ಜಾಗೃತಿ - ನಾಟಕ - ರಾಘವೇಂದ್ರ ಪದ್ಮಶಾಲಿ

JAAGRUTHI - Drama - Raghavendra Padmashali


ಪಾತ್ರ ಪರಿಚಯ:

  • ಶಕುಂತಲಾ, ಗೃಹಿಣಿ - ಶ್ರೀಮತಿ ಮೀರಾ ಸೋಮಶೇಖರ್

  • ರಂಗಿ, ಮನೆಕೆಲಸದಾಕೆ - ಶ್ರೀಮತಿ ಮಮತಾ ಅನಿಲ್‌ಕುಮಾರ್

  • ಸೌಮ್ಯ, ಶಕುಂತಲ ಮಗಳು - ಶ್ರೀಮತಿ ಸುಷ್ಮಾ ವಿಜಯ್‌ಕುಮಾರ್

  • ರಾಜೇಶ್, ಶಕುಂತಲಾ ತಮ್ಮ - ಶ್ರೀ ಅನಿಲ್‌ಕುಮಾರ್

  • ಸುರೇಶ್, ರಾಜೇಶ್‌ನ ಸ್ನೇಹಿತ - ಶ್ರೀ ಹರಿಪ್ರಸಾದ್

  • ಶ್ರೀಧರ, ಕುಡುಕ - ಶ್ರೀ ಯಾದವ ಎಸ್ ಕಲ್ಲಾಪು

  • ಬಾಲಣ್ಣ, ವಯೋವೃದ್ಧ - ಶ್ರೀ ಹೇಮಂತ್

  • ಸಂತೋಷ್, ಮನೋವ್ಯಾಧಿ - ಶ್ರೀ ನರೇಂದ್ರ ಕಬ್ಬಿನಾಲೆ

  • ಶಂಕರ, ಕಾರ್ಪೋರೇಟರ್ - ಶ್ರೀ ಹರೀಶ್

  • ನಿರ್ಮಲ, ಸಮಾಜ ಸೇವಕಿ - ಶ್ರೀಮತಿ ಸವಿತಾ ವೆಂಕಟೇಶ್


ದೃಶ್ಯ – 01

[ಮನೆಯಲ್ಲಿ ಸೋಫ ಮೇಲೆ ಕುಳಿತ ಶಕುಂತಲಾ, ಯಾವುದೋ ಯೋಚನೆಯಲ್ಲಿ ಮಗ್ನಳಾದಂತೆ ಅತ್ತಿಂದಿತ್ತ ಓಡಾಡುತ್ತಿರುತ್ತಾಳೆ. ಮನೆ ಕೆಲಸದಲ್ಲಿ ನಿರತಳಾದ ರಂಗಿ, ಶಕುಂತಲಾ ಓಡಾಡುವುದನ್ನೇ ನೋಡುತ್ತಾ ನೆಲ ಸಾರಿಸುತ್ತಿರುತ್ತಾಳೆ. ಆಗ ಏನನ್ನೋ ನೆನದಂತೆ ತಕ್ಷಣವೇ ಎದ್ದು, ಶಕುಂತಲಾ ಬಳಿಗೆ ಬರುತ್ತಾಳೆ]

ರಂಗಿ : ಅಮ್ಮಾವ್ರೆ, ಈ ತಿಂಗಳ ಪಗಾರ ಇನ್ನೂ ಬಂದಿಲ್ಲಾರೀ..

ಶಕುಂತಲಾ : ಪಗಾರ..!! [ಅರ್ಥವಾಗದ ಹಾಗೇ ಆಶ್ಚರ್ಯದಿಂದ ಕೇಳುತ್ತಾಳೆ]

ರಂಗಿ : ಅದೇ, ಈ ತಿಂಗಳ ಸಂಬಳ ಇನ್ನೂ ಬಂದಿಲ್ರೀ..

ಶಕುಂತಲಾ : ಓ.. ಕೊಡ್ತೀನಿ ಬಿಡೇ. ಏನೇ ನೀನು. ಈ ನಡುವೆ ದಿನಾ ಸಂಬಳ ಕೇಳ್ತಾ ಇದ್ದೀಯಲ್ಲಾ.

ರಂಗಿ : ಹ್ಞೂ.. ನಾನೇನೋ ದಿನಾ ಕೇಳ್ತೀನಿ. ಆದ್ರೆ ನೀವು ಕೊಡೋದು ತಿಂಗಳಿಗೆ ಒಂದೆ ಸಲ ಅಲ್ವಾ.

ಶಕುಂತಲಾ : ಹೌದು ಮತ್ತೆ. ನೀನ್ ಕೇಳ್ದೆ ಅಂತಾ ದಿನಾ ಕೊಡೋದಕ್ಕಾಗುತ್ತೇ.

ರಂಗಿ : ನೀವ್ ದಿನಾ ಪಗಾರ ಏನ್ ಕೊಡ್ಬೇಡ್ರಿ. ನಾ ಹಂಗಾ ಜ್ಞಾಪಿಸ್ತಾ ಇರ್ತೀನಿ ಅಷ್ಟೆ.

ಶಕುಂತಲಾ : ಹೌದೌದು, ನಿಂಗೇನೇ ಪ್ರಾಬ್ಲಮ್ಮು. ಗಂಡ ಆಟೋ ಓಡಿಸ್ತಾನೆ. ನೀನು ದುಡಿತೀಯಾ. ಮಗ ಓದ್ತಾ ಇದಾನೆ. ಗಂಡ ತರೋದ್ರಲ್ಲಿ ಇರೋ ಮೂವರಿಗೆ ಸಾಕಾಗೊಲ್ವೆ. ಆದ್ರೆ ನೀನ್ ಮಾತ್ರ ದಿನಾ ಸಂಬಳ ಸಂಬಳ ಅಂತಾ ನನ್ ಪ್ರಾಣ ತಿಂತೀಯಾ.

ರಂಗಿ : ಅಯ್ಯೋ... ರೊಕ್ಕ ಎಷ್ಟು ಇದ್ರು ಸಾಲೋದಿಲ್ರಿ. ಎಲ್ರೂ ಮನ್ಯಾಗನೂ ಅಷ್ಟೆರೀ.

ಶಕುಂತಲಾ : ಅದು ನಿಜಾನೇ ಬಿಡು. ಅದ್ಸರಿ, ಮಗ ಏನ್ ಮಾಡ್ತಾ ಇದಾನೆ ಈಗ.

ರಂಗಿ : ಅವ ಶಾಲಿಗ ಹೋಗ್ಯಾನ ರೀ. ಈಗ ಮೂರನೇ ತಖ್ತೆ. ಈಚೆಗೆ ಅವ ಭಾರಿ ತುಂಟ ಆಗ್ಯಾನ ರೀ.

ಶಕುಂತಲ : ಹೌದಾ.. ಚಿಕ್ಕಮಕ್ಕಳೇ ಹಾಗೇ ಬಿಡು. ಏನಂತಾನೆ.

ರಂಗಿ : ಅವಂಗೇನಾದ್ರೂ ಸಿಟ್ಟು ಬಂದ್ರ ಸಾಕು ಹಾಡು ಹಾಡ್ತಾನೆ ರೀ..

ಶಕುಂತಲ : ಯಾವ್ ಹಾಡು ಹಾಡ್ತಾನೇ

ರಂಗಿ : “ಅಮ್ಮಾ ಲೂಸಾ... ಅಪ್ಪಾ ಲೂಸಾ..” ಅಂತಾ ಹಾಡ್ತಾನೆ. ಆಗ ನಾನು “ನಾನೂ ಲೂಸಾ.. ನೀನು ಲೂಸಾ..” ಅಂತಾ ಕೇಳ್ತಿನಿ. ಅದೆಲ್ಲಿದ್ರೂ ನಮ್ ಯಜಮಾನ ಬಂದು “ಅದು ಸರಿ.. ಅದು ಸರಿ..” ಅಂತಾರ.

ಶಕುಂತಲ : [ಜೋರಾಗಿ ನಗುತ್ತಾ..] ಓ ಹೌದಾ.. ಚೆನ್ನಾಗಿದೆ.. ಚೆನ್ನಾಗಿದೆ. ಆಮೇಲೆ.

ರಂಗಿ : ಆಮ್ಯಾಗ ಏನೈತೀ. ಮನ್ಯಾಗ ಇದ್ರೆ ಹಿಂಗ ದಿನ ಪೂರ್ತಿ ನಮ್ಗ ಕಾಡಿಸ್ತಾನ.

ಶಕುಂತಲ : ಚೆನ್ನಾಗಿದೆ ಬಿಡು.

ರಂಗಿ : ಊಟ ಮಾಡಿ ಮಗ ಮಲಗಿದ ಅಂದ್ರ ಸಾಕು.. ಅವರಪ್ಪನ ಹಾಡು ಶುರು ಆಗ್ತೈತಿ.

ಶಕುಂತಲ : ಏನಂತಾ.. ?

ರಂಗಿ : ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್ ಅಂತಾ..

ಶಕುಂತಲ : [ಮತ್ತೆ ನಗುತ್ತಾ] ಒಳ್ಳೆ ಟೈಮಲ್ಲೇ ಹಾಡ್ತಾರೆ ಬಿಡು.

ರಂಗಿ : ನಂಗೂ ಹಾಗೇ ಅನ್ಸುತ್ತೇರೀ.. [ಸ್ವಲ್ಪ ನಾಚಿಕೆಯಿಂದ]

[ಅಷ್ಟರಲ್ಲಿ ಶಕುಂತಲಾ ಮಗಳು ಸೌಮ್ಯ ಗಂಡನ ಜೊತೆ ಜಗಳವಾಡಿಕೊಂಡು ಅಳುತ್ತಾ ಮನೆಗೆ ಬರುತ್ತಾಳೆ]

ಸೌಮ್ಯ : ಅಮ್ಮಾ.. [ಅಳುತ್ತಾ ಬರುತ್ತಾಳೆ]

ಶಕುಂತಲಾ : [ಗಾಬರಿಯಿಂದ] ಸೌಮ್ಯ... ಏನಾಯ್ತೇ. ಯಾಕೇ ಹೀಗೇ ಒಂದೇ ಸಮನೇ ಅಳ್ತಾ ಇದೀಯಾ.

ಸೌಮ್ಯ : ಅವರಿಗೂ ನಂಗೂ ಒಂದೇ ಸಮನೇ ಜಗಳ.

ಶಕುಂತಲಾ : ಜಗಳಾನ.. ಯಾಕೇ.. ಏನಾಯ್ತು.

ಸೌಮ್ಯ : ದಿನಾ ಇದ್ದದ್ದೇ ಅಲ್ವಾ.. ಆ ಫ್ರೆಂಡ್ಸ್ ಸಿಕ್ರು, ಈ ಫ್ರೆಂಡ್ಸ್ ಸಿಕ್ರು, ಆ ಪಾರ್ಟಿ ಇತ್ತು, ಈ ಪಾರ್ಟಿ ಇತ್ತು. ದಿನಾ ಒಂದು ಕುಂಟು ನೆಪ ಹೇಳ್ಕೊಂಡು ಮನೆಗೆ ಕುಡ್ಕೋಂಡು ಬರ್ತಾರೆ.

