ಶ್ರೀ ಭಗವತಿ ಪ್ರೊಡಕ್ಷನ್ಸ್ ರವರು 1967 ರಲ್ಲಿ ತ.ರಾ.ಸು. ರವರ “ಚಕ್ರತೀರ್ಥ” ಎಂಬ ಕಾದಂಬರಿಯನ್ನು ಆಧರಿಸಿದ ಚಿತ್ರವನ್ನು ಪೇಕಟಿ ಶಿವರಾಮ್ ರವರು ನಿರ್ದೇಶನ ಮಾಡುತ್ತಾರೆ. ವಿಶೇಷವೆಂದರೆ ಈ ಸಿನಿಮಾಗಾಗಿ ತ.ರಾ.ಸು. ರವರೇ ಚಿತ್ರಕಥೆಯನ್ನು ಬರೆದುಕೊಡುತ್ತಾರಲ್ಲದೇ, ಒಂದು ಗೀತೆಗೆ ಸಾಹಿತ್ಯವನ್ನೂ ಕೂಡ ಬರೆದು ಕೊಡುತ್ತಾರೆ. ಆರ್.ಚಿಟ್ಟಿಬಾಬು ರವರ ಛಾಯಾಗ್ರಹಣ, ಟಿ.ಜಿ.ಲಿಂಗಪ್ಪ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಉದಯ್ ಕುಮಾರ್, ಜಯಂತಿ (ದ್ವಿಪಾತ್ರದಲ್ಲಿ), ಬಾಲಕೃಷ್ಣ, ಆದವಾನಿ ಲಕ್ಷ್ಮಿದೇವಿ, ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಆರ್.ಎನ್. ಜಯಗೋಪಾಲ್ ರವರು ಚಿತ್ರದ ಬಹುತೇಕ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದಿರುತ್ತಾರೆ. ತ.ರಾ.ಸು. ಹಾಗೂ ದ.ರಾ.ಬೇಂದ್ರೆಯವರ ಸಾಹಿತ್ಯದ ಗೀತೆಗಳೂ ಸಹ ಇವೆ. ಈ ಗೀತೆಗಳಿಗೆ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ನಾಗೇಶ್ವರರಾವ್, ಎಲ್.ಆರ್.ಈಶ್ವರಿ, ಬಿ.ಕೆ. ಸುಮಿತ್ರ, ಬೆಂಗಳೂರು ಲತಾ ಹಾಗೂ ಪಿ.ಸುಶೀಲ ರವರು ಗೀತೆಗಳಿಗೆ ದನಿಯಾಗಿದ್ದಾರೆ.

ಕಥೆ:
ಒಂದು ನದಿ ತೀರ. ಆ ನದಿ ತೀರದಲ್ಲಿ ತ.ರಾ.ಸು. ರವರು ಕುಳಿತುಕೊಂಡಿರುತ್ತಾರೆ. ಸ್ವತಃ ತ.ರಾ.ಸು. ರವರೇ ಈ ಚಿತ್ರದ ಕುರಿತಂತೆ ತಮ್ಮ ಎರಡು ಮಾತುಗಳನ್ನಾಡುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಒಂದು ಊರಲ್ಲಿ ಕಾಶೀಪತಯ್ಯನ (ಉದಯ್ ಕುಮಾರ್) ಮಗಳು ಶ್ರೀನಿವಾಸಯ್ಯನನ್ನು (ರಾಜ್ ಕುಮಾರ್) ಪ್ರೀತಿಸಿ ಮದುವೆಯಾಗುತ್ತಾಳೆ. ಆಕೆ ಪ್ರೀತಿಸಿ ಮದುವೆಯಾದ ತಪ್ಪಿಗೆ ಆಕೆಯ ತಂದೆ ಕಾಶೀಪತಯ್ಯ ಮಗಳನ್ನು ಮತ್ತೆ ಮನೆ ಒಳಗೆ ಕಾಲಿಡಬೇಡವೆಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾನೆ. ಅಲ್ಲದೇ ಬಡವನಾದ ಶ್ರೀನಿವಾಸಯ್ಯನನ್ನು ಹಂಗಿಸುತ್ತಾನೆ. ಇದರಿಂದ ಕಾಶೀಪತಯ್ಯನ ಹೆಂಡತಿ (ಆದವಾನಿ ಲಕ್ಷ್ಮಿದೇವಿ) ಮನನೊಂದುಕೊಳ್ಳುತ್ತಾಳೆ. ಕಾಶೀಪತಯ್ಯನ ಮಗನಿಗೆ ತನ್ನ ಮೊಮ್ಮಗಳನ್ನು ಮದುವೆ ಮಾಡಬೇಕೆಂಬ ಆಸೆ ಕಾಶೀಪತಯ್ಯನ ಹೆಂಡತಿಗೂ ಹಾಗೂ ಮಗಳಿಗೂ ಇರುತ್ತದೆ. ಆದರೆ ಇದಕ್ಕೆ ಕಾಶೀಪತಯ್ಯ ಸದಾ ವಿರೋಧಿಸುತ್ತಲೇ ಇರುತ್ತಾನೆ. ಅಲ್ಲದೇ, “ಒಂದು ಹಿಡಿ ಮರಳಿಗಿರುವ ಬೆಲೆಯೂ ನಿನಗಿಲ್ಲ” ಎಂದು ಶ್ರೀನಿವಾಸಯ್ಯನನ್ನು ಹಂಗಿಸುತ್ತಾನೆ. ಇದರಿಂದ ತುಂಬಾ ನೊಂದುಕೊಂಡ ಶ್ರೀನಿವಾಸಯ್ಯ ಕಾಶೀಪತಯ್ಯನ ಮೇಲಿನ ಜಿದ್ದಿನಿಂದ ತನ್ನ ಸ್ನೇಹಿತನ ಪಾಲುದಾರಿಕೆಯಲ್ಲಿ ಕಂಟ್ರಾಕ್ಟರ್ ಕೆಲಸ ಮಾಡಿಕೊಂಡು ಕೈತುಂಬಾ ಸಂಪಾದಿಸುತ್ತಾನೆ. ಈ ನಡುವೆ ಖಾಯಿಲೆಯಿಂದ ಬಳಲುತ್ತಿದ್ದ ಕಾಶೀಪತಯ್ಯನ ಹೆಂಡತಿ ತೀರಿಹೋಗುತ್ತಾಳೆ.

