ಇದೊಂದು 62ನೇ “ಅತ್ಯುತ್ತಮ ಪ್ರಾದೇಶಿಕ ಚಿತ್ರ” ಎಂಬ ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರ. 2014ನೇ ಸಾಲಿನ “ಅತ್ಯುತ್ತಮ ಚಿತ್ರ” ಎಂಬ ಪಡೆದ ಚಿತ್ರ. ಇಷ್ಟೆಲ್ಲಾ ಉತ್ತಮ ವಿಮರ್ಶೆ ಹೊಂದಿದ್ದರೂ ಇಂತಹ ಸಿನಿಮಾಗಳನ್ನು ನೋಡಲು ಕನ್ನಡ ಪ್ರೇಕ್ಷಕ ಥಿಯೇಟರಿನಲ್ಲಿ ಕೂರುವುದಿಲ್ಲ. ಇದು ವಾಸ್ತವಿಕ ವಿಪರ್ಯಾಸ. ನಾನೂ ಕೂಡ ಈ ಸಿನಿಮಾವನ್ನು ಥಿಯೇಟರಿನಲ್ಲಿ ನೋಡಲಾಗಲಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಇಂಥದ್ದೊಂದು ಸಿನಿಮಾ ನೋಡಬೇಕೆಂಬ ನನ್ನ ಮನದ ಬಯಕೆ ಈ ಯೂಟ್ಯೂಬ್ ವೇದಿಕೆಯಿಂದ ಫಲಗೊಂಡಿತು. ಈ ಕೆಳಗಿನ ಲಿಂಕ್ ನಲ್ಲಿ ಸಿನಿಮಾ ನೋಡಬಹುದು. ಸಾಧ್ಯವಾದಲ್ಲಿ ದಯವಿಟ್ಟು ಸಿನಿಮಾ ನೋಡಿ. ತುಂಬಾ ಚೆನ್ನಾಗಿದೆ. ತಂದೆಯನ್ನು ಪ್ರೀತಿಸುವ ಮಕ್ಕಳು, ಮಕ್ಕಳನ್ನು ಪ್ರೀತಿಸುವ ತಂದೆ-ತಾಯಂದಿರು ತಪ್ಪದೇ ನೋಡಬೇಕಾದ ಚಿತ್ರ ಎಂದು ನನ್ನ ಅನಿಸಿಕೆ.
ಸಿನಿಮಾದ ಯೂಟ್ಯೂಬ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ: ಹರಿವು - ಕನ್ನಡ ಸಿನಿಮಾ (https://youtu.be/f4D3aOsAgvo)
“ಹರಿವು” ಎಂಬ ಕಥೆ ಹರಿಯುವ ಬಗೆ:
“ಬೆಂಗಳೂರು” ಎಂಬ ಮಹಾನಗರದಲ್ಲಿ ರಾತ್ರಿಯೊಂದರ ಕತ್ತಲಲಿ, ಏನನ್ನೋ ಹುಡುಕಾಡುವ, ತಡಕಾಡುವ ಹತಾಶ ವ್ಯಕ್ತಿಯೊಬ್ಬನ ಮುಖಭಾವದಲ್ಲಿನ ಭಾವನೆಗಳೊಂದಿಗೆ ಸಿನಿಮಾ ಅನಾವರಣಗೊಳ್ಳುತ್ತದೆ. ಉತ್ತರ ಕರ್ನಾಟಕ ಭಾಗದ ಹೊಸಪೇಟೆ ಹತ್ತಿರದ ಒಂದು ಗ್ರಾಮ. ಆ ಗ್ರಾಮದ ಹೊರಭಾಗದಲ್ಲೊಂದು ಪುಟ್ಟ ಕುಟುಂಬ. ಗಂಡ-ಹೆಂಡತಿ ತಮ್ಮ ಮಗುವಿನೊಂದಿಗೆ ಸಂತಸಮಯ ದಿನಗಳನ್ನು ಕಳೆಯುತ್ತಿರುತ್ತಾರೆ. ಅದೊಂದು ದಿನ ಹೊರಗೆ ಆಡುತ್ತಿದ್ದ ಮಗು ಹಠಾತ್ತನೆ ಕೆಳಗೆ ಬೀಳುತ್ತದೆ. ಗಾಬರಿಗೊಂಡ ತಂದೆ-ತಾಯಿ, ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿನ ಡಾಕ್ಟರ್ ಮಗುವಿನ ಖಾಯಿಲೆ ಗುಣಪಡಿಸಲು ಬೆಂಗಳೂರಿಗೆ ಕರೆದುಕೊಂಡು ಹೋಗಿ, ಎಂದು ಹೇಳುತ್ತಾನೆ. ಬರೀ ಒಂದು ಎಕೆರೆ ಜಮೀನು ಹಾಗೂ ಪುಟ್ಟ ಗುಡಿಸಿಲಿನ ಒಡೆಯ, ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸುವಷ್ಟು ಆರ್ಥಿಕ ಬಲಾಢ್ಯನಲ್ಲ ಹಾಗೂ ಮಾನಸಿಕವಾಗಿಯೂ ಸಬಲನಲ್ಲ. ಆದರೆ ಮಗನ ಮೇಲಿನ ಪ್ರೀತಿ, ಅವನನ್ನು ಇದ್ದ ಜಮೀನನ್ನು ಮಾರಿ, ಕಾಸು ಕೂಡಿಸಿಕೊಂಡು, ಹೆಗಲ ಮೇಲೆ ಮಗನನ್ನು ಹೊತ್ತು ಬೆಂಗಳೂರಿಗೆ ಪಯಣಿಸುವಂತೆ ಮಾಡುತ್ತದೆ. ಎಂದೂ ಕಾಣದ ಬೆಂಗಳೂರಿಗೆ ಬಂದು, ಅಲ್ಲಿ ಮಗನನ್ನು ಬದುಕಿಸಿಕೊಳ್ಳಲು ಆತ ಪಡುವ ಯಾತನೆಯ ಪಯಣವನ್ನು ಬಣ್ಣಿಸುವುದಕ್ಕಿಂತ ಚಿತ್ರ ನೋಡುತ್ತಾ ಕಣ್ ತುಂಬಿಕೊಳ್ಳುವುದು ಒಳಿತು. ದುರಾದೃಷ್ಟವಶಾತ್ ಕೊನೆಗೂ ಮಗ ತೀರಿಕೊಂಡು ಬಿಡುತ್ತಾನೆ. ಊರಿಗೆ ವಾಪಾಸ್ಸು ಹೋಗಲು ಹಣವಿಲ್ಲ. ಆದರೆ ಊರಲ್ಲೇ ಇರುವ ಹೆಂಡತಿಗೆ ತನ್ನ ಮಗನ ಮುಖವನ್ನು ಕೊನೆಯ ಬಾರಿ ನೋಡಲು ಅವಕಾಶ ಕೊಡದೆ ಅಂತಿಮ ಸಂಸ್ಕಾರ ಮಾಡಲು ಮನಸಿಲ್ಲ. ಇತ್ತ ಬಸ್ಸು, ಕಾರು, ಲಾರಿ ಸೇರಿದಂತೆ ಎಲ್ಲಾ ತರಹೇವಾರಿ ವಾಹನಗಳಿಗೂ ಅಡ್ಡಗಟ್ಟಿ, ತನ್ನನು ತನ್ನ ಹಳ್ಳಿಯವರೆಗೆ ಬಿಡಲು ಬೇಡುತ್ತಿರುತ್ತಾನೆ ಮಗನನ್ನು ಕಳೆದುಕೊಂಡ ಈ ತಂದೆ.
ಇದರ ಜೊತೆಜೊತೆಗೆ ಮತ್ತೊಂದು ಕಥೆ ಇರುತ್ತದೆ. ಸರ್ಕಾರಿ ಕೆಲಸದಿಂದ ರಿಟೈರ್ಡ್ ಆದ ತನ್ನ ತಂದೆ, ಅನಾರೋಗ್ಯ ನಿಮಿತ್ತ ಆಸ್ಪತ್ರೆ ಸೇರುತ್ತಾನೆ. ಆ ವಯಸ್ಸಾದ ತಂದೆಗೆ ಮಗನ ಮೇಲೆ ಅತಿಯಾದ ಪ್ರೀತಿ. ಅವನೊಂದಿಗೆ ಮಾತನಾಡುವ ಬಯಕೆ. ಆದರೆ, ಮಗನಿಗೆ ಅಪ್ಪನ ಪ್ರೀತಿಯೇ ಇರಿಸು-ಮುರಿಸು. ಹೆಚ್ಚಾಗಿ ಅಪ್ಪನ ಸಾಂಗತ್ಯ ಬಯಸದೇ, ಮಗನೆಂಬ ಕರ್ತವ್ಯವನ್ನು ತನ್ನ ಬಿಜಿ ಷೆಡ್ಯೂಲ್ ನಲ್ಲಿಯೇ ನಿರ್ವಹಿಸುತ್ತಿರುತ್ತಾರೆ. ದೂರದ ಬಿಜಾಪುರಕ್ಕೆ ಕಾರ್ಯನಿಮಿತ್ತ ಹೋಗಲು ಕಚೇರಿಯಿಂದ ಬುಲಾವ್ ಬರುತ್ತದೆ. ಅವನೂ ಹೊರಡುತ್ತಾನೆ. ಈ ಮಗನಿಗೂ ತಂದೆಯ ಪ್ರೀತಿಯ ಬೆಲೆ ಏನು ಎಂಬುದು ಅರ್ಥವಾಗುವ ಕ್ಷಣಗಳು ಬರುತ್ತದೆ. ಅದು ಹೇಗೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳುವುದು ಸೂಕ್ತ. ಭಾವನೆಗಳು ಹೃದಯವನ್ನು ಹೊಕ್ಕು, ಕಣ್ಣಂಚಿನಲ್ಲಿ ಹನಿಯ ಜಿನುಗುವಂತೆ ಮಾಡುತ್ತದೆ.
ಇದು ನಿಜಕ್ಕೂ ಭಾವತೀರಯಾನ. “ಸಂಚಾರಿ ವಿಜಯ್“ ರವರ ನಟನೆ ಬರೀ ಅದ್ಭುತವಲ್ಲ, ಅತ್ಯದ್ಬುತ ಹಾಗೂ ನೇರ ಹೃದಯಸ್ಪರ್ಶಿ ನಟನೆ. ಕನ್ನಡದಲ್ಲೊಬ್ಬ ಇಂಥಾ ನಟನಿರುವುದು ನಮ್ಮ ಹೆಮ್ಮೆ. ಈ ನಟನಿಗೆ ಇನ್ನಷ್ಟೂ ಅದ್ಬುತ ಪಾತ್ರಗಳು ಸಿಗಲಿ, ಇವರ ಕೀರ್ತಿ ಅಮರವಾಗಲಿ ಎಂದು ಹೃದಯತುಂಬಿ ಹಾರೈಸುತ್ತೇನೆ.



