ಪುಷ್ಪಕ ವಿಮಾನ... ಚಿತ್ರವು ಸಿನಿರಸಿಕರಲ್ಲಿ ನಿರೀಕ್ಷೆ ಮೂಡಿಸಿದ್ದು, ಆ ನಿರೀಕ್ಷೆಯಲಿ ಸಿನಿಮಾ ನೋಡಲು ಕುಳಿತಾಗ ಅತ್ತಿತ್ತ ಅಲುಗಾಡದೇ, ಭಾವನೆಗಳ ಮೃದುಲ ಕಚಗುಳಿಯಿಡುತ್ತಾ ನಗಿಸುತ್ತೆ, ಅಳಿಸುತ್ತೆ, ಮೈಮರೆಸುತ್ತೆ.

ರಿಮೇಕ್ ಸಿನಿಮಾ ಆದ್ರೂ ಭಾವನೆಗಳ ಜೀವಂತಿಕೆ ಕಟ್ಟಿಕೊಡುವಲ್ಲಿ ಒರಿಜಿನಲ್ ಸಿನಿಮಾವನ್ನೇ ಹಿಂದಿಕ್ಕಿದೆ:
ಸಿನಿಮಾ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಇದು ಕೊರಿಯಾ ಭಾಷೆಯ ರಿಮೇಕ್ ಎಂದು, "ರಿಮೇಕ್ ಅಲ್ಲ ಸ್ಪೂರ್ತಿ" ಎಂದು ಫೇಸ್ ಬುಕ್ಕಿನ ಕೆಲವವರದು ಕಾಮೆಂಟೋ ಕಾಮೆಂಟು. ತೆಲುಗಿನ ನಾನ್ನ ಸಿನಿಮಾವನ್ನೇ ಹೋಲುವ ಸಿನಿಮಾ ಎಂದು ಮೊದಲು ಭಾಸವಾಗಿತ್ತು. ನಂತರ ಈ ಸಿನಿಮಾ ತಂಡವೇ ಅದನ್ನು ಅಲ್ಲಗೆಳೆದಿತ್ತು. ಒಂದು ವೇಳೆ ತಮಿಳಿನ ಸಿನಿಮಾದ ರಿಮೇಕ್ ಆಗಿದ್ರೂ ಸರಿ, ನೋಡೋಣ ಎನಿಸುತ್ತಿತ್ತು. ಕೊರಿಯಾ ಭಾಷೆಯ "ಮಿರಾಕಲ್ ಇನ್ ಸೆಲ್ ನಂಬರ್ 7" ಸಿನಿಮಾದ ಪಕ್ಕಾ ರಿಮೇಕ್ ಆದ್ರೂ, ಭಾವನೆಗಳ ಜೀವಂತಿಕೆ ಕಟ್ಟುವಲ್ಲಿ ಹಾಗೂ ನೋಡುವ ಕಣ್ಗಳಿಗೆ ಸುಂದರ ಚಿತ್ರಣ ಕಟ್ಟಿಕೊಡುವಲ್ಲಿ ಈ ಸಿನಿಮಾ ಆ ಒರಿಜಿನಲ್ ಸಿನಿಮಾವನ್ನು ಮೀರಿ ನಂಬರ್ ಒನ್ ಎಂದು ಅನಿಸೋದರಲ್ಲಿ ಡೌಟಿಲ್ಲ. ಭಾರತೀಯ ಸಿನಿಮಾದ ಎಲ್ಲಾ ಭಾಷೆಗೆ ರಿಮೇಕ್ ಆಗುವ ಎಲ್ಲಾ ಲಕ್ಷಣಗಳು ಇವೆ ಎಂದೆನಿಸುತ್ತದೆ.

