ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯಿಂದ ಬಿ.ಆರ್.ಪಂತುಲು ರವರು 1961 ರಲ್ಲಿ ಜಿ.ವಿ.ಅಯ್ಯರ್ ರವರು ಬರೆದ ಚಿತ್ರಕಥೆಯನ್ನು, ನಿರ್ಮಾಣದ ಜವಬ್ದಾರಿ ಹೊತ್ತು ನಿರ್ದೇಶನ ಮಾಡುತ್ತಾರೆ. ಡಬ್ಲು.ಆರ್.ಸುಬ್ಬಾರಾವ್ ಹಾಗೂ ಎಂ.ಕರ್ಣನ್ ರವರ ಛಾಯಾಗ್ರಹಣ, ಟಿ.ಜಿ.ಲಿಂಗಪ್ಪರವರ ಸಂಗೀತವಿರುತ್ತದೆ. ಐತಿಹಾಸಿಕ ಕಥಾ ಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಬಿ.ಸರೋಜಾದೇವಿ, ಎಂ.ವಿ.ರಾಜಮ್ಮ, ಲೀಲಾವತಿ, ಚಿಂದೋಡಿ ಲೀಲಾ, ರಮಾದೇವಿ, ಡಿಕ್ಕಿ ಮಾಧವರಾವ್, ನರಸಿಂಹರಾಜು, ಕೆ.ಎಸ್.ಅಶ್ವತ್ಥ್ ಹಾಗೂ ಬಾಲಕೃಷ್ಣರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಕಥೆ:
ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದೆ.

ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 6 ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಈ ಕಠಿಣ ಪರಿಸ್ಥಿತಿಯಲ್ಲಿ ಎದೆಗುಂದದೆ ಅವಳು ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ, ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟ ಕಟ್ಟಿದಳು.

ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆದಿದ್ದಾಳೆ. ಆದರೆ ಬ್ರಿಟಿಷರು ಕಿತ್ತೂರಿನ ಒಡೆತನವನ್ನೆ ಅಪೇಕ್ಷಿಸಿದಾಗ, ಚೆನ್ನಮ್ಮಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ ಸಹ ಮಾಡುತ್ತಾಳೆ.

21 ಅಕ್ಟೋಬರ 1824ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ ಅಂದರೆ ಅಕ್ಟೋಬರ 23ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳುತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು.

ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾದರು. ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆಯುತ್ತದೆ. 1824 ಡಿಸೆಂಬರ್ 2 ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ಡಿಸೆಂಬರ್ 3 ರಂದು ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ.

ಡಿಸೆಂಬರ್ 4 ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳಾಗುತ್ತಾನೆ. ಡಿಸೆಂಬರ್ 5 ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್ 12 ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ 4 ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ 1825 ಫೆಬ್ರುವರಿ 2 ರಂದು ನಿಧನಳಾಗುತ್ತಾಳೆ.

ಈ ವೀರನಾರಿಯ ಕಥೆ ಎಲ್ಲಾ ಭಾರತೀಯರು ತಿಳಿದುಕೊಂಡಿರಬೇಕಾದ ಕಥೆ. ಇಂಥಾ ಅದ್ಬುತ ಚರಿತ್ರೆಯನ್ನು ದೃಶ್ಯಕಾವ್ಯವನ್ನಾಗಿಸಿದ್ದಾರೆ. ಮಲ್ಲಸರ್ಜನಾಗಿ ರಾಜ್‌ಕುಮಾರ್ ಮಿಂಚಿದ್ದಾರದಾರೂ, ಕಿತ್ತೂರಿನ ವೀರವನಿತೆ ಚನ್ನಮ್ಮನ ಪಾತ್ರದಲ್ಲಿ ಬಿ.ಸರೋಜಾದೇವಿಯವರು ಮೋಡಿ ಮಾಡಿದ್ದಾರೆ. ಆಕೆ ಚೆನ್ನಮ್ಮಳ ಅಪರಾವತಾರವಾಗಿದ್ದಾಳೆ. “ನಿಮಗೇಕೆ ಕೊಡಬೇಕು ಕಪ್ಪಾ..” ಎಂಬ ಸಂಭಾಷಣೆ ಚೆನ್ನಮ್ಮಳ ಗಾಂಭೀರ್ಯಕ್ಕೆ ಹಿಡಿದ ಕನ್ನಡಿ. ಈ ಸಿನಿಮಾ ಬಂದು 50 ಕ್ಕೂ ಹೆಚ್ಚು ವರ್ಷ ಕಳೆದರೂ, ಈಗಲೂ ಕಿತ್ತೂರು ಚೆನ್ನಮ್ಮಳ ಪಾತ್ರ ಹಾಕುವ ಪುಟಾಣಿ ಮಕ್ಕಳಿಂದ ಹಿಡಿದೂ ದೊಡ್ಡವರವರೆಗೆ ಈ ಸಂಭಾಷಣೆ ಹೇಳದವರಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸಿನಿಮಾ.

ಈ ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಸ್ವತಂತ್ರಪೂರ್ವ ರಾಜ್ಯಾಡಳಿತ, ಬ್ರಿಟೀಷರ ವಿರುದ್ದ ಸೆಟೆದು ನಿಂತ ವೀರರ ಕಥೆಗಳ ಕುರಿತು ತಿಳಿಯಲು.
2. ಇತಿಹಾಸದಲ್ಲಿ ಹೆಸರಾದ ಸ್ತ್ರೀಶಕ್ತಿಯ ಕುರಿತು ತಿಳಿಯಲು.
3. ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.