ಬೋಳುತಲೆಯವರ ಗೋಳನ್ನು ಹಾಸ್ಯಾಸ್ಪದವಾಗಿ ನಿರೂಪಿಸುತ್ತಾ, ಅಂತರಂಗ ಸೌಂದರ್ಯದ ಅನಾವರಣ ಮಾಡುತ್ತಾರೆ ಒಂದು ಮೊಟ್ಟೆಯ ತಂಡ.

ಕನ್ನಡವನ್ನು ಪ್ರೀತಿಸುವ, ಕನ್ನಡದಲ್ಲಿಯೇ ಜೀವಿಸುವ, ಕನ್ನಡತನದಲ್ಲಿಯೇ ಕರಗಿಹೋಗಿರುವ ಜನಾರ್ಧನ ಎಂಬ ಬೋಳುಮಂಡೆಯ ವ್ಯಥೆ ಈ ಕತೆ. ಅವನು ಎಲ್ಲರಂತೆಯೇ ಸಾಧಾರಣ ಮನುಷ್ಯ. ಅವನಿಗೊಂದು ಮದುವೆ ಮಾಡಿದರಾಯಿತು ಎಂಬುದು ತಂದೆ-ತಾಯಿಯ ಮೇಲಿರುವ ಕಳೆದುಕೊಳ್ಳಲಾರದ ಜವಬ್ದಾರಿಯ ಸಂಕಷ್ಟ. ಬೋಳುತಲೆ, ಕನ್ನಡ ಅಧ್ಯಾಪಕ ಎಂಬ ಕಾರಣಕ್ಕಾಗಿಯೇ ಎಲ್ಲಿ ಹೋದರೂ ಹುಡುಗಿಯರಿಂದ ರಿಜೆಕ್ಟ್. ದೈಹಿಕ ರೂಪ ಹೇಗಿದ್ದರೇನು, ಮಾನಸಿಕ ರಸಿಕತೆಯಲ್ಲಿ ಒಂದಷ್ಟು ಅಂದ-ಚೆಂದಕೆ ಹುಡುಕಾಟ. ಚಂದದ ಹುಡುಗಿಯೊಬ್ಬಳು ತನ್ನ ಮನದನ್ನೆಯಾಗಬೇಕೆಂಬ ಮಹಾದಾಸೆ ಹೊತ್ತು ಕನ್ಯಾನ್ವೇಷಣೆಗೆ ಮುಂದಾಗುತ್ತಾನೆ ಜನಾರ್ಧನ. ಅನ್ವೇಷಣೆ ಕಾರ್ಯಕ್ಕೆ ಕಚೇರಿಯ ಜವಾನ ಶ್ರೀನಿವಾಸನಿಂದ ಒಂದಷ್ಟು ಸಲಹೆಗಳನ್ನು ಪಡೆಯುತ್ತಾನೆ. ದಿನವೂ ಟಿಫನ್ ಬಾಕ್ಸ್‌ ಕೊಟ್ಟು ಎಕನಾಮಿಕ್ಸ್ ಮೇಡಂಗೆ ಬಲೆ ಬೀಸುವ ಪ್ರಯತ್ನ ಮಾಡಿ ಸೋಲುತ್ತಾನೆ. ತನ್ನ ಬೋಳುತಲೆ ನೋಡುತಾ ಕಿಸಿಯುತ್ತಾ ಜನಾರ್ಧನನ ಹಿಂದೆಯೇ ಬೀಳುವ ಹುಡುಗಿಯ ನಗುವಿನ ಸೆಳೆತಕೆ ಸಿಲುಕಿ, ಇನ್ನೇನು ನನ್ನವಳೇ ಎನ್ನುವಷ್ಟರಲ್ಲಿ ತನ್ನ ಬೋಳುತಲೆಯ ಅವಳ ಬಂಡವಾಳ ಎಂದು ತಿಳಿದು ದುಃಖಿತನಾಗುತ್ತಾನೆ. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬಂತೆ ಹಳೇಯ ಗೆಳತಿಯರನ್ನ ಫೇಸ್ ಬುಕ್ಕಲ್ಲಿ ಹುಡುಕಿ ಹುಡುಕಿ ಕೊನೆಗೊಬ್ಬ ಸರಳ ಸುಂದರಿ ಜಾನುವಿಗೆ ಜೊತೆಯಾಗುತ್ತಾನೆ.

ಇಂಪಾದ ಸಂಗೀತ, ಮನಸಿಗೆ ಕಚಗುಳಿ ಇಡುವ ಪದಗಳ ಬಳಸಿ ಹೆಣೆದ ಹಾಡುಗಳು, ಕಣ್ಮನಗಳಿಗೆ ಮುದ ನೀಡುವ ಛಾಯಾಗ್ರಹಣ, ಕೇಳುವ ಕಿವಿಗಳಿಗೆ ಖುಷಿ ಕೊಡುವ ಮಂಗಳೂರು ಕನ್ನಡ ಈ ಚಿತ್ರದ ಪ್ಲಸ್ ಪಾಯಿಂಟ್. ಅಷ್ಟೇ ಅಲ್ಲ.. ಡಾ. ರಾಜ್ ಕುಮಾರ್ ರವರ ಕೆಲವು ಹಾಡಿನ ತುಣುಕುಗಳನ್ನು ಇಡೀ ಚಿತ್ರದುದ್ದಕ್ಕೂ ಸಾಂದರ್ಭಿಕವಾಗಿ ಬಳಸಿಕೊಂಡಿದ್ದಾರೆ. ಜೀವನದ ಪ್ರತಿಯೊಂದು ಕ್ಷಣದಲ್ಲೂ, ಪ್ರತಿಯೊಬ್ಬ ಕನ್ನಡಿಗನಿಗೂ ಡಾ. ರಾಜ್ ಹೇಗೆ ಜೀವನಾಡಿಯಾಗಿದ್ದಾರೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆಯಾಗಬಹುದು.

ಈ ಸಿನಿಮಾದಲ್ಲಿ ಬೋಳುತಲೆಯ ಜನಾರ್ಧನ ಹೆಚ್ಚಾಗಿ ಕಂಡರೂ, ಸದಾ ಹೆಂಡತಿಯೊಡನೆ ಫೋನಿನಲ್ಲಿ ಮಾತನಾಡುವ ಶ್ರೀನಿವಾಸನೇ ನಿಜವಾದ ಹೀರೊ. ಮಾತೇ ಬರದ ಮಾನಿನಿಯೊಡನೆ ಹೊಂದಾಣಿಕೆಯಿಂದ, ಪ್ರೀತಿಯಿಂದ, ಸಣ್ಣಪುಟ್ಟ ಜಗಳಗಳಿಂದ, ಸಂಸಾರನೌಕೆ ಸಾಗಿಸುತಾ ಸದಾ ಸಂತಸದಿಂದಿರುವ ಶ್ರೀನಿವಾಸನೇ ನಿಜವಾಗಿಯೂ ಹೀರೋ ಎನಿಸಿಬಿಡುತ್ತದೆ.

ಈ ಸಿನಿಮಾದಲ್ಲಿ ಬೋಳುತಲೆ ಹುಡುಗನ ನೋವಿನೊಂದಿಗೆ ದಪ್ಪ ಹುಡುಗಿಯ ಮೌನರೋದನೆಯೂ ಕೂಡ ಜೊತೆಯಾಗಿದೆ. ಹೊರಗೆ ಕಾಣುವ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯ ಬಲುಮುಖ್ಯ, ಹೊಂದಾಣಿಕೆ ಒಂದಿದ್ದರೆ ಸಂಸಾರದಲ್ಲಿ ಪರಮಸುಖ ಪಡೆಬಹುದು ಎಂಬ ಮಹತ್ವದ ಸಂದೇಶವನ್ನು ಈ ಚಿತ್ರದಲ್ಲಿ ಸಾರಿದ್ದಾರೆ.

ಒಟ್ಟಿನಲ್ಲಿ ಈಗಿನ ಕಾಲದ ಯುವಜನತೆಗೊಂದು ಅತ್ಯಾವಶ್ಯಕವಾದ ಚಿತ್ರ. ಮನೆಮಂದಿಯೆಲ್ಲ ಥಿಯೇಟರಿನಲ್ಲಿ ಕುಳಿತು ತಮ್ಮ ತಮ್ಮ ಮನಸುಗಳ ಕನ್ನಡಿಯನ್ನು ನೋಡಬೇಕಾದ ಚಿತ್ರ. ನಿಜಕ್ಕೂ ಅತ್ಯುತ್ತಮ ಚಿತ್ರ.