ಕಥೆ:
ಬುದ್ದಿಮಾಂದ್ಯ ತಂದೆ - ಪುಟ್ಟ ಮಗಳು.ಅವರದೇ ಪುಟ್ಟ ಪ್ರಪಂಚ. ಅವರಿಗೊಂದು ತೀರಲಾಗದ ಆಸೆ.. ವಿಮಾನದಲ್ಲಿ ಪ್ರಯಾಣ ಮಾಡಬೇಕೆಂಬುದು. ಇಷ್ಟರೊಳಗೊಂದು ಆಘಾತ. ಅಪಘಾತವಾದ ಮಗುವಿನ ಬಾಯಿಗೆ ಬಾಯಿಟ್ಟು ಉಸಿರು ಕೊಡುವ ಅನಂತರಾಮಯ್ಯನ ಪ್ರಥಮ ಚಿಕಿತ್ಸೆಯನ್ನೇ ಅಪಾರ್ಥ ಕಲ್ಪಿಸಿಕೊಂಡು ರೇಪ್ ಅಂಡ್ ಮರ್ಡರ್ ಕೇಸಲ್ಲಿ ಸಿಕ್ಕಿಸುತ್ತಾರೆ. ಕಾನೂನು ಮುಷ್ಟಿಯಿಂದ ತಪ್ಪಿಸಿಕೊಳ್ಳಲು ಈ ಬುದ್ದಿಮಾಂದ್ಯನಿಗೆ ಕಷ್ಟಸಾಧ್ಯ. ಜೈಲು ಸೇರಿದ ಬಳಿಕ ಇವನ ನಡುವಳಿಕೆಯಿಂದ ಜೈಲರ್ ಹಾಗೂ ಸಹಖೈದಿಗಳಿಗೆ ಇವನ ಅಮಾಯಕತ್ವ ಪರಿಚಯವಾಗುತ್ತದೆ. ಅವರೆಲ್ಲರೂ ಅನಂತಯ್ಯನಿಗೆ ನ್ಯಾಯ ಕೊಡಿಸಲು, ಅವನನ್ನು ಪಾರು ಮಾಡಲು ಶತಪ್ರಯತ್ನ ಪಡುತ್ತಾರೆ. ಕೊನೆಗೂ ಅವನಿಗೆ ನ್ಯಾಯ ಸಿಗುವುದಿಲ್ಲ, ಬದಲಾಗಿ ಗಲ್ಲುಶಿಕ್ಷೆಗೆ ಗುರಿಯಾಗುತ್ತಾನೆ. ಆ ಪುಟ್ಟಮಗಳು ತನ್ನ ತಂದೆ ಒಬ್ಬ ನಿರಪರಾಧಿ ಎಂಬುದನ್ನು ನಿರೂಪಿಸುತ್ತಾಳೆ. ತನ್ನ ತಂದೆಯ ಗೌರವ ಕಾಪಾಡುತ್ತಾಳೆ.
ಸತ್ಯಕ್ಕೆ ಸಾವಿಲ್ಲ ಅಂತಾರೆ. ಇದು ಅನಂತರಾಮಯ್ಯ ಸತ್ತ ನಂತರ ಆ ಸತ್ಯವೇ ಗೆಲ್ಲುತ್ತದೆ. ಇದೆಲ್ಲವನ್ನೂ ಥಿಯೇಟರಿನ ದೊಡ್ಡ ಸ್ಕ್ರೀನಿನಲ್ಲಿ ನೋಡುವಾಗಿನ ಖುಷಿಯೇ ಬೇರೆ.

ಕ್ಯಾಮರಾ ವರ್ಕ್ ಸೂಪರ್:
ಸಮುದ್ರದಂಚಿನಿಂದ ಶುರುವಾದ ಸಿನಿಮಾ ಕ್ಯಾಮೆರಾ ನೀಲಿ ಆಕಾಶ ತೋರಿಸಿ ಶುಭಂ ಹೇಳುವವರೆಗೂ ಕ್ಯಾಮೆರಾ ಚಳಕ ಅಮೋಘ. ಹಸಿರು, ನೀಲಿ ಆಕಾಶ, ಮಳೆ, ಅಪ್ಪ-ಮಗಳು ನಗು, ಖುಷಿ, ಬೇರಾಗುವಾಗಿನ ನೋವು, ಮತ್ತೆ ಸಿಕ್ಕಾಗ ಸಂಭ್ರಮ, ಜೈಲು, ಖೈದಿಗಳು, ಕೋರ್ಟು ಎಲ್ಲವನ್ನೂ ಮನೋಜ್ಞವಾಗಿ ಕ್ಯಾಮರೆದಲ್ಲಿ ಸೆರೆ ಹಿಡಿದಿದ್ದಾರೆ ಚಿತ್ರದ ಕ್ಯಾಮೆರಮ್ಯಾನ್.

ಸಂಗೀತ - ನಿಜಕ್ಕೂ ಅಮೃತಸುಧೆ:
ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಸಂಗೀತ. ಅದ್ಭುತ ಹಾಡುಗಳು, ವಂಡರ್ ಫುಲ್ ಬ್ಯಾಕ್ ಗ್ರೌಂಡ್ ಸ್ಕೋರ್. ಸೂಪರ್ಬ್..

ಕಲಾವಿದರ ಪರ್ಫಾರ್ಮೆನ್ಸ್:
100ರ ಸರದಾರ ರಮೇಶ್ ಅರವಿಂದ್ ಅವರ ನಟನೆಗೆ ಫುಲ್ ಮಾರ್ಕ್ಸ್. ಪುಟ್ಟಿಯಾಗಿ ಯುವಿನಾ ಪಾರ್ಥವಿ ಕೂಡ ಅಷ್ಟೇ ಕ್ಯೂಟ್ ಆಕ್ಟ್. ತಂದೆ ಗೌರವ ಕಾಪಾಡುವ ಮಗಳಾಗಿ, ತಂದೆ ಪರ ವಾದಿಸಿ, ಸತ್ಯವನ್ನು ಗೆಲ್ಲಿಸುವ ಮಗಳಾಗಿ ರಚಿತಾ ಪರ್ಫೆಕ್ಟ್. ಕಲ್ಲುಹೃದಯದ ಜೈಲರ್ ಆಗಿ ರವಿಕಾಳೆ ರವರು ಖಡಕ್ ಆಕ್ಟ್ ಗೆ ಫೇಮಸ್ಸು. ಆದರೆ ದೃಶ್ಯವೊಂದರಲ್ಲಿ ಭಾವುಕರಾಗಿ ಕಣ್ಣೀರು ಹಾಕುವಾಗ ಹೃದಯ ಗೆದ್ದುಬಿಡುತ್ತಾರೆ. ಸಹಖೈದಿಗಳ ನಟನೆ ಒಬ್ಬರಿಗಿಂತ ಒಬ್ಬರು ಸ್ಪರ್ಧಾತ್ಮಕ ನಟನೆ. ಪ್ರೇಮಲೋಕ, ಕಿಂದರಿಜೋಗಿ ಕಾಲದ ಗಂಡು ಹೈಕ್ಳು ಹಾರ್ಟಿಗೆ ಕಿಚ್ಚು ಹೊತ್ತಿಸಿದ್ದ ಚೆಲುವೆ ಜೂಹಿಚಾವ್ಲಾ, ಜಿಲ್ಕಾ ಜಿಲ್ಕಾ ರೇ ಅನ್ನುವಾಗಲೂ ಅಷ್ಟೇ ಸುಂದರ ಮನಮೋಹಕ.

