ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ರೀತಿಯ ಅಲೆ ಶುರುವಾಗಿದ್ದಂತೂ ನಿಜ. ಹೊಸ ಥರಹದ ಪ್ರಯೋಗಾತ್ಮಕ ಚಿತ್ರಗಳು ಒಂದರ ಹಿಂದೆ ಒಂದರಂತೆ ಬಿಡುಗಡೆಗೊಂಡಿತು, ಅಲ್ಲದೇ ಕನ್ನಡ ಚಿತ್ರರಸಿಕರ ಮನಸು ಗೆದ್ದು, ಗೆದ್ದ ಖುಷಿಯಲ್ಲಿ ಚಿತ್ರ ತಂಡ ಬೀಗಿದ್ದೂ ಆಯ್ತು. ಲೂಸಿಯಾ, ನಾನು ಅವನಲ್ಲ ಅವಳು, ಆಪರೇಷನ್ ಅಲುಮೇಲಮ್ಮ, ರಂಗಿತರಂಗ, ಉಳಿದವರು ಕಂಡಂತೆ, ತಿಥಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಯೂ ಟರ್ನ್, ದಯವಿಟ್ಟು ಗಮನಿಸಿ, ಕಟಕ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳು ಇಂಥಾ ಅಲೆ ಸೃಷ್ಟಿಸಿದ ಸಿನಿಮಾಗಳೇ.
ಒಂದು ಸಿನಿಮಾ ಸೃಷ್ಟಿ ಆಗಲು ದೊಡ್ಡ ಮಟ್ಟದ ತಂಡವೊಂದರ ಶ್ರಮದ ಅಗತ್ಯ ಇರುತ್ತದೆ. ಹಾಗೇ ಸೃಷ್ಟಿಯಾದ ಸಿನಿಮಾ, ಬಿಡುಗಡೆ ನಂತರ ಆ ಶ್ರಮದ ಯಶಸ್ಸಿನ ಲೆಕ್ಕಾಚಾರ ಆಗಿ ಲಾಭ-ನಷ್ಟ ನಿರ್ಧಾರ ಆಗುತ್ತದೆ. ಪ್ರತಿಯೊಂದು ಸಿನಿಮಾ ತಯಾರಾಗುವಾಗ ಶ್ರಮದ ನೆರಳಲ್ಲೇ ತಯಾರಾಗುತ್ತದೆ. ದೊಡ್ಡಮಟ್ಟದ ಯಶಸ್ಸಿನ ನಿರೀಕ್ಷೆಯಲ್ಲಿ ಕನಸುಗಳು ಗರಿಗೆದರುತ್ತವೆ. ಆ ಕನಸುಗಳೇ ಬಣ್ಣದ ಲೋಕದ ಜೀವನಾಡಿ. ಕನಸುಗಳು ಈಡೇರಲಿ ಬಿಡಲಿ, ಈ ಲೋಕದ ಯಾವುದೇ ಸರದಾರನೂ ಕನಸು ಕಾಣುವುದನು ನಿಲ್ಲಿಸುವುದೇ ಇಲ್ಲ. ಕಲಾದೇವಿಯ ಆರಾಧನಾ ಶಕ್ತಿಯೇ ಅಂತದ್ದು.
"ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗುತ" ಎಂಬ ಉಪಶೀರ್ಷಿಕೆಯೊಂದಿಗೆ ಶ್ರೀ ಬಿ.ಸಿದ್ದಗಂಗಯ್ಯ ಕಂಬಾಳು ರವರು ಬರೆದ "ರಾಮಾ ರಾಮಾ ರೇ" ಪುಸ್ತಕವನ್ನು ತರಿಸಿಕೊಂಡು ಓದಿದೆ. ಈ ಸಿನಿಮಾವನ್ನು ಈಗಾಗಲೇ ಸಾಕಷ್ಟು ಬಾರಿ ನೋಡಿಯಾಗಿತ್ತು. ಆದರೂ ಚಿತ್ರದ ಬಗ್ಗೆ ಇನ್ನಷ್ಟು ತಿಳಿಯುವ ಹಂಬಲದಿಂದ ಪುಸ್ತಕ ತರಿಸಿದ್ದೆ. ಓದುತ್ತಾ, ಓದುತ್ತಾ ರಾಮಾ ರಾಮಾ ರೇ ತಂಡದ ಮಧ್ಯೆ ನಾನೇ ಕಳೆದುಹೋದಂತೆ ಭಾಸವಾಯಿತು. ಕಥೆ ಸೃಷ್ಟಿಯಾದ ಹೊತ್ತು, ಕಥೆ ಬೆಳೆಯುತ್ತಾ ಹೋದ ಬಗೆ, ಜೀಪೊಂದು ನಿರ್ಜೀವ ವಸ್ತುವಾದರೂ ತಾನೇ ಒಂದು ಪ್ರಮುಖ ಪಾತ್ರವಾದ ಕಥೆ, ಬಿಸಿಲು ಧೂಳು ಬೆವರಿಗೆ ಸಂಗಾತಿಯಾಗಿ ಚಿತ್ರೀಕರಣದ ಸಮಯದಲ್ಲಿ ದುಡಿದ ಕಲಾವಿದರು, ಇವರು ಕಲಾವಿದರಷ್ಟೇ ಅಲ್ಲದೇ ತಂಡದ ಪ್ರತಿಯೊಂದು ಜವಬ್ದಾರಿ ನಿರ್ವಹಿಸಿದ ಬಗೆ ಎಲ್ಲವನೂ ನಾವೇ ಖುದ್ದಾಗಿ ನಿಂತು ನೋಡಿದಂತೆ ಭಾಸವಾಗುವ ಹಾಗೇ ಬರೆದಿದ್ದಾರೆ ಲೇಖಕರು.
ಇವರು ಮಾಡಿದ್ದು ಬರೀ ಚಿತ್ರವಲ್ಲ. ಅದೊಂದು ಯಜ್ಞ. ಏಕೆಂದರೆ ಅಷ್ಟೇ ಪ್ರಾಮುಖ್ಯತೆ ಕೊಟ್ಟು, ಯಾವುದೇ ಹಮ್ಮು-ಬಿಮ್ಮುಗಳಿಲ್ಲದೇ ಒಂದಾಗಿ, ಒಗ್ಗಟ್ಟಿನಿಂದ ಈ ತೇರನ್ನು ಎಳೆದವರು ಈ ತಂಡದ ಸದಸ್ಯರು. ಸಿನಿಮಾ ನಿರ್ಮಿಸುವ ಕನಸು ಕಾಣುವ ಲಕ್ಷಾಂತರ ಹೊಚ್ಚ ಹೊಸ ಪ್ರತಿಭಾವಂತರಿಗೆ ದಾರಿದೀಪವಾಗಲಿದೆ ಈ ಪುಸ್ತಕ. ಒಂದು ಟೀಂ ನ coordination ಹೇಗಿರಬೇಕು? ಎದುರಾಗುವ ಸಮಸ್ಯೆಗಳೇನು? ಸಮಸ್ಯೆಗಳ ಹೇಗೆ ಎದುರಿಸಬೇಕು? ತಮ್ಮ ಪಾತ್ರದ ಹೊರತಾಗಿ ಮತ್ತೇನೆಲ್ಲಾ ಮಾಡಬೇಕಾಗಬಹುದು? ಎಂಬಿತ್ಯಾದಿ ನೂರೆಂಟು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
ಅಲ್ಲದೆ ಸರ್ವೇಸಾಮಾನ್ಯವಾಗಿ ಹೇಳುವುದಾದರೇ ಭಗವಧ್ಗೀತೆಯಲ್ಲಿನ "ನಿನ್ನ ಕೆಲಸ ನೀನು ಮಾಡು, ಫಲಾಫಲ ನನಗೆ ಬಿಡು" ಎಂಬ ಶ್ರೀಕೃಷ್ಣ ವಾಣಿಯನ್ನು ಅಕ್ಷರಶಃ ಪಾಲಿಸಿ, ನಿಷ್ಕಲ್ಮಷ ಭಾವದಿಂದ ನಿಮ್ಮ ಕೆಲಸ ನೀವು ಪ್ರಾಮಾಣಿಕತೆ ಇಂದ ಮಾಡಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿದು ಬರುತ್ತದೆ.
