ಸುಮಾರು ಏಳೆಂಟು ವರ್ಷಗಳಿಂದ ಈ ಫೇಸ್ ಬುಕ್ ನನ್ನ ಅಪ್ಪಿಕೊಂಡುಬಿಟ್ಟಿದೆ. ಅದೆಷ್ಟೋ ಜನ ಸ್ನೇಹಿತರನ್ನ, ಆಪ್ತರನ್ನ, ಅಲ್ಲದೇ ಹಿತೈಷಿಗಳನ್ನೂ ನೀಡಿದೆ ಈ ಸಾಮಾಜಿಕ ಜಾಲತಾಣ ಮಾಧ್ಯಮ.

ಇದೇ ಫೇಸ್ ಬುಕ್ ನಲ್ಲಿಯೇ ಪರಿಚಿತರಾದ ಶ್ರೀಮತಿ ಬಿ.ವಿ.ಭಾರತಿ ಯವರು ಬರೆದ "ಸಾಸಿವೆ ತಂದವಳು..." ಎಂಬ ಪುಸ್ತಕ ಇತ್ತೀಚೆಗೆ ಆನ್ ಲೈನ್ ನಲ್ಲಿ ಖರೀದಿಸಿ ತರಿಸಿ ಓದಿದೆ. ಇವರ ಬಗ್ಗೆ ನನಗೆ ಈ ಮೊದಲು ಅಷ್ಟು ಪರಿಚಯವಿರಲಿಲ್ಲವಾದರೂ, ಇದೇ ಪುಸ್ತಕದ ಬಿಡುಗಡೆಯ ಕುರಿತು ಅವರ ಫೇಸ್ ಬುಕ್ ವಾಲ್ ನಲ್ಲಿದ್ದ ಪೋಸ್ಟ್‌ ನೋಡಿದಾಗ, ಗಮನ ಸೆಳೆದದ್ದು ಪುಸ್ತಕದ ಶೀರ್ಷಿಕೆ. ಅದರ ನಂತರದಲ್ಲಿ ಪುಸ್ತಕದ ಮುಖಪುಟದಲ್ಲಿನ ಚಿತ್ರ. ಆದರೆ ಕಾರಣಾಂತರಗಳಿಂದ ಆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೂ ಹೋಗಲಿಲ್ಲ, ಪುಸ್ತಕವನ್ನು ತರಿಸಿ ಓದಿಯೂ ಇರಲಿಲ್ಲ. ಮತ್ತದೇ ಭಾರತಿಯವರು ಈ ಪುಸ್ತಕವು ಆನ್ ಲೈನ್ ನಲ್ಲಿ ಸಿಗುವ ಬಗ್ಗೆ ಮಾಹಿತಿ ನೀಡಿದಾಗ, ಅರೆಕ್ಷಣ ವ್ಯಯಿಸದೇ ಆನ್ ಲೈನ್ ಲ್ಲಿ ಬುಕ್ ಮಾಡಿ ಪುಸ್ತಕ ತರಿಸೇಬಿಟ್ಟೆ.

ನಳಪಾಕನ ವಂಶದವನಂತೆ ತನ್ನ ಪಾಕಪ್ರವೀಣತೆ ತೋರುವ (ಸಾಹಿತ್ಯದ ಜೊತೆ ಆಗಾಗ ಇವರು ಹಾಕುವ ಹೊಸಹೊಸ ಬಗೆಯ, ತಾವೇ ಕಂಡು ಹಿಡಿದ ರುಚಿಗಳ ಕುರಿತ ಪೋಸ್ಟ್‌ ಕಂಡು ಹೇಳಿದ್ದು) ಫೇಸ್ ಬುಕ್ ಮಿತ್ರ, ರಾಜೇಂದ್ರ ಪ್ರಸಾದ್ ರವರು ಈ ಪುಸ್ತಕಕ್ಕೆ ಹೆಸರು ಕೊಟ್ಟವರೆಂಬುದು ತಿಳಿದು ಖುಷಿಯಾಯ್ತು. ಖ್ಯಾತ ಲೇಖಕಿ ಶ್ರೀಮತಿ ನೇಮಿಚಂದ್ರರ ಮುನ್ನುಡಿ, ಜ್ಞಾನಪೀಠ ಪುರಸ್ಕೃತ ಶ್ರೀ ಯು.ಆರ್.ಅನಂತಮೂರ್ತಿ ರವರ ಬೆನ್ನುಡಿ, ಮುಖಪುಟ ಚಿತ್ರ ಮಾಡಿಕೊಟ್ಟ ಚಿತ್ರಮಿತ್ರ, ಮುಖಪುಟ ವಿನ್ಯಾಸ ಮಾಡಿಕೊಟ್ಟ ಅಪಾರ, ಪ್ರೂಫ್ ರೀಡ್ ಮಾಡಿದ ಸಹೋದರಿ ಅನಿತಾ ನರೇಶ್ ಮಂಚಿ ಈ‌ ಎಲ್ಲರನೂ ಖುಷಿಯಿಂದ ಮತ್ತೆ ಮತ್ತೆ ನೆನೆವಂತೆ ಅಹರ್ನಿಶಿ ಪ್ರಕಾಶನದಿಂದ ಹೊರಬಂದ ಈ "ಸಾಸಿವೆ ತಂದವಳು.." ಕೃತಿ ಮಾಡುತ್ತದೆ.

ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ "ಕ್ಯಾನ್ಸರ್ ಜತೆಗೊಂದು ಸ್ಪೂರ್ತಿದಾಯಕ ಹೋರಾಟ" ಎಂಬ ಉಪಶೀರ್ಷಿಕೆಯೊಂದಿಗೆ "ಸಾಸಿವೆ ತಂದವಳು" ಎಂಬ ಅರ್ಥಗರ್ಭಿತ ಶೀರ್ಷಿಕೆಯು ಭಾರತಿಯವರ ಅನುಭವಕಥನವನ್ನು ನಾನು ಓದುವಂತೆ ಮಾಡಿತು. ಅಲ್ಲದೇ ಕ್ಯಾನ್ಸರ್ ಪೀಡಿತರಾಗಿ, ಬೋಳುತಲೆಯ ಭಾರತಿಯವರನ್ನು ಧೃತಿಗೆಡದ ಕಣ್ಗಳ ದಿಟ್ಟ ಮನಸಿನ ಭಾರತಿಯವರೇ ಅಪ್ಪಿ ಹಿಡಿದು ಸಾಂತ್ವನ ಹೇಳುವಂತಾ ಚಿತ್ರವು "ನಮ್ಮನು ನಾವೇ ಸಂತೈಸಿಕೊಳ್ಳಬೇಕು" ಎಂಬ ಸೂಕ್ಷ್ಮತೆಯ ಜಾಡೊಂದನ್ನು ತೋರಿತ್ತು. ನನಗೆ ಜನ್ಮ‌ ಕೊಟ್ಟ ತಾಯಿ ಕೂಡ ಈ ಕ್ಯಾನ್ಸರ್ ಪೀಡಿತೆ. ಆದುದರಿಂದಲೇ ಅಮ್ಮನಿಗೂ ಕೂಡ ಈ ಪುಸ್ತಕ ಓದಲು ಕೊಟ್ಟೆ.

ನಾನು ಪುಸ್ತಕದ ಪ್ರತಿ ಪುಟ ಓದುವಾಗಲೂ ಅಮ್ಮನ ಆ ದಿನಗಳನ್ನು ಮತ್ತೊಂದೆಡೆ ನೆನಪಿಸುತ್ತಿತ್ತು. ದಿನನಿತ್ಯದ ಬದುಕಿನಲ್ಲಿ ಲವಲವಿಕೆಯಿಂದ ‌ನಗುತ್ತಿದ್ದ ಭಾರತಿಯವರು ಒಮ್ಮೆ ತನ್ನ ಎದೆಗೆ ಕೈ ತಾಕಿದಾಗ, ಗಡ್ಡೆಯೊಂದರ ಅನುಭವವಾಗಿ ಅಲ್ಲಿಂದ ಅವರು ಅನುಭವಿಸುವ ಮಾನಸಿಕ ತೊಳಲಾಟಗಳು, ಹೊರಗಿನವರಿಂದ ಆಗುತ್ತಿದ್ದ ಮಾನಸಿಕ ಕಿರಿಕಿರಿ, ಮನೆಯವರ ಪ್ರೀತಿ ಹಾಗೂ ಕೇರಿಂಗ್, ಡಾಕ್ಟರುಗಳ ಚಿಕಿತ್ಸೆ, ಅನುಭವಿಸಿದ ದೈಹಿಕ ಯಾತನೆ, ಎಲ್ಲವನೂ ಎದುರಿಸಿ ನಿಲ್ಲಲು ಪ್ರಯತ್ನಿಸಿದ ಬಗೆ, ಆದರೂ ಬೆಂಬಿಡಿದ ಆ ಕೆಟ್ಟ ಯೋಚನೆಗಳ ಸವಾಲು ಎಲ್ಲವನೂ ಬಿಡಿಬಿಡಿಯಾಗಿ ಹೇಳುತ್ತಾ ಹೋಗುತ್ತಾರೆ. ಇವರ ದಿಟ್ಟತನಕೆ ಶಹಬ್ಬಾಷ್ ಎನ್ನದೇ ಯಾರೂ‌ ಇರಲಾರರು ಎಂದೆನಿಸುತ್ತದೆ. ಹೌದು ಆ ಮಟ್ಟಿನ ಮಾನಸಿಕ ಸ್ಥೈರ್ಯ ಪ್ರತಿಯೊಬ್ಬ ರೋಗಿಯಲ್ಲೂ ಇರಬೇಕಾಗುತ್ತದೆ; ಅಲ್ಲದೆ ರೋಗಿಯ ನೋಡಿಕೊಳ್ಳುವವರು ಕೂಡ ಅದೇ ಗಟ್ಟಿತನಕ್ಕೆ ತಮ್ಮ ಮನಸು ಕೊಡಬೇಕಾಗಿರುತ್ತದೆ.

ಇನ್ನು ನನ್ನ ಕಥೆ...