ಶಕುಂತಲಾ : ಮತ್ತೇ ಕುಡಿಯೋಕೆ ಸ್ಟಾಟ್ ಮಾಡೀದ್ನಾ ಅವ್ನು.

ಸೌಮ್ಯ : ಇವರಿಗೆ ಕುಡಿಯೋಕೆ ಬೇಕಾದಷ್ಟು ಟೈಮು ಹಾಗೂ ಕಾಸು ಇರುತ್ತೆ. ಆದ್ರೆ ನಂಗೆ ಷಾಪಿಂಗ್ ಕರ್ಕೊಂಡು ಹೋಗು ಅಂದ್ರೆ ಏನೂ ಇರೊಲ್ಲ.

ಶಕುಂತಲಾ : ಈ ಥರ ಎಲ್ಲಾ ಕುಡ್ಕೊಂಡಿದ್ರೆ ಇನ್ಯಾವ ಕಾಸು ಇರುತ್ತೆ. ಬರೀ ಹಾಳು ಮಾಡೋದೇ ಆಯ್ತು.

ಸೌಮ್ಯ : ಅವ್ನು ಕುಡ್ಕೊಂಡು ಬಂದ್ರೂ ಬೇಜಾರಿಲ್ಲಮ್ಮಾ. ಆದ್ರೆ ನಂಗೇ ಷಾಪಿಂಗ್‌ಗೂ, ಎಲ್ಗೂ ಕರ್ಕೊಂಡು ಹೋಗೋದೆ ಇಲ್ಲ.

ಶಕುಂತಲಾ : ಅವನೆಂಥಾ ಗಂಡಾನೇ.. ಹೆಂಡತಿಗಿಂತ ಹೆಂಡಾನೇ ಇಂಪಾರ್ಟೆಂಟಾ.

ಸೌಮ್ಯ : ಏನ್ ಮಾಡೋದು. ನಂಗೆ ಬರೋ ಸಿಟ್ಟಲ್ಲಿ ಏನ್ಮಾಡ್ಬೇಕು ಅಂತಾನೇ ಗೊತ್ತಿಲ್ಲ. ಅದು ಗೊತ್ತಾಗದೇ ಜಗಳ ಮಾಡ್ಕೊಂಡು ಇಲ್ಲಿಗೆ ಬಂದೇ.

ಶಕುಂತಲಾ : ಏನ್ ಮಾಡ್ಬೇಕು ಅಂತಾ ಗೊತ್ತಿದ್ರೆ, ನೀನ್ ಇಲ್ಲಿಗ್ಯಾಕೆ ಬರ್ತಾ ಇದ್ದೆ. ಅದು ನಾನು ಹೇಳ್ತಿನಿ ನಡಿ. ಹೋಗೋಣ.

ಸೌಮ್ಯ : ಎಲ್ಲಿಗೆ ಅಮ್ಮಾ..?

ಶಕುಂತಲಾ : ಲಾಯರ್ ಹತ್ತಿರ. ಒಂದು ನೋಟೀಸ್ ಕೊಡ್ಸಿದ್ರೆ ಒಂಚೂರು ದಾರಿಗೆ ಬರ್ತಾನೆ.

[ಸೌಮ್ಯ ಅದಕ್ಕೆ ಏನೂ ಉತ್ತರ ಕೊಡದೇ ನಿಂತಿದ್ದಾಳೆ. ಅಲ್ಲಿಯವರೆಗೂ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ರಂಗಿ ಶಕುಂತಲಾ ಕಡೇ ತಿರುಗಿ]

ರಂಗಿ : ಅಯ್ಯೋ ಸುಮ್ನಿರೀ, ಅಮ್ಮಾವ್ರೆ. ಗಂಡ-ಹೆಂಡತಿ ಜಗಳಾನ ಯಾಕೇ ದೊಡ್ಡದು ಮಾಡ್ತೀರಿ. ಅದೆಲ್ಲಾ ಉಂಡು ಮಲ್ಗೋತಂಕ ಇರಬೇಕ್ರಿ.

ಶಕುಂತಲಾ : ನಿಂಗೊತ್ತಿಲ್ಲ ರಂಗಿ. ನೀನ್ ಸುಮ್ನಿರು. ಇಂಥವ್ರಿಗೆ ಹೀಗೆ ಮಾಡ್ಬೇಕು.

ರಂಗಿ : ಏನ್ ಗೊತ್ತಿಲ್ಲ ಅಮ್ಮಾವ್ರೆ. ಎಲ್ಲಾನೂ ಇಲ್ಲೇ ಕೇಳ್ಸ್‌ಕೋತಾ ಇದೀನ್ರೀ. ನಿಮ್ ಅಳಿಯಂದಿರು ಸ್ವಲ್ಪ ಕುಡ್ಕೊಂಡು ಬರೋದು. ಈ ಚಿಕ್ಕಮ್ಮಾವ್ರ ಎಲ್ಗೂ ಕರ್ಕೊಂಡು ಹೋಗ್ದೇ ಇರೋದು. ಅಷ್ಟೇ ತಾನೇ.

[ಹೌದೆಂದು ಸೌಮ್ಯ ತಲೆಯಾಡಿಸುತ್ತಾಳೆ]

ಶಕುಂತಲಾ : ಇದೆಲ್ಲಾ ಪ್ರಾಬ್ಲಂ ಅಲ್ವೇನೆ. ಸ್ವಲ್ಪನೂ ಜವಬ್ದಾರಿಯಿಲ್ಲದೇ ಕುಡ್ಕೋಂಡು ಬರೋದು. ಜಗಳ ಆಡೋದು. ಮನೆಲಿರೋ ಹೆಂಡತೀನಾ ಸರಿಯಾಗಿ ನೋಡ್ಕೊಳ್ಳದೇ ಇರೋದು. ಇವತ್ತು ಹೆಂಡತಿನಾ ಸರಿಯಾಗಿ ನೋಡ್ಕೋಳೋಕೆ ಆಗ್ದೆ ಇರೋನು ನಾಳೆ ಮಕ್ಕಳನ್ನಾ ಹೇಗೆ ನೋಡ್ಕೋತಾನೆ.

ರಂಗಿ : ನೀವ್ ಹೇಳೋದೇನು ನಿಜಾ. ಗಂಡ-ಹೆಂಡತಿಯರ ಈ ಥರದ ಸಣ್ಣ ಜಗಳ ಎಲ್ಲಾ ಕೋರ್ಟಲ್ಲೇ ಇತ್ಯರ್ಥ ಆಗೋದಾದ್ರೆ. ತಮ್ಮ ಸರ್ದಿಗಾಗಿ ಎಲ್ರೂ ಕೋರ್ಟಲ್ಲೇ ಕಾಯ್ಕೋಂಡು ಇರ್ಬೆಕಿತ್ತು. ಇದೆಲ್ಲಾ ಸಣ್ಣ ಸಣ್ಣ ವಿಷಯಾರೀ. ಮನೆಯಾಕಿ ಇದನ್ನಾ ದೊಡ್ಡದು ಮಾಡಬಾರ್ದು. ಇದು ಎಲ್ರೂ ಮನೆಯಾಗ ನಡೆಯೋ ಡೈಲಿ ಸೀರಿಯಲ್.

ಸೌಮ್ಯ : ಹೇ.. ರಂಗಿ. ಇದೇಗೆ ಸಣ್ಣವಿಷಯ ಅಂತಾ ಅನ್ನೋದು.

ರಂಗಿ : ಈ ಥರ ಜಗಳ ನಮ್ ಮನೆಯಾಗನೂ ಬೇಕಾದಷ್ಟು ನಡೆದದಾ. ನಮ್ ಅಕ್ಕಪಕ್ಕ ಮನೆಯಾಗ್ನೂ ನಡೆದದ. ನಮ್ ಕಡೇ ಈ ಥರ ಜಗಳ ಆಡೋವಾಗಂತೂ ಹೆಣ್‌ಮಕ್ಕಳಿಗೆ ಈ ಗಂಡಸರೂ ಒದೀತಾರ. ಬಾಯಿಗೆ ಬಂದಂಗ ಬೈತಾರ. ಆದ್ರೂ ನಾವ್ ಸುಮ್ನಿರ್ತೀವಿ. ಕಟ್ಕೊಂಡವ್ನೆ ದೇವರು ಅಂತೀವಿ.

ಶಕುಂತಲಾ : ಕಟ್ಕೊಂಡವ್ನೇ ದೇವರು ಅಂತಾ ನಿಮ್ಮಂತೋರು ಕುರುಡರ ಥರ ಇರೋದಕ್ಕೆನೇ, ಈ ಸಮಾಜದಲ್ಲಿ ಹೆಣ್ಣಮಕ್ಕಳ ಮೇಲೆ ದೌರ್ಜನ್ಯ ನಡೀತಾನೇ ಇದೆ.

ರಂಗಿ : ಹೌದು ಅಮ್ಮಾವ್ರೆ. ರಾತ್ರಿ ಕುಡ್ಕೊಂಡು ಬಂದ ಗಂಡ ಮಾಡೋ ಆವಾಂತರನ ಎಲ್ರೂ ನೋಡಿರ್ತಾರೆ. ಅದಕ್ಕಾ ಎಲ್ರೂ ನೀವ್ ಹೇಳೋದೆ ಸರಿ ಅಂತಾರ. ಆದರೆ ಮರು ಮುಂಜಾನಿ ನೀವ್ ನೋಡಿರೋ ಹಂಗಿಲ್ರಿ. ಆ ಹೊತ್ತಲ್ಲಿ ಗಂಡ ಅಂತಾ ಅನ್ಸೋಂಡವ ಅದೆಷ್ಟು ಚೆಂದ ಪ್ರೀತಿ ಮಾಡ್ತಾನ. ನೋವು ಮಾಡಿದಕ್ಕಾ ಸಾರಿ ಕೇಳ್ತಾನ. ಮತ್ತೆಂದೂ ಹಿಂಗ ಮಾಡೋದಿಲ್ಲ ಅಂತಾ ನಮಗ ಗೋಗರೀತಾನ. ಆಗ ನೋಡ್ಬೇಕು ನೀ.. ಎಂಥಾ ಹೆಣ್ಣಾದ್ರೂ ಕರಗಿಹೋಗ್ತಾಳ ಅವನ ಪ್ರೀತೀಗ. ಅದಕ್ಕಾ ಎಲ್ರೂ ಮನೆಯಾಗ ಈ ಜಗಳ ಆದಾಗ ಅದನ್ನ ದೊಡ್ಡದು ಮಾಡದೇ ಹಾಗೇ ಇರ್ತಾರೆ ನಮ್ ಹೆಣ್ಮಕ್ಕಳು.

