ಪ್ರೀತಿಯ ಓದುಗ ಬಂಧುಗಳೇ,

ಪ್ರೀತಿ ಎಂದರೆ ಹೃದಯದಲ್ಲಿ ಅರಳುವ ಸುಂದರ ಭಾವನೆ. ಅದು ಕೆಲವೊಮ್ಮೆ ಬದುಕಿಗೆ ಬಣ್ಣ ತುಂಬಿದರೆ, ಮತ್ತೊಮ್ಮೆ ಕಣ್ಣಂಚಿನಲ್ಲಿ ಹನಿಯಾಗಿ ಜಾರುತ್ತದೆ. ಪ್ರೀತಿಯ ಮೊದಲ ನೋಟ, ಮಧುರ ಮಾತುಗಳು, ಜೊತೆಯಾಗಿ ಕಂಡ ಕನಸುಗಳು ಬದುಕಿನಲ್ಲಿ ಮರೆಯಲಾಗದ ನೆನಪುಗಳಾಗಿ ಉಳಿಯುತ್ತವೆ.

ಪ್ರೀತಿ ಎಷ್ಟು ಮಧುರವೋ, ಪ್ರೀತಿಸಿದವರ ಅಗಲಿಕೆಯ ನೋವು ಅಷ್ಟೇ ಯಾತನಾಮಯ. ಜೊತೆಯಾಗಿ ಸಾಗಬೇಕೆಂದು ಕನಸು ಕಂಡ ಹೃದಯಗಳು ದೂರವಾದಾಗ, ಹೇಳಲಾಗದ ನೋವು ಮೌನವಾಗುತ್ತದೆ. ಆ ಮೌನದೊಳಗೆ ಸಾವಿರ ನೆನಪುಗಳು ಕಾಡುತ್ತವೆ. ತುಟಿಗಳಲ್ಲಿ ನಗುವಿದ್ದರೂ, ಹೃದಯದೊಳಗಿನ ನೋವು ಕೆಲವೊಮ್ಮೆ ಕಣ್ಣೀರಾಗಿ ಹೊರಹೊಮ್ಮುತ್ತದೆ.

ಹೀಗೆ ಪ್ರೀತಿಯ ಸಿಹಿ ಕ್ಷಣಗಳು, ಪ್ರೇಮ ನಿವೇದನೆಯ ತವಕ, ನಿರೀಕ್ಷೆಗಳು, ಕನಸುಗಳು, ವಿರಹದ ವೇದನೆ, ಅಗಲಿಕೆಯ ನೋವು ಹಾಗೂ ಮರೆಯಲಾಗದ ನೆನಪುಗಳು ಕವಿತೆಗಳಾಗಿ ರೂಪುಗೊಂಡದ್ದೇ ನನ್ನ ಈ ‘ಕಣ್ ಹನಿ’ ಕವನ ಸಂಕಲನ.

ಪ್ರೀತಿ ಹೃದಯದಲ್ಲಿ ಅರಳುವ ಹೂವಾದರೆ, ವಿರಹ ಆ ಹೂವಿನ ಮೇಲೆ ಜಾರುವ ಕಣ್ಣೀರ ಹನಿ. ಪ್ರೀತಿ ನೆನಪಾಗಿ ಉಳಿದಾಗ, ಕಣ್ಣೀರೂ ಕವಿತೆಯಾಗುತ್ತದೆ.

ಈ ಸಂಕಲನದ ಕವಿತೆಗಳು ಪ್ರೀತಿಸಿದ, ಪ್ರೀತಿಸುತ್ತಿರುವ ಹಾಗೂ ಪ್ರೀತಿಯನ್ನು ಕಳೆದುಕೊಂಡ ಪ್ರತಿಯೊಂದು ಹೃದಯದ ಭಾವನೆಗಳಿಗೆ ದನಿಯಾಗಲಿ. ಯಾವುದಾದರೂ ಒಂದು ಕವಿತೆ ನಿಮ್ಮ ಪ್ರೀತಿಯ ನೆನಪುಗಳನ್ನು ಮರುಕಳಿಸಿದರೆ, ಯಾವುದಾದರೂ ಒಂದು ಸಾಲು ನಿಮ್ಮ ಹೃದಯವನ್ನು ಸ್ಪರ್ಶಿಸಿದರೆ, ನನ್ನ ಈ ಸಾಹಿತ್ಯ ಪ್ರಯತ್ನ ಸಾರ್ಥಕವಾದಂತೆಯೇ.

ನನ್ನ ಸಾಹಿತ್ಯ ಪಯಣಕ್ಕೆ ಪ್ರೀತಿ, ಪ್ರೋತ್ಸಾಹ ನೀಡುತ್ತಿರುವ ಸಾಹಿತ್ಯಾಸಕ್ತರು, ಕವಿಮಿತ್ರರು ಹಾಗೂ ಹಿತೈಷಿಗಳೆಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು.

ನನ್ನ ಹೃದಯದ ನೋವಿನಲ್ಲಿ ಹುಟ್ಟಿದ ಈ ‘ಕಣ್ ಹನಿ’, ನಿಮ್ಮ ಮನದಾಳದ ಭಾವನೆಗಳೊಂದಿಗೆ ಬೆರೆತು ಕವಿತೆಯಾಗಿ ಉಳಿಯಲಿ...

ಪ್ರೀತಿ ಮತ್ತು ಕೃತಜ್ಞತೆಗಳೊಂದಿಗೆ,

ನಿಮ್ಮವ,

ರಾಘವೇಂದ್ರ ಪದ್ಮಶಾಲಿ
ಕವಿ ಹಾಗೂ ಬರಹಗಾರ
www.raghavendrapadmashali.com


ಕವನ ಸಂಕಲವನ್ನು ಆನ್‌ ಲೈನ್‌ ನಲ್ಲಿಯೇ PDF ಮಾದರಿಯಲ್ಲಿ ಬಿಡುಗಡೆ ಮಾಡಿದ್ದು, ಉಚಿತವಾಗಿ ಓದಬಹುದು ಹಾಗೂ ಡೌನ್‌ ಲೋಡ್‌ ಮಾಡಬಹುದು. ಈ ಪುಸ್ತಕ ಓದಲು "ಮಾದರಿ ಓದಿ" ಬಟನ್‌ ಕ್ಲಿಕ್‌ ಮಾಡಿ.

ಪುಸ್ತಕ ಓದಲು — "ಪುಸ್ತಕ ಓದಿ" ಬಟನ್‌ ಕ್ಲಿಕ್‌ ಮಾಡಿ. (To Read Full book Click on "ಪುಸ್ತಕ ಓದಿ" button.)


This is available in https://kan-hani.blogspot.com/