ನನ್ನ ಬ್ಯಾಚುಲರ್ ದಿನಗಳವು. ಬೆಂಗಳೂರಿನ ಚಿಕ್ಕ ಕಂಪನಿಯಲ್ಲಿ ನಾನು ಕೆಲಸ‌ ಮಾಡುಕೊಂಡು, ಬ್ಯಾಚುಲರ್ ಫ್ರೆಂಡ್ ಜೊತೆ ರೂಮ್ ಷೇರ್ ಮಾಡಿಕೊಂಡು ಜೀವನ‌ ಮಾಡುತ್ತಿದ್ದ ಕಾಲ. ಓದುವ ಬಯಕೆ ತೀರದೇ ಕಟ್ಟಿದ್ದ ಮತ್ತೊಂದು ಮಾಸ್ಟರ್ ‌ಡಿಗ್ರಿಯ ಎಕ್ಸಾಂನ್ನು ಬರೆಯೋದಕ್ಕೆ ಅಂತಾ ನನ್ನ ಊರಿಗೆ ಹೋಗಿದ್ದೆ. ಆ ದಿನ ನನ್ನ ಇಬ್ಬರೂ ತಮ್ಮಂದಿರೂ ಕಾರ್ಯ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಮನೆಯಲ್ಲಿ ಅಪ್ಪ ಹಾಗೂ ಅಮ್ಮ ‌ಮಾತ್ರ. ನನ್ನದು ಸ್ವಲ್ಪ ಮುಂಗೋಪ, ಆದರೂ ಅಷ್ಟೇ ತೂಕದ ತಾಳ್ಮೆ ಕೂಡ. ರಾತ್ರಿ ನಿದ್ದೆಗೆಟ್ಟು ಪ್ರಯಾಣ ಮಾಡಿ, ಬೆಳಿಗ್ಗೆ ಎಕ್ಸಾಂ ಬರೆಯೋಕೆ ಹೊರಟ ನನಗೆ ಅಮ್ಮ‌ಮಾಡುತ್ತಿದ್ದ ಉಪ್ಪಿಟ್ಟು ಕೈಸೇರಲು ಲೇಟಾಗಿತ್ತು. ಅದಾಗಲೇ ಒಂಭತ್ತು ಗಂಟೆಯಾಗಿತ್ತು. ಅದೇ ಮುನಿಸಿನಲಿ‌ ಸ್ವಲ್ಪ ಒದರಾಡುತ್ತಿದ್ದೆ. ಅಲ್ಲಿಯವರೆಗೂ ಕುಂತಲ್ಲಿ ಕೂರದೇ, ನಿಂತಲ್ಲಿ‌ ನಿಲ್ಲದೇ ಅಮ್ಮ ಕೆಲಸ ಮಾಡುತ್ತಿದ್ದಳು. ಸ್ವಲ್ಪ ಹೊತ್ತಲ್ಲೇ ಯಾಕೋ ಭುಜ ನೋಯುತ್ತಿದೆ, ಕೈ ಬಿಗಿಯುತ್ತಿದೆ ಅಂತಾ ಸುಸ್ತಾಗಿ ಮಲಗಿದಳು. ಅಪ್ಪ ಜಂಡು ಬಾಮ್ ತಗೊಂಡು ಅಮ್ಮನ ಕೈಗೆ ತಿಕ್ಕುತ್ತಾ ನೋವು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರು. ನಾನು ತಿಂಡಿ ತಿನ್ನುತ್ತಾ ನೋಡುತ್ತಿದ್ದೆ. ಅಮ್ಮನ ಎದೆನೋವು ಜಾಸ್ತಿಯಾಗುತ್ತಲೇ ಇತ್ತು. ಅಪ್ಪ ಮಾತ್ರ ಜಂಡು ಬಾಮ್ ತಿಕ್ಕುತ್ತಲೇ ಇದ್ದರು. ಇದು ಜಂಡು ಬಾಮ್ ಇಂದ ಕಡಿಮಯಾಗುವ ಲಕ್ಷಣಗಳಿಲ್ಲ ಎಂದು ಅಮ್ಮನ ನೋವಿನ ತೀವ್ರತೆ ಹೇಳಿತು. ತಕ್ಷಣಕೆ ತಟ್ಟೆ ಬಿಟ್ಟು‌‌‌ ಎದ್ದು‌ ಅಪ್ಪನಿಗೆ ಆಟೋ ತರಲು ಹೇಳಿ, ನಾನು ಅಮ್ಮ ಆಸ್ಪತ್ರೆಗೆ ಹೊರಟೆವು. ಅಪ್ಪನಿಗೆ‌ ಹಿಂದೆ ಬರಲು ತಿಳಿಸಿ. ಎಮರ್ಜೆನ್ಸಿ ‌ವಾರ್ಡ್ ನಲ್ಲಿ ಪರೀಕ್ಷೆ ನಂತರ ತಿಳಿದದ್ದು, ಅಮ್ಮನಿಗಾಗಿದ್ದು, ಆಗ್ತಾ ಇದ್ದದ್ದು "ಹಾರ್ಟ್ ಅಟ್ಯಾಕ್" ಎಂದು. ತಕ್ಷಣಕೆ ಗಾಬರಿಯಾದ ನಾನು, ಏನೂ ಮಾಡಲು ತೋಚದ ಸ್ಥಿತಿ‌, ಮನಸು ಗಲಿಬಿಲಿ ಆಗಿತ್ತು. ಆದಷ್ಟು ಬೇಗ ಕಾರ್ಡಿಯಾಲಾಜಿಸ್ಟ್ ಹತ್ರ ಕರೆದುಕೊಂಡು ಹೋಗಿ, ನಮ್ಮ ಆಸ್ಪತ್ರೆಯಲ್ಲಿ ಸೌಕರ್ಯ ಇಲ್ಲ ಎಂದು ನರ್ಸ್ ಹೇಳಿದಾಗಲೇ ನಾನು ವಾಸ್ತವಕ್ಕೆ ಬಂದೆ.