ಶಕುಂತಲ : ಅದು ನಿಜಾನೇ. ಆದರೆ

ರಂಗಿ : ಆದರೇ ಏನ್ ಅಮ್ಮಾವ್ರೆ. ಗಂಡ-ಹೆಂಡತಿ ಒಂದಾಗಿ ಇರ್ಬೇಕು ಅಂತಾ ತಾನೇ ನೀವು ಲಗ್ನ ಮಾಡಿಕೊಟ್ಟೀರಿ. ಮತ್ತ್ಯಾಕ ನೀವು ಅವರ ಲಗ್ನ ಮುರಿಯಾಕ ಲಾಯರೀ ನೋಟೀಸ್ ಕೊಡ್ಸಾಕ್ ಹತ್ತೀರಿ. ಸೌಮ್ಯವ್ವ ನಾ ಒಂದ್ ಕೇಳ್ತೀನಿ.. ಖರೇ ಹೇಳಾ..

ಸೌಮ್ಯ : ಏನ್ ರಂಗೀ..

ರಂಗಿ : ರಾತ್ರಿ ಕುಡ್ಕೊಂಡು ಬಂದ ನಿನ್ ಗಂಡಾ.. ನಿಂಗ ಹೊಡೆಯೋದು ಬಡಿಯೋದು ಮಾಡ್ತಾನೇನು ಮತ್ತಾ..?

ಸೌಮ್ಯ : ಇಲ್ಲಾ ರಂಗೀ.

ರಂಗಿ : ಹಂಗೇಳು ಮತ್ತಾ. ಆ ಬಡಪಾಯಿ ಜೀವಕ್ಕ ನಿನ್ ಮ್ಯಾಗ ಅದೆಷ್ಟು ಪ್ರೀತಿ ಅದಾ ನೋಡು ಮತ್ತಾ.

ಸೌಮ್ಯ : [ಸಮಾಧಾನಗೊಂಡವಳಂತೆ] ಅದೇನೋ ನಿಜ ರಂಗಿ. ಅವರಿಗೆ ನನ್ ಮೇಲೆ ಪ್ರೀತಿಗೇನು ಕಡಿಮೇ ಇಲ್ಲ.

ಶಕುಂತಲಾ : ಹೌದು ಅದೇನೋ ನಿಜ. ಎಲ್ರೂ ಮನೇಲೂ ಈ ಥರ ಜಗಳಾ ಕಾಮನ್. ಅದನ್ನೂ ದೊಡ್ಡದು ಮಾಡೋ ಹಾಗಿಲ್ಲ. ಪದೇಪದೇ ಇದೇ ಪ್ರಾಬ್ಲಂ ಕಂಟಿನ್ಯೂ ಆದ್ರೆ ಮಾತ್ರ ಸುಮ್ನಿರಬಾರ್ದು ಅಷ್ಟೆ.

ರಂಗಿ : ನಾನೇನೋ ಮನೆಕೆಲಸದವಳು. ಇಷ್ಟೊಂದು ಮಾತಾಡ್‌ಬಾರದಿತ್ತು. ಆದ್ರೂ ಮಾತಾಡೇನ್ರಿ. ನಿಮ್ಗಾ ಬೇಜಾರಾತು ಅಂದ್ರ ಕ್ಷಮೆ ಇರಲಿ.

ಶಕುಂತಲಾ : ಯಾರಾದ್ರೂ ಏನಾದ್ರು ಹೇಳ್ತಾ ಇದಾರೆ ಅಂದ್ರೆ ನಾವು ಮೊದಲು ಕೇಳಬೇಕು. ನಮಗೆ ಅದು ಸರಿ ಅಂತಾ ಅನ್ನಿಸಿದ್ರೆ ಅದನ್ನಾ ಒಪ್ಕೊಬೇಕು. ನೀನ್ ಹೇಳಿದ್ದು ಸರಿ ಇದೆ ರಂಗಿ. ನಾನೇ ಮಗಳ ಮೇಲಿನ ಮಮಕಾರದಿಂದ ಸ್ವಲ್ಪ ದುಡುಕಿದೆ ಅಷ್ಟೆ.

ಸೌಮ್ಯ : ರಂಗಿ.. ಒಳ್ಳೇದನ್ನು ಬಯಸೋರೇ ಕಡಿಮೆ ಇದಾರೆ. ಅದರಲ್ಲೇನೋ ಒಳ್ಳೆ ಉದ್ದೇಶದಿಂದಲೇ ಕೂಡಿರೋ ಮಾತು, ನಂಗೂ ಒಳ್ಳೇಯದೇ ಅಂತಾ ಅನ್ಸುತ್ತೆ. ಅದನ್ನ ಒಪ್ಕೋಬೇಕಷ್ಟೆ. ಇನ್ಯಾಕ ತಡ. ಅಮ್ಮಾ ನಾನು ಬರ್ತೀನಿ. ಬೆಳಗ್ಗೆ ಬರುವಾಗ ಸರಿಯಾಗಿ ತಿಂಡಿ ಕೂಡ ಮಾಡದೇ ಹಾಗೇ ಬಂದ್ಬಿಟ್ಟೆ. ಅವರು ಏನ್ ತಿನ್ಕೊಂಡು ಹೋದ್ರೋ ಏನೋ ಪಾಪ. ಸಂಜೆ ಬರೋದ್ರೋಳಗೆ ಬಿಸಿಬಿಸಿ ಬಜ್ಜಿ ಹಾಕಿರ್ತೀನಿ. ನಾ ಹೋಗೀ ಬರ್ತಿನಿ.

ಶಕುಂತಲಾ : ಅಯ್ಯೋ ನಿನ್ನ. ಹೊರಟೇ ಬಿಟ್ಟ್ಯಲ್ಲೇ.

ರಂಗಿ : ಚಿಕ್ಕಮ್ಮಾವ್ರೆ... ರಾತ್ರಿ ಹೊತ್ತು ಜಾಸ್ತಿ ನಿದ್ದೆ ಮಾಡ್ಬೇಡಿ. ನಿದ್ದೇ ಮಾಡದೇ ಇದ್ರೆ .. ಈ ಥರ ಪ್ರಾಬ್ಲಂ ಎಲ್ಲಾನೂ ಒಂಚೂರು ಬರೋದಿಲ್ರಿ... [ನಗುತ್ತಾ ಹೇಳುತ್ತಾಳೆ]

ಶಕುಂತಲಾ : ರಂಗೀ. ನೀನ್ ಒಳ್ಳೆ ಕೆಲಸಾನೇ ಮಾಡಿದೇ ಬಿಡು. ಈ ಹೆಣ್ಮಕ್ಕಳಿಗೆ ಒಂದೇ ಊರಲ್ಲೇ ಗಂಡನ ಮನೆ, ತವರು ಮನೆ ಇರಬಾರ್ದು ಕಣೇ.

ರಂಗಿ : ಯಾಕಮ್ಮಾವ್ರೆ.

ಶಕುಂತಲಾ : ನೋಡಿದ್ಯಾ ಈಗ ಅವಳ್ನಾ. ಅವಳು ಬಂದಿದ್ದೂ ಗೊತ್ತಾಗಲಿಲ್ಲ. ಹೋಗಿದ್ದು ಗೊತ್ತಾಗಲಿಲ್ಲ. ಏನ್ ಹುಡ್ಗೀನೋ ಏನೋ...

ರಂಗಿ : ಓ.. ನೀವ್ ಹಂಗಾ.. ಹೇಳಿದ್ದು. ತವರುಮನೆ ಹತ್ರ ಇರೋದು ಆಕೀಗ ಭಾಳ ಚೋಲೋ ಆತು ಅಂತಾ ಅನ್ಸ್ತದಾ.

ಶಕುಂತಲಾ : ಅವಳಿಗೆ ಚಂದಾನೇ. ಎರಡು ನಿಮಿಷಕ್ಕೆ ನಂಗೇ ಎಷ್ಟು ತಲೆಬಿಸಿ ಆಯ್ತು ಗೊತ್ತಾ.. ಸರಿಸರಿ ನಡೀ ಮಾರ್ಕೆಟ್‌ಗೆ ಹೋಗೋಣ. ಸ್ವಲ್ಪ ತರಕಾರಿ ತರೋಣ.

ರಂಗಿ : ಸರಿ ಅಮ್ಮಾವ್ರೆ.. [ತರಕಾರಿ ಪುಟ್ಟಿ ತಗೊಂಡು ಹೊರಗೆ ಇಬ್ಬರೂ ಹೊರಡುತ್ತಾರೆ]


ದೃಶ್ಯ – 02 / Scene - 02

[ರಾಜೇಶ್ ಫೋನಿನಲ್ಲಿ ಮಾತಾಡ್ತಾ ಬರುತ್ತಿದ್ದಾನೆ. ಅವನ ಎದುರುಗಡೆ ಸುರೇಶ್ ಹ್ಯಾಪುಮೋರೆ ಇಟ್ಕೊಂಡು ಬರ್ತಾ ಇರ್ತಾನೆ.]

ರಾಜೇಶ್ (Rajesh) : [ಫೋನಿನಲ್ಲಿ ಮಾತನಾಡುತ್ತಾ] ಏ.. ಮಗಾ.. ಒಂದ್ ನಿಮಿಷ ಕಣೋ. ಆಮೇಲೆ ಮಾಡ್ತೀನೋ. ನನ್ ಫ್ರೆಂಡ್ ಒಬ್ಬ ಈಗ ತಾನೇ ಸಿಕ್ಕ. [ಫೋನ್ ಕಟ್ ಮಾಡ್ತಾನೆ] ಲೋ.. ಸುರೇಶ್. ಏನೋ.. ಮಗಾ. ಇಲ್ಲಿ.

ಸುರೇಶ್ (Suresh) : [ಯಾವುದೋ ಗಾಢ ಯೋಚನೆಯಲ್ಲಿದ್ದವನು ಎಚ್ಚರವಾದಂತೆ ತಲೆಯೆತ್ತಿ ನೋಡಿ] ಹಾಯ್ ಮಗಾ

ರಾಜೇಶ್ (Rajesh) : ಏನ್ ಗುರೂ.. ತುಂಬಾ ಡಲ್ ಆಗೀಯಲ್ಲೋ.

ಸುರೇಶ್ (Suresh) : ಏನಿಲ್ಲಾ ಬಿಡೋ..

ರಾಜೇಶ್ (Rajesh) : ಹೇಳೋಮ್ಮಾ ಪರವಾಗಿಲ್ಲ.

ಸುರೇಶ್ (Suresh) : ಏನಿಲ್ಲಾ ಕಣೋ.. ಹೆಂಡ್ತಿ ಜೊತೆ ಜಗಳ ಅಷ್ಟೆ.

ರಾಜೇಶ್ (Rajesh) : ಹೆಂಡ್ತಿ ಜೊತೆ ಜಗಳಾನ. ವಾವ್.. ಸೂಪರ್. ಯಾರು ಫಸ್ಟ್ ಜಗಳ ಆಡಿದ್ದು.

ಸುರೇಶ್ (Suresh) : ಅವಳೇ ಫಸ್ಟ್

ರಾಜೇಶ್ (Rajesh) : ಎಂಥಾ ಖುಷಿ ವಿಷ್ಯಾನೋ. ಸಖತ್ ಖುಷಿಯಾಗೋದು ಬಿಟ್ಟು, ಇಂಗು ತಿಂದ ಮಂಗನ ಥರಾ ಹ್ಯಾಪುಮೋರೆ ಹಾಕ್ಕೊಂಡು ಬಂದೀಯಾ.