ನಿರ್ದೇಶಕರ ಜಾಣ್ಮೆ:
ಮಗಳಿಂದ ತಂದೆ ಬೇರೆಯಾದಾಗಿನ ಸಂದರ್ಭದಲ್ಲಿ ಮರಳಿನ ಮೇಲೆ ತಂದೆಯ ಚಿತ್ರ ಬರೆದು ಅದರ ಮೇಲೆ ಮಗಳು ಮಲಗಿಕೊಂಡಿರುವ ದೃಶ್ಯ ಅದ್ಬುತ. ಇದು ಮೂಲ ಚಿತ್ರದಲ್ಲಿಲ್ಲ. ತನ್ನ ತಾತನ ಮಿಲಿಟರಿ ಡ್ರಸ್ಸನ್ನು ರಮೇಶ್ ಅರವಿಂದ್ ಹಾಕಿಕೊಂಡಿರುತ್ತಾರೆ. ದೇಶವನ್ನು ಕಾಯುವ ಯೋಧನಾಗದೇ ಇರಬಹುದು, ಮಗಳನ್ನು ಬಿಟ್ಟಿರಲಾಗದ, ಅವಳ ಮಮತೆಯ ಕಾವಲುಗಾರನಾಗಿಯೇ ಇರುತ್ತಾನೆ. ಪ್ರತಿ ಅಪ್ಪನೂ ಮಗಳನ್ನು ಕಾಯುವ ಸೈನಿಕನೇ ಎಂಬಂತಿದೆ. ಈ ಕಾಸ್ಟೂಮ್ ಡಿಸೈನ್ ಮೂಲಚಿತ್ರದಲ್ಲಿಲ್ಲ. ಗಲ್ಲುಶಿಕ್ಷೆಗೆ ಒಳಗಾದ ಅನಂತರಾಮಯ್ಯನಿಗೆ ಗೋಡೆಯ ಮೇಲೆ ಬುದ್ದನ ಉವಾಚದ ಮೇಲೆ ನೇಣುಹಗ್ಗದ ನೆರಳು, "ತಾನು ನಿರಪರಾಧಿ, ನನ್ನನ್ನು ಕಾಪಾಡಿ, ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ" ಎಂಬ ಮಾತಾಡುವಂತೆ ಮಾಡುತ್ತದೆ.

ಮೂಲದಿಂದ ಮಿಸ್ ಆಗಿದ್ದು:
ತಂದೆ ಹಾಗೂ ಮಗಳನ್ನು ಜೈಲಿನಿಂದ ಎಸ್ಕೇಪ್ ಮಾಡಲು ಈ ಚಿತ್ರದಲ್ಲಿ ರಾಜಕಾರಣಿಯ ಕಾರನ್ನೇ ಬಳಸುತ್ತಾರೆ. ಮೂಲ ಚಿತ್ರದಲ್ಲಿ ಪ್ಯಾರಚೂಟ್ ಬಳಸುತ್ತಾರೆ. ಅದೇ ಪ್ಯಾರಚೂಟ್ ಸೀನ್ ಬಳಸಿದ್ದರೆ ಇನ್ನೂ ಚೆನ್ನಾಗಿತ್ತೇನೋ ಎಂದು ಅನಿಸ್ತು.

ಈ ಸಿನಿಮಾವನ್ನು ನೋಡುವ ಪ್ರತಿಯೊಬ್ಬ ತಂದೆಯೂ ಅನಂತರಾಮಯ್ಯನ ಪಾತ್ರದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಹಾಗೂ ಅದೇ ರೀತಿ ಪ್ರತಿ ಮಗಳು ಪುಟ್ಟಿ ಹಾಗೂ ಪುಟ್ಟಲಕ್ಷ್ಮಿ ಪಾತ್ರದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳುತ್ತಾರೆ. ಇದೊಂದು ಭಾವನೆಗಳ ಪ್ರಯಾಣ... ಭಾವ ತೀರ ಯಾನ...