ಅಷ್ಟರಲ್ಲಿ ಅಪ್ಪ ಬಂದ್ರು. ನನ್ನ ಕೋಪ, ನನಗೆ ಅತೀವ ಬಲ‌ ಕೊಟ್ಟಿತ್ತು. "ಅದೇನಿಲ್ಲಪ್ಪಾಜೀ, ಮೈಲ್ಡ್ ಆಗಿ ಹಾರ್ಟ್ ‌ಅಟ್ಯಾಕ್ ಆಗಿದೆಯಂತೇ" ಅಂತಾ ಅಪ್ಪಾಜೀಗೆ ಅದೆಷ್ಟು ಉದಾಸೀನದ ಉತ್ತರ ಕೊಟ್ಟಿದ್ದೆ‌. ಯಾಕೆಂದರೆ ನನ್ನ ತಂದೆ ಬಲು‌ಸೂಕ್ಷ್ಮ ಮನಸಿನ‌ ವ್ಯಕ್ತಿ. ಯಾರಿಗೂ ನೋವು ಕೊಡದ, ತನಗೆಷ್ಟೆ ನೋವಾದರೂ ಸುಮ್ಮನಿರುವ ವ್ಯಕ್ತಿ. ಅಂಥಾ ಸೂಕ್ಷ್ಮದ ವ್ಯಕ್ತಿಗೆ ಈ ನೋವು ಸಹಿಸಲಾಗುವುದಿಲ್ಲ ಎಂಬ ಸತ್ಯ ಗೊತ್ತಿತ್ತು. ನಂತರಕೆ ಇದ್ದ ನಾನೋಬ್ಬನೇ ಅಗತ್ಯವಾಗಿ ಡಿಸಿಷನ್ ತಗೋಬೇಕಿತ್ತು. ತಕ್ಷಣಕೆ ಇನ್ನೊಂದು ಆಸ್ಪತ್ರೆಯಲ್ಲಿ ಪ್ರೈಮರಿ ಟ್ರೀಟ್ಮೆಂಟ್ ಕೊಡಿಸಿಕೊಂಡು, ಅಷ್ಟರಲ್ಲಿ ಬಂದ ನನ್ನ ಸೋದರ ಮಾವನ ಮಗನ ಕಾರಿನಲ್ಲಿಯೇ, ನಾನು, ಮಾವನ ಮಗ, ಅಮ್ಮ ಹಾಗೂ ಅತ್ತೆ, ನಾಲ್ಕೂ‌ ಜನ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಹೋದೆವು. ಒಂದೊಳ್ಳೆ ಆಸ್ಪತ್ರೆಗೂ ಸೇರಿಸಿದೆವು‌‌. ಅಲ್ಲೊಂದಿಷ್ಟು ಹೊತ್ತು ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಯ ನಂತರ ಡಾಕ್ಟರು ಹೇಳಿದಿಷ್ಟು. ಈಗ ಪರಿಸ್ಥಿತಿ ಸ್ವಲ್ಪ ಹತೋಟಿಯಲ್ಲಿ ಇದೆ, ಆದಷ್ಟೂ ಬೇಗ ಇವರನ್ನು ಇನ್ನೂ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಿ. ಇಲ್ಲವಾದರೆ ಕಷ್ಟ ಆಗುತ್ತದೆ ಅಂತಾ. ತಕ್ಷಣಕೆ ಏನು ಮಾಡಬೇಕು ಎಂಬ ಗೊಂದಲಕ್ಕೆ ಮನಸು ಸಿಲುಕಿತ್ತು. ದೂರದ ಊರಿಗೆ ಇಬ್ಬರೂ ತಮ್ಮಂದಿರು ಕೂಡ ಅಷ್ಟೊತ್ತಿಗೆ ಬಂದಿದ್ದರು.

ನಾನು ಮತ್ತು ನನ್ನ ದೊಡ್ಡ ತಮ್ಮ ಮಾತ್ರ ಅಮ್ಮನ ಕರೆದುಕೊಂಡು ತಕ್ಷಣಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬಂದೆವು‌. ಊರಲ್ಲೇ ಇದ್ದ ಅಪ್ಪನಿಗೂ ಹಾಗೂ ಸಣ್ಣ ತಮ್ಮನಿಗೂ ಇತ್ತ ಕಡೆಯದೇ ಚಿಂತೆ. ಒಂದು ದಿನದ ಮಟ್ಟಿಗೆ ಐ.ಸಿ.