ಜೀರೋ ಬಜೆಟ್ ನಿಂದ ಆರಂಭವಾಗುವ ಇವರ ಕನಸು, ಅಷ್ಟೋ ಇಷ್ಟೋ ಕಾಸು ಕೂಡಿಟ್ಟು, ಸಾಧ್ಯವಾದಷ್ಟು ಮಿತವ್ಯಯಿಸಿ, ೧೦೦ ದಿನಗಳ ಸಂಭ್ರಮವನ್ನು ಆಚರಿಸುವ ಮಟ್ಟಿನ ಯಶಸ್ಸು ಗಳಿಸಿದ್ದು ಚಿತ್ರತಂಡದ ಶ್ರಮಕ್ಕೆ ಸಂದ ಗೌರವ. ಈ ಎಲ್ಲದರ ನಡುವೆ ಕಾಡಿದ್ದು, ಜಯರಾಮಣ್ಣ. ಕನಸು ಶುರುವಾಗಿನಿಂದಲೂ ಹೊಸ ಹುಡುಗರಿಗೆ ಜೊತೆಯಾಗಿ, ಬೆನ್ನು ತಟ್ಟುತ್ತಾ ಪ್ರೋತ್ಸಾಹಿಸುತ್ತಾ, ಚಿತ್ರದೊಳಗೂ ಹಾಗೂ ಹೊರಗೂ ಪ್ರಮುಖ ಪಾತ್ರವಾಗಿ ತಂಡಕ್ಕೆ ಆಸರೆಯಾಗಿದ್ದ ಜಯರಾಮಣ್ಣನನ್ನು ಮಧ್ಯದಲ್ಲಿಯೇ ಆ ದೇವರು ಕರೆಸಿಕೊಂಡು ಬಿಡುತ್ತಾನೆ. ಜಯರಾಮಣ್ಣನ ಅಗಲಿಕೆಯ ನೋವಿನ ನಡುವೆ ಸಿನಿಮಾ ಕನಸು ಮತ್ತೆ ಶುರುವಾಗುತ್ತದೆ ತದ್ರೂಪಿ ರೂಪದಲ್ಲಿ ಬರುವ ಪ್ರಕಾಶ್ ಚಂದ್ ಎಂಬಾತ ಕನ್ನಡವನು ಮಾತನಾಡಲು ಬರದೇ ಇದ್ದರೂ, ತಾನು ಮಾಡುತ್ತಿರುವ ಪಾತ್ರದ ಹಿಂದಿನ ಪಾತ್ರಧಾರಿಯ ಮೇಲಿನ ಗೌರವಕ್ಕೆ ತಾನಾಗಿಯೇ ಶರಣಾಗಿ ಈ ಹೊಸ ಹುಡುಗರ ಪ್ರಯತ್ನದಲ್ಲಿ ತಾನೂ ಒಬ್ಬ ನಾವಿಕನಾಗಿ ದೋಣಿಯನ್ನು ದಡ ಸೇರಿಸಿದ್ದಾನೆ.
ಕನ್ನಡ ಚಿತ್ರರಸಿಕರ ಮನಸು ಸೆಳೆದು, ವಿಮರ್ಶಕರ ಉತ್ತಮ ವಿಮರ್ಶೆಗೆ ಪಾತ್ರವಾಗಿ, ಉನ್ನತ ಪ್ರಶಸ್ತಿಗಳ ಮುಡಿಗೇರಿಸಿಕೊಂಡು, ಯಶಸ್ವಿ ನೂರು ದಿನಗಳ ಪೂರೈಸಿರುವುದು ಸಂತೋಷ. ನಿರ್ಮಾಪಕರಿಲ್ಲದೇ, ಬಂಡವಾಳ ಹೂಡಿಕೆಗೆ, ಅತೀವ ತೊಂದರೆ ಅನುಭವಿಸಿದ ಈ ತಂಡಕೆ ಮುಂದಿನ ದಿನಗಳಲ್ಲಿ ಇವರ ಕನಸನ್ನು ಪೋಷಿಸುವ ಕಲಾಪೋಷಕರು ನಿರ್ಮಾಪಕರಾಗಿ ಸಿಗಲಿ. ಮತ್ತೊಂದು ಒಳ್ಳೇ ಚಿತ್ರ ಈ ತಂಡದಿಂದ ಮೂಡಿಬರಲಿ ಎಂದು ಆಶೀಸುತ್ತೇನೆ.
ಸಿನಿಮಾ
ರಾಮಾ ರಾಮಾ ರೇ.. : ಪುಸ್ತಕ ವಿಮರ್ಶೆ
Raama Raama Re : Book Review
Raghavendra Padmashali
3 ನಿಮಿಷದ ಓದು
ಪರಿಷ್ಕರಿಸಲಾಗಿದೆ:



