"ದೇಹವು ನಾನು, ಪ್ರಾಣವೂ ನೀನು, ಮರೆಯುವುದುಂಟೇ ನಿನ್ನ ನಾನು, ಒಲವಿನ ಹೂವೇ... ಬಾಳು ಬೆಳಕಾಯಿತು.." ಈ ಸಾಲುಗಳೆಲ್ಲಾ ನನ್ನ ಅಪ್ಪ-ಅಮ್ಮನಿಗೆ ತುಂಬಾ ಹೊಂದಿಕೆಯಾಗುತ್ತದೆ. ಹಾಲು-ಜೇನು ಚಿತ್ರ ನೋಡುವಾಗಲಂತೂ ನನ್ನ ಕಣ್ಣಂಚಿನಲ್ಲಿ ಹನಿ ಮೂಡದೇ ಇರದು. ಎಂಥಾ ಕಷ್ಟದ ಸಮಯದಲ್ಲೂ ಕೂಡ ಒಬ್ಬರನ್ನೊಬ್ಬರು ಬಿಟ್ಟುಕೊಡದೆ, ಸಂಸಾರದ ನೊಗ ಹೊತ್ತು, ಯಾರ ಹಂಗಿನಲ್ಲೂ ಇರದೇ ಬದುಕಿನ ಕ್ಷಣಗಳ ಕಳೆದವರು ಇವರು.
ಮನೆಯ ಹಿರಿಯಣ್ಣನ ಸ್ಥಾನದಲ್ಲಿ ಅಪ್ಪ, ಹಿರಿಯ ಸೊಸೆ ಸ್ಥಾನದಲ್ಲಿ ಅಮ್ಮ ನಿಂತು ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದದ್ದು, ಹಿರಿಯ ಮಗನಾದ ನನಗೆ ಪ್ರತಿ ವಿಷಯದಲ್ಲೂ ಅವರ ಕಾರ್ಯದಕ್ಷತೆ ತಿಳಿದಿದೆ. ಆದರೆ ಅಂದು ಅಷ್ಟೆಲ್ಲಾ ಅನುಕೂಲತೆಗಳನ್ನು ಪಡೆದುಕೊಂಡ ಅಪ್ಪನ ಅಷ್ಟೂ ಜನ ತಮ್ಮಂದಿರು, ಈಗ "ಅಣ್ಣಾ ಹೇಗಿದ್ದೀರಿ?" ಎಂದು ಕೇಳಲಾಗದಷ್ಟು ದೂರ. ತವರುಮನೆಯವರಿಗೆ ಸಾಸಿವೆಕಾಳಿನಷ್ಟೂ ಕಷ್ಟ ಹೇಳಿಕೊಳ್ಳದೆ ಜೀವನ ಸಾಗಿಸಿ, ಅಪ್ಪ ನಿನ್ನೆ ಹೇಳಿದ ಹಾಗೆ ಹನಿ ನೀರಿಗೂ ಕೂಡ ತವರುಮನೆಗೆ ಅಮ್ಮ ಹೋಗದೆ ಸ್ವಾಭಿಮಾನದಿಂದ ಜೀವನ ನಡೆಸಿದರು. ಆದರೂ ತವರುಮನೆಯವರನ್ನು ನಮ್ನವರು ಎಂದೇ ತಿಳಿದು, ಅಣ್ಣಾ, ತಮ್ಮ ಎಲ್ಲರನ್ನೂ ಅಮ್ಮ ಅಭಿಮಾನದಿಂದ, ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ಅವರೆಲ್ಲರೂ ಅಮ್ಮ ಚೆನ್ನಾಗಿದ್ದಾಗ ವಿಶ್ವಾಸ ಉಳಿಸಿಕೊಂಡವರು, ಅಮ್ಮ ಹೃದಯರೋಗ ಹಾಗೂ ಕ್ಯಾನ್ಸರ್ನಿಂದ ಬಳಲುವಾಗ ಮಾತ್ರ ಯಾರೊಬ್ಬರೂ ಅಮ್ಮನ ಮೇಲೆ ಅಭಿಮಾನ ತೋರಲಿಲ್ಲ. ಅಷ್ಟೇ ಅಲ್ಲ ಅಮ್ಮ ಸತ್ತಾಗ ಇದ್ದ ಊರಲ್ಲೇ ಇದ್ದರೂ ಅಂತಿಮ ದರ್ಶನಕ್ಕೂ ಬಾರದಂತ ಅಣ್ಣ-ತಮ್ಮಂದಿರನ್ನು (ಒಬ್ಬ ತಮ್ಮ ಹಾಗೂ ಅಣ್ಣನ ಮಗನನ್ನು ಹೊರತುಪಡಿಸಿ) ಪಡೆದ ಭಾಗ್ಯ ಅಮ್ಮನದು. ಇದ್ದ ಊರಲ್ಲೇ ನೂರಕ್ಕೂ ಹೆಚ್ಚು ಜನ ನಮ್ಮವರು ಎನಿಸುಕೊಂಡವರು ಇದ್ದರೂ ಒಂದು ದಿನವಾದರೂ ಬಂದು ಆರೈಕೆಗೆ ನೆರವಾಗಲಿಲ್ಲ. ಮನೆಯಲ್ಲಿ ಯಾರೂ ಹೆಣ್ಣುಮಗಳು ಇರದಿದ್ದರೂ, ಅಪ್ಪಾಜೀಯೇ ಅಡುಗೆ, ಕಸ, ಮುಸುರೆ ಎಲ್ಲವನ್ನೂ ಚೊಕ್ಕವಾಗಿ ನೋಡಿಕೊಂಡು ಅಮ್ಮನ ಆರೈಕೆಯನ್ನು ಸಂಪ್ರೀತಿಯಿಂದ ಮಾಡಿದರು. ಇದನ್ನೇ ನಾನು ಹೇಳ ಹೊರಟಿದ್ದು.