ಯು ನಲ್ಲಿದ್ದ ಅಮ್ಮ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಿದ ನಂತರವೇ ಸ್ವಲ್ಪ ನಿರಾಳ. ೫ ದಿನಗಳವರೆಗೆ ಅಮ್ಮನ ಜೊತೆಗಿದ್ದು ಆರೈಕೆ ಮಾಡಿದೆ. ಊಟ, ನಿದ್ರೆ ಎಲ್ಲವನೂ ಮರೆತು. ನಂತರ ಊರಿಗೆ ಕರೆದುಕೊಂಡು ಬಂದೆ.ಇದೆಲ್ಲಾ ಯಾಕೇ ಹೇಳ್ಬೇಕು ಅಂತಾ ಅನ್ಸುತ್ತೆ, ಆದರೆ ಮನಸು ಸುಮ್ನಿರದೆ ಎಲ್ಲವನೂ ನೆನೆಸ್ಕೊಂಡು ಬಿಡುತ್ತೆ. ಮಧ್ಯಮವರ್ಗದ ನಾವುಗಳು ಆರ್ಥಿಕವಾಗಿ ಅಷ್ಟಾಗಿ ಬಲವಾಗಿರುವುದಿಲ್ಲ. ಆದರೆ ಈ ಕಾಯಿಲೆಗಳು ಬಂದಾಗ ಜೀವನದ ಮಹತ್ವ‌ ಚೆನ್ನಾಗಿ ಅರ್ಥವಾಗುತ್ತದೆ. ನನ್ನಮ್ಮ ಮನೆಯ ಹಿರಿಯ ಸೊಸೆ. ಅಪ್ಪನಿಗೂ ೬ ಜನ ತಮ್ಮಂದಿರು ಹಾಗೂ ಒಬ್ಬಳು ತಂಗಿ. ನನಗೆ ತಿಳಿದಂತೆ ಎಲ್ಲರೂ ನಮ್ಮ ಮನೆಯಲ್ಲಿಯೇ ಇದ್ದು, ಅವರ ಕಾಲಮೇಲೆ ನಿಂತು, ಮದುವೆಯ ನಂತರ ಬೇರಾದವರೆ. ಆ ಎಲ್ಲರನೂ ಮಕ್ಕಳ‌ ಸಮಾನಕ್ಕೆ ಪ್ರೀತಿಸಿ ( ಮಕ್ಕಳಿಗಿಂತಲೂ ಹೆಚ್ಚಾಗಿ ಅಂತಲೂ ಹೇಳಬಹುದು), ಹಗಲಿರುಳು ಅಪ್ಪ ಅಮ್ಮ ಇಬ್ಬರೂ ಶ್ರಮಪಟ್ಟಿದ್ದಾರೆ. ಹೃದಯಾಘಾತದಂತ‌ ಸಂಧರ್ಭದಲ್ಲಿ ಅಮ್ಮನ ಆರೋಗ್ಯ ಯಾರೊಬ್ಬರೂ ವಿಚಾರಿಸಲಿಲ್ಲ. ನೂರಕ್ಕೆ ನೂರರಷ್ಟು ಹೇಳ್ತೇನೆ ಅಪ್ಪನಾಗಲೀ, ಅಮ್ಮನಾಗಲೀ ಯಾರೊಬ್ಬರಿಗೂ ಕೇಡು ಬಯಸಿಲ್ಲ. ಆದರೂ ಎಲ್ಲರೂ ದೂರ ದೂರ. ಆಗ ಜೀವನ ಅರ್ಥ ಆಯ್ತು. ನಮ್ಮವರು ಯಾರು, ಹೊರಗಿನವರು ಯಾರು ಅಂತಾ. ಕಷ್ಟಕಾಲದಲ್ಲಿಯೇ ನಿಜವಾದ ಬಣ್ಣ ಬಯಲಾಗೋದು ಅಲ್ವಾ. ಮೋಸ್ಟಲೀ ಎಲ್ಲರ ಮನೆಯಲೂ ಹೀಗೆ ಇರಬಹುದೇನೋ‌. ಆ ದಿನವೇ ತೀರ್ಮಾನಿಸಿದೆ ಯಾರು ಬರಲಿ, ಇರಲಿ, ಬರದೇ ಇರಲಿ, ನಮ್ಮ ಕಾಯಕ ನಾವು ಮಾಡ್ಕೊಂಡು, ದೂರದಲ್ಲಿದ್ದೇ ಜೀವಿಸೋಣ ಅಂತಾ. ಆ ದೂರದಲ್ಲಿದ್ದ ಅಷ್ಟೂ ಜನ ನನ್ನ ತಾಯಿ ಇನ್ನು ಬದುಕೋದೇ ಇಲ್ಲ ಅನ್ನೋ ಖಾತರಿಯಲ್ಲಿ ಇದ್ದರು ಅಂತಾ ಕಾಣಿಸ್ತದೆ. ಅದೇ ವರವಾಯ್ತು ನಮ್ಮ ಪಾಲಿಗೆ. ಅಮ್ಮ ಗುಣವಾದ್ರು.