ಸುರೇಶ್ (Suresh) : ಮತ್ತೇನೋ ಮಾಡ್ಲಿ.

ರಾಜೇಶ್ (Rajesh) : ಬಾ... 90 ಹಾಕ್ಕೋಂಡು ಪಾರ್ಟಿ ಮಾಡೋಣ.

[ಅಷ್ಟರಲ್ಲಿ ಒಬ್ಬ ಕುಡುಕ ತೂರಾಡಿಕೊಂಡು ಅಲ್ಲಿಗೆ ಬರುತ್ತಾನೆ]

ಸುರೇಶ್ (Suresh) : [ಆ ಕುಡುಕನ ಕಡೆ ಕೈ ತೋರಿಸುತ್ತಾ] ಹೀಗೆ ನಾನು ಕುಡ್ಕೊಂಡು ಹೋಗಿದ್ದಕ್ಕೆ ಮನೇಲಿ ಜಗಳ ಆಗ್ತಾ ಇರೋದು. ಇನ್ನೂ ಇವತ್ತು ಕೂಡ ಹೋದ್ರೆ ಮತ್ತೆ ಅದೇ ಮ್ಯಾಚು ಶುರು.

ಶ್ರೀಧರ (Sridhara) : [ಸುರೇಶ್‌ನನ್ನು ದುರುಗುಟ್ಟಿಕೊಂಡು ನೋಡುತ್ತಾ] .. ಏ... ಏ... ಏನಯ್ಯಾ ನನ್ ಕಡೆ ಕೈ ತೋರಿಸುತ್ತಾ ಏನೋ ಹೇಳ್ತಾ ಇದೀಯಾ.

ರಾಜೇಶ್ (Rajesh) : ಏನಿಲ್ಲಾ ಬ್ರದರ್. ಮನೆಯಲ್ಲಿ ಹೆಂಡ್ತಿ ಜೊತೆ ಜಗಳ ಆಡ್ಕೊಂಡು ಬಂದಿದ್ದ. ನಾನು ಖುಷಿಗೆ ಎಣ್ಣೆ ಹಾಕೋಣು ಬಾರೋ ಅಂತಾ ಕರೆದೆ. ಅದ್ಕೆ ಅವ್ನು ನಿಮ್ಮನ್ನ ತೋರಿಸಿ ಹೀಗೆ ನಾನು ಹೋದ್ರೆ ನನ್ ಹೆಂಡ್ತಿ ಬೈತಾಳೆ ಅಂತಾ ಹೇಳ್ತಾ ಇದ್ದ ಅಷ್ಟೆ.

ಶ್ರೀಧರ (Sridhara) : [ಜೋರಾಗಿ ನಗುತ್ತಾ ತೂರಾಡುತ್ತಾ] ಹಹ್ಹಹ್ಹಹಾ... ನಿಂದು ಸೇಮ್ ಪ್ರಾಬ್ಲಂ ಏನಪ್ಪಾ. ನಂದು ಅದೇ ಪ್ರಾಬ್ಲಂ.

ಸುರೇಶ್ (Suresh) : ಏನ್ ಪ್ರಾಬ್ಲಂ ಬಾಸು...

ಶ್ರೀಧರ (Sridhara) : ನನ್ ಹೆಂಡ್ತಿ ಕಾಟ ಕಣಣ್ಣೋ.. ಸುಮ್ನೆ ಅದು ತಗೊಂಡು ಬಾ.. ಇದು ತಗೊಂಡು ಬಾ ಅಂತ ಒಂದೇ ಸಮನೇ ಗೋಳು. ಅದ್ಕೆ ನಾನೇ.. ಫಸ್ಟ್ ಒಂದು ಕ್ವಾಟರ್ ಹಾಕ್ಕೊಂಡು ಹೋದ್ರೆ ಜಗಳಾಡಿಕೊಂಡು ತಗೊಂಡು ಬರೋದನ್ನ ಕೇಳೋದೇ ಮರೆತುಬಿಡ್ತಾಳೆ. ನಾನು ಕುಡುಕ ಅಲ್ಲಾ ಬಾಸು.. ಎಲ್ಲಾ ಅವಳಿಂದಾನೇ ಈ ಕುಡುಕ ಆಗೋಗ್ಬಿಟ್ಟೆ.

ರಾಜೇಶ್ (Rajesh) : ಸೂಪರ್ ಐಡಿಯಾ.. ನೋಡೋ ಸುರೇಶ. ಕಲಿತುಕೊಳ್ಳೋ.

ಸುರೇಶ್ (Suresh) : ನಂಗೂ ಒಂಥರಾ.. ಈ ಐಡಿಯಾ ಚೆನ್ನಾಗಿದೆ ಅಂತಾ ಅನ್ನಿಸ್ತಾ ಇದೇ.. ಗುರೂ.

[ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ಮುದುಕನೊಬ್ಬ ಬರ್ತಾ ಇರ್ತಾನೆ. ಅವನಿಗ್ಯಾಕೋ ತಲೆಸುತ್ತು ಬಂದಂತಾಂಗಿ ಅಲ್ಲಿಯೇ ಕುಸಿದುಬೀಳುತ್ತಾನೆ. ಇವರು ಅದನ್ನ ನೋಡಿ, ಮುದುಕನ್ನ ಉಪಚರಿಸುತ್ತಾರೆ.]

ರಾಜೇಶ್ (Rajesh) : ಏನಾಯ್ತು ಅಂಕಲ್. ಸಡನ್ನಾಗಿ ಕೆಳಗೆ ಬಿದ್ದುಬಿಟ್ರಿ.

ಬಾಲಣ್ಣ (Balanna): [ಸುಧಾರಿಸಿಕೊಳ್ಳುತ್ತಾ] ಏನಿಲ್ಲಪ್ಪಾ.. ಯಾಕೋ ಸ್ವಲ್ಪ ತಲೆಸುತ್ತು ಬಂದಂಗಾಯ್ತು. ಆಸ್ಪತ್ರೆಗೆ ಹೋಗಿದ್ದೆ. ಬಿಸಿಲು ಬೇರೆ ಅಲ್ವಾ. ಒಂಚೂರು ಹಾಗಾಯ್ತು ಅಷ್ಟೆ.

ರಾಜೇಶ್ (Rajesh) : ಓ.. ಹೌದಾ. ಹಾಗಾದ್ರೆ ನಿಮ್ ಜೊತೆ ಯಾರನ್ನಾದ್ರೂ ಕರ್ಕೊಂಡು ಬರೋದು ತಾನೇ. ಒಬ್ಬರೇ ಬರೋ ಬದಲು. ಇಂಥಾ ಟೈಮಲ್ಲಿ ಯಾರಾದ್ರೂ ಜೊತೆಗಿರ್ಬೇಕು ಅಲ್ವಾ.

ಬಾಲಣ್ಣ (Balanna) : ಏನ್ ಮಾಡೋದಪ್ಪ. ಯಾರೂ ಜೊತೇಲಿ ಇಲ್ಲ. ಹೆಂಡ್ತಿ ಇಲ್ಲ. ಮಗ-ಸೊಸೆ ಫಾರೀನ್ನಲ್ಲಿ ಇದ್ದಾರೆ. ಅವರಿಗೆ ನೆನಪಾದಾಗ ಮಾತ್ರ ಕಾಲ್ ಮಾಡ್ತಾರೆ. ನಂಗೆ ಬೇಕಾದಾಗ ಯಾರೂ ಸಿಗೋಲ್ಲ.

ಶ್ರೀಧರ (Sidhara) : ಓ.. ತಬ್ಬಲಿ ತಂದೆ. ಮಕ್ಕಳು ದೊಡ್ಡೋರಾದ್ಮೇಲೆ ತಂದೆ-ತಾಯಿ ತಬ್ಬಲೀನೇ.. ಬಿಡಿ.

ಬಾಲಣ್ಣ (Balanna) : ನೀನ್ ಹೇಳೋದು ಒಂಥರಾ ನಿಜಾನೇ ಬಿಡಪ್ಪಾ.

ಸುರೇಶ್ (Suresh) : ಹೌದು. ಮಕ್ಕಳು ದೊಡ್ಡವರಾದ ಮೇಲೆ ತಮ್ಮ ತಂದೆ-ತಾಯಿ ಬಗ್ಗೆ ಯಾಕೇ ಯೋಚನೆ ಮಾಡೋಲ್ಲ ಅಂತಾ. ನಂಗೆ ಅರ್ಥ ಆಗ್ತಾ ಇಲ್ಲ.

ರಾಜೇಶ್ (Rajesh) : ಯೋಚ್ನೇ ಮಾಡೋಕೆ ಟೈಮ್ ಎಲ್ಲಿರುತ್ತೆ ಗುರೂ. ಕೆಲ್ಸಾ.. ಕೆಲ್ಸಾ.. ವೀಕೆಂಡ್ ಬಂದ್ರೆ ಎಲ್ಲಾನೂ ಮರೀತಾರೆ. ವೀಕ್ ಡೇಸ್ ಬಂದ್ರೂ ಎಲ್ಲಾನೂ ಮರೆತು ಕೆಲ್ಸದಲ್ಲಿ ಮುಳುಗಿರ್ತಾರೆ.

ಸುರೇಶ್ (Suresh) : ಅದ್ಸರಿ ಕಣೋ.. ನಮ್ ಜನಕ್ಕೆ ಈ ಸಂಬಂಧಗಳ ಬಗ್ಗೆ, ಅವುಗಳನ್ನು ಕಾಪಾಡ್ಕೋಳೋದ್ರ ಬಗ್ಗೆ ಸ್ವಲ್ಪ ಜಾಗೃತಿ ಮೂಡಿಸ್ಬೇಕು ಕಣೋ.

ಶ್ರೀಧರ (Sridhara) : ಜಾಗೃತಿ.. ಜಾಗೃತಿ..

[ಅಷ್ಟರಲ್ಲಿ ಶಕುಂತಲಾ ಮತ್ತು ರಂಗಿ ತರಕಾರಿ ತಗೊಂಡು ಅದೇ ದಾರಿಯಲ್ಲಿ ಬರ್ತಾ ಇರ್ತಾರೆ. ರಾಜೇಶನನ್ನು ನೋಡಿ.]

ಶಕುಂತಲಾ (Shakunthala) : ಏನೋ.. ರಾಜೇಶ ಇಲ್ಲಿ. ಏನ್ ಮಾಡ್ತಾ ಇದೀಯಾ.?

ರಾಜೇಶ (Rajesh) : ಅಕ್ಕಾ.. ಏನಿಲ್ಲಾ. ಹೀಗೆ ನಮ್ ಫ್ರೆಂಡ್ ಸಿಕ್ಕ. ಅದ್ಕೆ ಇಲ್ಲಿ ನಿಂತ್ಕೊಂಡೆ.

ಶ್ರೀಧರ (Sridhara) : ಜಾಗೃತಿ.. ಜಾಗೃತಿ..