ಯಾರು ನಮ್ಮವರಾಗಲಿ ಬಿಡಲಿ, ಒಂದೊಳ್ಳೆ ಮುಹೂರ್ತದಲ್ಲಿ ನಮ್ಮ ಕೈಹಿಡಿದು ಬಂದವರು ಕೊನೆಯವರೆಗೂ ಅನ್ಯೋನ್ಯತೆಯಿಂದ ಇರಬೇಕು. ಇಬ್ಬರ ನಡುವಿನ ಪ್ರೀತಿ ದಿನೆದಿನೇ ಹೆಚ್ಚುತಿರಬೇಕು, ಅದನ್ನು ಕಾಪಾಡಿಕೊಂಡು ಬರಬೇಕು.
ಅವರ ಅನ್ಯೋನ್ಯತೆ ನಮಗೊಂದು ಪಾಠ. ಗಂಡ-ಹೆಂಡತಿಯಾದವರೂ ಸಂಸಾರದಲ್ಲಿ ಯಾವುದೇ ನೋವು ಬರಲಿ, ಕಷ್ಟಗಳಿರಲಿ, ಮನಸ್ತಾಪಗಳಿರಲಿ, ಪ್ರೀತಿಯಿಂದಲೇ ಜೊತೆಯಾಗಿರಬೇಕೆಂಬುದನ್ನು ಕಲಿಸಿಕೊಟ್ಟವರು ಇವರು. ಇಂದು ಇವರ ವಿವಾಹ ವಾರ್ಷಿಕೋತ್ಸವ. ಅಂದು ಅಮ್ಮನ ಕೈಹಿಡಿದು ಇಲ್ಲಿಯವರೆಗೂ ನಡೆಸಿಕೊಂಡು ಬಂದಿದ್ದರು ಅಪ್ಪ. ವಿಧಿಯಾಟ ಎನ್ನಲೋ ಏನೋ ತಿಳಿಯದು. ಇಂಥಾ ಮುದ್ದಾದ ಜೋಡಿಯನ್ನು ದೂರ ಮಾಡಿಬಿಟ್ಟ ದೇವರು. ಕ್ಯಾನ್ಸರ್ ಎಂಬ ಮಾರಿಗೆ ಸೋತು ಶರಣಾಯಿತು ಜೀವ. ಇಂದು ಅಮ್ಮ ಜೊತೆಗಿಲ್ಲ. ಆದರೂ ಜೊತೆಗಿಲ್ಲ ಎನ್ನಲು ಎಳ್ಳುಕಾಳಿನಷ್ಟೂ ಮನಸಿಲ್ಲ. ಪ್ರತಿಕ್ಷಣ ಪ್ರತಿದಿನ ಅಮ್ಮನನ್ನು ನೆನೆಯದೇ ನಾವು ಇರುವುದಿಲ್ಲ.
ಅಪ್ಪಾಜೀ.... ಅಮ್ಮಾ... ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ. ನಮ್ಮ ಮಕ್ಕಳೂ ಕೂಡ ನಿಮ್ಮ ಜೀವನದಿಂದ ಸ್ಫೂರ್ತಿಗೊಂಡು ಮೌಲ್ಯಯುತ ಬದುಕು ಕಟ್ಟಿಕೊಳ್ಳುವಂತಾಗಲಿ. ಸಾವಿರ ಜನುಮಗಳಿರಲಿ, ನೀವುಗಳೇ ನನ್ನ ತಂದೆ-ತಾಯಿಯಾಗಿರಲಿ.
Love You.....
Happy Wedding Anniversary
ದೇಹವು ನಾನು
ಪ್ರಾಣವೂ ನೀನು
ಮರೆಯುವುದುಂಟೇ ನಿನ್ನ
ನನ್ನ ಒಲವಿನ ಹೂವೇ...
ಬಾಳು ಬೆಳಕಾಯಿತು...
#ನನ್ನ_ತಂದೆತಾಯಿ #ನನ್ನ_ಹೆಮ್ಮೆ
- ರಾಘವೇಂದ್ರ ಪದ್ಮಶಾಲಿ