ಅರೆರೆ... ಅಂತೂ ಒಂದು ಗಂಡಾಂತರ ಪಾರಾಗಿ ಅಮ್ಮ ಚೆನ್ನಾಗಿದ್ದಾಳೆ ಅಂತ ಅಂದುಕೊಳ್ಳುವಾಗಲೇ ಮತ್ತೊಂದು ದಿನ ಅಮ್ಮ, ಹೊಟ್ಟೆಯಲ್ಲಿ ಯಾವುದೋ ಗಡ್ಡೆ ಇದ್ದಂತಿದೆ ಅಂತಾ ಹೇಳಿದ್ರು. ಡಾಕ್ಟರ್ ಪರೀಕ್ಷೆಯ ನಂತರ ಇದು ಓವರಿಯನ್ ಕ್ಯಾನ್ಸರ್ ಅಂತಾ ಖಚಿತಪಡಿಸಿದ್ರು. ನನಗೆ ಮತ್ತೆ ಟೆನ್ಷನ್ ಶುರು. ಇವರೆಲ್ಲರೆದುರಿಗೆ ಮತ್ತೆ ನಟಿಸುವ ಕೆಲಸ ಶುರು. ಎಲ್ಲರಿಗೂ ಕಾಣಿಸದ ಹಾಗೇ ದುಃಖಿಸುವ ನನ್ನ ಹೃದಯ, ಅಮ್ಮನ ಉಳಿಸಿಕೊಳ್ಳುವ ಮತ್ತೊಂದು ಘನಯಜ್ಞಕ್ಕೆ ಅಣಿಯಾಯ್ತು. ಎಲ್ಲವೂ ಹೊಸತು ಹೊಸತು. ಒಂದು ಕಡೆ ಅಮ್ಮ ಬದುಕುವುದಿಲ್ಲ ಎನ್ನುವ ನೆಗಟಿವ್ ಚಿಂತನೆ, ಮತ್ತೊಂದು ಕಡೆ ಏನೇ ಆಗಲಿ ಅಮ್ಮ ಹುಷಾರಾಗ್ತಾರೆ ಅನ್ನೊ ಬಲವಾದ ನಂಬಿಕೆ.

ಅಮ್ಮ ಇದ್ದಷ್ಟು ದಿನ ಖುಷಿಯಾಗಿ ಇಟ್ಟುಕೊಳ್ಳೋದು ನನ್ನ ಕೆಲಸ ಎಂದು ತೀರ್ಮಾನಿಸಿ, ಅಮ್ಮನ ಚಿಕ್ಕಪುಟ್ಟ ಆಸೆಗಳನ್ನು ಪೂರೈಸುವ ಹೊಣೆ ಹೊತ್ತೆ‌. ಈ ಸಾರಿ ನನ್ನ ಸಣ್ಣ ತಮ್ಮ ನನಗೆ ಜೊತೆಯಾದ. ಅಮ್ಮನ ನೋವಿನ ದಿನಗಳು ಅವರ ಮನಸಿಗೆ ಹೆಚ್ಚಿನ ನೋವು ತರದಿರಲಿ ಎಂಬ ದೂರಾಲೋಚನೆಯಿಂದ ನಾನು ಮದುವೆಗೆ ಒಪ್ಪಿ, ಮಕ್ಕಳ ಚಿಂತೆ ಕೂಡ ಶುರು ಮಾಡಿಕೊಂಡೆ. ನನ್ನ ಎಲ್ಲಾ ಯೋಜನೆಗಳು ಒಂದರ ಜೊತೆ ಒಂದು ಜೊತೆಯಾಗಿ ನಡೆಯುತ್ತಿತ್ತು. ಒಂದು ಕಡೆ ಅಮ್ಮನ ಆಪರೇಷನ್, ಇನ್ನೊಂದು ಕಡೆ ಮದುವೆ ತಯಾರಿ. ಈ‌ ಎಲ್ಲವನೂ ತೂಗಿಸಬೇಕಾದ ಸಂದಿಗ್ಧ ಪರಿಸ್ಥಿತಿ. ಕ್ಯಾನ್ಸರ್ ಆಪರೇಷನ್ ಏನೋ ಆಯ್ತು, ನಂತರದ್ದು ಕೀಮೋಥೆರಪಿ ಕತೆ‌. ೬ ಕಿಮೋ ಕತೆ. ಕಿಮೋ ನಂತರದಲ್ಲಿ ಅಮ್ಮನ ಆರೋಗ್ಯ ಬಲಬಾಗಿ ಇಳಿಮುಖವಾಯಿತು. ಹತ್ತಿರದಲ್ಲೇ ಇದ್ದು ದೂರದಲ್ಲಿದ್ದ ಆ ಮಂದಿಗೆ ಅಮ್ಮನ ಕೊನೆದಿನಗಳ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದೆನಿಸಿಕೊಂಡೆ. ಯಾಕೆಂದರೂ ಆ ಜನ ಆಗಲೂ ಬರಲಿಲ್ಲ.ಮನೆಯಲ್ಲಿ ಅಮ್ಮ ಒಬ್ಬಳೇ ಹೆಣ್ಣು. ಅಪ್ಪನಿಗೂ ಹಾಗೂ ತಮ್ಮಂದಿರಿಗೂ ಅಡುಗೆ ಗೊತ್ತಿಲ್ಲ. ಸಣ್ಣವನಿಗೋ ಅಮ್ಮನಿಗೆ ಗ್ಲುಕೋಸ್ ಹಾಕುವುದು, ಟ್ಯಾಬ್ಲೆಟ್ ಕೊಡೋದು, ಆಸ್ಪತ್ರೆಗೆ ಕರೆದುಕೊಂಡು ಬರೋದು, ಊಟ ಮಾಡಿಸೋದು ಇದೇ ದಿನಚರಿಯಾಯ್ತು. ಇನ್ನೂ ನಾನು ಮತ್ತು ದೊಡ್ಡತಮ್ಮ ಆಫೀಸಿನ ಕೆಲಸಾನೂ ನೋಡ್ಕೊಂಡು ಉಳಿದಂತೆ ಜವಾಬ್ದಾರಿ ಹೊರಬೇಕಿತ್ತು. ಅಪ್ಪನೇ..‌ ಈಗ ಮನೆಯ ಎಲ್ಲಾ ಕೆಲಸ ಮಾಡಿದ್ದು. ಅಡುಗೆ, ಬಟ್ಟೆ ಒಗೆಯುವುದು, ಕಸ ಗೂಡಿಸುವುದು ಎಲ್ಲಾ ಕೆಲಸವನ್ನು ಮಾಡಿದ್ದು. ಏನ್ ಮಾಡೋದು ಮನೆಯಲ್ಲಿ ಹೆಣ್ಣುಮಕ್ಕಳಿಲ್ಲ‌. ಇದ್ದ ಎಲ್ಲಾ ನೆಂಟರು ಯಾವುದೋ ಕುಂಟುನೆಪ ದೊಡ್ಡದೆಂದುಕೊಂಡು ದೂರ ದೂರ ಇದ್ದಾರೆ‌‌. ಅಮ್ಮನ ಸೇವೆಯೊಂದೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಯ್ತು.ಅಲ್ಲಿಯವರೆಗೂ ಅಮ್ಮನೊಬ್ಬಳೇ ನಮ್ಮೆಲ್ಲರ ಸೇವೆ ಮಾಡುತ್ತಿದ್ದಳು. ಅಷ್ಟೂ ಮನೆಯ ಕೆಲಸ ಒಬ್ಬಳೇ. ಅಲ್ಲದೇ ಅಂಗಡಿಗೆ ಬಂದು ಟೈಲರಿಂಗ್ ಕೆಲಸ ಕೂಡ. ಒಂದು ಲೋಟ ನೀರು ಕೂಡ ಅಮ್ಮನೇ ಕೊಡಬೇಕಾಗಿತ್ತು. ಅಂಡರ್ ವೇರ್ ಕೂಡ ಒಗೆಯುತಾ ಇರಲಿಲ್ಲ ನಾವು. ಅದೆಷ್ಟು ಕಷ್ಟ ಕೊಟ್ಟಿದ್ದೀವಿ ಅಮ್ಮನಿಗೆ. ಪ್ರತಿಯೊಂದು ಕೆಲಸ ಮಾಡಿ ಮಾಡಿ ಆ ಜೀವ ಎಷ್ಟೊಂದು ನೊಂದಿದೆ‌. ಈ ಎಲ್ಲವನೂ ನೆನೆದಾಗ ಆಕೆಗೆ ನಾವೆಲ್ಲರೂ ಮಾಡೋ ಸೇವೆ ಯಾವತ್ತಿಗೂ ದೊಡ್ಡದಲ್ಲ. ನಮ್ಮ ಮನೆಯ ನಂದಾದೀಪವೇ ನಮ್ಮ ತಾಯಿ. ಅವಳು ಸದಾ ಚೆನ್ನಾಗಿ, ನಗುನಗುತಾ ಖುಷಿಯಾಗಿ ಇರಬೇಕೆಂದು ಅಷ್ಟೇ ಬಯಸುತ್ತೇವೆ.

