"ಮಫ್ತಿ ಸಿನಿಮಾ ನೋಡಿದ್ರಾ..? ನೋಡಿಲ್ಲಾಂದ್ರೆ ಒಂದ್ಸಲ ನೋಡಿ" ಹೀಗೆ ಪರಿಚಯದವರಿಗೆ ಹೇಳೋ ಅಷ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದೇ ಶಿವರಾಜ್ ಕುಮಾರ್ ಹಾಗೂ ಶ್ರೀ ಮುರಳಿ ಕಾಂಬೀನೇಷನ್.
ಇಲ್ಲಿಯವರೆಗೂ ನಾನು ಬರೆದ ಚಿತ್ರ ವಿಮರ್ಶೆಗಳಲ್ಲಿ ಸಿನಿಮಾ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದೆ. ಆದರೆ ಈ ಸಿನಿಮಾ ಕುರಿತು ಬರೆಯುವಾಗ ಕಥೆಗಿಂತಾ ಹೆಚ್ಚು ಕಾಡಿದ್ದು ಹಿನ್ನೆಲೆ ಸಂಗೀತ, ಛಾಯಾಗ್ರಹಣ ಹಾಗೂ ಸ್ಟಾರ್ ನಟರಿಬ್ಬರ ಅತ್ಯದ್ಭುತ ನಟನೆ.
ನಾನೂ ಈಗಷ್ಟೇ ಚಿತ್ರ ನೋಡಿದೆ. ಕಥೆ ತುಂಬಾ ಸಿಂಪಲ್.. ಆದರೆ ಮೇಕಿಂಗ್ ತುಂಬಾ ರಿಚ್ ಅನ್ಸುತ್ತೆ. ಇಬ್ಬರು ಖಡಕ್ ಹೀರೋಗಳೇ. ಚಿತ್ರದ ನ್ಯೂನತೆ ಎಂದರೇ ಇದ್ದೂ ಇಲ್ಲದಂತಿರುವ ನಾಯಕಿ. ಅಷ್ಟಾಗಿ ನಗಿಸದೇ ಇರುವ ಸಾಧುಕೋಕಿಲ ಹಾಗೂ ಚಿಕ್ಕಣ್ಣ. ಅಷ್ಟು ಬಿಟ್ಟರೇ ಉಳಿದಂತೆ ಮೊದಲರ್ಧ ಮಾಸ್, ದ್ವಿತೀಯಾರ್ಧ ಕ್ಲಾಸ್.
ಮೊದಲಾರ್ಧದಲ್ಲಿ ಶ್ರೀ ಮುರುಳಿ ಅಭಿಮಾನಿಗಳಿಗೆ ರಸದೌತಣ. ದ್ವಿತೀಯಾರ್ಧದಲ್ಲಿ ಶಿವಣ್ಣ ತನ್ನ ಖದರ್ ತೋರಿಸುತ್ತಾ, ರಾವಣನ ವೇಶದಲ್ಲಿರೋ ರಾಮನಂತೆ ಕಾಣುತ್ತಾರೆ. ಪರಭಾಷೆಯಿಂದ ಅದೆಷ್ಟೋ ವಿಲನ್ ಗಳು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ರೂ, ಕಣ್ಣಲ್ಲೆ ಎದುರಾಳಿಯ ಕಣ್ಣು ಕುಕ್ಕಿ, ಮೊನಚು ಮಾತಲ್ಲೇ ಘಾಸಿಗೊಳಿಸುವ ಪಾತ್ರದಲ್ಲಿ ದೇವರಾಜ್ ಇನ್ನೂ ಹೆಚ್ಚು ಡೈನಾಮಿಕ್ ಅನಿಸುತ್ತಾರೆ. ವಸಿಷ್ಠ ಸಿಂಹ ತಣ್ಣನೆಯ ಕ್ರೌರ್ಯದ ಅಭಿನಯದಿಂದ ಬೆಚ್ಚಿಬೀಳಿಸುವಂತೆ ನಟಿಸಿದ್ದಾರೆ. ಮಾತೇ ಆಡದಿದ್ದರೂ ಬರೀ ಲುಕ್, ವಾಕ್ ಹಾಗೂ ಸ್ಟ್ರಿಕ್ಟ್ ಮ್ಯಾನರಿಸಂ ನಲ್ಲಿ ಛಾಯಾಸಿಂಗ್ ಅಭಿನಯ ಚೆಂದ.
ಇಡೀ ಸಿನಿಮಾದಲ್ಲಿ ಡೈಲಾಗ್ ಗಳದ್ದೇ ಹೆಚ್ಚು ಸದ್ದಿಲ್ಲ. ಆದರೆ ಪ್ರತಿಯೊಂದು ದೃಶ್ಯದ ಸಂಭಾಷಣೆ ಬರೆದಿಟ್ಟುಕೊಳ್ಳಬೇಕೆನಿಸುತ್ತದೆ. ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಕಣ್ಣು ಮಿಟುಕಿಸದೇ ನೋಡುವಂತೆ ಮಾಡಿದ್ದು ಚಿತ್ರದ ಛಾಯಾಗ್ರಹಣ. ಛಾಯಾಗ್ರಾಹಕನಿಗೊಂದು ಸಲಾಂ. ಅದೇ ರೀತಿ ಇನ್ನೂ ಹೆಚ್ಚಿನ ಗಮನವಿಟ್ಟು ಏಕಾಗ್ರತೆಯಿಂದ ಕೂರಿಸುವುದು ಬ್ಯಾಕ್ ಗ್ರೌಂಡ್ ಸ್ಕೋರ್. ರವಿ ಬಸ್ರೂರ್ ರವರ ಹಿನ್ನೆಲೆ ಸಂಗೀತ ಫಸ್ಟ್ ಕ್ಲಾಸ್. (ಅವರ ಮುಂದಿನ ಚಿತ್ರ ಅಂಜನಿಪುತ್ರದಲ್ಲೂ ಇದಕ್ಕಿಂತಾ ಚೆಂದದ ಸಂಗೀತವಿರಲಿ). ಕಥೆ ತುಂಬಾ ಸಿಂಪಲ್ ಅನಿಸಿದರೂ, ಪ್ರೆಸೆಂಟ್ ಮಾಡಿರೋ ರೀತಿ ತುಂಬಾ ಚೆನ್ನಾಗಿದೆ. ನಿರ್ದೇಶಕ ಮಹಾಶಯನ ಪ್ರಯತ್ನ ಸಾರ್ಥಕ.
ನೀವೂ ಒಂದ್ ಸಲ ನೋಡಿ. ಸಿನಿಮಾನ ಆಲ್ ಮೋಸ್ಟ್ ಇಷ್ಟ ಪಡ್ತೀರಾ.