ಶಕುಂತಲಾ (Shakunthala) : ಯಾರೋ ಇವ್ನು. ಜಾಗೃತಿ ಜಾಗೃತಿ ಅಂತಾ ಬಡ್ಕೋತಾ ಇದಾನೆ.

ರಾಜೇಶ (Rajesh) : ಅಕ್ಕಾ.. ಅವನ್ಯಾರೋ ಗೊತ್ತಿಲ್ಲ. ಹಾಗೇ ನಮ್ ಜೊತೆ ಮಾತಾಡ್ತಾ ಇದ್ದಾನೆ ಅಷ್ಟೆ. ನಮ್ ಸಮಾಜನ ಸ್ವಲ್ಪ ಬದಲಾವಣೆ ಮಾಡೋಕೆ ನಮ್ ಕೈಲಿ ಆಗುತ್ತಾ ಅಂತಾ ಮಾತಾಡ್ತಾ ಇದೀವಿ. ಹೇಗೆ ಮಾಡ್ಬೇಕು, ಏನ್ ಮಾಡ್ಬೇಕು ಅಂತಾ.

ರಂಗಿ (Rangi) : ಅಣ್ಣಾರ.. ಮೊದ್ಲು ನಾವ್ ಬದ್ಲಾಗ್ ಆಗ್ಬೇಕ್ರಿ. ಆಮ್ಯಾಗ ಸಮಾಜ ತಂತಾನೇ ಬದಲಾಗ್ತದ.

ಬಾಲಣ್ಣ (Balanna) : ಚಿನ್ನದಂತ ಮಾತು ಹೇಳಿದೆ ಕಣ್ ತಾಯಿ. ನಿಜ ನೀ ಹೇಳೋದು. ಮೊದಲು ನಾವುಗಳೇ ಬದಲಾಗಬೇಕು. ನಮ್ಮ ಸುತ್ತಮುತ್ತ ಇರೋ ಜನ ಬದಲಾಗಬೇಕು. ನಮ್ ಏರಿಯಾ ಬದಲಾಗಬೇಕು. ನಮ್ ಊರು ಬದಲಾಗಬೇಕು. ಆಗ ತಂತಾನೇ ಇಡೀ ಪ್ರಪಂಚಾನೇ ಬದಲಾಗುತ್ತೆ.

ಶಕುಂತಲಾ (Shakunthala) : ಹೌದು, ಜನರಲ್ಲಿ ಜಾಗೃತಿ ಮೂಡಿಸೋ ಮುಂಚೆ ನಾವೇ ಬದಲಾಗೋ ಹಾಗೇ ಏನಾದ್ರೂ ಮಾಡ್ಬೇಕು.

[ಅಷ್ಟರಲ್ಲಿ ಸೌಮ್ಯ ಕೂಡ ಅಲ್ಲಿಗೆ ಬರುತ್ತಾಳೆ.]

ಸೌಮ್ಯ (Sowmya) : ಅಮ್ಮಾ.. ಏನಿಲ್ಲಿ. ಏನೋ ತುಂಬಾ ಬಿಸಿಬಿಸಿ ಚರ್ಚೆ ನಡೀತಾ ಇದೆ ಅಂತಾ ಅನ್ಸುತ್ತೆ.

ಶಕುಂತಲಾ (Shakuntala) : ಹಾಗೇನಿಲ್ಲ ಕಣೇ. ಸಮಾಜ ಸೇವೆ ಮಾಡೋಣಂತಾ. ಅದಕ್ಕೂ ಮುಂಚೆ ನಾವೇ ಬದಲಾಗೋಣ ಅಂತಾ.

ಸೌಮ್ಯ (Sowmya) : ಓ.. ಹಾಗೇನು. ನಾನೂ ಕೂಡ ನಿಮ್ಮ ಜೊತೆ ಬರ್ತೀನಿ.

ರಾಜೇಶ್ (Rajesh) : ಒಂದೊಳ್ಳೆ ಕೆಲ್ಸ ಮಾಡೋಕೆ ಯಾರಾದ್ರೇನು ಅಲ್ವಾ.. ಸೌಮ್ಯ. ಸರಿ ಹಾಗೇ ಆಗಲಿ.

ಬಾಲಣ್ಣ (Balanna) : ಮೊದಲು ನಮ್ ನಮ್ ತಪ್ಪುಗಳ ಬಗ್ಗೆ ಆತ್ಮವಿಮರ್ಶನೆ ನಡೀಬೇಕು. ಅದನ್ನು ಸರಿ ಮಾಡ್ಕೋಬೇಕು. ಮತ್ತೆ ಇದೇ ಜಾಗದಲ್ಲಿ ಸೇರೋಣ. ನಮ್ಮ ಯಾವ ಲೋಪದೋಷಗಳನ್ನು ಸರಿ ಮಾಡ್ಕೊಂಡು ನಾವು ಏನಾದ್ರೂ ಒಂದೊಳ್ಳೆ ಕೆಲ್ಸ ಮಾಡೋಣ. ಏನಂತೀರಾ.

[ಬಾಲಣ್ಣನ ಮಾತಿನ ನಡುವೆ ಒಬ್ಬ ಹುಚ್ಚನೊಬ್ಬನು ಸ್ವಲ್ಪ ದೂರದಲ್ಲಿ ಹಾದು ಹೋಗುತ್ತಿರುತ್ತಾನೆ. ಅವನನ್ನು ಸುರೇಶ್ ದಿಟ್ಟಿಸಿ ನೋಡ್ತಾ ಇರ್ತಾನೆ. ಇವರ ಯಾವ ಮಾತುಗಳು ಅವನ ಕಿವಿಗೆ ತಾಕುವುದಿಲ್ಲ. ತಕ್ಷಣಕ್ಕೆ ಏನೋ ನೆನಪಾದಂತೆ]

ಸುರೇಶ್ (Suresh) : ಲೋ.. ರಾಜೇಶ್. ನಾನು ಮತ್ತೆ ಸಿಗ್ತೀನಿ ಕಣೋ. ಬೈ.. [ಅವನ ಪ್ರತ್ಯುತ್ತರಕ್ಕೂ ಕಾಯದೇ ಹುಚ್ಚನ ಕಡೇ ಹೋಗ್ತಾನೆ]

ರಾಜೇಶ್ (Rajesh) : ಯಾಕೋ.. ಏನಾಯ್ತು. ಇಲ್ಲೇನೋ ಮಾತಾಡ್ತಾ ಇದೀವಲ್ಲ.

[ಇವರ ಮಾತುಗಳನ್ನು ಯಾವುದನ್ನು ಕಿವಿಗೆ ಹಾಕಿಕೊಳ್ಳದೇ ತನ್ನ ಪಾಡಿಗೆ ತಾನು ಆ ಹುಚ್ಚನ ಕೈ ಹಿಡಿದು ತನ್ನೊಟ್ಟಿಗೆ ಕರೆದುಕೊಂಡು ಹೋಗುತ್ತಾನೆ]

ಸೌಮ್ಯ (Sowmya) : ಅಯ್ಯೋ.. ಇವರಿಗೇನಾಯ್ತು. ಆ ಹುಚ್ಚನ ಜೊತೆ ಹೋಗ್ತಾ ಇದಾರೆ. ಅದು ಅವನ ಕೈ ಹಿಡ್ಕೊಂಡು.

ರಾಜೇಶ್ (Rajesh) : ಹೆಂಡ್ತಿ ಜೊತೆ ಜಗಳವಾಡಿ, ಹುಚ್ಚನ ಥರ ಆಗಿದ್ದ. ಹುಚ್ಚನ ಜೊತೆ ಸೇರಿ ಇನ್ನೂ ಟ್ರೈನಿಂಗ್ ತಗೋತಾ ಇದಾನೆ ಅಂತಾ ಅನ್ಸುತ್ತೆ. [ಅಂತಾ ನಗುತ್ತಾನೆ]

ಶ್ರೀಧರ (Sridhara) : ಇದ್ದರೂ ಇರಬಹುದು. ನನ್ ಥರ ಕುಡುಕ ಆಗ್ತೀನಿ ಅಂದಾ.. ಈಗ ಹುಚ್ಚನೂ ಆದ. [ಎಲ್ಲರೂ ನಗುತ್ತಾರೆ]

ಬಾಲಣ್ಣ (Balanna) : ಸರೀ ಕಣ್ರಪ್ಪಾ.. ಮತ್ತೆ ಸಿಗೋಣ. ಏನಾದ್ರೂ ಬದಲಾವಣೆಯೊಂದಿಗೆ.

ಶ್ರೀಧರ (Sridhara) : ನಾನು ಇವತ್ತೇ ಪ್ರತಿಜ್ಞೆ ಮಾಡ್ತೀನಿ. ಇನ್ನು ಮುಂದೆ ನಾನು ಕುಡಿಯೊಲ್ಲ.. ಕುಡಿಯೊಲ್ಲ.. ಕುಡಿಯೊಲ್ಲ...

ರಾಜೇಶ್ (Rajesh) : ಸರಿ. ನಡ್ರೀ ಹೋಗೋಣ. ಎಲ್ರೂ ಮತ್ತೆ ಸಿಗೋಣ.

ಶಕುಂತಲಾ (Shakuntala) : ಬಾರೋ.. ರಾಜೇಶ. ಮನೆಗೆ ಹೋಗೋಣ.

ರಾಜೇಶ್ (Rajesh) : ನಡಿಯಕ್ಕಾ.. ಹೋಗೋಣ. ನಂಗೂ ಹೊಟ್ಟೆ ತುಂಬಾ ಹಸಿಯುತ್ತಾ ಇದೆ. [ಎಲ್ಲರೂ ಅಲ್ಲಿಂದ ಹೊರಡುತ್ತಾರೆ.]


ದೃಶ್ಯ – 03

[ಮತ್ತದೇ ಜಾಗದಲ್ಲಿ ಎಲ್ಲರೂ ಒಟ್ಟಾಗಿ ಸೇರಿರುತ್ತಾರೆ ಸುರೇಶ್‌ನನ್ನು ಹೊರತುಪಡಿಸಿ.]

ರಾಜೇಶ್ (Rajesh) : ಏನ್ ಅಂಕಲ್.. ಹೇಗಿದ್ದೀರಾ.. ಈಗ.

ಬಾಲಣ್ಣ (Balanna) : ಹ್ಞೂ.. ಏನೋ.. ಸ್ವಲ್ಪ ಪರವಾಗಿಲ್ಲ ಕಣಪ್ಪಾ..

ಶಕುಂತಲಾ (Shakuntala) : ಅದು ಸರಿ, ಏನಾದ್ರೂ ಬದಲಾವಣೆ ಆಯ್ತಾ ನಮ್‌ನಮ್ಮಲ್ಲಿ..

ಬಾಲಣ್ಣ (Balanna) : ಹೌದಲ್ವೇ.. ಆ ದಿನ ಏನಾದ್ರೂ ಬದಲಾವಣೆಯೊಂದಿಗೆ ಮತ್ತೇ ಬರೋಣ ಅಂತಾ ಹೇಳಿದ್ವಿ ಅಲ್ವೇ..?

