೆ ಬಳಸಿ ಹೊರಟೆವು. ಎತ್ತರದ ಹಾಗೂ ದೊಡ್ಡ ಬಂಡೆಗಳಲ್ಲಿ ಮಾಡಿದ ಕಮಾನುಗಳನ್ನು ದಾರಿಯುದ್ದಕ್ಕೂ ನಮ್ಮನು ಸ್ವಾಗತಿಸುತ್ತಿದ್ದವು. ಕವಿಶೈಲ ತಲುಪಿದೆವು. ಎತ್ತರದ ಸ್ಥಳದಲ್ಲಿ, ಶಾಂತಚಿತ್ತರಾಗಿ, ಮಲಗಿಕೊಂಡಂತೆ ಭಾಸವಾಗುತ್ತಿತ್ತು, ಜ್ಞಾನಪೀಠ ಪುರಸ್ತೃತ ಕುವೆಂಪುರವರು. ಬಿ.ಎಂ.ಶ್ರೀ, ಟಿ.ಎಸ್. ವೆಂಕಣ್ಣಯ್ಯ ಹಾಗೂ ಕುವೆಂಪುರವರು ತಾವು ಭೇಟಿಯಾದ ಖುಷಿಗಾಗಿ ಅಲ್ಲೊಂದು ಕಪ್ಪುಬಂಡೆಯ ಮೇಲೆ ತಮ್ಮ ಹಸ್ತಾಕ್ಷರಗಳನ್ನು ಕೆತ್ತಿದ್ದಾರೆ. ಈಗಿನಂತೆ ಸೆಲ್ಫಿ ಕಾಲವಲ್ಲವಲ್ಲ ಅದು. ಹಾಗಾಗಿಯೇ ಅದು ಇಂದಿಗೂ ರಮಣೀಯ ತಾಣವಾಗಿ ಇರುವುದು. ಅದರ ಹತ್ತಿರದಲ್ಲಿದ್ದ ಬಂಡೆಗಳ ಮೇಲೆ, ಎಲ್ಲರೂ ಕುಳಿತು ನೆನಪಿನಲ್ಲಿ ಸದಾ ಉಳಿಯುವಂತೆ ನಮ್ಮ ಸೆಲ್ಫಿ, ಫೋಟೊ ತೆಗೆಸಿಕೊಂಡು ಬಂದೆವು. ನಾನಂತೂ ತಿರುಗಿ ಬರುವಾಗ ಕವಿಶೈಲದ ಶೃಂಗದ ಸೌಂದರ್ಯ ಹಾಗೂ ಅದರ ಗಾಂಭೀರ್ಯಕ್ಕೆ ಸೋತು ಶರಣಾಗಿ, ಮತ್ತೆ ಇನ್ನೊಮ್ಮೆ ಬರಲೇಬೇಕು ಎಂಬ ಸಂಕಲ್ಪ ಹೊತ್ತು ಬಂದೆ.

ನನಗಂತೂ, ಸಾಹಿತ್ಯದ ಮೇಲೆ ಇದ್ದ ಪ್ರೀತಿ, ಗೌರವ ಹೆಚ್ಚಾಗಿದ್ದಲ್ಲದೇ, ಹೂಮುತ್ತಂತೆ ಕನ್ನಡ ಪದ ಪದವ ಬಳಸಿ, ನನ್ನ ಲೇಖನಿಯಿಂದ ಇನ್ನಷ್ಟೂ ಕತೆ, ಚಿತ್ರಕತೆ, ಗೀತೆ, ನಾಟಕ, ಸಂಭಾಷಣೆ, ಸಿನಿಮಾ ಮಾಡಲು ಹುಮ್ಮಸ್ಸು ಸಾಗರದಷ್ಟಾಗಿದೆ.

ಎಲೆ ಸಹ್ಯಾದ್ರಿಯ ಶೃಂಗವೇ,
ಹೂ, ಹಸಿರಿನ ಸಿಂಗಾರವೇ,
ಸಾಹಿತ್ಯಕೆ ಸ್ಪೂರ್ತಿರೂಪವೇ,
ರಸಕವಿಯ ಮನದ ಜೀವವೇ
ನಿನಗಿದೋ ವಂದನೆ, ಮತ್ತೊಮ್ಮೆ ನಾ ಬರುವೆನೆ.


ಅಂತೂ ಆ ಸಹ್ಯಾದ್ರಿಯ ಶೃಂಗದ ಸವಿಯಾದ ಮೆರವಣಿಗೆ ಮುಗಿಸಿ, ಗೆಳೆಯನ ಮದುವೆ ನೆನಪಾಗಿ, ತೀರ್ಥಹಳ್ಳಿಗೆ ಬಂದು, ಎಲ್ಲರೂ ತಲಾ 500/- ರೂಪಾಯಿಗಳನ್ನು ಸೇರಿಸಿ (ನಮ್ ಪುಟ್ಟಕ್ಕ ವಿದ್ಯಾ ಕೂಡ ತನ್ನ ಪಾಲು ಕೊಟ್ಯಾಳ) ಚಂದದೊಂದು ಬೆಳ್ಳಿಯ ದೀಪಗಳನ್ನು ಉಡುಗೊರೆಯಾಗಿ ನೀಡಿ, ಅಕ್ಷತೆ ಹಾಕಿ ನವವಧುವರರಿಗೆ ಶುಭ ಹಾರೈಸಿ, ಮಲೆನಾಡಿದ ಶೈಲಿಯ ಮದುವೆ ಊಟವ ಉಂಡು, ರೂಮಿಗೆ ಬಂದು ಒಂದರ್ಧ ಗಂಟೆ ನಿದ್ದೆ ಮಾಡಿ, ಎಲ್ಲರೂ ಅಲ್ಲಿಂದ ಬೀಳ್ಕೊಟ್ಟೆವು. ನವೀನ ಭಟ್ಟ ಉಡುಪಿಗೆ ಹೊರಟ, ಉತ್ತರ ಕರ್ನಾಟಕದ ಮಂದಿ ತಮ್ಮ ಹಾದಿ ಹಿಡಿದರು. ಇನ್ನು ನಾವು ಶಿವಮೊಗ್ಗದ ಹಾದಿ ಹಿಡಿದು, ಬರುವ ದಾರಿಯ ಮಧ್ಯೆ ಮಂಡಗದ್ದೆ ನೋಡಿಕೊಂಡು, ರಮಣೀಯ ಸ್ಥಳವೊಂದರಲ್ಲಿ ವಿಧವಿಧವಾಗಿ ಫೋಟೊ ತೆಗೆಸಿಕೊಂಡು ಶಿವಮೊಗ್ಗೆ ಬಂದೆವು. ಅಲ್ಲಿಂದ ಎಲ್ಲರೂ ತಮ್ಮ ತಮ್ಮ ದಾರಿ. ನಾನು, ಭರತ್ ಮತ್ತೆ ರಾತ್ರಿ 11-30ರ ಟ್ರೈನ್ ಹತ್ತಿ ಬೆಂಗಳೂರಿಗೆ ವಾಪಾಸ್ಸು ಬಂದೆವು. ಕಾಡಿಂದ ನಾಡಿಗೆ..