ಐದನೇ ಕೀಮೋ ಅಷ್ಟೊತ್ತಿಗೆ ಭಾಗಶಃ ಸೊರಗಿದ್ದ ಅಮ್ಮ ನಿಲ್ಲಲು ಬಿಡಿ, ಕೂರಲು ಶಕ್ತಿ ಇರಲಿಲ್ಲ. ಆಗ ನನ್ನ ಕ್ಲಾಸ್ ಮೇಟ್ ಆದ ಡಾಕ್ಟರ್ ನವೀನ ಅಮ್ಮ ಚೇತರಿಸಿಕೊಳ್ಳೋ ಹಾಗೇ ಚಿಕಿತ್ಸೆ ನೀಡಿದ. ಇಲ್ಲಿ‌ ಸುದರ್ಶನ್ ಹಾಗೂ ನವೀನ್ ಎಂಬ ಈಗ ಇಬ್ಬರು ಡಾಕ್ಟರನ್ನೂ ನೆನೆಯುತ್ತೇನೆ.ಇದೆಲ್ಲಾ ಕಸಿವಿಸಿಯ ನಡುವೆ ಮದುವೆ ಬೇರೆ ಇದೆ ಅಲ್ವಾ. ನನ್ನ ಅಮ್ಮ ಅಪ್ಪ ಮನೆಗೆ ಬಂದು ನಮಗೆ ಮದುವೆಗೆ ಕರೆಯಲು ಬಂದಿಲ್ಲ ಮಕ್ಕಳ ಹತ್ತಿರ ವೆಡ್ಡಿಂಗ್ ಇನ್ವಿಟೇಷನ್ ಕಳ್ಸಿದಾರೆ ನಾವ್ಯಾಕೇ ಹೋಗಬೇಕು ಮದುವೆಗೆ ಎಂಬುದು ನನ್ನ ಸೋದರಮಾವನೊಬ್ಬನ ವ್ಯಾಖ್ಯಾನ. ಅದು ಬಿಡಿ, ನೀವು ಯಾರೂ ಹೋಗ್ಬೇಡಿ ಅಂತಾ ಸುಮಾರು ೩೦೦ ಜನ ನಮ್ಮ ನೆಂಟರಿಷ್ಟರಿಗೆ ತಡೆದಿದ್ದನಂತೆ. ಕೊನೆಗೆ ತಂದೆ ಮಗಳನ್ನು ದೂರ ಮಾಡಿದ್ದ. ಇಂಥಾ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡವ ಅದೆಂತವನಿರಬೇಕು ಅಲ್ವಾ. ಅವನು‌ ಹಠ ಸಾಧಿಸುತ್ತಲೇ ಹೋದ. ಹೋಗಲಿ ಬಿಡಿ‌. ಅವನ ದಾರಿಗಂತೂ ನಾವೂ ಯಾವತ್ತಿಗೂ ಅಡ್ಡ ಹೋಗಲ್ಲ. ಅದು ನಮಗೆ ಬೇಕಾಗಿಯೂ ಇಲ್ಲ. ಅವನೇ ಗೆಲ್ಲಲೀ. ನಮಗೆ ಅಂಥಾ ಗೆಲುವು ಬೇಕಾಗಿಲ್ಲ.ಮನೆಗೆ ಬಂದ ನನ್ನ ಹೆಂಡತಿಯೂ ಅಮ್ಮನ ಆರೈಕೆ ಮಾಡಿದಳು. ಅಪ್ಪನಿಗೂ ತಮ್ಮಂದಿರಿಗೂ ಸಹಾಯವಾದಳು. ಕೀಮೋ ಎಫೆಕ್ಟ್ ನಿಂದಾಗಿ ಚರ್ಮ ಹೊದಿಸಿದ ಅಸ್ಥಿಪಂಜರಕೆ ಅರೆ ಜೀವ ಇದ್ದಂತೆ ಕಾಣುತ್ತಿದ್ದಳು ಅಮ್ಮ‌. ಒಂದು ದಿನ ತುಂಬಾ ಸೀರಿಯಸ್ ಅಂತಾ ೨೦೦ ಕಿಲೊಮೀಟರ್ ದೂರದೂರಿಂದ ಬೆಂಗಳೂರಿಗೆ ಕರೆದುಕೊಂಡು ಬಂದರು‌. ಆಗಿನ ಅಮ್ಮನ ಸ್ಥಿತಿಯನ್ನು ಕಂಡು ಅಕ್ಕಪಕ್ಕದ ಮನೆಯವರೇ ಬೆರಗಾಗಿ ಈಕೆ ಇನ್ನು ಬದುಕೊಲ್ಲ ಬಿಡಿ ಅಂತಾ ಅಂದುಕೊಂಡಿದ್ದರು. ಆ ದೇವರು ಮತ್ತೇ ನಮ್ಮ ಮನೆಯ ದೇವತೆಯನ್ನು ಬದುಕಿಸಿಕೊಟ್ಟ. ಅಮ್ಮ ಅಂತೂ ಇಂತೂ‌ ಹುಷಾರಾಗುತ್ತಿದ್ದಳು.ಎಲ್ಲಾ ಆರೂ ಕಿಮೋ ಮುಗಿದ ಮೇಲೆ ಕಿಮೋ‌ ಎಫೆಕ್ಟ್ ಇಂದ ಕರುಳಿನ ಅಲ್ಸರ್ ಆಗಿದೆ ಎಂದು ಅದೂ‌ ಒಂದು ಆಪರೇಷನ್ ಆಯ್ತು. ಅದಾಸ ನಂತರ ಮತ್ತೆ ಕ್ಯಾನ್ಸರ್ ಮತ್ತೂ ಸ್ವಲ್ಪ ಹಬ್ಬಿದೆ ಅಂತಾ ಇನ್ನೂ ಹೆಚ್ಚಿನ ಆರು ಕಿಮೋಥೆರಪಿಗಳ ಟ್ರೀಟ್ಮೆಂಟ್. ಎರಡನೇ ಇನ್ನಿಂಗ್ಸ್ ಆಡಿದ ಕಿಮೋ ಅಷ್ಟಾಗಿ ತೊಂದರೆ ಕೊಡಲಿಲ್ಲ. ಕಾರಣ ಜೊತೆಯಾಗಿ ಆಯುರ್ವೇದ ಟ್ರೀಟ್ಮೆಂಟ್ ಕೊಡಿಸ್ತಾ ಇದೀವಿ.