ರಂಗಿ (Rangi) : ಹೌದೂ.. ಅಣ್ಣಾವ್ರೆ.

ಸೌಮ್ಯ (Sowmya) : ನಾನೇನೋ.. ತುಂಬಾ ಬದಲಾಗಿದ್ದೀನಿ.

ರಾಜೇಶ್ (Rajesh) : ಏನ್ ಬದಲಾಗಿದ್ದೀಯಾ.. ಸೌಮ್ಯ..?

ಸೌಮ್ಯ (Sowmya) : ನನ್ನ ಗಂಡನ ಜೊತೆ ಜಗಳ ಆಡೋದನ್ನು ಪೂರ್ತಿ ಬಿಟ್ಟಿದ್ದೀನಿ.

ಶಕುಂತಲಾ (Shakunthala) : ಓ.. ಅದ್ಕೇ ನಾ. ಈ ನಡುವೆ ನಿಂಗೆ ಅಮ್ಮನ ನೆನಪೇ ಇಲ್ಲ.

ರಂಗಿ (Rangi) : ಹೌದು ಮತ್ತೆ. ಗಂಡನ ಪ್ರೀತಿ ಸಿಕ್ರೆ ಸ್ವರ್ಗಕ್ಕೆ ಮೂರೇ ಗೇಣು ಅಲ್ವಾ ಅಮ್ಮಾವ್ರೆ. [ಎಲ್ರೂ ನಗ್ತಾರೆ]

ರಾಜೇಶ (Rajesh) : ಅದಿರಲಿ.. ನಾನು ಮೊನ್ನೆ ಅನಾಥಾಶ್ರಮಕ್ಕೆ ಹೋಗಿದ್ದೆ. ಅಲ್ಲಿರೋ ಮಕ್ಕಳನ್ನು ನೋಡಿದೆ. ಒಂಥರಾ ಕರುಳು ಚುರುಕ್ ಅಂತು. ಆವತ್ತಿನಿಂದ ದಿನಾ ಅಲ್ಲಿಗೆ ನಾನು ಹೋಗ್ತಾ ಇದೀನಿ.

ಸೌಮ್ಯ (Sowmya) : ಹೌದಾ.. ಯಾಕೇ..?

ರಾಜೇಶ್ (Rajesh) : ನಮ್ಮವರು ಅಂತಾ ಇಷ್ಟೆಲ್ಲಾ ಜನ ಇದ್ರೂ ನಾವುಗಳು ಒಂದೊಂದು ಸಾರಿ, ಯಾರೂ ಇಲ್ವೇನೋ ಅನ್ನೋ ಹಾಗೇ ಜೀವನದಲ್ಲಿ ಸಂಕಟಪಡ್ತಾ ಇರ್ತೀವಿ.

ಶಕುಂತಲಾ (Shakunthala) : ಹೌದೂ ಕಣೋ..

ರಾಜೇಶ (Rajesh) : ಯಾರೂ ಇಲ್ಲದೇ ಇರೋ ಅವರುಗಳು ಯಾರಿಗೋಸ್ಕಾರ ಬದುಕ್ತಾರೆ. ಆದ್ರೂ ಅವರ ಕಣ್ಣುಗಳಲ್ಲಿ ಕನಸುಗಳಿಗೆ ಏನೂ ಬರ ಇಲ್ಲಕ್ಕಾ..

ಶಕುಂತಲಾ (Shakunathala) : ಹೌದು ಕಣೋ. ಕನಸು ಕಾಣಲೇಬೇಕು. ಕನಸುಗಳು ಇಲ್ಲಾಂದ್ರೆ ಗುರಿ ಇರೋಲ್ಲ. ಗುರಿ ಇಲ್ಲದ ಜೀವನ ಜೀವನಾನೇ ಅಲ್ಲಾ ಕಣೋ.

ಬಾಲಣ್ಣ (Balanna) : ಸರಿಯಾಗಿ ಹೇಳಿದ್ರಿ. ಕನಸುಗಳನ್ನು ನನಸಾಗಿಸುವ ಹುಮ್ಮಸ್ಸು ಪ್ರತಿಯೊಬ್ಬರಲ್ಲು ಬರಬೇಕು.

ರಂಗಿ (Rangi) : ನಿಮಗ್ಗೊತ್ತಾ ಅಣ್ಣಾವ್ರೆ. ಅಮ್ಮಾವ್ರು ಬದಲಾಗಿದ್ದಾರೆ.

ರಾಜೇಶ (Rajesh) : ಹೌದಾ. ಏನ್ ಬದಲಾಗಿದ್ದಾರೆ.

ರಂಗಿ (Rangi) : ತಿಂಗಳಾ ತಿಂಗಳ ನನ್ ಪಗಾರ ಕೊಡೋಕೆ ನಿಧಾನ ಮಾಡ್ತಾ ಇದ್ರು. ಈಗ ನನ್ನ ಮಗನ ಒಂದು ವರ್ಷದ ಶಾಲಿ ಫೀಸ್‌ನ ಕಟ್ಟ್ಯಾರ.

ಶಕುಂತಲಾ (Shakunthala) : ಅದರಲ್ಲೇನಿದೇನೇ.. ನಿನ್ನ ಮಗ ಚೆನ್ನಾಗಿ ಓದಲಿ.. ಅವನನ್ನ ಚೆನ್ನಾಗಿ ಓದ್ಸು.

ರಂಗಿ (Rangi) : ಆಯ್ತು ಅಮ್ಮಾವ್ರೆ.

ಬಾಲಣ್ಣ (Balanna) : ಇದೆಲ್ಲಾ ನಂಗೊತ್ತು. ನಿಮ್ಮೆಲ್ಲರನ್ನೂ ನಾನು ಗಮನಿಸ್ತಾನೇ ಇದೀನಿ. ಎಲ್ರೂ ನಿಮಗೆ ಗೊತ್ತಾಗದೇನೆ ತುಂಬಾ ಬದಲಾಗೀದ್ದೀರಿ. ಒಂದಷ್ಟು ಆತ್ಮೀಯತೆಯಿಂದ ಮಾತನಾಡ್ತೀರಿ. ಎಲ್ರೂ ಸೇರಿ ಎಷ್ಟೋ ಒಳ್ಳೇಯ ಕೆಲಸಗಳನ್ನು ಮಾಡಿದಿರಿ. ಆದ್ರೆ ಈಗ ಮಾತ್ರ ನೀವು ಮಾಡಿರೋ ಚಿಕ್ಕಚಿಕ್ಕ ಕೆಲಸಗಳ ಬಗ್ಗೆ ನನ್ ಹತ್ರ ಹೇಳ್ತಾ ಇದ್ದೀರಿ.

ರಾಜೇಶ (Rajesh) : ಹೌದು ಅಂಕಲ್. ಸಮಾಜಕ್ಕೆ ಏನಾದ್ರೂ ಮಾಡಬೇಕು ಅಂತಾ ಅಂದ್ಕೊಂಡ ಮೇಲೆ, ಅದನ್ನ ಹೇಳ್ಕೊಂಡು ಸುಮ್ನೇ ತಿರುಗಬಾರದು. ಸೇವೆ ಮಾಡಿದ ತಕ್ಷಣ ಅದನ್ನು ಮರೀಬೇಕು. ಇಲ್ಲಾಂದ್ರೆ ಪಿತ್ತ ನೆತ್ತಿಗೇರುತ್ತೇ ಅಲ್ವೇ.

ರಂಗಿ (Rangi) : ಹೌದೂ. ನೀವ್ ಹೇಳೋದು ಖರೇ ಐತಿ. ಇವರು ಯಾಕ ಸುಮ್ನೇ ನಿಂತ್ಕೊಂಡಿದ್ದಾರೆ.

ಶ್ರೀಧರ (Sridhara) : [ನಸುನಗುತ್ತಾ].. ಹಾಗೇನಿಲ್ಲಕ್ಕಾ.. ಮೊದಲು ಕುಡಿದಾಗ ಗೊತ್ತಿದ್ದೋ ಗೊತ್ತಿಲ್ಲದೋ ತುಂಬಾನೇ ಮಾತಾಡ್ತ ಇದ್ದೆ. ಇತ್ತೀಚೆಗೆ ಮಾತು ಕಡಿಮೆಯಾಗಿ, ಮೌನ ಜಾಸ್ತಿಯಾಗಿದೆ. ಈ ಮೌನದಿಂದಲೇ ಇಷ್ಟು ದಿನ ತಿಳಿಯದೇ ಇರೋ ಎಷ್ಟೋ ವಿಷ್ಯಗಳ ಬಗ್ಗೆ ತಿಳ್ಕೊಂಡಂಗಾಗ್ತಿದೆ.

ಶಕುಂತಲಾ (Shakunthala) : ಹೌದು ಶ್ರೀಧರ. ಮೌನ ಕಲಿಸೋ ತಾಳ್ಮೆಯ ಪಾಠ.. ಯಾವ ಮಾತಿಂದನೂ ಸಿಗೊಲ್ಲ.

ಸೌಮ್ಯ (Sowmya) : ಅಮ್ಮಾ.. ಇಲ್ಲಿ ನಾವೆಲ್ಲರೂ ಇದ್ದೀವಿ. ತುಂಬಾ ದಿನದಿಂದ ರಾಜೇಶನ ಫ್ರೆಂಡ್ ಸುರೇಶ ಕಾಣಿಸ್ತಾ ಇಲ್ಲ.

ರಾಜೇಶ (Rajesh) : ಹಾ.. ಸೌಮ್ಯ. ಅವನು ನಂಗೂ ತುಂಬಾ ದಿನ ಆಯ್ತು ಸಿಕ್ಕು. ಫೋನ್ ಕೂಡ ಸ್ವಿಚ್ಚಾಫ್.

ಶ್ರೀಧರ (Sridhara) : ಅಗೋ.. ಅಲ್ಲಿ ಬರ್ತಾ ಇರೋದು. ನಿಮ್ಮ ಫ್ರೆಂಡ್ ಅಲ್ವಾ.

[ಎಲ್ಲರೂ ಅವನು ಕೈತೋರಿಸಿದ ಕಡೆ ನೋಡುತ್ತಾರೆ. ಅಷ್ಟರಲ್ಲಿ ಸುರೇಶ ತನ್ನ ಮತ್ತೊಬ್ಬ ಸ್ನೇಹಿತನ ಜೊತೆ ಅಲ್ಲಿಗೆ ಬರ್ತಾನೆ]

ಸುರೇಶ (Suresh) : ಹಾಯ್ ಮಗಾ.. ಹಾಯ್.. ಹಾಯ್.. ಎಲ್ರೂ ಹೇಗೀದಿರಾ.. ಅಂಕಲ್ ನೀವು ಹೇಗಿದ್ದೀರಾ.

ರಾಜೇಶ (Rajesh) : ಹಾಯ್.. ಇರಲಿ.. ಏನೋ.. ಎಲ್ಲೋಗಿದ್ಯೋ. ಇಷ್ಟು ದಿನ. ಫೋನ್ ಬೇರೆ ಸ್ವಿಚ್ಚಾಫ್ ಆಗಿತ್ತು.