ಶ್ರೀನಿವಾಸಯ್ಯ ತನ್ನ ಶ್ರಮದಿಂದ ಆತ ಶ್ರೀಮಂತನಾಗುತ್ತಾನೆ. ಸ್ವಂತ ಬಂಗಲೆಯೊಂದನ್ನು ಕಟ್ಟಿಸುತ್ತಾನೆ. ಬಂಗಲೆಯ ಗೃಹಪ್ರವೇಶಕ್ಕೆ ತನ್ನ ಮಾವನಾದ ಕಾಶೀಪತಯ್ಯ ತನ್ನ ಮಗನೊಂದಿಗೆ ಬರುವುದಿಲ್ಲ. ಶ್ರೀನಿವಾಸಯ್ಯನ ಮಗಳು (ಜಯಂತಿ) ಹಾಗೂ ಕಾಶೀಪತಯ್ಯನ ಮಗ ಇಬ್ಬರೂ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಅಣೇಕಟ್ಟೊಂದರ ಕಾಮಗಾರಿ ಬಹುಬೇಗನೇ ಪೂರ್ಣಗೊಂಡ ಖುಷಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶ್ರೀನಿವಾಸಯ್ಯ ಭಾಗವಹಿಸಿದಾಗ, ಅಚಾನಕ್ಕಾಗಿ ಅಣೇಕಟ್ಟಿನ ಭಾಗವೊಂದು ಶ್ರೀನಿವಾಸಯ್ಯನ ಮೇಲೆ ಬಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುತ್ತಾರೆ. ಆಸ್ಪತ್ರೆಯಿಂದ ಮನೆಗೆ ಬಂದ ಆತ ಕಾಶೀಪತಯ್ಯನ ದುರುಳ ನಡೆಗೆ ಬೇಸತ್ತ, ತನ್ನ ಮಗಳನ್ನು ಕಾಶೀಪತಯ್ಯನ ಸೊಸೆಯನ್ನಾಗಿಸಬಾರದೆಂದು ತನ್ನ ಹೆಂಡತಿಯಿಂದ ಪ್ರಮಾಣ ಮಾಡಿಸಿಕೊಳ್ಳುತ್ತಾನೆ. ಶ್ರೀನಿವಾಸಯ್ಯನ ಹೆಂಡತಿ ತನ್ನ ಮಗಳ ಪ್ರೇಮಕ್ಕಾಗಿ ತಾನೇ ಚಕ್ರತೀರ್ಥದ ಸುಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ. ಅಲ್ಲಿಗೆ ಸಿನಿಮಾ ಮುಗಿಯುತ್ತದೆ.

ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಕೌಟುಂಬಿಕ ವಲಯದಲ್ಲಿ ಸಂಬಂಧಗಳ ಮೌಲ್ಯಗಳ ಕುರಿತು ತಿಳಿಯಲು.
2. ದುರಾಸೆ, ದುರಾಭಿಮಾನದಿಂದ ಆಗುವ ಅನಾಹುತ ಕುರಿತು ತಿಳಿಯಲು.
3. ಕನ್ನಡ ಸಾಹಿತ್ಯಾಭಿಮಾನಿಗೆ ಇದೊಂದು ರಸಮಯ ಸಿನಿಮಾ ಎನಿಸುತ್ತದೆ.
4. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.