ಈವತ್ತಿಗೆ ಆ ನನ್ನ ದೇವತೆಗೆ ಎರಡು ಬಾರಿ ಹೃದಯಾಘಾತ, ಒಂದು ಕ್ಯಾನ್ಸರ್ ಆಪರೇಷನ್, ಒಂದು ಅಲ್ಸರ್ ಆಪರೇಷನ್ ಮತ್ತು ೧೨ ಕಿಮೋಥೆರಪಿ ಇಷ್ಟೆಲ್ಲಾ ಆದ್ರೂ ಅಮ್ಮ ಇವತ್ತು ನಗುನಗುತ್ತಾ ನಮ್ಮ ನಡುವೆ ದಿನ ಕಳೆಯುತ್ತಿದ್ದಾಳೆ. ನನ್ನ ಮಗುವಿನೊಂದಿಗೆ ಆಡುತ್ತಾಳೆ, ನಗುತ್ತಾಳೆ. ನನ್ನ ತಾತನ (ಅಪ್ಪನ ಅಪ್ಪ) ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಮಕ್ಕಳ ಭವಿಷ್ಯ ಪಕ್ಕಕ್ಕಿಟ್ಟು ಅವರನ್ನು (ಅಪ್ಪನ ತಂಗಿ ಹಾಗೂ ತಮ್ಮಂದಿರನ್ನು) ಸಾಕಿದ್ದಾರೆ. ಅವರುಗಳಾದರೂ ಇಷ್ಟೋತ್ತಿಗೆ ಅರ್ಥ ಮಾಡಿಕೊಳ್ಳಬಹುದಾಗಿತ್ತು. ಬರಲಿಲ್ಲ.. ಬರಬಹುದು ಎಂಬ ನಿರೀಕ್ಷೆ ಇದೆ. ನಮ್ಮನೂ ನೋಯಿಸಿದವರಿಗೂ ಒಳ್ಳೆಯದೇ ಆಗಲಿ ಎಂದೇ ಬಯಸುತ್ತೇನೆ. ಕ್ಯಾನ್ಸರ್ ಅಂತಾ ಖಾಯಿಲೆಯ ಯಾತನೆ ನಮ್ಮ ದುಶ್ಮನಿಗೂ ಸಹ ಬೇಡವೆಂದೇ ಪ್ರತಿಯೊಬ್ಬ ಕ್ಯಾನ್ಸರ್‌ ನೋವು ಬಾಧಿತರು ಹೇಳುತ್ತಾರೆ. ಇಂಥಾ ನನ್ನ ತಾಯಿಯ ಮನವನ್ನು ಯಾರೇ ನೋಯಿಸಿದರೂ ನನಗಾಗುವ ನೋವನ್ನು ತಿಳಿಸುವ ಭಾಷೆಯಿಲ್ಲ. ಯಾರದರು ಕ್ಯಾನ್ಸರ್ ನಿಂದ ಇಹಲೋಕ‌ ತ್ಯಜಿಸಿದರು ಎಂಬ ಸುದ್ದಿ ಟಿ.ವಿ.ನ್ಯೂಸ್, ಪತ್ರಿಕೆಗಳಲ್ಲಿ ನೋಡಿದಾಗ ಎಲ್ಲೋ ಮನಸು ಛಳಕ್ ಅಂದಂತಾಗುತ್ತದೆ. ಆದರೆ ಕುಟುಂಬದ ಯಾರೊಟ್ಟಿಗೂ ತೋರಿಸುವ ಧೈರ್ಯ ಮಾಡುವುದಿಲ್ಲ. ನನ್ನಮ್ಮ ಖುಷಿಯಾಗಿ ಇರಬೇಕು. ಅವಳು ಕೊನೆಯವರೆಗೂ ನಗುನಗುತಿರಬೇಕು ಅಷ್ಟೇ ನಮ್ಮ ಗುರಿ‌.

ಅಮ್ಮಾ ಚೆನ್ನಾಗಿರಬೇಕು ಎಂದು ದೇವರಲ್ಲಿ ಸದಾ ಬೇಡುತ್ತಾ ಇದ್ದ ನಮಗೆ, ಕಳೆದ ಬೆಳಕಿನ ಹಬ್ಬದ (ದೀಪಾವಳಿ) ದಿನ ನಮ್ಮ ಹೃದಯದಲಿ ಕತ್ತಲಾಗಿಸಿ, ನಮ್ಮನ್ನು ಕೊನೆಗೂ ಬಿಟ್ಟುಹೋದಳು. ಅಮ್ಮಾ… ನಿನ್ನ ಪ್ರೀತಿಗೆ, ಮಮತೆಗೆ ಸಮನ್ಯಾರು. ಮತ್ತೊಮ್ಮೆ ನೀ ಹುಟ್ಟಿ ಬರಬೇಕು ಅಮ್ಮಾ.. ನಿನ್ನ ಮಕ್ಕಳಾಗಿ ನಾವು ಮತ್ತೆ ನಿನ್ನ ಮಡಿಲಿನಲಿ ನಲಿಯುವ ದಿನಗಳು ಮತ್ತೇ ಬರಬೇಕು ಅಮ್ಮಾ….

ಶ್ರೀಮತಿ ಬಿ.ವಿ‌.ಭಾರತಿ ಅವರು ಬರೆದ ಈ ಕೃತಿ ಕ್ಯಾನ್ಸರ್ ಪೇಷಂಟ್ ಗಳಿಗೆ ಜೀವನವನ್ನು ಪ್ರೀತಿಸುವುದನ್ನು ಕಲಿಸುತ್ತದೆ, ಜೀವನದ ಸಣ್ಣ ಸಣ್ಣ ಸಂತೋಷಗಳ ಬೆಲೆಯನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೇ ಕ್ಯಾನ್ಸರ್ ಅಥವಾ ಯಾವುದೇ ಮಾರಣಾಂತಿಕ ಖಾಯಿಲೆಯಿಂದ ಬಳಲುವವರ ಆರೈಕೆ ಹೇಗೆ ಮಾಡಬೇಕು, ಅವರಿಗೆ ಮಾನಸಿಕ ಸ್ಥೈರ್ಯವನ್ನು ಹೇಗೆ ತುಂಬುವುದು ಎಂಬುದನ್ನು ಸಹ ತಿಳಿಸುತ್ತದೆ. ಇಂಥಾ ಒಳ್ಳೆಯ ಕೃತಿಯನ್ನು ಬರೆದ ಭಾರತಿ ಅಕ್ಕನಿಗೆ ನಮನ.