ಸುರೇಶ (Suresh) : ಏ.. ಎಲ್ಲೂ ಇಲ್ಲಾ ಕಣೋ. ಸ್ವಲ್ಪಾ ಹೀಗೆ ಏನೋ ಒಂದು ಕೆಲಸಾ ಇತ್ತು ಅಷ್ಟೆ.

ರಾಜೇಶ (Rajesh) : ಅದೇನಪ್ಪಾ.. ನಂಗೂ ಗೊತ್ತಿಲ್ಲದೇ ಇರೋದು.

ಶಕುಂತಲಾ (Shakunthala) : ಅದ್ಸರಿ ಕಣೋ.. ಇವರ್ಯಾರು. ಯಾರು ಅಂತಾನೇ ಪರಿಚಯ ಮಾಡಿಕೊಡ್ಲಿಲ್ಲ.

ಸುರೇಶ (Suresha) : ಓ.. ಸಾರಿ ಅಕ್ಕಾ.. ಇವನು ನನ್ನ ಫ್ರೆಂಡ್ ಸಂತೋಷ್ ಅಂತಾ.

ಸಂತೋಷ್ (Santhosh) : ಎಲ್ಲರಿಗೂ ನಮಸ್ಕಾರ

ರಾಜೇಶ್ (Rajesh) : ಇವನನ್ನಾ ನಾನು ಎಂದೂ ನೋಡಿಲ್ಲ ಅಲ್ವಾ.

ಸಂತೋಷ್ (Santhosh) : ರಾಜೇಶ.. ನಿಮ್ಮೆಲ್ಲರನ್ನೂ ನಾನು ನೋಡಿದೀನಿ.

ಸೌಮ್ಯ (Sowmya) : ಹೌದಾ..!!

ಸುರೇಶ (Suresh) : ಅಷ್ಟೆ ಅಲ್ಲ. ನೀವು ಕೂಡ ಇವನನ್ನಾ ನೋಡಿದ್ದೀರಾ..

ಎಲ್ಲರೂ (All) : ಹೌದಾ..!! [ಬಾಲಣ್ಣ, ಸುರೇಶ್ ಮತ್ತು ಸಂತೋಷ ಹೊರತುಪಡಿಸಿ]

ಬಾಲಣ್ಣ (Balanna) : ಹೌದೂ.. ನೀವೆಲ್ಲರೂ ನೋಡಿದ್ದೀರಿ. ಆ ದಿನ ಸುರೇಶ ಯಾರನ್ನೋ ಕರೆದುಕೊಂಡು ಹೋಗಿದ್ದು ನಿಮ್ಗೆ ನೆನಪಿದೇನಾ..?

[ಎಲ್ಲರೂ ಯೋಚನಾಮಗ್ನರಾಗಿದ್ದಾರೆ.]

ರಂಗಿ (Rangi) : ಹಾ.. ನೆನಪಾಯ್ತು. ಆವತ್ತು ಯಾರೋ ಹುಚ್ಚನ ಜೊತೆಯಾಗ ಇವ್ರು ಹೋದ್ರೀ.. ಹೌದಲ್ಲೋ..

ಸಂತೋಷ (Santhosh) : ಅಕ್ಕಾ.. ನೀವು ಸರಿಯಾಗಿ ಹೇಳಿದ್ರಿ. ಆವತ್ತಿನ ಹುಚ್ಚ... ನಾನೇನೇ.

[ಎಲ್ಲರಿಗೂ ಆಶ್ಚರ್ಯಚಕಿತರಾಗಿದ್ದಾರೆ.]

ಸುರೇಶ (Suresha) : ಆದ್ರೆ ಇವ್ನು ಈಗ ಸಂಪೂರ್ಣ ಗುಣವಾಗಿದ್ದಾನೆ. ನಮ್ಮ ನಡುವೆ ನಮ್ಮಂತೆಯೇ ಇರುತ್ತಾನೆ.

ಬಾಲಣ್ಣ (Balanna) : ಆ ದಿನ ನಾನು ಆಸ್ಪತ್ರೆಗೆ ಹೋಗಿದ್ದಾಗ ಈ ಹುಚ್ಚನ ಜೊತೆ ಸುರೇಶನ್ನ ನೋಡಿದ್ದೆ. ಸೈಕಾಲಿಜಿ ಸ್ಪೆಷಲಿಸ್ಟ್ ಹತ್ತಿರ ಹೋಗಿ ಬರ್ತಿದ್ದ. ಆಗ ನಾನು ಮಾತನಾಡಿಸಿ ಕೇಳಿದಾಗ ಎಲ್ಲಾ ವಿಷ್ಯಾನೂ ಹೇಳಿದ. ಇವನಿಗೆ ಒಳ್ಳೇ ಟ್ರೀಟ್‌ಮೆಂಟ್ ಕೊಡ್ಸಿ, ಅವನು ಗುಣಮುಖವಾಗೋ ಹಾಗೇ ಮಾಡಿದ ನಮ್ಮ ಸುರೇಶ.

[ಇದನ್ನೂ ಕೇಳಿ ಎಲ್ಲರಿಗೂ ಆಶ್ಚರ್ಯವಾಯ್ತು. ಖುಷಿನೂ ಆಯ್ತು.]

ರಾಜೇಶ (Rajesh) : ಲೋ.. ಸುರೇಶ. ನಿನ್ನ ಬಗ್ಗೆ ತುಂಬಾ ಹೆಮ್ಮೆ ಆಗುತ್ತೆ ಕಣೋ. ನೀನು ತುಂಬಾ ಒಳ್ಳೇ ಕೆಲಸಾ ಮಾಡಿದೆ.

ಸಂತೋಷ (Santhosha) : ಹೌದು. ಅದ್ಯಾವ ಕೆಟ್ಟ ಗಳೀಗೇನೋ ಏನೋ.. ನಂಗೇನಾಗಿತ್ತೋ ನಂಗೆ ಗೊತ್ತಿಲ್ಲ. ನಿದ್ದೆಯಿಂದ ಎದ್ದ ಹಾಗೇ ಅಂತಾ ಅನಿಸಿದಾಗಲೇ ಗೊತ್ತಾಗಿದ್ದು, ನಾನು ಹುಚ್ಚನಾಗಿ ಬೀದಿಬೀದಿ ಅಲೆಯುತಾ ಇದ್ದೆ ಅಂತಾ. ಜೀವನದ ಸಂತೋಷ, ಸಂಭ್ರಮ ಕಾಣದಾ ನನಗೆ ಇವ್ರು ಸಂತೋಷ ಅಂತಾ ಹೆಸರಿಟ್ರು. ಇವ್ರು ನನ್ನ ಪಾಲಿನ ದೇವ್ರು. ನಾನು ಇವರಿಗೆ ಚಿರಋಣಿ.

ಸುರೇಶ (Suresha) : ಹೇ.. ನೀನು ಹಾಗೇಲ್ಲಾ ಹೇಳ್ಬೇಡಪ್ಪಾ. ನಾನೇನೂ ಅಲ್ಲ. ನಾನೇನೂ ಮಾಡ್ಲಿಲ್ಲ. ನಿನ್ನ ಖಾಯಿಲೆ ವಾಸಿಯಾಗೋವರೆಗೂ ಜೊತೆಗಿದ್ದೆ ಅಷ್ಟೆ.

ಸಂತೋಷ (Santhosh) : ಅದೇನೇ ಇರಲಿ.. ಅಣ್ಣಾ.. ಕಳೆದುಹೋಗಿದ್ದ ನನ್ನೆಲ್ಲಾ ಸುಖ, ಸಂತೋಷ, ನೆಮ್ಮದಿನಾ ವಾಪಾಸ್ಸು ತಂದು ಕೊಟ್ರಿ. ನಿಮ್ಮಂತೆ ಈ ಸಮಾಜಕ್ಕೆ ನಾನೂ ಏನಾದ್ರೂ ಮಾಡೇಮಾಡ್ತೀನಿ.

ಶಕುಂತಲಾ (Shakunthala) : ತುಂಬಾ ಖುಷಿಯಾಗ್ತಾ ಇದೆ. ಇದನ್ನೆಲ್ಲಾ ನೋಡ್ತಾ ಇದ್ರೆ ನಂಗೆ ಮಾತೇ ಬರ್ತಾ ಇಲ್ಲ.

ಸೌಮ್ಯ (Sowmya) : ಹೌದಮ್ಮಾ ನಂಗೂ ಅಷ್ಟೆ.

ರಂಗಿ (Rangi) : ಹೌದೂ ಅಮ್ಮಾವ್ರೆ.. ಮನುಷ್ಯ ಸಂಘಜೀವಿ. ಅವ ಒಬ್ಬರಿಗೊಬ್ಬರು ನಾವು ಆಸರೆಯಾಗಿ ಇರಬೇಕ್ರಿ. ಸ್ವಾರ್ಥ ಇರಬಾರ್ದು ರೀ.. ಆಗಲೇ.. ಇಂಥಾ ಚೋಲೋ.. ಕೆಲಸ ಆಗ್ತದಾ ನೋಡ್ರೀ..

[ಅಷ್ಟರಲ್ಲಿ ಕಾರ್ಪೋರೇಟರ್ ಶಂಕರ ಅಲ್ಲಿಗೆ ಬರುತ್ತಾನೆ. ಅವನ ಜೊತೆ ಸಮಾಜ ಸೇವಕಿ ನಿರ್ಮಲ ಕೂಡ ಬರುತ್ತಾಳೆ]

ಶಂಕರ (Shankara) : ನಮಸ್ಕಾರ ಕಣಪ್ಪಾ.. ಸುರೇಶಾ. ಹೇಗಿದ್ದೀಯಾ. ನಿನ್ನ ಬಗ್ಗೆ ಏನೋ ಒಳ್ಳೇ ವಿಷ್ಯ ಕೇಳ್ದೇ ಕಣಪ್ಪಾ. ಅದ್ಕೇ ನಿನ್ನ ಮಾತನಾಡಿಸ್ಕೊಂಡು ಹೋಗೊಣ ಅಂತಾ ಬಂದೆ ಅಷ್ಟೆ.

ಸುರೇಶ (Suresha) : ನಮಸ್ಕಾರ ಅಣ್ಣಾ.. ಅಯ್ಯೋ ನೀವ್ಯಾಕೆ ಬಂದ್ರಿ. ಹೇಳಿ ಕಳ್ಸಿದ್ರೆ ನಾನೇ ಬರ್ತಾ ಇದ್ದೆ.

ಶಂಕರ (Shankara) : ಇರಲಿ ಬಿಡಪ್ಪಾ.. ನಂಗೆ ಶ್ಯಾನೇ ಖುಷಿ ಆಯ್ತು ಕಣೋ. ನಮ್ಮ ಹುಡ್ಗ ಏನೋ ಕೆಲ್ಸ ಮಾಡ್ತಾವ್ನೆ ಅಂತಾ ಕೇಳಿ. ಅದ್ಯಾರೋ ಮನೋರೋಗಿಗೂ ಕೂಡ ಒಳ್ಳೇ ಟ್ರೀಟ್‌ಮೆಂಟ್ ಕೊಡ್ಸಿ ನಮ್ಮ ಥರ ಇರೋ ಹಾಗೇ ಮಾಡಿದಿಯಂತೆ ಕಣ್ಲಾ.. ಯಾರ್ಲಾ ಅದು.

ಬಾಲಣ್ಣ (Balanna) : ಇಲ್ಲೇ ಇದ್ದಾನೆ ನೋಡಿ... ಸಾರ್. ನಿಮಗೆ ಮತ್ತೋಂದು ಓಟು ಸಿಕ್ತು.

ಶಂಕರ (Shankara) : ಇವರೇನಾ.. ಓ.. ನಮಸ್ಕಾರನಪ್ಪಾ. ನಿಜವಾಗ್ಲೂ ಖುಷಿಯಾಯ್ತು ಕಣಪ್ಪಾ. [ಅಂತಾ ಹೇಳುತ್ತಾ ಅವನನ್ನು ತಬ್ಬಿಕೊಳ್ಳುತ್ತಾನೆ]

ನಿರ್ಮಲ (Nirmala) : ಹೌದು ಶಂಕ್ರಣ್ಣಾ.. ಏಟೋಂದು ಸಂದಾಕವ್ನೆ ಹುಡ್ಗಾ.. ಸುರೇಸಾ.. ನೀನ್ ಬೋಲ್ ಒಳ್ಳೇ ಕೆಲ್ಸಾ ಮಾಡ್ದೆ ಬಿಡು.

ಸುರೇಶ (Suresha.) : ಹಾಗೇನಿಲ್ಲಕ್ಕಾ.. ಎಲ್ರೂ ನಮ್ಮವರು ಅಂತಾ ತಿಳ್ಕೊಂಡು ಸಮಾಜಕ್ಕೆ ಒಳ್ಳೇದು ಆಗೋದನ್ನ ಏನಾದ್ರೂ ಮಾಡ್ಬೇಕು ಅಂತಾ ಇದ್ವಿ. ಸಮಾಜನ ಬದಲಾಯಿಸೋಕು ಯೋಚನೇ ಮಾಡಿದ್ವಿ.

ಶ್ರೀಧರ (Sridhara) : ಸಮಾಜ ಬದಲಾಯಿಸಿಕೋದಕ್ಕಿಂತ ಮುಂಚೆ ನಮ್ಮ ತಪ್ಪುಗಳನ್ನು ನಾವೇ ಹುಡುಕಿ, ಅದನ್ನ ತಿದ್ದುಕೊಂಡು ನಾವುಗಳೇ ಬದಲಾದ್ವಿ.

ರಾಜೇಶ (Rajesh) : ನಾವು ಬದಲಾದ ತಕ್ಷಣ, ನಮ್ಮ ಯೋಚನೆಗಳು ಬದಲಾದವು. ಅದೇ ಥರ ನಾವು ಮಾಡೋ ಕೆಲ್ಸಾನೂ ಬದಲಾಯ್ತು.

ಸೌಮ್ಯ (Sowmya) : ಅದರಿಂದಾ ನಾಲ್ಕು ಜನರಿಗೆ ಉಪಯೋಗಾನೂ ಆಯ್ತು. ನಮಗೂ ಮನಸಿಗೆ ಒಂಥರಾ ಖುಷಿನೂ ಆಯ್ತು, ತೃಪ್ತಿನೂ ಆಯ್ತು.

ಶಕುಂತಲಾ (Shakunthala) : ಆತ್ಮತೃಪ್ತಿಗಿಂತಾ ಬೇರೆ ತೃಪ್ತಿ ಇಲ್ಲಾ ಅಲ್ವೇ.. ಅದಕ್ಕೆ ಕೆಟ್ಟಕೆಲಸಗಳನ್ನು ಮಾಡಿ, ಮನಸು ಅತೃಪ್ತಿಯಿಂದ ಇರೋ ಥರ ಮಾಡೋದನ್ನ ಬಿಟ್ಟು, ನಾಲ್ಕು ಒಳ್ಳೆಯ ಕೆಲ್ಸಗಳನ್ನು ಮಾಡ್ಬೇಕು. ಆಗಲೇ ಮನಸು ಸಂತೃಪ್ತಿಯಾಗಿರುತ್ತೆ. ಏನಂತೀರಾ.

ಶಂಕರ (Shankara) : ನಿಜ ಕಣವ್ವಾ.. ನಾವುಗಳು ಬರೀ ಪದವಿ ಪದವಿ ಅಂತಾನೇ, ಪದವಿ ಹಿಂದೆ ಬಿದ್ದು ಮುದಿಇಲಿಗಳಾಗಿ ಹೋಗ್ತೀವಿ. ಯಾವ ಒಳ್ಳೇ ಕೆಲ್ಸಾನು ಮಾಡೋಕಾಗದಿಲ್ಲ. ಈ ಜನಗೊಳ್ ನಾವ್ ಹುಗಿಸ್ಕೊಳೋದು ತಪ್ಪಾಂಗಿಲ್ಲ.

ನಿರ್ಮಲ (Nirmala) : ಶಂಕರಣ್ಣಾ.. ಈಟೊಂದು ವರ್ಸ ನಾನು ಸಮಾಜ ಸೇವೆ ಅಂತಾ ಮಾಡ್ಕೊಂಡು ಬಂದೀನಿ. ಈ ಜೀವ ಇರೋಗಂಟಾ ಸಮಾಜ ಸೇವೇ ನಾನ್ ಮಾಡೋದೆಯಾ.. ಇವರುಗಳ ಜೊತೆನೂ ಸೇರಿ ಅದೇ ಕೆಲ್ಸಾ ಒಸಿ ಚೆನ್ನಾಗಿ ಮಾಡುವ. ನೀ.. ಏನಂತೀಯೇ.. ?

ಶಂಕರ (Shankara) : ಹೌದು ನಿರ್ಮಲ. ನೀನು ಹೇಳ್ದಾಂಗೇ ಆಗ್ಲಿ.. ತಮ್ಮಾ.. ಒಸಿ ಫೋಟೋ ತೆಗೆಯಪ್ಪಾ.. ಎಲ್ರೂದೂ ಸೇರಿ. ಇವರ ಬಗ್ಗೆ ನಾಳೆ ಪೇಪರ್ನಾಗೆ ಹಾಕ್ಸುವ. ಒಸಿ, ಎಲ್ರೀಗೂ ಗೊತ್ತಾಗ್ಲಿ. ಮೊದಲು ನಾವುಗೊಳ್ ಬದಲಾಗುಮಾ..

ಸಂತೋಷ (Santhosh) : ಅಣ್ಣಾ.. ನಾವುಗಳು ಬದಲಾದ್ವಿ. ನಮ್ಮ ಸುತ್ತಮುತ್ತ ಇರೋರ್ನ ಕೂಡ ಬದಲಾಗಿಸ್ತಾ ಇದಿವೀ. ಇನ್ನೂ ನಮ್ಮ ಸಮಾಜ ಖಂಡಿತಾ ಚೆನ್ನಾಗಿರುತ್ತೆ. ಎಲ್ರೂ ಖುಷಿಯಾಗಿರ್ತಾರೆ. ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗೇ ಆಗುತ್ತೆ.

ರಾಜೇಶ (Rajesh) : ಶಂಕರಣ್ಣಾ.. ಫೋಟೋಗೆ ಬರೀ ಪೋಸ್ ಕೊಡ್ಬೇಡ. ಸ್ವಲ್ಪ ಸಮಾಜ ಸೇವೇನೂ ಮಾಡು. ಹೊಟ್ಟೆನೂ ಕರಗುತ್ತೆ. ಈ ದೇಹ ಮತ್ತು ಮನಸಿನ ಆರೋಗ್ಯನೂ ಚೆನ್ನಾಗಿರುತ್ತೆ.

[ಎಲ್ಲರೂ ನಗುತ್ತಾರೆ.]

ಹಿನ್ನೆಲೆ ಧ್ವನಿ (Director’s background vocie)

[ನೋಡಿದ್ರಾ ಬದಲಾಗೋದ್ರಲ್ಲಿ ಎಷ್ಟೊಂದು ಖುಷಿ ಇದೇ ಅಂತಾ.. ಹೌದು ನಾವೇನೊ ಸಮಾಜನ ಹಾಗೇ ಮಾಡ್ತೀವಿ, ಹೀಗೆ ಮಾಡ್ತೀವಿ ಅಂತಾ ಉದ್ದುದ್ದಾ ಭಾಷಣ ಕೊಡೋ ಬದಲಾಗಿ, ನಾವೇ ಏನನ್ನಾದರೂ ಮಾಡಲು ಮುಂದಾಗಬೇಕು. ಮನುಷ್ಯರ ಥರ ವರ್ತಿಸಿಕೊಂಡು, ಒಬ್ಬರಿಗೊಬ್ಬರು ಹೆಗಲು ಕೊಟ್ಟುಕೊಂಡು ಜೀವನ ಸಾಗಿಸಬೇಕು. ಮತ್ತೋಬ್ಬರಿಗೆ ಆಸರೆಯಾಗಿರಬೇಕು.

ತಿಳಿದೋ.. ತಿಳಿಯದೆಯೋ.

ಬದಲಾಗಿದ್ದು ಓಡುವ ಕಾಲವಲ್ಲ.

ಅದೇ ಚಳಿಗಾಲ,

ಮಳೆಗಾಲ, ಬೇಸಿಗೆಕಾಲ.

ಮಹಾಬುದ್ದಿವಂತರೆಂಬ

ಮತ್ತಿನಲ್ಲಿ ಮಾನವತೆಯ ಮರೆತು,

ಬದಲಾಗಿದ್ದು ನಾವು-ನೀವುಗಳು..

ಹೌದಲ್ಲವೇ.. ಈ ಮಾನವತೆಯನ್ನು ಮರೆತು ಕ್ರೂರಿಗಳಾದವರನ್ನು ಬದಲಾಯಿಸೋಣ, ಎಲ್ಲವನೂ ಕಂಡು ಏನನ್ನೂ ಮಾಡಲು ಮನಸಾಗದ ಅದೆಷ್ಟೋ ಮಂದಿಯನ್ನು ಎಚ್ಚರಿಸೋಣ. ಅದೆಷ್ಟೋ ಅಸಹಾಯಕರಿಗೆ ಸಹಾಯ ಮಾಡೋಣ. ನಿರಕ್ಷರಕುಕ್ಷಿಗಳಿಗೆ ವಿದ್ಯಾದಾನ ಮಾಡೋಣ. ಸಂಸ್ಕೃತಿಯ ಉಳಿವಿಗೆ ನಾಂದಿ ಹಾಡೋಣ. ಮೊದಲು ನಾವುಗಳೇ ಬದಲಾಗೋಣ.. ನಮ್ಮೊಳಗಿನ ಮಾನವತೆಯನ್ನು ನಾವು ಜಾಗೃತಗೊಳಿಸೋಣ.. ]